Monday, 5th December 2022

ಜಾಗತಿಕ ಸಮಾವೇಶದಲ್ಲಿ ಅಮೆರಿಕದ ಸೆಲ್ಯೂಟ್

ಸಂಗತ

ವಿಜಯ ದರಡಾ

ಅಲಿಪ್ತ ನೀತಿ ಜವಾಹರಲಾಲ ನೆಹರೂ ಅವರ ಪರಿಕಲ್ಪನೆ. ಅದು ಅವರ ಕನಸಿನ ಕೂಸು. ಅದೇ ಪರಿಕಲ್ಪನೆಯಡಿ ಯಲ್ಲಿ ಇಂದಿರಾಗಾಂಧಿ ಮತ್ತು ಅಟಲ್‌ಬಿಹಾರಿ ವಾಜಪೇಯಿ ಮುನ್ನಡೆದರು. ಇದೀಗ ಆ ಪರಂಪರೆಯನ್ನು ನರೇಂದ್ರ ಮೋದಿಯವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

ವಿಶ್ವದ ಅತ್ಯಂತ ಶಕ್ತಿಶಾಲಿ 20 ರಾಷ್ಟ್ರಗಳ ಜಿ-20 ಸಮಾವೇಶದ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ರವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೆಲ್ಯೂಟ್ ಮಾಡಿದ ವಿಡಿಯೋ ಜಾಲತಾಣದೆಲ್ಲೆಡೆ ವೈರಲ್ ಆಗಿದೆ. ಇದು ಸ್ಪಷ್ಟವಾಗಿ ಹೇಳುತ್ತಿರು ವುದು ಭಾರತ ವಿಶ್ವ ನಕಾಶೆಯಲ್ಲಿ ತನ್ನದೇ ಆದ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿ ದ್ದನ್ನೇ. ಇಲ್ಲಿ ಅಮೆರಿಕ ಅಧ್ಯಕ್ಷರು ಯಾರಾಗಿರುತ್ತಾರೆಂಬುದು ಮುಖ್ಯವಲ್ಲ.

ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರು ಬೇರಾವ ದೇಶದ ಪ್ರಧಾನಿಯ ಮುಂದೆಯೂ ತಲೆಬಾಗುವುದಿಲ್ಲ. ಈಗ ಬಿಡೆನ್ ಇದನ್ನು ಮಾಡಿದ್ದಾರೆಂದರೆ ಅದೊಂದು ಹೊಸ ದಿಕ್ಸೂಚಿ. ಅದೇ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಫ್ರೆಂಚ್ ಅಧ್ಯಕ್ಷ ಇಮಾನ್ಯುಯಲ್ ಮಾಕ್ರೋನ್ ಮತ್ತು ಬ್ರಿಟನ್ನಿನ ನೂತನ ಪ್ರಧಾನಿ ರಿಷಿ ಸುನಕ್ ಜತೆಗೆ ನಡೆದುಕೊಂಡ ರೀತಿ, ರಾಜತಾಂತ್ರಿಕ ನಡೆಗೆ ಒಂದು ಹೊಸ ಭಾಷ್ಯವನ್ನು ಬರೆದಿತ್ತು.

ಅದೇ ವೇಳೆ ಮೋದಿಯವರು ಚೀನಾ ಅಧ್ಯಕ್ಷ ಜಿನ್ಪಿಂಗ್ ಜತೆಗೆ ನಡೆದುಕೊಂಡ ರೀತಿ ವಿವೇಚನಾಯುತವಾಗಿತ್ತು. ‘ಭಾರತವನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ’ ಎಂಬ ಪರೋಕ್ಷ ಸಂದೇಶ ಅದರಲ್ಲಡಗಿತ್ತು. ಇದಿಷ್ಟೇ ಅಲ್ಲ ಜಿ-20 ಸಮ್ಮೇಳನದಲ್ಲಿ ಭಾರತವನ್ನು ಅಮೆರಿಕ ಶ್ಲಾಸಿದೆ ಎಂಬುದು ಕೂಡ ಗಮನಿಸ ಬೇಕಾದ ಸಂಗತಿ. ಭಾರತದ ಪಾತ್ರದ ಕುರಿತಾಗಿ ಮಾತನಾಡುವ ಮುನ್ನ ವಿಶ್ವ ವೇದಿಕೆಯಲ್ಲಿ ಭಾರತದ ಪ್ರಾಮುಖ್ಯತೆಯ ಕುರಿತಾಗಿ ವಿಶ್ಲೇಸುವುದು ಅಗತ್ಯ ವೆನಿಸುತ್ತದೆ.

ಈ ಸಮಾವೇಶಕ್ಕೆ ಅಡಿಪಾಯ ಹಾಕಿದ್ದು ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಕೆನಡಾ ದೇಶಗಳ ಜಿ-7 ಒಕ್ಕೂಟ ಅದು. ತದನಂತರದಲ್ಲಿ ಅದಕ್ಕೆ ರಷ್ಯ ಸೇರಿಕೊಂಡಿತು. ಹಾಗೇ ವಿವಿಧ ದೇಶಗಳ ಸೇರ್ಪಡೆಯಿಂದ ಜಿ-7 ಒಕ್ಕೂಟ ಈಗ ಜಿ-20 ಒಕ್ಕೂಟವಾಗಿ ಮಾರ್ಪಾಟಾಗಿದೆ. ಈ ಜಿ-20ಯಲ್ಲಿ ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೈನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಶಿಯಾ, ಇಟಲಿ, ಜಪಾ, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷಿಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್, ಅಮೆರಿಕ ಮತ್ತು ಐರೋಪ್ಯ ಯೂನಿಯನ್ ದೇಶಗಳು ಸೇರಿಕೊಂಡಿದ್ದು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ.೬೦ರಷ್ಟು ಈ ದೇಶಗಳಲ್ಲೇ ನೆಲೆಗೊಂಡು. ವಿಶ್ವದ ಒಟ್ಟಾರೆ ಜಿಡಿಪಿಯ ಶೇ.80ರಷ್ಟು ಭಾಗವನ್ನು ಈ ದೇಶಗಳೇ ಹಂಚಿಕೊಂಡಿದೆ ಎಂಬುದು ಕೂಡ ಇನ್ನೊಂದು ಮುಖ್ಯ ಸಂಗತಿ. ಅಷ್ಟಲ್ಲದೇ ವಿಶ್ವದ ಶೇ.75 ರಷ್ಟು ವ್ಯಾಪಾರ ವಹಿವಾಟುಗಳು ನಡೆಯುವುದು ಕೂಡ ಈ ದೇಶಗಳಿಂದಲೇ. ಜಾಗತಿಕ ಹೂಡಿಕೆಯ ಶೇ.80 ರಷ್ಟು ಪಾರಮ್ಯವೂ ಕೂಡ ಈ ಜಿ-20 ದೇಶಗಳದ್ದೇ ಆಗಿದೆ.

ಅಂತಹದೊಂದು ಒಕ್ಕೂಟದ ಅಧ್ಯಕ್ಷತೆ ವಹಿಸುವ ಅವಕಾಶ ಭಾರತಕ್ಕೆ ಸಿಕ್ಕಿರುವುದು ಹೆಮ್ಮೆಯ ಸಂಗತಿಯೇ. ಅದೊಂದು ಬಹುದೊಡ್ಡ ಅವಕಾಶ. ಇಡೀ ವಿಶ್ವವೇ ಭಜನೆಗೊಂಡು ಶ್ರೇಷ್ಠತೆಯ ವ್ಯಸನದಲ್ಲಿರುವಾಗ ಇಂತಹದೊಂದು ಅವಕಾಶ ಸಿಕ್ಕಿರು ವುದು ವಿಶೇಷವೇ ಸರಿ. ವಿಶ್ವದ ಸೂಪರ್ ಪವರ್ ದೇಶಗಳ ನಡುವೆ ನಂಬಿಕೆಯ ಕೊರತೆ ಇದೆ. ತನ್ನ ಆರ್ಥಿಕ ಪ್ರಾಬಲ್ಯ ವನ್ನೇ ಮುಂದಿಟ್ಟುಕೊಂಡು ಚೀನಾ ಹಲವಾರು ದೇಶಗಳ ನಂಬಿಕೆಯನ್ನು ಕಳೆದುಕೊಂಡಿದೆ, ಅಷ್ಟೇ ಅಲ್ಲ ಸಣ್ಣಪುಟ್ಟ ದೇಶಗಳನ್ನು ತನ್ನ ತೆಕ್ಕೆಯೊಳಕ್ಕೆ ತೆಗೆದು ಕೊಳ್ಳುವ ಸನ್ನಾಹದಲ್ಲಿದೆ.

ರಷ್ಯಾ-ಉಕ್ರೇನ್ ಮೇಲೆ ದಾಳಿ ಮಾಡಿತು ಮತ್ತು ಅದರಿಂದಾಗಿ ಇಡೀ ವಿಶ್ವದ ಆಹಾರ ಪೂರೈಕೆಯ ಸರಪಣಿ ತಲ್ಲಣ ಗೊಳ್ಳು ವಂತಾಯಿತು. ಪಾಕಿಸ್ತಾನ ಉಗ್ರಗಾಮಿಗಳ ತಾಣವಾಗಿ ವಿಶ್ವದ ಗಮನ ಸೆಳೆದಿದೆ. ಇದನ್ನು ಜೋ ಬಿಡೆನ್ ಮುಕ್ತವಾಗಿ ಹೇಳಿಕೊಂಡಿ ದ್ದಾರೆ ಕೂಡ. ಇಂತಹ ಸನ್ನಿವೇಶದಲ್ಲಿ ಜಿ-೨೦ ಸಮಾವೇಶದ ಅಧ್ಯಕ್ಷತೆ ಭಾರತಕ್ಕೆ ಹೇಗೆ ಸಿಕ್ಕಿತು ಎಂಬುದು ಚೀನಾ ಮತ್ತು ಪಾಕಿಸ್ತಾನಗಳ ಅಚ್ಚರಿಗೆ ಕಾರಣವಾಗಿರುವುದು ಕೂಡ ಸುಳ್ಳಲ್ಲ.

ಈ ಸಮಾವೇಶದ ಸಂದರ್ಭದಲ್ಲಿ ಭಾರತ ತನ್ನ ನಿಲುವನ್ನು ಸ್ಪಷ್ಟವಾಗಿ ವಿಶ್ವ ಸಮುದಾಯದ ಮುಂದಿಟ್ಟಿದೆ. ತಾನು ಯಾವುದೇ ಬಣಕ್ಕೆ ಸೇರುವುದಿಲ್ಲ, ವಸುದೈವ ಕುಟುಂಬಕಂ ತತ್ವದಲ್ಲಿ ತನಗೆ ನಂಬುಗೆ ಇರುವುದಾಗಿ ಭಾರತ ಸ್ಪಷ್ಟ ಪಡಿಸಿದೆ. ಕಳೆದ ಸೆಪ್ಟೆಬಂರ್ ನಲ್ಲಿ ಶಾಂಘೈನಲ್ಲಿ ನಡೆದ ಸಮಾವೇಶದಲ್ಲಿ ನರೇಂದ್ರ ಮೋದಿಯವರು ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರನ್ನು ಭೇಟಿಯಾಗಿ ಇದು ಯುದ್ಧದ ಸಮಯವಲ್ಲ ಎಂದು ಮುಖಾಮುಖಿ ಹೇಳಿದ್ದಾರೆ. ಅದು ಮತ್ತೆ ಜಿ-20 ಸಮಾವೇಶದಲ್ಲಿ ಪುನರಾವರ್ತನೆಯಾಗಿದೆ ಮತ್ತು ಇದನ್ನು ಆ ಸಮಾವೇಶದಲ್ಲಿ ದಾಖಲಿಸಲಾಗಿದೆ. ಇಡೀ ವಿಶ್ವದ ಒಳಿತಿಗೆ ಈ ಸಮಾವೇಶ ದಾರಿ ಮಾಡಿಕೊಡಬೇಕು ಎಂಬುದನ್ನು ನರೇಂದ್ರ ಮೋದಿಯವರು ಬಹಳ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಇಂದು ಅಮೆರಿಕದೊಂದಿಗೆ ನೇರಾನೇರ ಮಾತುಕತೆಯಲ್ಲಿ ತೊಡಗುತ್ತಿರುವ ವೇಳೆಯಲ್ಲೇ, ರಷ್ಯಾದ ತಪ್ಪುಗಳನ್ನು ಎತ್ತಿ ತೋರುವ ದಾರ್ಷ್ಟ್ಯ ಇರುವುದು ಭಾರತಕ್ಕೆ ಮಾತ್ರ. ಹಾಗಂದ ಮಾತ್ರಕ್ಕೆ ಜಿ-20 ಸಮಾವೇಶದ ಅಧ್ಯಕ್ಷತೆ ಹೂವಿನ ಹಾಸಿಗೆಯೇನಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಅದು ಮುಳ್ಳಿನ ಹಾಸಿಗೆಯೇ ಸರಿ. ಆದರೆ ಮೋದಿಜಿಯವರ ನಾಯಕತ್ವದಲ್ಲಿ ಮತ್ತು ಅವರ ರಾಜತಾಂತ್ರಿಕ ನಿಲುವುಗಳ ಕಾರಣದಿಂದ ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧ ಬೆಸೆಯುವುದು ಸಾಧ್ಯವಾಗಿದೆ. ಕೆಲವೊಮ್ಮೆ ಅವರು ಕೆಲವರನ್ನು ಅಪ್ಪಿಕೊಳ್ಳುತ್ತಾರೆ, ಇನ್ನು ಕೆಲವರು ಬೆನ್ನುತಟ್ಟುತ್ತಾರೆ. ಅವರ ನಡವಳಿಕೆ ಸ್ವಾಭಿಮಾನದ ಪ್ರತೀಕವಾಗಿದೆ. ಅದು ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಕೂಡ.

ಪ್ರಸ್ತುತ ಸನ್ನಿವೇಶದಲ್ಲಿ ಮೋದಿಜಿಯವರು ಯಾವುದೇ ಬಣಕ್ಕೆ ಸೇರದೇ ದೂರ ಉಳಿದಿದ್ದಾರೆ. ಈ ಸಂದರ್ಭದಲ್ಲಿ ನಾನು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ಅವರನ್ನು ನೆನಪಿಸಿಕೊಳ್ಳುತ್ತೇನೆ. ಭಾರತ ಆಗಷ್ಟೇ ಸ್ವತಂತ್ರಗೊಂಡಿತ್ತು. ಅದು ಆರ್ಥಿಕವಾಗಿ ದುರ್ಬಲವಾಗಿದ್ದಿರಬಹುದು ಆದರೆ ಯಾವುದೇ ಗುಂಪಿಗೆ ಸೇರದೇ ತನ್ನತನವನ್ನು ಕಾಯ್ದುಕೊಂಡಿತ್ತು. ಅಲಿಪ್ತ ನೀತಿ ಜವಾಹರಲಾಲ ನೆಹರೂ ಅವರ ಪರಿಕಲ್ಪನೆ. ಅದು ಅವರ ಕನಸಿನ ಕೂಸು.

ಅದೇ ಪರಿಕಲ್ಪನೆಯಡಿಯಲ್ಲಿ ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಮುನ್ನಡೆದರು. ಇದೀಗ ಆ ಪರಂಪರೆ ಯನ್ನು ನರೇಂದ್ರ ಮೋದಿಯವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಡಿಸೆಂಬರ್-1ರಂದು ಭಾರತ ಜಿ-20 ಒಕ್ಕೂಟದ
ಅಧ್ಯಕ್ಷತೆಯನ್ನು ವಿಧ್ಯುಕ್ತವಾಗಿ ವಹಿಸಿಕೊಳ್ಳಲಿದೆ. ಮುಂದಿನ ವರುಷದ ಸಮಾವೇಶದ ಭಾರತದ ನಾಯಕತ್ವದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ 200 ಕಾರ್ಯಕ್ರಮಗಳ ರೂಪುರೇಷೆ ಅದಾಗಲೇ ಸಿದ್ಧಗೊಂಡಿದೆ.

ಎಲ್ಲರನ್ನೂ ಅದರಲ್ಲಿ ಒಳಗೊಳ್ಳಿಸುವ ಉದ್ದೇಶವೂ ಇದೆ. ಬಾಂಗ್ಲಾದೇಶ, ಈಜಿಪ್ಟ್, ಮೌರೀಯಸ್, ನೆದರ್ ಲ್ಯಾಂಡ್ಸ್, ನೈಜೀರಿಯಾ, ಒಮಾನ್, ಸಿಂಗಪೂರ್, ಸ್ಪೇನ್ ಮತ್ತು ಯು.ಎ.ಇ. ಗಳಿಗೆ 2023ರಲ್ಲಿ ಅತಿಥಿಗಳಾಗಿ ಭಾಗವಸುವಂತೆ ಭಾರತ ಆಹ್ವಾನವನ್ನೂ ಕೊಟ್ಟಿದೆ. ಭಾರತಕ್ಕೆ ದೊಡ್ಡ ಅವಕಾಶವೊಂದು ಸಿಕ್ಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತ ಜಿ-20 ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸುವುದರ ಮೂಲಕ ಜಾಗತಿಕ ಹೂಡಿಕೆದಾರರನ್ನು ತನ್ನತ್ತ ಆಕರ್ಷಿಸಲು ಸಶಕ್ತವಾಗಬಲ್ಲದು ಎಂಬುದು ಕೂಡ ಉಪೇಕ್ಷೆ ಮಾಡಲಾಗದ ಸಂಗತಿ.

ನಮ್ಮ ಉದ್ದಿಮೆದಾರರಿಗೆ ವಿಶ್ವಾದ್ಯಂತ ವ್ಯವಹರಿಸಲು ಇದೊಂದು ರಹದಾರಿಯಾಗಬಹುದು. ನಮ್ಮ ದೇಶದ ಯುವಶಕ್ತಿಗೆ, ವಿದ್ಯಾಭ್ಯಾಸ ಮತ್ತು ಕೌಶಲ್ಯಾಭಿವೃದ್ಧಿಯನ್ನು ತೋರುವುದಕ್ಕೂ ಇದು ದಾರಿ ಮಾಡಿಕೊಡುತ್ತದೆ. 2050ರ ವೇಳೆಗೆ ಭಾರತ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ಮಾತನ್ನು ನಾನು ಇದಕ್ಕೂ ಮೊದಲೇ ಬರೆದಿದ್ದೆ. ಇಂದು ನಡೆಯುತ್ತಿರುವ ವಿದ್ಯಮಾನಗಳು ಅದಕ್ಕೆ ಮುನ್ನುಡಿಯಂತಿವೆ. ಇದರಿಂದ ದೇಶದ ಜನಸಾಮಾನ್ಯರ ಆರ್ಥಿಕಾಭಿ ವೃದ್ಧಿಯೂ ಆಗಲಿ ಎಂದು ನಾವು ಹಾರೈಸೋಣ. ಈ ಕುರಿತಾಗಿ ನಾನು ಆಗಿಂದಾಗ್ಯೆ ನನ್ನ ಅಭಿಪ್ರಾಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವೆ.