Friday, 7th May 2021

ಹಳೆಯ ಹೊಸತಿನ ಸಂಗಮ ಟೋಕಿಯೋ

ಕುಸುಮ ಗೋಪಿನಾಥ್

ಜಪಾನಿನ ಟೋಕಿಯೋ ಪ್ರವಾಸ ಎಂದರೆ ಅದೊಂದು ವಿಭಿನ್ನ ಅನುಭವ. ಪುರಾತನ ಇತಿಹಾಸ ಮತ್ತು ಆಧುನಿಕ
ವರ್ತಮಾನದ ಸಂಗಮವೇ ಟೋಕಿಯೋ.

ಹಂಗರಿಯ ಲೇಖಕನಾದ ಜಾರ್ಜ ಮಿಕೇಶ್‌ನ ‘ದ ರೈಸಿಂಗ್ ಆಫ್ ದ ಎನ್’ ನ ಭಾಗವಾದ ‘ಜಪಾನ್ ಎಂಡ್ ಬ್ರಾಝಿಲ್ ಥ್ರು ಎ ಟ್ರಾವೆಲರ್ಸ್ ಐ’ನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪಾಠಮಾಡಿದ ನನಗೆ, ಜಪಾನನ್ನೊಮ್ಮೆ ನೋಡಬೇಕು ಎನಿಸಿತ್ತು. ನಾನು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದ ಸ್ವಲ್ಪ ದಿನಗಳಲ್ಲೇ (2019 ಅಕ್ಟೋಬರ್) ಜಪಾನಿಗೆ ಹೋಗುವ ಅವಕಾಶ ದೊರತಿದ್ದು, ಜಾರ್ಜ ಮಿಕೇಶ್‌ನ ಹಾಸ್ಯ ಭರಿತ ಶೈಲಿಯ ಜಪಾನ್ ವರ್ಣನೆಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿತು.

ಮಿಕೇಶ್ ವರ್ಣಿಸುವಂತೆ ಜಪಾನಿಗರು ಅತಿ ವಿನಯವಂತರು. ಜನಸಂದಣಿಯ ನಗರವಾದ ಟೋಕಿಯೋದಂತಹ ನಗರದಲ್ಲಿ ವಾಸಿಸುವವರಿಗೆ ಪರಸ್ಪರ ಸಹಕಾರ, ಹೊಂದಾಣಿಕೆಗಳು ಅನಿವಾರ್ಯ. ಆದರೆ ಜಪಾನಿಗರು ಎಷ್ಟೇ ಅವಸರವಿರಲಿ, ಶಿಸ್ತಿನ ವಿಷಯದಲ್ಲಿ ಮಾತ್ರ ಹೊಂದಾಣಿಕೆ ಮಾಡಿಕೊಳ್ಳು ವವರಲ್ಲ. ಅವರ ಕಾರ್ಯದಕ್ಷತೆಗಂತೂ ಹೋಲಿಕೆಯೇ ಇಲ್ಲ. ಅಲ್ಲಿನ ರೈಲುಗಳೇ ಇದಕ್ಕೆ ಉದಾಹರಣೆ. ಅವರ ಹೈ ಸ್ಪೀಡ್ ಬುಲೆಟ್ ಟ್ರೇನ್‌ಗಂತೂ ಪ್ರಪಂಚದ ಬೇರೆಲ್ಲೂ ಸಾಟಿ ಇಲ್ಲ. ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ರೈಲಿನಲ್ಲಿ ಕುಳಿತರೆ, ನಾವು ಚಲಿಸುತ್ತಿದ್ದೇವೆಂದೇ ಗೊತ್ತಾಗುವು ದಿಲ್ಲ.

ಟೋಕಿಯೋ ಟವರ್

ಪ್ಯಾರಿಸ್‌ನ ಐಫೆಲ್ ಟವರ್ ಮಾದರಿಯಲ್ಲಿ ನಿರ್ಮಿಸಿದ ಟೋಕಿಯೋ ಟವರ್, ಇಲ್ಲಿನ ಲ್ಯಾಂಡ್ ಮಾರ್ಕ್. 332 ಮೀಟರ್ ಎತ್ತರವಿರುವ ಈ ಗೋಪುರ, 2010 ರಲ್ಲಿ ‘ಸ್ಕೈ ಟ್ರೀ’ ಗೋಪುರ ಕಟ್ಟುವವರೆಗೂ ಅತೀ ಎತ್ತರದ ಕಟ್ಟಡವಾಗಿತ್ತು. ಜಪಾನಿನ ರೇಡಿಯೋ ಬ್ರಾಡ್ಕಾಸ್ಟಿಂಗ್ ಸಂಸ್ಥೆಯು ರೇಡಿಯೋ ತರಂಗಗಳ ಪ್ರಸರಣಕ್ಕೋಸ್ಕರ 1953 ರಲ್ಲೇ ನಿರ್ಮಿಸಿದ ಕಟ್ಟಡ. ಕಟ್ಟಡದ ಬೇಸ್ಮೆಂಟ್‌ನಲ್ಲಿ, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ರೆಸ್ಟುರೆಂಟ್‌ಗಳೂ ಇವೆ. ಇಲ್ಲಿನ ಅಕ್ವೇರಿಯಂ ನಂತರದ ಮಹಡಿಗಳಲ್ಲಿ ಸರಕಾರಕ್ಕೆ ಸೇರಿದ ಕಛೇರಿಗಳಿವೆ.

9ನೇ ಅಂತಸ್ತು 150 ಮೀಟರ್ ಎತ್ತರವಿದ್ದು ನಗರದ ನೋಟ ಲಭ್ಯ. ಮೇಲಿನ ಮಹಡಿಗಳಲ್ಲಿರುವ ಅಬ್ಸರ್ವೇಷನ್ ಡೆಕ್‌ಗಳು, 360 ಡಿಗ್ರೀ ಪನೋರಮಿಕ್ ನೋಟದಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. 250 ಮೀಟರ್ ಎತ್ತರದ ಡೆಕ್ಕಿಗೆ ಹೋದಾಗ ಸುತ್ತ ಮುತ್ತಲಿನ ನದಿಗಳು, ಪರ್ವತಗಳು ಕಾಣತೊಡುಗುತ್ತವೆ. ಜಪಾನಿನ ಜ್ವಾಲಾಮುಖಿ ಮತ್ತು ಪವಿತ್ರ ಪರ್ವತವಾದ ಮೌಂಟ್ ಫುಜಿ ಸಹ ಕಾಣುತ್ತದೆ.

ಚಹ ಕೂಟ
ಜಪಾನಿನ ಸರೋವರದ ಸುತ್ತಲೂ ಇರುವ ಕೆಲವು ಹಳೆಯ ಕಟ್ಟಡಗಳಲ್ಲಿ ಪ್ರವಾಸಿಗರಿಗೋಸ್ಕರ ಚಹ ಕೂಟಗಳನ್ನು ಏರ್ಪಡಿಸುತ್ತಾರೆ. ಜಪಾನಿಗೆ ಹೋದವರು ಅವರ ಟೀ ಸೆರಿಮೊನಿಯಲ್ಲಿ ಚಹ ಸೇವನೆ ಮಾಡದೆ ಬರುವ ಸಾಧ್ಯತೆಯೇ ಇಲ್ಲ. ಇದಕ್ಕೊಂದು ಇತಿಹಾಸವೇ ಇದೆ. ಹನ್ನೆರಡನೇ ಶತಮಾನದಲ್ಲಿ ಈ ಪದ್ದತಿ ಚೀನದಿಂದ ಬಂದಿತು. ಪರಸ್ಪರ ಸೌಹಾರ್ದ, ಶಾಂತಿ
ಗೋಸ್ಕರ ಈ ಟೀ ಸೆರೆಮೊನಿಗಳನ್ನು ಏರ್ಪಡಿಸುತ್ತ ಬಂದರು.

ಇಂದು ಅದು ಜಪಾನಿನ ಸಂಸ್ಕೃತಿಯ ಒಂದು ಮುಖ್ಯ ಭಾಗವೇ ಆಗಿದೆ. ಚಹ ತಯಾರು ಮಾಡುವುದೂ ಕೂಡ ಒಂದು ಕಲೆ, ಅದನ್ನು ಕಲಿಸುವ ಅನೇಕ ಸ್ಕೂಲ್‌ಗಳು ಅಲ್ಲಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದಲ್ಲವೆ? ಇದನ್ನು ನೋಡಲು ಪ್ರವಾಸಿ ಗರು ಮೊದಲೇ ಬುಕ್ ಮಾಡಿರಬೇಕು. ಒಂದು ಗುಂಪಿನಲ್ಲಿ 10-12 ಜನರ ಮೇಲಿರಬಾರದು. ಚಹ ಮಾಡುವ ಮಹಿಳೆ ಜಪಾನಿನ ಸಾಂಪ್ರದಾಯಿಕ ಉಡುಗೆ ಕಿಮಿನೊ ಧರಿಸಿರುತ್ತಾಳೆ.

ಹರಟೆ ಹೊಡೆಯದೆ ಮೌನವಾಗಿದ್ದು ಆಕೆಯ ಕೆಲವೇ ಕೆಲವು ಮಾತುಗಳನ್ನು ಕೇಳಿಸಿಕೊಳ್ಳ ಬೇಕು. ಆಕೆ ಚಹ ಮಾಡುವ ಪರಿಕರಗಳ ಪರಿಚಯ ಮಾಡಿಕೊಡುತ್ತಾಳೆ. ನಮ್ಮೆದುರೇ ಚಹ ತಯಾರಿಸುತ್ತಾಳೆ. ಇದು ಮಾಚ್ಚಾ ಅಥವ ಹಸಿರು ಬಣ್ಣದ ಚಹ ಪುಡಿಯಿಂದ ತಯಾರಾದ ಹಸಿರು ಚಹ. ಎಲ್ಲರಿಗೂ ಚಹದ ಬೌಲ್ ನೀಡಿದ ನಂತರ, ನಾವು ನಮ್ಮ ಬೌಲ್ ಎತ್ತಿಕೊಂಡು ಕುಡಿಯಬೇಕು. ನೋಡಲು ಪಾಲಕ್ ಸೂಪ್‌ನಂತೆ ತೋರುವ ಚಹ, ನಮ್ಮ ಚಹದ ರುಚಿಗಿಂತ ಬೇರೆಯದೇ ಆದರೂ, ಸ್ವಾದಿಷ್ಟ. ನಮ್ಮ ಟೂರ್ ಗೈಡ್ ಮೊದಲೇ ಸೂಚನೆ ಕೊಟ್ಟಂತೆ, ನಾವೆಲ್ಲ ಚಹ ಹೀರುವಾಗ ಸೊರ್ ಎಂದು ಸದ್ದು ಮಾಡಿದೆವು.

ಹೀಗೆ ಬಾಯಿಂದ ಸದ್ದು ಮಾಡದಿದ್ದರೆ, ಚಹ ಚೆನ್ನಾಗಿಲ್ಲ ಎಂದರ್ಥ. ಪಾಶ್ಚಿಮಾತ್ಯ ದೇಶಗಳಲ್ಲಿ ಕುಡಿಯುವಾಗ ತಿನ್ನುವಾಗ
ನಾಲಿಗೆಯಿಂದ ಸದ್ದಾದರೆ ಅನಾಗರಿಕರೆಂದುಕೊಳುತ್ತಾರೆ. ಆದರೆ ಇಲ್ಲಿ ಸದ್ದುಮಾಡಬೇಕು, ಹೇಗಿದೆ ನೋಡಿ! ಚಹದ ಜೊತೆ ತಿನ್ನಲು, ನಾಲ್ಕು ಪೀಸ್ ಜಪಾನಿನ ಸಿಹಿ ತಿಂಡಿ ಕೂಡ ಇಟ್ಟಿರುತ್ತಾರೆ. ಅಲ್ಲಿನ ಶಾಂತ ಪರಿಸರ, ನಗು ಮುಖದ ಉಪಚಾರ, ಚಹ ಮಾಡುವಾಗಿನ ಪ್ರತಿಯೊಂದು ಕ್ರಿಯೆ, ಕರಾರುವಕ್ಕಾದ ಚಲನೆಗಳು ನಾವು ದೇವರ ಪೂಜೆ ಮಾಡುವ ಕ್ರಿಯೆಗೆ ಹೋಲಿಸಬಹುದು. ಈ ಪೂರ್ಣ ಪ್ರಕ್ರಿಯೆಯ ಹಿಂದಿರುವ ತತ್ವ, ಮಾನವೀಯ ಮೌಲ್ಯಗಳಾದ ಸೌಹಾರ್ದತೆ, ಗೌರವ, ಪಾವಿತ್ರತೆ ಮತ್ತು ಶಾಂತಿ. (ಹಾರ್ಮೊನಿ, ರೆಸ್ಪೆಕ್ಟ್, ಪ್ಯೂರಿಟಿ ಮತ್ತು ಟ್ರಾಂಕ್ಯುಲಿಟಿ).

ವಿಶಾಲವಾದ ನ್ಯಾಶನಲ್ ಗಾರ್ಡನ್ ಮಧ್ಯದಲ್ಲಿ ಇಡೋ ಕ್ಯಾಸಲ್‌ನ ಕೋಟೆಯಲ್ಲಿ ಜಪಾನನ್ನು 1602 ರಿಂದ 1867 ರವರಗೆ ಆಳಿದ ತೋಕೋಗಾವಾ ರಾಜರ ಅರಮನೆ ಇದೆ. ಈಗಲೂ ಅಲ್ಲಿ ರಾಜ ಮನೆತನದವರು ವಾಸವಾಗಿರುವದರಿಂದ ಸಾಮಾನ್ಯ ಪ್ರವಾಸಿಗರಿಗೆ ಪ್ರವೇಶವಿಲ್ಲ. ಅದರ ಹೊರವಲಯದ ನಿಜುಬಾಶಿ ಬ್ರಿಜ್ ಮೇಲೆ ನಿಂತು ಅರಮನೆಯನ್ನು ನೋಡ ಬಹುದು. ಅರಮನೆಯ ಒಳಗಿನ ಕೆಲವು ಭಾಗಗಳನ್ನು ನೋಡಲು ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು. ಸುಮಿದಾ ನದಿಯು ಟೋಕಿಯೋದ ಮಧ್ಯ ಭಾಗದಲ್ಲಿ ಹರಿಯುತ್ತಿದ್ದು, ರಿವರ್ ಕ್ರೂಸ್‌ನಲ್ಲಿ ಸಾಗಿದರೆ ಎರಡೂ ಕಿನಾರೆಗಳಲ್ಲಿ ಟೋಕಿಯೋದ ಹಲವು ಕಟ್ಟಡಗಳ ಪಕ್ಷಿನೋಟ ಸಿಗುತ್ತದೆ.

ಪುರಾತನ ಆಸಾಕುಸಾ ಪ್ರಾಂತ್ಯದ ಸೆನ್ಸೋಜಿ ದೇವಾಲಯವೂ, ಅದರ ಪಕ್ಕದಲ್ಲಿರುವ ಐದು ಅಂತಸ್ತಿನ ಪಗೋಡವೂ ಗೋಚರಿಸುತ್ತದೆ.

ಸೆನ್ಸೋಜಿ ದೇವಾಲಯ
ಆಸಾಕುಸಾ ಪ್ರಾಂತ್ಯವು ಐತಿಹಾಸಿಕವಾಗಿ ಪ್ರಸಿದ್ಧ. ಇಲ್ಲಿನ ಸಂಜಾಮತ್ಸುರಿ ಮತ್ತು ಸಾಂಬಾ ಉತ್ಸವಗಳು ನಮ್ಮ ಕರಗ  ಮಹೋತ್ಸವಗಳಂತೆ ನಾಡಿನ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಇಲ್ಲಿನ ‘ಸೆನ್ಸೋಜಿ’ ದೇವಾಲಯಕ್ಕೆ ಹೋಗಬೇಕಾದರೆ
ಕಣ್ಣಿಗೆ ರಾಚುವಷ್ಟು ಕೆಂಪು ಬಣ್ಣದ ಬೃಹದಾಕಾರದ ಬಾಗಿಲುಗಳನ್ನು ಮತ್ತು ಥಂಡರ್ ಗೇಟ್‌ನ್ನು ದಾಟಿ, ಮುಕ್ಕಾಲು ಮೈಲು ಉದ್ದದ ನಾಕಾಮೈಸ್ ಡೊರಿ ಅಂದರೆ ನಾಕಾಮೈಸ್ ಅಂಗಡಿ ಬೀದಿಯನ್ನು ನೆಡೆದುಕೊಂಡು ಹೋಗಬೇಕು.

ಇದರ ಇತಿಹಾಸ ಸಾ.ಶ. 628 ರಲ್ಲಿ ಆರಂಭ. ಈ ಬಾಗಿಲಿನಲ್ಲಿ ಕೆಂಪು, ಕಪ್ಪು ಮತ್ತು ಬಿಳಿ ಬಣ್ಣದ ಪಟ್ಟಿಗಳುಳ್ಳ ವರ್ಣರಂಜಿತ ವಾದ ಸುಮಾರು ಬಾಗಿಲಿನಷ್ಟೇ ಎತ್ತರವಾದ, 700 ಕೆಜಿ ತೂಕದ ಪೇಪರ್ ಲಾಟೀನನ್ನು ಮೇಲಿಂದ ತೂಗು ಹಾಕಿದ್ದಾರೆ. ಇಂತದ್ದೇ ಚಿಕ್ಕಚಿಕ್ಕ ಲಾಟೀನುಗಳು ಸಾಲು ಸಾಲಾಗಿ ಮುಖ್ಯ ಮಂದಿರದವರೆಗೂ ಕಾಣಸಿಗುತ್ತವೆ. ಜಪಾನಿನ ಮುಖ್ಯ ರಾಜವಂಶ ಟೋಕು ಗಾವಾ ಈ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಿದರಂತೆ.

ಈ ಮಂದಿರದಲ್ಲಿ ಬೋಽಸತ್ವ ಅವಲೋಕಿತೇಶ್ವರನ ಬೃಹದಾಕರದ, ಲೋಹದಿಂದ ಮಾಡಿದ ಮೂರ್ತಿಯನ್ನು ನೋಡಬಹುದು. ಹಳೆಯ ಮತ್ತು ಹೊಸದರ ಸಂಗಮವೆಂಬಂತೆ ಮಂದಿರದ ಪಕ್ಕದಲ್ಲಿಯೇ ಎರಡನೇ ದ್ವಾರವಾದ ಹಾಝಮೊನ್ ಗೇಟ್ ಕಾಣು ತ್ತದೆ. ಪಕ್ಕದಲ್ಲಿಯೇ ಐದು ಮಹಡಿಯ ಬೌದ್ಧ ಪಗೋಡ ಕೂಡ ತಲೆಎತ್ತಿ ನಿಂತಿದೆ. ಜಪಾನ್ ಪ್ರವಾಸವೆಂದರೆ ಈ ರೀತಿಯ ಹಳೆಯ ಪರಂಪರೆಯು ಆಧುನಿಕ ಜೀವನದೊಂದಿಗೆ ಮೇಳೈಸಿರುವ ಸನ್ನಿವೇಶವನ್ನು ನೋಡುವ ವಿಶಿಷ್ಟ ಅನುಭವ.

ಮಹಿಳೆಯರ ಕಾರುಬಾರು
ಟೋಕಿಯೋದ ಶಾಪಿಂಗ್ ಮಾಲ್‌ಗಳಲ್ಲಿ, ಟೂರಿಸ್ಟ್ ಕೌಂಟರ್‌ನಲ್ಲಿ, ರೆಸ್ಟೊರೆಂಟ್‌ಗಳಲ್ಲಿ ಮಹಿಳೆಯರದ್ದೇ ದರ್ಬಾರು. ಅವರ ಭಾಷೆ ಅರ್ಥವಾಗದ ನಮಗಾಗಲೀ, ಇಂಗ್ಲೀಷ್ ಕೂಡ ತಿಳಿಯದ ಅವರಿಗಾಗಲೀ ಭಾಷೆ ಒಂದು ತೊಡಕಾದಂತೆ ಅನಿಸುವುದಿಲ್ಲ. ಜಪಾನಿಯರ ಸುಸಂಸ್ಕೃತ ನಡವಳಿಕೆಗೆ, ಅವರ ನಯ, ವಿನಯಗಳಿಗೆ ಮಾರುಹೋಗದೇ ಇರಲು ಸಾಧ್ಯವೇ ಇಲ್ಲ.

ಬೋನ್ಸಾಯ್
ಟೋಕಿಯೋ ನಗರದ ಮಧ್ಯದಲ್ಲಿ, ಅನೇಕ ಪುಟ್ಟಪುಟ್ಟ ಸರೋವರಗಳಿಂದ ಕೂಡಿದ ಸುಂದರವಾದ ವಿಶಾಲ ಉದ್ಯಾನವನವಿದೆ. ಜಪಾನಿನ ಗಾರ್ಡನ್‌ಗಳು ವಿಸ್ತಾರವಾಗಿದ್ದು, ನಾನಾಜಾತಿಯ ಅಪರೂಪದ ಬೊನ್ಸಾಯ್ ವೃಕ್ಷಗಳಿಂದ ಕೂಡಿರುತ್ತವೆ. ಇಲ್ಲಿ ಅತೀ
ಹಳೆಯದು ಅಂದರೆ 520 ವರ್ಷಗಳಷ್ಟು ಹಳೆಯ ಕುಬ್ಜ ಮರಗಳಿವೆ. ಬೊನ್ಸಾಯ್ ಪ್ರಿಯರು ಈ ತೋಟದಲ್ಲಿ ಪೂರ್ತಿ ದಿನ ಕಳೆಯುವುದಂತೂ ನಿಜ.

Leave a Reply

Your email address will not be published. Required fields are marked *