Sunday, 14th August 2022

ಶಿವಮೊಗ್ಗದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್‌

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆ ಬಳಿಕ ಇಡೀ ಶಿವಮೊಗ್ಗವನ್ನು ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.

ಸೋಮವಾರ ಹರ್ಷ ಮೃತದೇಹದ ಮೆರವಣಿಗೆ ವೇಳೆ ದುಷ್ಕರ್ಮಿಗಳು ಶೋ ರೂಂ, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಲ್ಲಡೆ ಸುತ್ತುವರಿದಿದ್ದಾರೆ.

ಈಗಾಗಲೇ ಎರಡು ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಶಿವಮೊಗ್ಗದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಗರದೆಲ್ಲೆಡೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು ಹಲವು ಕಡೆ ಬ್ಯಾರಿಕೇಡ್‌ ಗಳನ್ನು ಅಳವಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಮೂರು ಎಸ್ಪಿಗಳು, ಒಬ್ಬ ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿಗಳು, 39 ಪಿಐಗಳು, 54 ಪಿಎಸ್‌ಐಗಳು, 48 ಎಎಸ್‌ಐಗಳು, 819 ಪಿಸಿಗಳು, 20 ಕೆಎಸ್‌ಆರ್ ಪಿ, ಬೆಟಾಲಿಯನ್ ಗಳು, 10 ಡಿಎಆರ್ ಬೆಟಾಲಿಯನ್ ಗಳು ಮತ್ತು ಒಂದು ಆರ್ ಎಫ್ ಎಫ್ ಬೆಟಾಲಿಯನ್ ಅನ್ನು ಸರ್ಕಾರ ನಿಯೋಜಿಸಿದೆ.