Thursday, 1st December 2022

ಮುನ್ಸಿಪಾಲಿಟಿ ಚುನಾವಣೆ ಫಲಿತಾಂಶ: ಟಿಎಂಸಿಗೆ ಭರ್ಜರಿ ಜಯ

ಕೋಲ್ಕತಾ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಬುಧವಾರ ಪ್ರಕಟವಾದ ಮುನ್ಸಿಪಾಲಿಟಿ ಚುನಾವಣೆ ಫಲಿತಾಂಶದಲ್ಲಿ ಭರ್ಜರಿ ಜಯ ದಾಖಲಿಸಿದೆ. 107 ಮುನ್ಸಿಪಾಲಿಟಿ ಗಳಲ್ಲಿ 93 ರಲ್ಲಿ ಗೆಲುವು ಸಾಧಿಸಿದ್ದು, ಪ್ರತಿಪಕ್ಷವನ್ನು ಧೂಳೀಪಟ ಮಾಡಿದೆ.

ಡಾರ್ಜಿಲಿಂಗ್ ಮುನ್ಸಿಪಾಲಿಟಿಯ 32 ಸ್ಥಾನಗಳ ಪೈಕಿ ಸಾಮಾಜಿಕ ಕಾರ್ಯಕರ್ತ ಅಜೋಯ್ ಎಡ್ವರ್ಡ್ ಅವರ ಸಂಘಟನೆ ಹ್ಯಾಮ್ರೊ ಪಾರ್ಟಿ 17 ರಲ್ಲಿ ಮುನ್ನಡೆ ಸಾಧಿಸಿದೆ. ಟಿಎಂಸಿ ಮುನ್ನಡೆ ಸಾಧಿಸದ ಏಕೈಕ ನಗರ ಸ್ಥಳೀಯ ಸಂಸ್ಥೆ ಇದಾಗಿದೆ.

ಕಾಂತಿ ಮುನ್ಸಿಪಾಲಿಟಿಯ 21 ವಾರ್ಡ್‌ಗಳಲ್ಲಿ ತೃಣಮೂಲ 18 ವಾರ್ಡ್‌ಗಳನ್ನು ಗೆದ್ದುಕೊಂಡಿದೆ. ಎರಡು ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಒಂದು ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕಾಂತಿ ಮುನ್ಸಿಪಾಲಿಟಿಯು 30 ವರ್ಷಗಳಲ್ಲಿ ಮೊದಲ ಬಾರಿ ಅಧಿಕಾರಿ ಕುಟುಂಬದ ಕೈತಪ್ಪಿದೆ.

“ನಮಗೆ ಮತ್ತೊಂದು ಭರ್ಜರಿ ಜನಾದೇಶದ ನೀಡಿರುವುದಕ್ಕೆ ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು. ಮುನ್ಸಿಪಲ್ ಚುನಾವಣೆಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆಗಳು” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟಿಸಿದ್ದಾರೆ.