Thursday, 1st December 2022

ಈಜಲು ಹೋದವರು ಸುಳಿಗೆ ಸಿಕ್ಕಿ ಸಾವು

ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನೀರಿನಲ್ಲಿ ಈಜಾಡಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ಸುಳಿಗೆ ಸಿಕ್ಕಿ ಮೃತಪಟ್ಟಿ ದ್ದಾರೆ.

ಒಂದೇ ಕುಟುಂಬಕ್ಕೆ ಸೇರಿದ್ದವರೆಂದು ಹೇಳಲಾಗಿದೆ. ಅಂಕೋಲಾದ ಹಿಲ್ಲೂರಯ ಗ್ರಾ.ಪಂ. ವ್ಯಾಪ್ತಿಯ ಕರಿಕಲ್ ಕಡಕಾರ್‌ನಲ್ಲಿ ಘಟನೆ ನಡೆದಿದೆ. ಅಂಕೋಲಾದ ಗಂಗಾವಳಿ ನದಿಯಲ್ಲಿ ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದಾಗ ಸುಳಿಗೆ ಸಿಕ್ಕಿ ನೀರು ಪಾಲಾಗಿ ದ್ದಾರೆ.

ಕರಿಕಲ್ಲು ನಿವಾಸಿ ಪೂಜಾ ಮಹೇಶ್ ನಾಯ್ಕ್ (18), ಕುಮಟಾ ಕೋನಳ್ಳಿ ನಿವಾಸಿ ದಿಲೀಪ್ ಬಾಬು ನಾಯ್ಕ್ (20) ಹಾಗೂ ಅಗನಾಶಿನಿ ನಿವಾಸಿ ನಾಗೇಂದ್ರ ದಾಸು ನಾಯ್ಕ್ (16) ಮೃತಪಟ್ಟವರು.

ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದ ಪೂಜಾ ಮನೆಗೆ ಮಾವನ ಮಕ್ಕಳಾದ ದಿಲೀಪ, ನಾಗೇಂದ್ರ ಹಾಗೂ ಸುದೀಪ್ (15) ಬಂದಿದ್ದರು. ರಜಾದಿನವಾಗಿದ್ದರಿಂದ ಮೂವರು ನೀರಿನಲ್ಲಿ ಈಜಾಡಿದ ಬಳಿಕ ಪೂಜಾ ಕಪ್ಪೆ ಚಿಪ್ಪು ಹೆಕ್ಕಲು ಪ್ರಾರಂಭಿಸಿದ್ದಳು.

ಈ ವೇಳೆ ಸುಳಿಗೆ ಸಿಕ್ಕಿದ್ದ ಪೂಜಾ ಜೀವ ರಕ್ಷಣೆಗಾಗಿ ಕೈಕಾಲು ಬಡಿಯುತ್ತಿದ್ದಳು. ನೀರಿಗೆ ಹಾರಿ ಆಕೆಯ ರಕ್ಷಣೆಗೆ ದಿಲೀಪ ಹಾಗೂ ನಾಗೇಂದ್ರ ಮುಂದಾಗಿದ್ದರು.

ಸುಳಿಯಿಂದ ಪೂಜಾಳನ್ನು ಎಳೆಯಲು ಪ್ರಯತ್ನ ಪಟ್ಟರೂ, ಮೂವರೂ ಮತ್ತೆ ಸುಳಿಗೆ ಸಿಕ್ಕಿದ್ದಾರೆ. ಸ್ಥಳೀಯರ ಸಹಾಯದಿಂದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾದರೂ ಅದಾಗಲೇ ಜೀವ ಕಳೆದುಕೊಂಡಿದ್ದರು.

ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.