Wednesday, 1st December 2021

ಅಪ್ರಾಪ್ತ ಬಾಲಕಿ ಬಟ್ಟೆ ಬದಲಿಸುತ್ತಿದ್ದ ವಿಡಿಯೋ ಚಿತ್ರೀಕರಣ, ಬ್ಲಾಕ್ ಮೇಲ್

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಅಪ್ರಾಪ್ತ ಬಾಲಕಿ ಬಟ್ಟೆ ಬದಲಿಸುತ್ತಿದ್ದ ವಿಡಿಯೋ ಚಿತ್ರೀಕರಿಸಿ, ಬ್ಲಾಕ್ ಮೇಲ್ ಮಾಡಿ ಹೆದರಿಸಿ ಕಾಮುಕರು ನಿರಂತರ ಅತ್ಯಾಚಾರ ಮಾಡುತ್ತಿದ್ದ ಅಮಾನುಷ ಘಟನೆ ಸಂಭವಿಸಿದೆ.

ಕಳೆದ ಎರಡು ತಿಂಗಳಿಂದ ಬಾಲಕಿಯನ್ನು ಹೆದರಿಸಿ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರೆನ್ನಲಾಗಿದೆ. ವಿಡಿಯೋ ಚಿತ್ರೀಕರಿಸಿಕೊಂಡು, ಕರೆದಾಗ ಬರಬೇಕು ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಬಾಲಕಿಗೆ ಬೆದರಿಸಿ ಪದೇ ಪದೇ ಅತ್ಯಾಚಾರವೆಸಗಿದ್ದಾರೆ.

ಬಾಲಕಿಗೆ ರಸ್ತೆಯಲ್ಲಿ ಹೋಗುವಾಗಲೂ ಕಿರುಕುಳ ನೀಡಲು ಆರಂಭಿಸಿದ್ದಾರೆ. ನೊಂದ ಬಾಲಕಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸಿದ್ದಾರೆ.