Tuesday, 9th August 2022

ಕಾರು ಮರಕ್ಕೆ ಡಿಕ್ಕಿ: ಮಗು ಸೇರಿ ಮೂವರ ದುರ್ಮರಣ

ಚಿತ್ರದುರ್ಗ: ತಡರಾತ್ರಿ ಚಿತ್ರದುರ್ಗ ಜಿಲ್ಲೆಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 5 ವರ್ಷದ ಮಗು ಸೇರಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರನ್ನು ಗೀತಾ(32), ಶಾರದಾ (60) ಹಾಗೂ ಧೃತಿ (5) ಎಂದು ಗುರುತಿಸಲಾಗಿದ್ದು, ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಾಪುರ ಬಳಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿಯಾಗಿ, ಕಾರಿನಲ್ಲಿದ್ದ 5 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ನಾಲ್ವರಿಗೆ ಗಾಯಗಳಾಗಿದ್ದು, ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಕರಣ ದಾಖಲಾಗಿದೆ.