Sunday, 14th August 2022

ಸಂಚಾರ ಪೊಲೀಸರ ಕಿರಿಕಿರಿ ತಪ್ಪಲಿ

ಎಂದರಲ್ಲಿ ವಾಹನ ಅಡ್ಡಗಟ್ಟುವ ಪೊಲೀಸರ ವರ್ತನೆಯನ್ನು ಪ್ರಶ್ನಿಸಿ ಸಾರ್ವಜನಿಕರೊಬ್ಬರು ಟ್ವೀಟ್ ಮಾಡಿದ್ದಕ್ಕೆ ಸ್ಪಂದಿಸಿರುವ ರಾಜ್ಯ
ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ‘ದಾಖಲೆಗಳ ಪರಿಶೀಲನೆ ನೆಪದಲ್ಲಿ ಎಂದರಲ್ಲಿ ವಾಹನ ತಡೆಯಬಾರದು’ ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾದ ಸಾರ್ವಜನಿಕರ ಆಕ್ರೋಶಕ್ಕೆ ಸ್ವತಃ ಪೊಲೀಸ್ ಮಹಾನಿರ್ದೇಶಕರು ಕೂಡಲೇ ಸ್ಪಂದಿಸಿದ್ದು ಸ್ವಾಗತಾರ್ಹ. ಆದರೆ ಡಿಜಿ-ಐಜಿಪಿ ಅವರ ಸೂಚನೆಯನ್ನು ಪೊಲೀಸರು ಪಾಲಿಸುತ್ತಾರೆಯೇ? ಎಂಬುದು ಸಾರ್ವಜನಿಕರ ಪ್ರಶ್ನೆ ಯಾಗಿದೆ. ಸಂಚಾರ ನಿಯಮಗಳನ್ನು ಪಾಲಿಸುವುದು ವಾಹನ ಸವಾರರ ಕರ್ತವ್ಯ. ನಿಯಮಗಳನ್ನು ಮೀರಿದಾಗ ಕಾನೂನುಕ್ರಮ ಜರುಗಿಸುವುದು ಪೊಲೀಸರ ಕರ್ತವ್ಯ.

ಆದರೆ, ಸರಿಯಾದ ದಾಖಲೆಗಳನ್ನುಹೊಂದಿಲ್ಲದವರನ್ನು ಅಥವಾ ನಿಯಮಗಳನ್ನು ಉಲ್ಲಂಸುವ ವಾಹನ ಸವಾರರನ್ನು ಪೊಲೀಸರು ಅವಮಾನಿಸುವುದು ಅಥವಾ ಅವರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವುದು ಸರಿಯಲ್ಲ. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದ ಪೊಲೀಸರಲ್ಲಿ ಕೆಲವರು ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ದಂಡ ವಸೂಲಿ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ.

ದಂಡ ಸಂಗ್ರಹ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡಲು ಸಂಚಾರ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾ ನೀಡಲಾಗಿದೆ. ಆದರೆ, ಇವುಗಳನ್ನು ಆಫ್ ಮಾಡಿ ಕೆಲ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದಾರೆ. ಡಿಜಿ-ಐಜಿಪಿ ಸೂಚನೆ ಅನ್ವಯ ಇನ್ನಾದರೂ ಪೊಲೀಸರ ವರ್ತನೆ ಬದಲಾಗಬೇಕಿದೆ. ಸಂಚಾರ ನಿಯಮಗಳ ಪಾಲನೆಯ ಹಿನ್ನೆಲೆಯಲ್ಲಿ ಸಾರ್ವಜನಿ ಕರು ಕೂಡ ತಮ್ಮ ನಾಗರಿಕಪ್ರಜ್ಞೆ  ಪ್ರದರ್ಶಿಸಬೇಕಿದೆ.

ರಸ್ತೆಯಲ್ಲಿ ಪೊಲೀಸರ ಇಲ್ಲವೆನ್ನುವ ಕಾರಣಕ್ಕೆ ಕುಡಿದು ವಾಹನ ಚಲಾಯಿಸುವುದಾಗಲಿ, ಓವರ್ ಸ್ಪೀಡ್ ಚಲಿಸುವುದಾಗಲಿ, ಒಂದು ಬೈಕ್‌ನಲ್ಲಿ ಮೂರು ನಾಲ್ಕು ಜನರು ಹೋಗುವುದಾಗಲಿ ಮಾಡಬಾರದು. ಸಾರ್ವಜನಿಕರು ತಮ್ಮ ನಾಗರಿಕ ಪ್ರಜ್ಞೆ ಪ್ರದರ್ಶಿಸಿದರೆ ಮಾತ್ರ ಸಂಚಾರ ಪೊಲೀಸರ ನಡವಳಿಕೆಯಲ್ಲೂ ಬದಲಾವಣೆಯನ್ನು ನಿರೀಕ್ಷಿಸಬಹುದು. ಇಲ್ಲವಾದಲ್ಲಿ ಸಾರ್ವಜನಿಕರೇ ‘ಪೊಲೀಸರ ಭಾಷೆ’ ಉಪಯೋಗಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಅಭಿಯಾನ ಮಾಡಬೇಕಾಗುತ್ತದೆ. ಪೊಲೀಸರು ಸಾರ್ವಜನಿಕರ
ರಕ್ಷಕರು ಎಂಬುದನ್ನು ಪೊಲೀಸರು ನಿರೂಪಿಸಬೇಕಿದ್ದು, ಸಾರ್ವಜನಿಕರು ಪೊಲೀಸರನ್ನು ತಮ್ಮ ರಕ್ಷಕರೆಂದು ಭಾವಿಸಿ, ನಿಯಮಗಳನ್ನು ಪಾಲಿಸಬೇಕಿದೆ.