Monday, 8th March 2021

ಆಟೋ ಮೀಟರ್ ದರ ಏರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳು ಗಗನಕ್ಕೇರಿದ್ದು, ಆಟೋ ಮೀಟರ್ ದರವನ್ನು ಏರಿಕೆ ಮಾಡುವಂತೆ ಒತ್ತಾಯಿಸಿ ಆಟೋ ಚಾಲಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಿಐಟಿಯು ನೇತೃತ್ವದ ಆಟೋರಿಕ್ಷಾ ಯೂನಿಯನ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ. ಎಂಟು ವರ್ಷಗಳ ಹಿಂದೆ ಮೀಟರ್ ದರ ಪರಿಷ್ಕರಣೆಯಾಗಿದೆ. ಈವರೆಗೂ ದರ ಇದ್ದಷ್ಟೇ ಇದೆ. ಗ್ಯಾಸ್, ಪೆಟ್ರೋಲ್, ಅಡುಗೆ ಎಣ್ಣೆ, ಆಹಾರ ಪದಾರ್ಥಗಳು, ವಿಮಾ ಶುಲ್ಕಗಳು, ನೀರು, ವಿದ್ಯುತ್ ದರಗಳು, ಆಟೋ ಬಿಡಿ ಭಾಗಗಳು, ಆರ್.ಟಿ.ಒ.ಶುಲ್ಕಗಳು ಸೇರಿದಂತೆ ಎಲ್ಲವೂ ದುಬಾರಿಯಾಗಿವೆ.

ಈಗಾಗಲೇ ಮಂಗಳೂರು ಹಾಗೂ ಇತರ ಕಡೆಗಳಲ್ಲಿ ದರ ಪರಿಷ್ಕರಣೆಯಾಗಿದೆ. ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ದುಬಾರಿ ಯಾಗಿರುವುದರಿಂದ ದರ ಪರಿಷ್ಕರಣೆ ಮಾಡಬೇಕು ಎಂದು ಚಾಲಕರ ಸಂಘದ ಉಪಾಧ್ಯಕ್ಷ ಆರ್.ನವೀನ್ ಶೆಣೈ ಒತ್ತಾಯಿಸಿದ್ದಾರೆ.

ದರ ಪರಿಷ್ಕರಣೆಗೆ ಕಳೆದ ವರ್ಷ ಮಾರ್ಚ್ 26ರಂದು ಜಿಲ್ಲಾಕಾರಿಗಳು ಸಭೆ ಕರೆದಿದ್ದರು. ಆದರೆ ಮಾರ್ಚ್ 23ಕ್ಕೆ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ದರ ಪರಿಷ್ಕರಣೆಯಾಗಲಿಲ್ಲ. ಈಗಲಾದರೂ ಸರ್ಕಾರ ನಮ್ಮ ಕಡೆ ಗಮನ ಹರಿಸಲಿ ಎಂದು ಆಗ್ರಹಿಸಿದ್ದಾರೆ.

15 ವರ್ಷ ಮೇಲ್ಪಟ್ಟ ಆಟೋಗಳಿಗೆ ಎಫ್‍ಸಿ ಮಾಡುವುದನ್ನು ನಿಲ್ಲಿಸಲಾಗಿದೆ. ಸಾಲ ಕೊಟ್ಟವರು ದುಬಾರಿ ಬಡ್ಡಿ ವಸೂಲಿ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಏರಿಕೆಯಾಗಿರುವ ಆರ್‍ಟಿಒ ಶುಲ್ಕ ಮತ್ತು ವಿಮಾ ದರಗಳನ್ನು ಕಡಿಮೆ ಮಾಡಬೇಕು ಎಂದು ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್.ಶ್ರೀನಿವಾಸ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *