Monday, 16th May 2022

ಹಾಸನದಲ್ಲಿ ನಾಳೆ ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ

ಹಾಸನ: ಕೋವಿಡ್ ಸೋಂಕು ಹರಡುವಿಕೆ ತಡೆಯಲು ಹಾಸನ ಜಿಲ್ಲಾಡಳಿತ ಎರಡು ವಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಸೆ.3ರಂದು ರಾತ್ರಿ 9 ಗಂಟೆಯಿಂದ ವಾರಾಂತ್ಯದ ಕರ್ಫ್ಯೂ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ವ್ಯಾಪ್ತಿಯಲ್ಲಿ ಎರಡು ವಾರಗಳ ವಾರಾಂತ್ಯದ ಕರ್ಫ್ಯೂ ವಿಧಿಸುವುದು ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿರುವುದು ಸೂಕ್ತ ಎಂದು ಮನಗಂಡು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೆ.3ರ ರಾತ್ರಿ 9 ಗಂಟೆಯಿಂದ ಸೆ.6 ರ ಬೆಳಗ್ಗೆ 5 ಗಂಟೆಯ ತನಕ ಮತ್ತು  ಸೆ.10ರ ರಾತ್ರಿ 9 ಗಂಟೆಯಿಂದ ಸೆ.13 ರ ಬೆಳಗ್ಗೆ 5 ಗಂಟೆಯ ತನಕ ಅಂದರೆ ಎರಡು ವಾರಗಳ ಕಾಲ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬುಧವಾರ ಜಿಲ್ಲೆಯಲ್ಲಿ 81 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 1063 ಆಗಿದೆ. ಇದುವರೆಗೂ ಜಿಲ್ಲೆಯಲ್ಲಿ 1227 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 109716 ಆಗಿದೆ. ಸೋಂಕು ಪ್ರಕರಣಗಳು ಕಂಡು ಬರುವ ಪ್ರದೇಶಗಳಲ್ಲಿ ಶೇ. 100 ರಷ್ಟು ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರನ್ನು ಆರ್. ಟಿ. ಪಿ. ಸಿ. ಆರ್ ಪರೀಕ್ಷೆ ನಡೆಸಿ ಸೋಂಕು ಇದೆಯೇ?, ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.