ಶಿರಸಿ : ಬೆಳೆಯುತ್ತಿರುವ ಶಿರಸಿ ನಗರದಲ್ಲಿ ಟ್ರಾಫಿಕ್ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ಅದನ್ನು ತಡೆಗಟ್ಟಲು ಅಗತ್ಯವಿರುವ ಕಠಿಣ ನಿಯಮಗಳನ್ನು ರೂಪಿಸಲು ಪೊಲೀಸ್ ಇಲಾಖೆ ಮತ್ತು ಶಿರಸಿ ನಗರಸಭೆ ನಿರ್ಧರಿಸಿದೆ.
ಮಂಗಳವಾರ ಇಲ್ಲಿನ ನಗರಸಭೆಯಲ್ಲಿ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಡಿಎಸ್ಪಿ ರವಿ ನಾಯ್ಕ ಹಾಗೂ ಇತರರು ಟ್ರಾಫಿಕ್ ಸಮಸ್ಯೆಗಳ ಕುರಿತು ಸಭೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದರು. ಇದೇ ವೇಳೆ ವಾಹನ ನಿಲುಗಡೆಗೆ ಎದುರಾಗುತ್ತಿರುವ ಸಮಸ್ಯೆ ಕುರಿತು ಸ್ಥಳ ಪರಿಶೀಲಿಸಿದರು.
ಅನಧಿಕೃತ ರಿಕ್ಷಾ ಸ್ಟ್ಯಾಂಡ್ ತೆರವಿನ ಜತೆ ಸೂಕ್ತ ಬಣ್ಣದ ಗುರುತು ಹಾಕಲು ಪೊಲೀಸ್ ಇಲಾಖೆ ಹಾಗೂ ನಗರಸಭೆ ನಿರ್ಧರಿಸಿದ್ದು, ಅನಧಿಕೃತ ರಿಕ್ಷಾ ಸ್ಟ್ಯಾಂಡ್, ಸಮಯವಲ್ಲದ ಸಮಯದಲ್ಲಿ ಅನ್ ಲೋಡಿಂಗ್, ಅಂಗಡಿಕಾರರು ರಸ್ತೆಯವರೆಗೆ ಸಾಮಾನು, ಸರಂಜಾಮು ಇಡುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಆಡಳಿತ ವರ್ಗ ಮುಂದಾಗಿದೆ.
ಈ ವೇಳೆ ಮಾತನಾಡಿದ ಡಿಎಸ್ಪಿ ರವಿ ನಾಯ್ಕ,
ಬಿಡ್ಕಿಬಯಲಿನ ಸುತ್ತಮುತ್ತ ಬೇಕಾಬಿಟ್ಟಿ ಆಟೊ ನಿಲ್ಲಿಸಲಾಗುತ್ತಿದೆ. ಇದರಿಂದ ಬಸ್ ಸಂಚಾರ, ಪಾದಚಾರಿಗಳಿಗೆ ತೀರಾ ಸಮಸ್ಯೆ ಆಗುತ್ತಿದೆ. ಹಲವೆಡೆ ನಿಲುಗಡೆಗೆ ಜಾಗವಿದೆ. ಆದರೆ ಬಣ್ಣದ ಗುರುತು ಆಗಿಲ್ಲ. ಸಿಸಿ ಟಿವಿ ಇದ್ದರೂ ನಿರ್ವಹಣೆಯಿಲ್ಲದೆ ಹಾಳಾಗಿದೆ. ಅವುಗಳ ದುರಸ್ತಿ ಕಾರ್ಯ ಆಗಬೇಕು.
ಉತ್ತಮ ಗುಣಮಟ್ಟದ ಕ್ಯಾಮರಾ ಅಳವಡಿಕೆಗೆ ಪೊಲೀಸ್ ಇಲಾಖೆಯಿಂದ ನಗರಸಭೆಗೆ ಪ್ರಸ್ತಾವ ನೀಡಲಾಗಿದೆ. ಜತೆ, ಪ್ರಮುಖ ವೃತ್ತದಲ್ಲಿ ಕ್ಯಾಮರಾ ಜತೆ ಮೈಕ್ ಅಳವಡಿಕೆ ಮಾಡಿದರೆ ಸಿಬ್ಬಂದಿ ಇಲ್ಲದೆಯೂ ನಿಗಾ ವಹಿಸಬಹುದಾಗಿದೆ. ಬಸ್ ನಿಲ್ದಾಣದ ಬಳಿ ಎಲ್ಇಡಿ ಪರದೆ ಅಳವಡಿಕೆ ಮಾಡಬೇಕಿದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ,
ಹಳೆಯ ಸಿಸಿ ಕ್ಯಾಮರಾ ದುರಸ್ತಿ ಜತೆ ಹೊಸ ಕ್ಯಾಮರಾ ಅಳವಡಿಸಲು ಪೊಲೀಸ್ ಇಲಾಖೆಗೆ ಸಹಾಯ ಮಾಡಲಾಗುವುದು. ಸಿಪಿ ಬಜಾರ ರಸ್ತೆಗೆ ಹೊಂದಿಕೊಂಡು ಇರುವ ಅಂಗಡಿಕಾರರು ಯಾರು ರಸ್ತೆಯಲ್ಲಿ ವಸ್ತುಗಳನ್ನು ಇಡುತ್ತಾರೋ ಅಂಥವರಿಗೆ ನೊಟೀಸ್ ನೀಡಲಾಗುವುದು. ತ್ವರಿತವಾಗಿ ಬಣ್ಣದ ಗುರುತು ಹಾಕಲು ಪೊಲೀಸ್ ಇಲಾಖೆಗೆ ನೆರವು ನೀಡಲಾಗುವುದು ಎಂದರು. ಇದೇ ವೇಳೆ ಕೆಲ ರಿಕ್ಷಾ ಸ್ಟ್ಯಾಂಡ್ ಗಳನ್ನು ಬದಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಈ ವೇಳೆ ಪಿಎಸ್ಐಗಳಾದ ಶಿವಾನಂದ ನಾವಲಗಿ, ನಾಗಪ್ಪ ಬಿ, ಪೌರಾಯುಕ್ತ ರಮೇಶ ನಾಯಕ, ಎಇಇ ಎಸ್.ಉಮೇಶ, ಆರೋಗ್ಯ ನಿರೀಕ್ಷಕ ಆರ್.ಎಂ.ವೇರ್ಣೇಕರ ಹಾಗೂ ಇತರರು ಇದ್ದರು.