Friday, 18th June 2021

ಐವತ್ತೆಂಟು ವರ್ಷ ಸೆಕ್ಸ್ ಬಗ್ಗೆ ಬರೆದ ಜಂಟಲ್‌’ಮನ್‌ ಕುರಿತು

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಈ ಲಾಕ್ ಡೌನ್ ಕಾಲದಲ್ಲಿ ಇವರನ್ನು ಯಾಕೆ ನೆನಪಿಸಿಕೊಂಡೆ ಎಂದು ನಿಮಗನಿಸಬಹುದು. ಸ್ನೇಹಿತರಾದ ಎಸ್.ಷಡಕ್ಷರಿ ಅವರು, ‘ಬೆಂಗಳೂರು ಮಿರರ್ ಪತ್ರಿಕೆಗೆ ಒಬ್ಬ ವೈದ್ಯರು ಬರೆಯುತ್ತಿದ್ದರು. ಅವರು ಸೆಕ್ಸ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸು ತ್ತಿದ್ದರು. ಪ್ರಶ್ನೆಗಳು ಬಹಳ ಅಶ್ಲೀಲ ಎಂದು ಅನಿಸಿದರೂ, ಉತ್ತರಗಳು ಮಾತ್ರ ಬಹಳ ಚುಟುಕಾಗಿ, ಚುರುಕಾಗಿ, ಚೋದ್ಯದಿಂದ ಕೂಡಿರುತ್ತಿತ್ತು.

ಅಂಥ ಅಂಕಣವನ್ನು ‘ವಿಶ್ವವಾಣಿ’ಯಲ್ಲೂ ಆರಂಭಿಸಿ’ ಎಂದು ಪ್ರಾಸಂಗಿಕವಾಗಿ ಹೇಳಿದರು. ಅಷ್ಟೇ ಅಲ್ಲ, ತಮ್ಮ ನೆನಪಿನ
ಬುತ್ತಿಯಿಂದ ಕೆಲವು ಪ್ರಶ್ನೆ – ಉತ್ತರಗಳನ್ನು ಸಹ ಹೇಳಿದರು. ಆಗ ನಾನು, ‘ನೀವು ಡಾ.ಮಹಿಂದರ್ ವತ್ಸ ಅವರ ಬಗ್ಗೆ ಹೇಳು ತ್ತಿದ್ದೀರಿ ತಾನೇ?’ ಎಂದು ಕೇಳಿದೆ. ಅದಕ್ಕೆ ಅವರು ‘ಹೌದು..ಹೌದು… ಅವರೇ’ ಎಂದರು. ‘ಸಾರ್, ನಾನೂ ಅವರ ಅಂಕಣದ ಓದುಗ ಮತ್ತು ಅಭಿಮಾನಿ.

ಅವರು ಬರೆಯುತ್ತಿದ್ದ ‘”Ask the Sexpert’  ಅಂಕಣವನ್ನು ನಿರಂತರವಾಗಿ ಓದಿದವನು’ ಎಂದು ಹೇಳಿದೆ. ನಾನು ‘ವಿಜಯ ಕರ್ನಾಟಕ’ ಸಂಪಾದಕನಾಗಿದ್ದಾಗ, ಬೆಂಗಳೂರಿನ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ ಎದುರಿನ ಕಚೇರಿ ಯಲ್ಲಿಯೇ, ಕೆಲವು ಕಾಲ ‘ಬೆಂಗಳೂರ್ ಮಿರರ್’ ಸಂಪಾದಕೀಯ ವಿಭಾಗವೂ ಇತ್ತು. ನನ್ನ ಆತ್ಮೀಯ ಸ್ನೇಹಿತರಾದ ಕೆ.ಆರ್.ಶ್ರೀನಿವಾಸ್ ಆ ಪತ್ರಿಕೆಯ ಸಂಪಾದಕರಾಗಿದ್ದರು. ನಮಿಬ್ಬರ ಕ್ಯಾಬಿನ್ ತಾಗಿಕೊಂಡೇ ಇತ್ತು. ಅವರು ಒಂದು ದಿನ, ‘ನಾಳೆ ನಿಮಗೆ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಿಸುತ್ತೇನೆ. ವೆರಿ ಇಂಟೆರೆಸ್ಟಿಂಗ್ ಪರ್ಸನ್’ ಎಂದು ಹೇಳಿದರು.

ನಾನು ಆಯಿತು ಎಂದೆ. ಮರುದಿನ ಸಾಯಂಕಾಲ ‘ಶ್ರೀನಿ’ ತಮ್ಮ ಕ್ಯಾಬಿನ್‌ಗೆ ಬರುವಂತೆ ಹೇಳಿದರು. ಆಗ ಅವರ ಮುಂದೆ, ಸುಮಾರು ಎಂಬತ್ತೈದು ವರ್ಷ ವಯಸ್ಸಿನ ವೃದ್ಧರು ಕುಳಿತಿದ್ದರು. ಅವರನ್ನು ನೋಡಿದರೆ, ಅದಕ್ಕಿಂತ ಹದಿನೈದಿಪ್ಪತ್ತು ವರ್ಷ
ಕಡಿಮೆ ವಯಸ್ಸಿನವರಂತೆ ಕಾಣುತ್ತಿದ್ದರು. ಮುಖದಲ್ಲಿ ಅದೇನೋ ವಿಶೇಷ ಕಾಂತಿ, ಲವಲವಿಕೆ, ಹುರುಪು. ನೋಡಿದರೆ, ಡಾ.ಮಹಿಂದರ್ ವತ್ಸ!

ನಾನು ‘ಮುಂಬೈ ಮಿರರ್’ ಮತ್ತು ‘ಬೆಂಗಳೂರ್ ಮಿರರ್’ ಪತ್ರಿಕೆಗಳಲ್ಲಿ ತಪ್ಪದೇ, ಕುತೂಹಲದಿಂದ ಓದುತ್ತಿದ್ದ “Ask the
Sexpert ಅಂಕಣ ಬರೆಯುವ ಡಾ.ಮಹಿಂದರ್ ವತ್ಸ ! ‘ನಾನು ನಿಮ್ಮ ಉತ್ತರಗಳ ದೊಡ್ಡ ಅಭಿಮಾನಿ’ ಎಂದೆ. ‘ಹೌದು, ನನ್ನ ಅಂಕಣವನ್ನು ಒಮ್ಮೆ ಓದಿದವರು ಬಿಡೊಲ್ಲ, ಕದ್ದು-ಮುಚ್ಚಿಯಾದರೂ ಓದುತ್ತಾರೆ’ ಎಂದು ಗೊಳ್ಳೆಂದು ನಗುತ್ತ ಹೇಳಿದರು. ‘ಒಮ್ಮೆ ಎತ್ತಿಕೊಂಡರೆ ಕೆಳಗಿಡಲು (“Ask the Sexpert) ಮನಸ್ಸಾಗುವುದಿಲ್ಲ ಅಂತಾರಲ್ಲ, ನನ್ನ ಅಂಕಣವೂ ಹಾಗೆ, ಪತ್ತೇದಾರಿ ಕಾದಂಬರಿಗಿಂತ ರೋಚಕ.

ಆದರೆ ಎಲ್ಲರೂ ನನ್ನ ಅಂಕಣವನ್ನು ಕದ್ದು ಓದುತ್ತಾರೆಯೇ ವಿನಃ, ಓದಿದ್ದೇನೆಂದು ಹೇಳುವುದಿಲ್ಲ ಮತ್ತು ಮುಕ್ತವಾಗಿ ಚರ್ಚಿಸುವುದಿಲ್ಲ. ಹೀಗಾಗಿ ನನ್ನ ಅಂಕಣಗಳನ್ನು ಎಲ್ಲರೂ ಓದಿದರೂ, ಅಂಕಣಕಾರರ ಬಗ್ಗೆ ಮಾತ್ರ ಪ್ರಸ್ತಾಪಿಸದೇ ನನ್ನನ್ನು
ಅಜ್ಞಾತವಾಗಿಯೇ ಇಟ್ಟಿದ್ದಾರೆ. ಅದು ಒಳ್ಳೆಯದೂ ಹೌದು, ಬೇಸರದ ಸಂಗತಿಯೂ ಹೌದು. ಎಲ್ಲರೂ ನನ್ನನ್ನು ಗುರುತಿಸಲಾ ರಂಭಿಸಿದರೆ, ಅವರೇ ನೋಡು sexpert ಎಂದು ಮಾತಾಡಿಕೊಳ್ಳುತ್ತಿದ್ದರು.

ಅಷ್ಟಾದರೆ ಪರವಾಗಿರಲಿಲ್ಲ, ಅಲ್ಲಿಯೇ ತಮ್ಮ ಲೈಂಗಿಕ ಸಮಸ್ಯೆಗಳನ್ನೂ ಹೇಳಿಕೊಳ್ಳಲಾರಂಭಿಸಿದರೆ ನನ್ನ ಗತಿ?’ ಎಂದು ಡಾ.ವತ್ಸ ಹೇಳಿ ನಕ್ಕಿದ್ದರು. ಆ ದಿನ ಅವರು, ತಮಗೆ ಬರುವ ಪತ್ರಗಳು, ವಿಚಿತ್ರ ಲೈಂಗಿಕ ಸಮಸ್ಯೆಗಳು, ಅದಕ್ಕೆ ಅವರು ನೀಡುವ ತಮಾಷೆಯ ಉತ್ತರಗಳ ಬಗ್ಗೆ ಪುಂಖಾನುಪುಂಖವಾಗಿ ಹೇಳಿ ನಗಿಸಿದ್ದರು.

ಪತ್ರಿಕೆಗಳಲ್ಲಿ ಸೆಕ್ಸ್ ಅಂದ್ರೆ ನಿಷಿದ್ಧ ಎಂಬ ಭಾವನೆ ಇದ್ದ ಕಾಲದಲ್ಲಿ ಡಾ.ವತ್ಸ, ಲೈಂಗಿಕ ಸಮಸ್ಯೆಗಳ ಬಗ್ಗೆ ಪ್ರಶ್ನೋತ್ತರ ಅಂಕಣ ವನ್ನು ಆರಂಭಿಸಿದವರು. ಅರವತ್ತು ವರ್ಷಗಳ ಹಿಂದೆ, 1960ರಲ್ಲಿ ಅವರು ಈ ಅಂಕಣ ಬರೆಯಲಾರಂಭಿಸಿದಾಗ, ಅನೇಕರು ‘ಇಂಥ ಅಂಕಣವನ್ನು ಪ್ರಕಟಿಸಬೇಡಿ, ನಿಮ್ಮದು ಮರ್ಯಾದಸ್ಥರು ಓದುವ ಪತ್ರಿಕೆ, ಡಾ.ವತ್ಸ ಅಂಕಣ ಪ್ರಕಟಿಸಿದರೆ ನಾವು ನಿಮ್ಮ ಪತ್ರಿಕೆ ಓದುವುದನ್ನು ನಿಲ್ಲಿಸುತ್ತೇವೆ, ನಿಮ್ಮ ಪತ್ರಿಕೆಯನ್ನು ಮನೆಯಲ್ಲಿ ಟಿಪಾಯಿ ಮೇಲಿಡಲು ಆಗುವುದಿಲ್ಲ. ಕದ್ದು-ಮುಚ್ಚಿ ಓದಬೇಕಾಗುತ್ತದೆ. ನಮ್ಮ ಮನೆಯಲ್ಲಿ ಆ ಪತ್ರಿಕೆಯನ್ನು ನೋಡಿದ ಜನ ನಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ’ ಎಂದು ಸಂಪಾದಕರಿಗೆ ಪತ್ರ ಬರೆದು ಅಸಮಾಧಾನ, ಕೋಪ ಪ್ರದರ್ಶಿಸುತ್ತಿದ್ದರು.

ಅನೇಕರು ಈ ಕಾರಣದಿಂದಲೇ, ಅವರ ಅಂಕಣ ಪ್ರಕಟಿಸುತ್ತಿದ್ದ ಪತ್ರಿಕೆಯನ್ನು ಓದುವುದನ್ನೂ ನಿಲ್ಲಿಸಿದ್ದರು. ಇನ್ನು ಕೆಲವು
ಸಂಪಾದಕರು ಆ ಅಂಕಣವನ್ನು ಹಠಾತ್ ಸ್ಥಗಿತಗೊಳಿಸಿದ್ದರು. ಆದರೆ ಡಾ.ವತ್ಸ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ‘ನೀವು ಸೆಕ್ಸ್ ಅಂಕಣವನ್ನು ಓದುತ್ತೀರೋ ಬಿಡುತ್ತೀರೋ ನನಗೆ ಸಂಬಂಧವಿಲ್ಲ. ಆದರೆ ನೀವೆ ಸೆಕ್ಸ್ ಪ್ರಾಡಕ್ಟುಗಳು. ಸೆಕ್ಸ್ ಎನ್ನುವುದು ಉಸಿರಾಟದಷ್ಟೇ ಸಹಜ ಕ್ರಿಯೆ. ಅದು ಮಡಿವಂತಿಕೆಯ ವಿಷಯವಲ್ಲ. ಅದರ ಬಗ್ಗೆ ಮುಕ್ತವಾಗಿ ಚರ್ಚಿಸದೇ, ಸಮಸ್ಯೆಗಳನ್ನು ಹೇಳಿಕೊಳ್ಳದೇ ಅಸಂಖ್ಯ ಜನ ಪರಿತಪಿಸಿ ಕೊರಗುತ್ತಾರೆ.

ಸೆಕ್ಸ್ ಸುಖವನ್ನು ಅನುಭವಿಸಿದವರಿಗಿಂತ, ಅನುಭವಿಸದೇ ಕೊರಗುವವರೇ ಹೆಚ್ಚು’ ಎಂದು ಡಾ.ವತ್ಸ ಸಂಪಾದಕರಿಗೆ ಮತ್ತು ಓದುಗರಿಗೆ ಬುದ್ಧಿ ಹೇಳಿದ್ದರು. ಕೆಲವು ಸಂಪಾದಕರು ಓದುಗರ ಪ್ರತಿರೋಧವನ್ನು ಲೆಕ್ಕಿಸದೇ ಅವರ ಅಂಕಣವನ್ನು ಪ್ರಕಟಿಸಿ ದ್ದರು. ಇನ್ನು ಕೆಲವರು ಸ್ವತಃ ನಾಚಿಕೊಂಡು ನಿಲ್ಲಿಸಿದ್ದರು. ಆದರೆ ಡಾ.ವತ್ಸ ಐವತ್ತೆಂಟು ವರ್ಷಗಳ ಕಾಲ ಸೆಕ್ಸ್ ಸಂಬಂಧಿ ಪ್ರಶ್ನೆಗಳಿಗೆ ಉತ್ತರಿಸುವ ಅಂಕಣವನ್ನು ಮುಂದುವರಿಸಿದ್ದು ಒಂದು ದಾಖಲೆಯೇ. ಈ ಅವಧಿಯಲ್ಲಿ ಅವರು ಸುಮಾರು ನಲವತ್ತೈದು ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿರಬಹುದು.

ತಮಾಷೆ ಮತ್ತು ಮೆಚ್ಚುಗೆಯ ಸಂಗತಿಯೆಂದರೆ, ಪ್ರಶ್ನೆ ಅದೆಷ್ಟೇ ಅಶ್ಲೀಲ ಎಂದೆನಿಸಿದರೂ, ಡಾ.ವತ್ಸ ನೀಡುತ್ತಿದ್ದ ಉತ್ತರ ಮಾತ್ರ ಬಹಳ ಸೊಗಸಾಗಿರುತ್ತಿದ್ದವು. ಆ ಅಂಕಣವನ್ನು ಓದಿದರೆ, ಇಂಥ ಸಮಸ್ಯೆಗಳೂ ಇರುತ್ತವಾ, ಇದೆಂಥ ವಿಚಿತ್ರ ಸಮಸ್ಯೆ, ನನಗೂ ಈ ಸಮಸ್ಯೆ ಇದೆಯ, ನನ್ನ ಸಮಸ್ಯೆಯನ್ನು ಯಾರೋ ಕೇಳಿ ಉಪಕರಿಸಿದ್ದಾರೆ..ಎಂದೆನಿಸಿ ಎಲ್ಲರಿಗೂ ಕನೆಕ್ಟ್ ಆಗುತ್ತಿತ್ತು. ಇದೇನೂ ಇಲ್ಲದಿದ್ದರೂ ಒಂದಷ್ಟು ಲಘು ಓದು, ತಿಳಿಹಾಸ್ಯ, ನವಿರು ಅನುಭವಕ್ಕೆ ಮೋಸವಿರಲಿಲ್ಲ.

ಹೀಗಾಗಿ ಡಾ.ವತ್ಸ ಯಾವ ಪತ್ರಿಕೆಗೆ ಬರೆಯಲಾರಂಭಿಸಿದರೂ, ಓದುಗರ ಆರಂಭಿಕ ಮಡಿವಂತಿಕೆ, ಪ್ರತಿರೋಧದ ನಡುವೆಯೂ ಶೀಘ್ರ ಜನಪ್ರಿಯರಾದರು. ಒಂದು ಕಾಲಕ್ಕೆ ಹತ್ತಕ್ಕೂ ಹೆಚ್ಚು ಪ್ರಸಿದ್ಧ ಮಹಿಳೆಯರಿಗೆ ಮೀಸಲಾದ ಪತ್ರಿಕೆಗಳೂ ಅವರ ‘ಸೆಕ್ಸ್
ಪ್ರಶ್ನೋತ್ತರ ’ ಅಂಕಣಗಳನ್ನು ಪ್ರಕಟಿಸಲಾರಂಭಿಸಿದವು. ಶಿಕ್ಷಣದಲ್ಲಿ ಲೈಂಗಿಕ ವಿಷಯವನ್ನು ಅಳವಡಿಸಬೇಕು, ಪಠ್ಯದಲ್ಲಿ ಸೇರಿಸಬೇಕು ಎಂಬ ಬಗ್ಗೆ ಬಹಿರಂಗ ಚರ್ಚೆ ಆರಂಭವಾಗುವ ಮುನ್ನವೇ, ಡಾ.ವತ್ಸ ಈ ಅಂಕಣವನ್ನು ಬರೆಯಲಾರಂಭಿಸಿದ್ದರು. ಸೆಕ್ಸ್ ಸಲಹೆ, ಮಾರ್ಗದರ್ಶನ, ಕಿವಿಮಾತು, ಕೌನ್ಸೆಲಿಂಗ್ ಮೂಲಕ ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಬಹುದು ಎಂದು ಭಾರತ ಸರಕಾರದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆ (FPAI)ಗೆ ಪ್ರಸ್ತಾವನೆ ಸಲ್ಲಿಸಿದವರೇ
ಡಾ.ವತ್ಸ. ಇದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಯಿತು.

ಸೆಕ್ಸ್ ವಿಷಯ ನಾಲ್ಕು ಗೋಡೆಗಳ ಮಧ್ಯೆ ಇರಬೇಕೆ ಹೊರತು, ಕ್ಲಾಸ್ ರೂಮಿನಲ್ಲಿ ಕಲಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದವು. ಆದರೂ ಎಫ್.ಪಿ.ಎ.ಐ. ಡಾ.ವತ್ಸ ವರದಿಯನ್ನು ಅಂಗೀಕರಿಸಿತು. ಅದರನ್ವಯ ಈ ದೇಶದಲ್ಲಿ ಲೈಂಗಿಕ ಶಿಕ್ಷಣ, ಕೌನ್ಸೆಲ್ಲಿಂಗ್ ಕೇಂದ್ರ ಮತ್ತು ಥೆರಪಿ ಕೇಂದ್ರಗಳು ಆರಂಭವಾದವು.

ಅರವತ್ತರ ದಶಕಗಳಲ್ಲಿ ಡಾ.ವತ್ಸ, ನಗರ ಮತ್ತು ಜಿಲ್ಲಾ ಕೇಂದ್ರಗಳಿಗೆ ಹೋಗಿ, ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ ಸೆಕ್ಸ್ ಬಗ್ಗೆ ಮಾತಾಡುತ್ತಿದ್ದರು. ಕೆಲವು ಕಡೆ ಇವರ ಕಾರ್ಯಕ್ರಮಗಳಿಗೆ ಜನ ಬಹಿಷ್ಕಾರ ಹಾಕಿದರು. ಮಹಿಳೆಯರು ಹೋಗದಂತೆ ತಡೆದರು, ಅಪಪ್ರಚಾರ ಮಾಡಿದರು. ಅವರೊಬ್ಬ ‘ಸೆಕ್ಸ್ ಮೇನಿಯಾಕ್’ (ಕಾಮ ಪಿಶಾಚಿ) ಎಂದು ಹಣೆಪಟ್ಟಿ ಕಟ್ಟಿದರು. ಆದರೂ ಡಾ.ವತ್ಸ
ಸುಮ್ಮನಾಗಲಿಲ್ಲ. ಇದನ್ನೆ ಅವರು ನಿರೀಕ್ಷಿಸಿಯೇ ಮುಂದಡಿಯಿಟ್ಟಿದ್ದರು. ಸೆಕ್ಸ್ ಕುರಿತ ಅಂಕಣವನ್ನು ಆರಂಭಿಸುವ ಇರಾದೆ ಯಿದ್ದರೆ, ಓದುಗರಿಗೆ ಮುಕ್ತವಾಗಿ ಪ್ರಶ್ನೆಗಳನ್ನು ಕೇಳುವ ಅವಕಾಶ ಕೊಡಬೇಕು, ಅವರ ಪ್ರಶ್ನೆಗಳನ್ನು ಎಡಿಟ್ ಮಾಡಕೊಡದು, ಓದುಗರಿಂದವಿರೋಧ ಬಂದರೂ ತಡೆದುಕೊಳ್ಳುತ್ತೇವೆ ಎಂಬ ಎದೆಗಾರಿಕೆ ಯಿದ್ದರೆ ಮಾತ್ರ ನನ್ನ ಅಂಕಣ ಪ್ರಕಟಿಸಿ ಎಂಬ
ಷರತ್ತಿನೊಂದಿಗೇ ಅವರು ಆರಂಭಿಸುತ್ತಿದ್ದರು.

ತೊಂಬತ್ತರ ದಶಕದ ನಂತರ ಕ್ರಮೇಣ, ಸೆಕ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಲಾರಂಭಿಸಿದಂತೆ, ಇವರು ಬರೆಯುತ್ತಿದ್ದ ಪತ್ರಿಕೆಗಳು
ಅವರ ಅಂಕಣವನ್ನು ಏಕಾಏಕಿ ನಿಲ್ಲಿಸುತ್ತಿರಲಿಲ್ಲ. ಅಷ್ಟರಮಟ್ಟಿಗೆ ಡಾ.ವತ್ಸ ಅಂಕಣ ಓದುಗರಿಂದ ಸ್ವೀಕೃತವಾಗಿತ್ತು. ಲೈಂಗಿಕ ಸಮಸ್ಯೆ ಇಲ್ಲದವರು ಖುಷಿಗಾಗಿ, ತಮಾಷೆಗಾಗಿ, ನಕ್ಕು ಹಗುರಾಗಲು ಅದನ್ನು ಓದುತ್ತಿದ್ದರು. ಅದಕ್ಕೆ ಕಾರಣ ಡಾ.ವತ್ಸ ಅವಳ ಭಾಷೆ, ವ್ಯಂಗ್ಯ, ಸೊಗಸಾದ ಹಾಸ್ಯ.

ಓದುಗನೊಬ್ಬ ಕೇಳಿದ್ದ – ‘ನಾನು ಮೂವತ್ತೈದು ವರ್ಷದ ವಿವಾಹಿತ. ಪಕ್ಕದ ಮನೆ ಆಂಟಿಗೆ ನಲವತ್ತು. ಆಗಾಗ ನನ್ನನ್ನು ನೋಡಿ ಕಿಸಕ್ಕನೆ ನಗ್ತಾಳೆ. ಇದು ಸೆಕ್ಸ್‌ಗೆ ಗ್ರೀನ್ ಸಿಗ್ನಲ್ ಇರಬಹುದಾ?’ ಇದಕ್ಕೆ ಡಾ.ವತ್ಸ ಉತ್ತರ – ‘ಅವಳ ಮನೆಗೆ ಹೋಗುವ ಮುನ್ನ ಅಕ್ಕ-ಪಕ್ಕ ರೆಡ್ ಸಿಗ್ನಲ್ ಗಳಿದ್ದರೆ ಗಮನಿಸಿ, ಎಚ್ಚರಿಕೆಯಿಂದ ಹೆಜ್ಜೆ ಹಾಕು.’

ಇನ್ನೊಂದು ಪ್ರಶ್ನೆ – ‘ನನಗೆ ಹದಿನಾರು ವರ್ಷ. ನನ್ನ ಶಿಶ್ನ 4.3 ಅಂಗುಲ ಉದ್ದವಿದೆ, ನಿಗರಿದಾಗ 1.5 ಅಂಗುಲ ದಪ್ಪವಾಗು ತ್ತದೆ. ನಂತರ ಸಹಜ ಸ್ಥಿತಿಗೆ ಬಂದಾಗ ಒಂದು ಅಂಗುಲ ದಪ್ಪವಾಗುತ್ತದೆ. ನನಗಿನ್ನೂ ಗಡ್ಡ ಸರಿಯಾಗಿ ಬಂದಿಲ್ಲ. ಇತ್ತೀಚೆಗೆ ನನ್ನ ತೂಕವೂ ಕಮ್ಮಿಯಾಗುತ್ತಿದೆ. ನನಗೆ ಪ್ರಾಯ ಬರುವುದಾ? ನನ್ನ ಶಿಶ್ನವೇಕೆ ಸಣ್ಣದು?’ ಇದಕ್ಕೆ ಡಾ.ವತ್ಸ ಉತ್ತರ – ‘ಟೇಲರ್ ಧಾಟಿ ಯಲ್ಲಿ ಮಾತಾಡುವುದನ್ನು ಮೊದಲು ನಿಲ್ಲಿಸು. ನಿನ್ನ ಸಾಮಾನನ್ನು ಅದರ ಪಾಡಿಗೆ ಬಿಡು.

ಪ್ರತಿದಿನ ವ್ಯಾಯಾಮ ಮಾಡು ಮತ್ತು ಪೌಷ್ಟಿಕ ಆಹಾರ ಸೇವಿಸು. ಆಗ ನಿನ್ನ ಸಾಮಾನು ತನ್ನಷ್ಟಕ್ಕೆ ಸರಿಯಾಗುತ್ತದೆ. ನಿನಗೆ ಈಗಾಗಲೇ ಪ್ರಾಯ ಬಂದಿದೆ. ಖುಷಿಯಾಗಿರು.’ ಮತ್ತೊಂದು ಪ್ರಶ್ನೆ – ‘ಮದುವೆಯಾಗಲೇಬೇಕು ಎಂದು ನನ್ನ ಮನೆ – ಮಂದಿಯೆ ಒತ್ತಾಯ ಮಾಡುತ್ತಿದ್ದಾರೆ. ನನಗೂ ಮದುವೆಯಾಗಬೇಕೆಂಬ ಆಸೆಯಿದೆ. ಆದರೆ ನಾನು ಕೈಹಿಡಿಯುವ ಹುಡುಗಿ ಈ ಮೊದಲೇ ಸಂಭೋಗ ಮಾಡಿಲ್ಲ ಎಂಬುದಕ್ಕೆ ಗ್ಯಾರಂಟಿಯೇನು? ವರ್ಜಿನ್ ಆದವಳನ್ನೇ ಆಯ್ಕೆ ಮಾಡೋದು ಹೇಗೆ?’ ಈ ಪ್ರಶ್ನೆಗೆ ಡಾ.ವತ್ಸ ಉತ್ತರ – ‘ನನ್ನ ಕೇಳಿದರೆ, ನೀನು ಮದುವೆ ಆಗಬೇಡ. ಮೊದಲು ನೀನು ಪತ್ತೇದಾರರನ್ನು ನೇಮಿಸದ ಹೊರತು, ನಿನ್ನ ಕೈಹಿಡಿಯು ವವಳು ವರ್ಜಿನ್ ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಯಾವ ವಿಧಾನವೂ ಇಲ್ಲ.

ಒಮ್ಮೆ ಸಂಶಯ ಪಿಶಾಚಿ ಮನಸ್ಸನ್ನು ಹೊಕ್ಕರೆ, ಅದು ಅಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ. ಯಾಕೆ ಹೆಣ್ಮಕ್ಕಳನ್ನು ಮದುವೆ ಯಾಗಿ ಗೋಳು ಹುಯ್ಕೊಳ್ತೀಯಾ?!’ ಡಾ.ವತ್ಸ ಅವರಿಗೆ ತರೇಹವಾರಿ ಪ್ರಶ್ನೆಗಳು ಬರುತ್ತಿದ್ದವು. ಇದು ಸಭ್ಯ, ಇದು ಅಸಭ್ಯ ಎಂದು ಅವರು ವರ್ಗೀಕರಿಸುತ್ತಿರಲಿಲ್ಲ. ಆ ಪ್ರಶ್ನೆಗಳನ್ನು ಹಸಿಹಸಿಯಾಗಿಯೇ ಆಯ್ದುಕೊಳ್ಳುತ್ತಿದ್ದರು. ಅವರೇ ಹೇಳುತ್ತಿದ್ದಂತೆ ಸೆಕ್ಸ್ ಸಭ್ಯವೂ ಹೌದು, ಅಶ್ಲೀಲವೂ ಹೌದು. ಅದನ್ನು ನೀವು ಹೇಗೆ ಸ್ವೀಕರಿಸುತ್ತೀರಿ ಎಂಬುದನ್ನು ಆಧರಿಸಿರುತ್ತದೆ. ಒಮ್ಮೆ ಓದುಗ ನೊಬ್ಬ ಕೇಳಿದ್ದ – ‘ಸೆಕ್ಸ್ ಬಗ್ಗೆ ಯೋಚಿಸುತ್ತಾ, ಏಕ ಕಾಲದಲ್ಲಿ ಗಂಡಸು ಮತ್ತು ಹೆಂಗಸು ಹಸ್ತಮೈಥುನ ಮಾಡಿಕೊಂಡರೆ, ಅವಳು ಬಸಿರಾಗುತ್ತಾಳಾ?’ ಈ ಪ್ರಶ್ನೆಯನ್ನು ಇನ್ನೊಮ್ಮೆ ಓದಿ.

ಈ ಪ್ರಶ್ನೆಗೆ ಡಾ.ವತ್ಸ ಯಾವ ರೀತಿ ಉತ್ತರಿಸಬಹುದು ಎಂದು ನನಗೆ ಅತೀವ ಕುತೂಹಲವಿತ್ತು. ಅವರು ಬರೆದಿದ್ದರು – ’ನೀನು ಯಾವ ಹೆಂಗಸನ್ನು ನೆನಪಿಸಿಕೊಂಡು ಹಸ್ತಮೈಥುನ ಮಾಡುತ್ತೀಯೋ, ಅವಳಿಗೆ ನಿನ್ನ ವೀರ್ಯ (Sperm) ವನ್ನು ಸಾಗಿಸಲು ಈ ಭೂಮಿಯ ಮೇಲೆ ದೇವತೆಗಳಾಗಲಿ, ಕನ್ನಿಕೆಯರಾಗಲಿ ಇಲ್ಲ. ಬೇರೆಯವಳನ್ನು ನೆನಪಿಸಿಕೊಂಡು ಹಾಗೆ ಮಾಡುವುದರಿಂದ ನಿನಗೆ ಮಜಾ ಸಿಗಬಹುದು, ಅದಕ್ಕಿಂತ ಹೆಚ್ಚು ಮತ್ತೇನಾಗುವುದಿಲ್ಲ.’

ಡಾ.ವತ್ಸ ಅಂಕಣ ಓದುತ್ತಿದ್ದರೆ, ಅದೊಂದು ಅಸಹ್ಯ ಎಂಬ ಭಾವನೆಯನ್ನು ಅವರು ಮೊದಲು ಹೋಗಲಾಡಿಸುತ್ತಿದ್ದರು. ಓದುಗರು ಮುಕ್ತವಾಗಿ ತೆರೆದುಕೊಳ್ಳಲು ಅನುವು ಮಾಡಿಕೊಡುತ್ತಿದ್ದರು. ಅವರ ಉತ್ತರದಲ್ಲಿ ನವಿರು ಹಾಸ್ಯವಿರುತ್ತಿತ್ತು. ಆದರೆ ಗೇಲಿ ಮಾಡುತ್ತಿರಲಿಲ್ಲ. ಓದುಗರ ಸಮಸ್ಯೆಗೆ ಲಘುಧಾಟಿಯ ಪರಿಹಾರವಿರುತ್ತಿತ್ತು. ಒಟ್ಟಾರೆ ಓದುಗರಿಗೆ ಒಂದಷ್ಟು ಮನರಂಜನೆ ಯಾದರೂ ಸಿಗುತ್ತಿತ್ತು. ಒಮ್ಮೆ ಓದುಗನೊಬ್ಬ ಡಾ.ವತ್ಸ ಅವರನ್ನು, ‘ಲೈಂಗಿಕ ತಜ್ಞರನ್ನು ಎಷ್ಟು ದಿನಕ್ಕೊಮ್ಮೆ ಭೇಟಿಯಾಗ ಬೇಕು? ಆರು ತಿಂಗಳಿಗೊಮ್ಮೆ ದಂತವೈದ್ಯರನ್ನು (ಡೆಂಟಿಸ್ಟ್) ಭೇಟಿ ಮಾಡಬೇಕು ಅಂತ ಹೇಳ್ತಾರಲ್ಲ, ಆ ಕಾರಣದಿಂದ ಈ ಪ್ರಶ್ನೆ ಕೇಳಿದೆ’ ಎಂದು ಬರೆದಿದ್ದ. ಅದಕ್ಕೆ ಈ ‘ಸೆಕ್ಸ್ ಪರ್ಟ್’ ಉತ್ತರಿಸಿದ್ದರು – ‘ಪುಣ್ಯವಶಾತ್ ಶಿಶ್ನಕ್ಕೆ ಯಾವುದೇ ಹಲ್ಲುನೋವಿಲ್ಲ. ನೀನೇ ನಿನ್ನ ಶಿಶ್ನವನ್ನು ಪರೀಕ್ಷಿಸಿಕೊಳ್ಳಬಹುದು.

ಸಾಧ್ಯವಾದಷ್ಟು ಆ ಭಾಗವನ್ನು ಸ್ವಚ್ಛವಾಗಿಟ್ಟುಕೋ. ಹೆಂಗಸರು ವರ್ಷಕ್ಕೊಮ್ಮೆಯಾದರೂ ಗೈನಕಾಲಾಜಿಸ್ಟ್ ಭೇಟಿ ಮಾಡಿದರೆ ಒಳ್ಳೆಯದು. ಒಮ್ಮೆ ಡಾ.ವತ್ಸ ಅವರಿಗೆ ಮಹಿಳೆಯೊಬ್ಬಳು ಒಂದು ಪ್ರಶ್ನೆ ಕೇಳಿದ್ದಳು. ಅದಕ್ಕೆ ಅವರು ಉತ್ತರಿಸಿರಲಿಲ್ಲ. ‘ಈ ಪ್ರಶ್ನೆಗೆ
ಮಾತ್ರ ನಾನು ಉತ್ತರಿಸಲಾರೆ. ಪ್ರಶ್ನೆಯೂ ನಿಮ್ಮದು, ಉತ್ತರವೂ ನಿಮ್ಮದು’ ಎಂದಷ್ಟೇ ಬರೆದಿದ್ದರು. ಅಷ್ಟಕ್ಕೂ ಆ ಮಹಿಳೆ ಕೇಳಿದ ಪ್ರಶ್ನೆಯೇನು ಗೊತ್ತಾ? ‘ನಾನು ಪ್ರೀತಿಸುತ್ತಿರುವ ಹುಡುಗನ ಮೇಲೆ ನನಗೆ ನಂಬಿಕೆ ಇಲ್ಲದಾಗಿದೆ. ಆತ ನನಗೆ ಮೋಸ ಮಾಡುತ್ತಿರ ಬಹುದಾ ಎಂಬ ಸಂಶಯ ನನ್ನನ್ನು ಬಲವಾಗಿ ಕಾಡುತ್ತಿದೆ.

ಯಾಕೆಂದರೆ, ನನ್ನ ಹೊಟ್ಟೆಯೊಳಗಿರುವುದು, ಅವನ ಮಗುವಾ ಅಥವಾ ಬೇರೆಯವರದಾ?’ ಹತ್ತಿರ ಹತ್ತಿರ ಆರು ದಶಕಗಳ ಕಾಲ ನಿರಂತರವಾಗಿ ಡಾ.ವತ್ಸ ಹೀಗೇ ಬರೆದರು. ಸೆಕ್ಸ್ ಬಗ್ಗೆ ಇದ್ದ ಮಡಿವಂತಿಕೆಯನ್ನೆಲ್ಲ ಬಿಸಾಕಿದರು. ಹಿಂದಿನ ವರ್ಷದ ಡಿಸೆಂಬರ್ 28ರಂದು, ತಮ್ಮ ತೊಂಬತ್ತಾರನೇ ವಯಸ್ಸಿನಲ್ಲಿ ನಿಧನರಾಗುವ ತನಕವೂ ಬರೆದರು. ಅವರ ಹಾಗೆ ಈ ಥರದ ಅಂಕಣವನ್ನು ಯಾರೂ ಬರೆಯಲಿಲ್ಲ. I miss him !

Leave a Reply

Your email address will not be published. Required fields are marked *