Thursday, 16th September 2021

ಮುಕ್ಕಾದ ಅಮೆರಿಕ ಪ್ರತಿಷ್ಠೆ

ಪ್ರಚಲಿತ

ಪ್ರಕಾಶ್ ಶೇಷರಾಘವಾಚಾರ‍್

sprakashbjp@gmail.com

ಅಮೆರಿಕ 9/11 ತರುವಾಯ ಪೆಟ್ಟು ಬಿದ್ದ ತನ್ನ ಪ್ರತಿಷ್ಠೆಗೆ ಹಾಗೂ ತಾನೇ ದೊಡ್ಡಣ್ಣ ಎಂದು ಸಾಬೀತುಪಡಿಸಲು ನಡೆಸಿದ ಕಸರತ್ತಿನ ಫಲ 20 ವರ್ಷಗಳ ನಂತರ ತನ್ನ ವರ್ಚಸ್ಸು ಮತ್ತು ವಿಶ್ವಾಸಾರ್ಹತೆಗೆ ಇನ್ನೂ ಹೆಚ್ಚಿನ ಪೆಟ್ಟು ತಿಂದು ವಿಶ್ವಾಸಾರ್ಹತೆ ನಷ್ಟವಾಗಿ ತನ್ನ ಗೌರವವನ್ನು ಮುಕ್ಕಾಗಿಸಿಕೊಂಡಿದೆ.

ಇರಾಕ್, ಸಿರಿಯಾ ಮತ್ತು ಆಫ್ಘಾನಿಸ್ತಾನದ ಬೆಳವಣಿಗೆಯ ನಂತರ ಅಮೆರಿಕ ನೀತಿ ನಿರೂಪಕರ ಮಾನದಂಡ ದೇಶದ ಭದ್ರತೆಯ ಅಥವಾ ಶಸ್ತ್ರಾಸ್ತ್ರ ಮಾಫಿಯಾದ ಹಿತಾಸಕ್ತಿಯಾ ಎಂದು ಅಮೆರಿಕನ್ನರು ಪ್ರಶ್ನಿಸಬೇಕಾಗಿದೆ. ಅಮೆರಿಕ ಆಡಳಿತಗಾರರ ದುಡುಕು ನಿರ್ಧಾರ ಮತ್ತು ಸಾಮಾನ್ಯ ಜ್ಞಾನದ ಕೊರತೆ ಯಿಂದ ಹತ್ತಾರು ಹೊಸ ಹೊಸ ಭಯೋತ್ಪಾದಕ ಸಂಘಟನೆಗಳು ವಿಶ್ವದಲ್ಲಿ ತಲೆಯೆತ್ತಲು ಕಾರಣವಾಗಿದೆ. ಅಮೆರಿಕ 20 ವರ್ಷಗಳ ಕಾಲ ಆಫ್ಘಾನಿಸ್ತಾನದಲ್ಲಿ ಉದ್ದೇಶ ರಹಿತ ಹೋರಾಟ ಕೈಗೊಂಡು ಅಂತಿಮವಾಗಿ ಕೈಸುಟ್ಟುಕೊಂಡು ರಾತ್ರೋ ರಾತ್ರಿ ಅಲ್ಲಿಂದ ಕಂಬಿ ಕಿತ್ತಿರುವುದು ಇವರ ದೂರದೃಷ್ಟಿ ಇಲ್ಲದ ನೀತಿಗೆ ಕನ್ನಡಿ ಹಿಡಿದಿದೆ.

2001ರಲ್ಲಿ ತಾಲಿಬಾನ್ ಮಣಿಸುತ್ತೇವೆ ಎಂದು ಬುರುಡೆ ಬಿಟ್ಟು ವಿಶ್ವವನ್ನು ನಂಬಿಸಿ ಎಲ್ಲರನ್ನು ಯಾಮಾರಿಸಿ ನಗೆಪಾಟಿಲಿಗೆ ಈಡಾಗಿದೆ. ತಮ್ಮ ಹೊಣೆಗೇಡಿ ವರ್ತನೆಯಿಂದ ವಿಶ್ವಕ್ಕೆ ಉಂಟಾಗುವ ಹಾನಿಯಾಗಲಿ ಆಫ್ಘಾನ್ನರ ಬದುಕು ಮೂರಾ ಬಟ್ಟೆಯಾಗುವುದರ ಬಗ್ಗೆ ಚಿಂತೆ ಮಾಡದೇ ಕೇವಲ ತನ್ನ ಸ್ವಹಿತಾಸಕ್ತಿ, ಮುಖ್ಯವಾಗಿ ನಂಬಿದವರನ್ನು ನಡು ನೀರಿನಲ್ಲಿ ಮುಳುಗಿಸಿ 20 ವರ್ಷದ ತರುವಾಯ ಆಫ್ಘನ್ನರ ಯುದ್ಧ ಆಫ್ಘನ್ನರು ಮಾಡಲಿ ಅಲ್ಲಿ ಇನ್ನು ನಮಗೇನು ಕೆಲಸವಿಲ್ಲ ಎಂದು ಸಲೀಸಾಗಿ ಹೇಳಿ ಗಂಟು ಮೂಟ್ಟೆ ಕಟ್ಟಿಕೊಂಡು ಹೊರಟೇ ಬಿಟ್ಟರು.

2001 ಸೆಪ್ಟಂಬರ್ 11ರಂದು ನ್ಯೂಯಾರ್ಕ್ ವಿಶ್ವ ವ್ಯಾಪಾರ ಕೇಂದ್ರ ಮತ್ತು ಅಮೆರಿಕ ಸೇನಾ ಶಕ್ತಿ ಕೇಂದ್ರ ಪೆಂಟಗಾನ್ ಮೇಲೆ ಅಲ್ ಖೈದಾ ಭಯೋತ್ಪಾದ ಕರು ವಿಮಾನವನ್ನು ಕಟ್ಟಡಕ್ಕೆ ನುಗ್ಗಿಸಿ ಅಮೆರಿಕ ದೇಶವೇ ತತ್ತರಿಸುವಂತೆ ಮಾಡಿ ವಿಶ್ವಕ್ಕೆ ಭಯೋತ್ಪಾದಕತೆಯ ಕರಾಳ ಮುಖದ ಪರಿಚಯ ಮಾಡಿಸುತ್ತದೆ. ಅಲ್‌ಖೈದಾ ಮುಖ್ಯಸ್ಥ ಬಿನ್ ಲಾಡೆನ್‌ಗೆ ಆಫ್ಘಾನಿಸ್ತಾನದ ತಾಲಿಬಾನ್ ಸರಕಾರ ಬೆಂಬಲ ನೀಡುತ್ತಿದೆ ಅದರ ನೆಲವನ್ನು ಅಮೆರಿಕ ವಿರುದ್ಧ ದುರ್ಬಳಕೆ ಮಾಡಲು ಅವಕಾಶ ನೀಡಿದೆ ಎಂದು ಆಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ ತಾಲಿಬಾನ್ ಸರಕಾರವನ್ನು ಪತನಗೊಳಿಸಿ ಹೊಸ ಸರಕಾರ ಬರಲು ಸಹಾಯ ಮಾಡುತ್ತಾರೆ.

ಇಲ್ಲಿಗೆ ಅಮೆರಿಕ ಕೆಲಸ ಮುಗಿದಿತ್ತು ಊಹುಂ, ಹಿಂದೆ ರಷ್ಯಾ ಆ ದೇಶದಲ್ಲಿ ಮಣ್ಣುಮುಕ್ಕಿದ್ದರ ಪಾಠ ಕಲಿಯದೇ ತನ್ನ ಹುಸಿ ದೈತ್ಯ ಬಲದ ಮೂಲಕ ತಾಲಿಬಾನ್ ಹುಟ್ಟಡಗಿಸುವ ಭ್ರಮೆಯಲ್ಲಿ ತನ್ನ ಹೋರಾಟ ಮುಂದುವರೆಸುತ್ತದೆ ಇದರ ಜತೆಗೆ ಆಫ್ಘಾನಿಸ್ತಾನವನ್ನು ಪುನರ್‌ನಿರ್ಮಾಣ ಮಾಡುವ ಹೊರೆಯನ್ನು ತೆಗೆದು ಕೊಳ್ಳುತ್ತದೆ. ತಮ್ಮ ದೇಶವನ್ನು ಮತ್ತೊಂದು ದೇಶದವರು ಬಂದು ಬಂಡವಾಳ ಹೂಡಿ ಅಭಿವೃದ್ಧಿ ಮಾಡುತ್ತೇವೆ ಎಂದರೆ ಯಾರು ತಾನೆ ಬೇಡ ಎನ್ನುತ್ತಾರೆ. ಆಫ್ಘಾನಿಸ್ತಾನದ ಸರಕಾರ ಆರಾಮವಾಗಿ ದೇಶದ ಆಡಳಿತ ಹಿಡಿದು ಐಷಾರಾಮಿಯಾಗಿ ಜೀವನ ನಡೆಸಲು ಆರಂಭಿಸಿತು ಅಮೆರಿಕಾ ಅದರ ಮಿತ್ರ ರಾಷ್ಟ್ರಗಳು ಭಾರತವೂ ಸೇರಿ ಹಲವಾರು ದೇಶಗಳು ಆಫ್ಗನ್ ಪುನರ್‌ನಿರ್ಮಾಣದ ನೊಗಹೊತ್ತು ಹಣದ ಹೊಳೆಯನ್ನೆ ಹರಿಸಿ ಅವರ ಉದ್ಧಾರಕ್ಕೆ ಕಂಕಣ ಕಟ್ಟಿ ನಿಂತರು.

ಅಮೆರಿಕ ಆಫ್ಘಾನ್ ಪುನರ್‌ನಿರ್ಮಾಣಕ್ಕೆ ನೂರಾರು ಬಿಲಿಯನ್ ಡಾಲರ್ ವೆಚ್ಚ ಮಾಡಿತು. ಆಫ್ಘನ್ ಸೈನ್ಯವನ್ನು ಸಿದ್ಧಪಡಿಸಲು ಮತ್ತಷ್ಟು ಬಿಲಿಯನ್ ಹರಿಯಿತು.
ಒಟ್ಟಾರೆ ದಿಕ್ಕು ದೆಸೆಯಿಲ್ಲದೆ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ತಾವೇನೊ ಬದಲಾವಣೆ ತಂದು ಆಫ್ಘನಿಸ್ತಾನದಿಂದ ತಾಲಿಬಾನ್ ಮತ್ತು ಭಯೋತ್ಪಾ ದಕರನ್ನು ಮೂಲೊತ್ಪಾಟ ಮಾಡುತ್ತೇವೆ ಎಂದು ಬಲವಾಗಿ ನಂಬಿಕೊಂಡರು. ಹಮೀದ್ ಕಾರ್ಜಾಯ್ ಆ ದೇಶದ ಅಧ್ಯಕ್ಷರಾಗಿ ಸತತವಾಗಿ 14 ವರ್ಷವಿದ್ದರು.

ಅಮೆರಿಕ ಆಫ್ಘಾನ್ ವ್ಯವಹಾರ ನೋಡುತ್ತಿದ್ದವರ ಪ್ರಕಾರ ಈತ ಕಡು ಭ್ರಷ್ಟ್ರ ಅಮೆರಿಕ ನೆರವಿನ ಹಣದಿಂದ ಅಪಾರ ಸಂಪತ್ತು ಸಂಪಾದಿಸಿ ಐಷಾರಾಮಿಯಾಗಿ ಅರಮನೆಯಲ್ಲಿ ತಂಪಾಗಿ ಇದ್ದರೇ, ವಿನಹ ದೇಶ ಕಟ್ಟುವ ಕೆಲಸ ಮಾಡಲೇ ಇಲ್ಲ ಎನ್ನುತ್ತಾರೆ. ಇದು ನಿಜವೂ ಕೂಡಾ 14 ವರ್ಷದಲ್ಲಿ ಉತ್ತಮ ಸರಕಾರ ನೀಡಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಜನ ತಾಲಿಬಾನ್‌ಗೆ ಏಕೆ ಸೇರುತ್ತಿದ್ದರು? ಇಂದು ಕಾರ್ಜಾಯ್ ಆರಾಮವಾಗಿ ಆಫ್ಘಾನಿಸ್ತಾನದಲ್ಲಿ ಹೊಸ ಸರಕಾರ ರಚನೆಯಲ್ಲಿ ತನ್ನ ಸಲಹೆ ನೀಡುತ್ತಾ ತಾಲಿಬಾನ್ ಜತೆಗೂ ತನ್ನ ಪ್ರಭಾವ ಮುಂದುವರೆಸಿದ್ದಾರೆ.

2021 ಆಗನಲ್ಲಿ ಅಮೆರಿಕ ತನ್ನ ಸೈನ್ಯವನ್ನು ಹಿಂದಕ್ಕೆ ಕರೆದುಕೊಂಡು ಹೋದ ಮೇಲೆ ಮರು ಕ್ಷಣವೇ ತಾಲಿಬಾನ್ ಮತ್ತೆ ಅಧಿಕಾರ ಹಿಡಿಯಿತು. ಕಾರ್ಜಾಯ್ ನಂತರ 7 ವರ್ಷ ಚುನಾಯಿತ ಅಧ್ಯಕ್ಷರಾಗಿದ್ದ ಅಶ್ರಫ್ ಘಾನಿ ತಾಲಿಬಾನ್‌ಗೆ ಬೆದರಿ ರಾತ್ರೋ ರಾತ್ರಿ ದೇಶವನ್ನು ತೊರೆದು ಪಲಾಯನಗೈದರು. ಇಂತಹ ನಿಷ್ಪ್ರಯೋಜಕರನ್ನು ನಂಬಿ ಅಮೆರಿಕ ಕೋಟ್ಯಾಂತರ ಡಾಲರ್ ಸುರಿದರು ಎಂದರೆ ಅಮೆರಿಕ ನೀತಿ ನಿರೂಪಕರ ಬುದ್ಧಿಮಟ್ಟ ಎಷ್ಟು ಇರಬೇಕು? ಇಸ್ಲಾಂ ಧಾರ್ಮಿಕ ಮೂಲಭೂತವಾದದ ಅಫೀಮು ಸೇವಿಸಿರುವವರನ್ನು ಯಾವ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ ಬದಲಿಗೆ ರಕ್ತ ಬೀಜಾಸುರರ ತರಹ ಮತ್ತಷ್ಟು ಜನ ಹುಟ್ಚಿ ಕೊಳ್ಳುತ್ತಾರೆ ಎಂಬ ಕಟು ಸತ್ಯ ಅರ್ಥವಾಗದ ಅಮೆರಿಕದ ವಿಶ್ಲೇಷಕರು ಮತ್ತು ಸಲಹೆಗಾರರು ಎಲ್ಲರ ದಾರಿ ತಪ್ಪಿಸುತ್ತಾರೆ.

ಬುಷ್ ತರುವಾಯ ಅಧ್ಯಕ್ಷರಾದ ಬರಾಕ್ ಒಬಾಮ ಆಫ್ಘಾನಿಸ್ತಾನದಿಂದ ಅಮೇರಿಕ ಸೈನ್ಯವನ್ನು ಹಿಂದಕ್ಕೆ ಕರೆಸುವ ಪ್ರಕ್ರಿಯೆ ಆರಂಭಿಸಿದರು. ಆದರೆ ತಾಲಿಬಾನ್‌ಗಳ ಸಂಹಾರಕ್ಕೆ ಅತಿ ಹೆಚ್ಚು ಡ್ರೋನ್ ಬಳಕೆ ಮಾಡಿ ಒಬ್ಬ ಭಯೋತ್ಪಾದಕನನ್ನು ಸಂಹರಿಸಲು ಅಕ್ಕ ಪಕ್ಕದ ಹತ್ತಾರು ಅಮಾಯಕರನ್ನು ಬಲಿ ತೆಗೆದುಕೊಂಡ ಕಾರಣ ಅಮೆರಿಕ ಆಫ್ಘಾನ್ನರ ಸಹಾನುಭೂತಿ ಕಳೆದುಕೊಳ್ಳುತ್ತದೆ. ಅಲ್ಲಿನ ಜನರಿಗೆ ತಾಲಿಬಾನ್‌ಗೂ ಅಮೆರಿಕ ಕಾರ್ಯಾಚರಣೆಗೂ ವ್ಯತ್ಯಾಸ ಕಾಣದಾಗುತ್ತದೆ. ಇದರಿಂದ ಹೆಚ್ಚು ಹೆಚ್ಚು ಯುವಕರು ತಾಲಿಬಾನ್ ಕಡೆ ಆಕರ್ಷಿತರಾಗುತ್ತಾರೆ.

ತಾವು ನಡೆಸಿದ ಡ್ರೋನ್ ದಾಳಿಯಲ್ಲಿ ಪ್ರಮುಖ ಭಯೋತ್ಪಾದಕರು ಹತರಾದರು, ನಮ್ಮ ದಾಳಿಯಿಂದ ನೂರಾರು ತಾಲಿಬಾನಿಗಳು ಬಲಿಯಾದರು ಎಂಬ ಆಧಾರರಹಿತ ವರದಿಯನ್ನು ಜಗತ್ತಿಗೆ ಮತ್ತು ಅಮೆರಿಕ ಜನತೆಗೆ ನೀಡಿ 20 ವರ್ಷ ತಮಗೆ ತಾವೇ ವಂಚನೆ ಮಾಡಿಕೊಳ್ಳುತ್ತಿದ್ದರು. ಇವರು ನಡೆಸಿರುವ ಅಸಂಖ್ಯಾತ ಡ್ರೋನ್ ದಾಳಿಯಿಂದ ಈ ವೇಳೆಗೆ ತಾಲಿಬಾನ್ ನಾಮಾವಶೇಷವಾಗಬೇಕಿತ್ತು. ಆದರೆ ತಾಲಿಬಾನ್ ಅಮೆರಿಕ ಸೈನ್ಯ ಹಿಂದಿರುಗಿದ ಕೂಡಲೇ ದೇಶವನ್ನು ಆಕ್ರಮಿಸಿಕೊಂಡು ಆಗಸ್ಟ್ 31 ರೊಳಗೆ ಅಳಿದುಳಿದ ಅಮೆರಿಕ ಸೈನ್ಯ ಜಾಗ ಖಾಲಿ ಮಾಡಬೇಕು ಎಂದು ತಾಲಿಬಾನ್ ತಾಕೀತು ನೀಡಿದ ಕೂಡಲೇ ಒಂದು ದಿನ ಮುನ್ನವೇ ಜಾಗ ಖಾಲಿ ಮಾಡುವ ಹೀನಾಯ ಸ್ಥಿತಿಗೆ ಅಮೆರಿಕ ತಲುಪಿತ್ತಲ್ಲ!

1929ರಲ್ಲಿ ಸೋವಿಯತ್ ಯೂನಿಯನ್ ಅಧ್ಯಕ್ಷರಾಗಿದ್ದ ಬ್ರೇಜ್ನೇವ್ ಆಫ್ಘಾನಿಸ್ತಾನಕ್ಕೆ ಸೋವಿ ಯತ್ ಸೈನಿಕರನ್ನು ಕಳುಹಿಸಿ ಬಾಬರಕ್ ಕರ್ಮಾಲ್ ಅವರ ನೇತೃತ್ವದಲ್ಲಿ ಕೈಗೊಂಬೆ ಸರಕಾರ ರಚಿಸುತ್ತದೆ. ಅಂತಿಮವಾಗಿ 1989ರಲ್ಲಿ ತನ್ನ 15 ಸಾವಿರ ಸೈನಿಕರನ್ನು ಕಳೆದುಕೊಂಡು 50 ಸಾವಿರ ಸೈನಿಕರು ಗಾಯ ಗೊಂಡು ಸಾವಿರಾರು ಕೋಟಿ ರೂಬೆಲ್ ಹಾಳು ಮಾಡಿಕೊಂಡು 2 ಲಕ್ಷಕ್ಕೂ ಆಫ್ಘಾನ್ ನಾಗರಿಕರ ಹತ್ಯೆಯ ತರುವಾಯ ರಷ್ಯದ ಸೈನ್ಯ ವಾಪಸ್ ಆಗುತ್ತದೆ. ಸೋವಿಯತ್ ರಷ್ಯಾದಿಂದ ಪಾಠ ಕಲಿಯದ ಅಮೆರಿಕದವರು ಆಫ್ಘಾನಿಸ್ತಾನದಲ್ಲಿ 20 ವರ್ಷ ಇದ್ದು ಕೇವಲ 225 ಲಕ್ಷ ಕೋಟಿ ಹಣ 2500 ಸೈನಿಕರನ್ನು ಕಳೆದುಕೊಂಡು 1.5 ಲಕ್ಷ ನಾಗರಿಕರ ಹತ್ಯೆಯ ತರುವಾಯ ಅಪಾರ ಶಸಾಸಗಳನ್ನು ತೊರೆದು ಖಾಲಿ ಕೈಯಲ್ಲಿ ವಾಪಸ್ ಆದ ಕುಖ್ಯಾತಿ ಇವರದು.

ತಲೆಯಿಂದ ಅಂಗುಷ್ಠದವರೆಗೂ ಧರ್ಮದ ಅಫೀಮು ಸೇವೆನೆ ಮಾಡಿರುವ ಆಫ್ಘನರು ಎಂದು ಬದಲಾಗ ಮತ್ತು ಸದಾ ಹೋರಾಟ ಮಾಡುತ್ತಿದ್ದರು ದಣಿವರಿಯುವು ದಷ್ಟು ಮತಾಂಧರ ಪಡೆ ಇವರದು ಎಂಬ ಸಾಮಾನ್ಯ ಜ್ಞಾನವು ಅಮೆರಿಕ ದವರಿಗೆ ಅರ್ಥ ಮಾಡಿಕೊಳ್ಳದಷ್ಟು ವಿವೇಕ ಶೂನ್ಯರಾಗಿದ್ದರು. ಕಡೆಯ ಪಕ್ಷ ಅಮೆರಿಕದ ಮಿತ್ರ ರಾಷ್ಟ್ರಗಳಿಗಾದರು ಸ್ವಲ್ಪವಾದರು ಸ್ವಂತ ಬುದ್ದಿ ಬಳಸುವ ಗುಣವಿದ್ದಿದ್ದರೆ ರಷ್ಯಾ ಅನುಭವಿಸಿದ ಘೋರ ಪರಾಭವದ ನಂತರವೂ ಅದೇ ಹಾದಿಯಲ್ಲಿ ಸಾಗುತ್ತಿದ್ದ ಅಮೆರಿಕವನ್ನು ಕುರಿಗಳ ಹಾಗೆ ಹಿಂಬಾಲಿಸುತ್ತಿರಲಿಲ್ಲ.

ಡೊನಾಲ್ಡ್ ಟ್ರಂಪ್ ಆಫ್ಘಾನಿಸ್ತಾನದ ಅಕ್ಕಪಕ್ಕದ ದೇಶಗಳೇ, ತಲೆ ಹಾಕದಿರುವಾಗ 6 ಸಾವಿರ ಮೈಲಿ ದೂರವಿರುವ ಅಮೆರಿಕ ಯಾಕೆ ಮಧ್ಯಪ್ರವೇಶಿಸಿ ದುಡ್ಡು ಸೈನ್ಯ ಕಳೆದುಕೊಳ್ಳಬೇಕು ಎಂದು ಪ್ರಶ್ನಿಸುತ್ತಾರೆ. ಜೋ ಬೈಡನ್ ಒಂದಂತು ಸತ್ಯವನ್ನು ಹೇಳಿದರು ಇನ್ನು 20ವರ್ಷ ನಂತರ ಅಮೆರಿಕ ಸೈನ್ಯ ಹಿಂದಿರುಗಿದ್ದರೂ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯಾಗುತ್ತಿರಲಿಲ್ಲ ಎಂದು. ಅಮೆರಿಕ ಅತಿದೊಡ್ಡ ಸಾಲಗಾರ ದೇಶ. ಅದರ ಒಟ್ಟು ಸಾಲ 20.70ಲಕ್ಷ ಕೋಟಿಗಳು ಇದರಲ್ಲಿರುವ ಒಟ್ಚು ಸೊನ್ನೆ ಎಣಿಸಲೇ ಸಮಯ ಬೇಕು. ಜನರ ತೆರಿಗೆ ಹಣವನ್ನು ಅಮೆರಿಕ ಭದ್ರತೆ ಅಪಾಯದಲ್ಲಿದೆ ಎಂದು ಬೇಕಾಬಿಟ್ಟಿ ಸಾವಿರಾರು ಕೋಟಿ ಡಾಲರ್ ಸುರಿಯುತ್ತಿದ್ದಾರೆ.

ಪ್ರಾಯಶಃ ಇದರ ಲಾಭ ಪಡೆಯುತ್ತಿರುವ ಶಸ್ತ್ರಾಸ್ತ್ರ ಮಾಫಿಯಾ ಒಂದ ಒಂದು ಸಮಸ್ಯೆಯಲ್ಲಿ ಅಮೆರಿಕವನ್ನು ಸಿಕ್ಕಿಸಿ ಲಾಭ ಪಡೆಯುತ್ತಿದ್ದಾರೆ. 9/11 ನಡೆದು
ಎರಡು ದಶಕಕ್ಕೆ Netflix ನಲ್ಲಿ Turning Point ಎಂಬ್ ವೆಬ್ ಸಿರೀಸ್ ಪ್ರಸಾರವಾಗುತ್ತಿದೆ. ಅದರಲ್ಲಿ ಅಮೆರಿಕ ಅಧ್ಯಕ್ಷರುಗಳು, ವಿದೇಶಾಂಗ ಕಾರ್ಯದರ್ಶಿ ಕಾಲಿನ್ ಪೊವೆಲ್ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರಂಸ್ ಫ್ಲೆಡ್ ಉಪಾಧ್ಯಕ್ಷ ಡಿಕ್ ಚೀನೀಯವರ ಪ್ರತಾಪಗಳು ಕೇಳಿದರೆ ಇವರಾ ಪ್ರಪಂಚದ ಅತಿ ಶ್ರೀಮಂತ ಹಾಗೂ ಬಲಾಢ್ಯ ದೇಶದ ನಾಯಕರು ಎಂದು ಆಶ್ಚರ್ಯವಾಗುತ್ತದೆ.

ಸೆಪ್ಚಂಬರ್ ೧೧ರ ಪ್ರತೀಕಾರ ತೀರಿಸಿಕೊ ಅಮೆರಿಕ ತನ್ನ ಸೈನ್ಯವನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿ ಸಾಧಿಸಿದ್ದು ಶೂನ್ಯ. ಅಲ್‌ಖೈದಾ ಮುಖ್ಯಸ್ಥ ಬಿನ್ ಲಾಡೆನ್ ಹತ್ತು ವರ್ಷಗಳ ತರುವಾಯ ದೊರೆತಿದ್ದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಆಫ್ಘಾನಿಸ್ತಾನದಲ್ಲಿ ಅಲ್ಲ. ಅವನನ್ನು ಹತ್ಯೆ ಮಾಡಿದ ತರುವಾಯು ಅಮೆರಿಕ ಉದ್ದೇಶರಹಿತವಾಗಿ ಮುಂದಾಲೋಚನೆ ಇಲ್ಲದೆ ಆಫ್ಘಾನಿಸ್ತಾನದಲ್ಲಿ ಉಳಿದು ಸೈನಿಕರನ್ನು, ಹಣವನ್ನು ಮತ್ತು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡು ವಾಪಸ್ ತೆರಳಿದೆ ಆದರೆ ಅದರ ಶತ್ರು ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಮತ್ತೆ ವಿಜೃಂಭಿಸುತ್ತಿರುವುದು ಎಂತಹ ವಿಪರ್ಯಾಸ.

Leave a Reply

Your email address will not be published. Required fields are marked *