Monday, 15th August 2022

ಮಾಜಿ ಸಚಿವರ ಪುತ್ರಿಗೆ ಜೀವ ಬೆದರಿಕೆ, ದೂರು ದಾಖಲು

ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ, ಡಾ.ರಾಜನಂದಿನಿ ಅವರ ಕಾರನ್ನು ಅಡ್ಡಗಟ್ಟಿದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿರುವುದಾಗಿ ವರದಿಯಾಗಿದ್ದು, ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಂಗ್ರೆಸ್ ನಿಂದ ಸಾಗರ ವಿಧಾನಸಭಾ ಕ್ಷೇತ್ರಕ್ಕೆ, ಮಾಜಿ ಸಚಿವರ ಪುತ್ರಿಗೆ ಟಿಕೆಟ್ ಸಿಗಲಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಕ್ಷೇತ್ರದಲ್ಲಿ ಜನರ ಸಂಪರ್ಕವನ್ನು ಬೆಳೆಸುವ ನಿಟ್ಟಿನಲ್ಲಿ, ನಿರಂತರ ಕ್ಷೇತ್ರ ಪ್ರವಾಸ, ವಿವಿಧ ಕಾರ್ಯಕ್ರಮದಲ್ಲಿ ಡಾ.ರಾಜನಂದಿನಿ ಅವರು ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ತಾಲೂಕಿನಲ್ಲಿ ಸಾಗರದ ತ್ಯಾಗರ್ತಿ ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಮೇಳದಲ್ಲಿ ಭಾಗವಹಿಸಿದ್ದರು. ಬಳಿಕ, ಸಾಗರಕ್ಕೆ ತೆರಳುತ್ತಿದ್ದ ಸಂದರ್ಭ, ಮಾರ್ಗ ಮಧ್ಯೆ ಯುವಕನೋರ್ವ ಡಾ.ರಾಜನಂದಿನಿ ಅವರಿದ್ದ ಕಾರನ್ನು ಅಡ್ಡಗಟ್ಟಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ಮಾಜಿ ಸಚಿವರ ಪುತ್ರಿ ಡಾ.ರಾಜನಂದಿನಿ ಅವರು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.