Friday, 24th September 2021

ತಂತ್ರಜ್ಞಾನ ಬಳಸಿ, ವಿದ್ಯುತ್‌ ಉಳಿಸಿ

ಶಶಾಂಕ್ ಮುದೂರಿ

ಒಂದು ಸಣ್ಣ ಹೆಜ್ಜೆಯಿಂದ ಆರಂಭವಾಗುವ ನಡಿಗೆಯಿಂದ ಬಹು ದೂರ ಕ್ರಮಿಸಬಹುದು ಎನ್ನುತ್ತಾರೆ. ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವಲ್ಲಿ, ಇಂತಹ ಸಣ್ಣ ಸಣ್ಣ ಹೆಜ್ಜೆಗಳಿಂದ ಸಾಕಷ್ಟು ಉಳಿತಾಯ ಮಾಡಬಹುದು. ಇದರಿಂದ ಸ್ವಂತಕ್ಕೂ ಹಿತ, ದೇಶಕ್ಕೂ ವಿಹಿತ, ವಾತಾವರಣದ ಆರೋಗ್ಯ ಕಾಪಾಡಲೂ ಉತ್ತಮ.

ನಮ್ಮ ಮನೆಗಳಲ್ಲಿ ವಿದ್ಯುತ್ ದೀಪಗಳನ್ನು ಉಪಯೋಗಿಸದೇ ಇರುವಾಗ, ಸ್ಚಿಚ್ ಆಫ್ ಮಾಡುತ್ತೇವೆ; ಬೇಸಿಗೆಯಲ್ಲಿ ಎ.ಸಿ.ಯನ್ನು 18ಡಿಗ್ರಿಗೆ ಸರಿಹೊಂದಿಸುವ ಬದಲು, ಸುಮಾರು 22 ಡಿಗ್ರಿಗೆ ಸರಿಹೊಂದಿಸಿ ಓಡಿಸುತ್ತೇವೆ. ಇದರಿಂದ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ ಎಂಬುದು ನಿಜ. ಜತೆಯಲ್ಲೇ, ಈ ರೀತಿ ವಿದ್ಯುತ್‌ನ್ನು ಮಿತವ್ಯಯ ಮಾಡುವುದರಿಂದಾಗಿ, ಈ ಭೂಮಿಯ ವಾತಾವರಣಕ್ಕೂ ಒಳ್ಳೆಯದು.

ನಮ್ಮ ದೇಶದ ಒಟ್ಟೂ ವಿದ್ಯುತ್ ಉತ್ಪಾದನೆಯ ಶೇ. 79ರಷ್ಟು ವಿದ್ಯುತ್ ಉತ್ಪಾದನೆಯು ಪಳಿಯುಳಿಕೆ ಇಂಧನದಿಂದ (ಡೀಸಲ್, ಕಲ್ಲಿದ್ದಲು) ಎಂಬ ವಿಚಾರ ಗಮನಿಸಿದರೆ, ಜನಸಾಮಾನ್ಯರ ದಿನನಿತ್ಯದ ವಿದ್ಯುತ್ ಉಳಿತಾಯವು ಹೇಗೆ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಎಂಬುದರ ಅರಿವಾದೀತು. ಇಲ್ಲಿ ನೆನಪಾಗುವುದು ಪರ್ಯಾಯ ಮತ್ತು ನವೀಕರಿಸಬಹುದಾದ ಶಕ್ತಿಮೂಲ ಗಳು. ಇದರ ಕುರಿತು ಸಾಕಷ್ಟು ಪ್ರಚಾರ, ಕೆಲಸ ನಡೆದಿದೆ. ಆದರೆ, ಇಂದು ಸೂರ್ಯನ ಬೆಳಕಿ ನಿಂದ, ಗಾಳಿಯಿಂದ ವಿದ್ಯುತ್ ಉತ್ಪಾದನೆ ನಡೆಯುತ್ತಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ, ಅವುಗಳ ಶೇಕಡಾವಾರು ಕೊಡುಗೆ ತೀರಾ ಕಡಿಮೆ ಮಟ್ಟದಲ್ಲಿದೆ ಎಂಬುದು ಒಂದು ವಾಸ್ತವ.

ಇದರ ನಡುವೆ, ಪ್ರತಿ ವರ್ಷವೂ ‘ಕಳೆದ ವರ್ಷಕ್ಕಿಂತ ಈ ವರ್ಷ ಸೆಕೆ ಜಾಸ್ತಿ ಮಾರಾಯ್ರೆ’ ಎಂಬ ಉದ್ಗಾರ ಮಾಡುತ್ತಾ, ನಾವುಗಳೆಲ್ಲರೂ ಹೆಚ್ಚು ಹೆಚ್ಚು ಎ.ಸಿ., ಫೋನ್, ಕೂಲರ್ ಖರೀದಿಸುತ್ತಾ, ವಿದ್ಯುತ್ ಉರಿಸುತ್ತಿದ್ದೇವೆ. ವಿದ್ಯುತ್ ಕಡಿತ ಉಂಟಾದಾಗಲೆಲ್ಲಾ ವಿದ್ಯುತ್ ಕಂಪೆನಿಗಳನ್ನು ಬೈಯುತ್ತೇವೆ. ಜತೆಜತೆಗೇ, ಹಲವು ಕಡೆ ಜನರೇಟರ್ ಚಾಲೂ ಮಾಡಿ ಎ.ಸಿ., ಫೋನುಗಳನ್ನು ಓಡಿಸುವದೂ ಇದೆ. ಇದರಿಂದ ಇನ್ನಷ್ಟು ಹವಾಮಾನ ಮಾಲಿನ್ಯ!

ಇವೆಲ್ಲವನ್ನೂ ಗಮನಿಸಿದರೆ, ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದು ಎಲ್ಲರ, ಮತ್ತೊಮ್ಮೆ ಹೇಳುತ್ತೇನೆ, ಎಲ್ಲರ ಆದ್ಯತೆ ಆಗಬೇಕು. ಅದು ಜನಸಾಮಾನ್ಯ ರಿಂದ ಹಿಡಿದು, ಸರಕಾರದ ಇಲಾಖೆಗಳು, ಸರಕಾರಿ ಕಛೇರಿಗಳು, ಸಾರ್ವಜನಿಕ ಸ್ಥಳಗಳು, ಸ್ಥಿತಿವಂತರ ರೆಸಾರ್ಟ್‌ಗಳು ಎಲ್ಲರಿಗೂ ಅನ್ವಯವಾಗಬೇಕು.

ಜಗತ್ತಿನಲ್ಲೇ ಮೂರನೆಯ ದೇಶ  
ನಮ್ಮ ದೇಶವು ಜಗತ್ತಿನಲ್ಲೇ ಮೂರನೆಯ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ದೇಶ ಮತ್ತು ವಿದ್ಯುತ್ ವೆಚ್ಚ ಮಾಡುವ ದೇಶಗಳ ಪೈಕಿಯೂ ಮೂರನೆಯ ಸ್ಥಾನದಲ್ಲಿದೆ. ವಿದ್ಯುತ್ ಉಳಿಸಲು ನಾವು ಕೈಗೊಳ್ಳುವ ಸಣ್ಣ ಸಣ್ಣ ಉಪಕ್ರಮಗಳೂ, ದೀರ್ಘಕಾಲದಲ್ಲಿ ಉತ್ತಮ ಫಲಿತಾಂಶವನ್ನೇ ಕೊಡಬಲ್ಲದು. ಕಳೆದ ದಶಕದ ತನಕ, ದಿನಬಳಕೆಯ ವಿದ್ಯುತ್ ದೀಪದ ವೆಚ್ಚ ಕಡಿಮೆ ಮಾಡಲು ನಮ್ಮಲ್ಲಿ ಫಿಲಾಮೆಂಟ್ ಬಲ್ಬ್‌ಗಳ ಬದಲು, ಫ್ಲೋರಸೆಂಟ್ ಬಲ್ಬ್‌ಗಳು (ಟ್ಯೂಬ್‌ಲೈಟ್) ಮಾತ್ರ ವಿದ್ದವು.

ಎಲ್ ಇ ಡಿ ಕ್ರಾಂತಿ
ಈಚಿನ ನಾಲ್ಕೆಂಟು ವರ್ಷಗಳಲ್ಲಿ ಬಳಕೆಗೆ ಬಂದಿರುವ ಎಲ್ ಇಡಿ ಬಲ್ಬ್‌ಗಳು ನಿಜಕ್ಕೂ ಒಂದು ಕ್ರಾಂತಿ ಎಂದೇ ಭಾವಿಸಲಾಗಿದೆ. ಎಲ್.ಇ.ಡಿ. ಬಲ್ಬ್‌ಗಳ ಪ್ರಮುಖ ಲಾಭವೆಂದರೆ, ಫಿಲಾಮೆಂಟ್ ಬಲ್ಬ್‌ಗೆ ಹೋಲಿಸಿದರೆ, ಅವು ಶೇ.80ರಷ್ಟು ಕಡಿಮೆ ವಿದ್ಯುತ್‌ನ್ನು ಬಳಸಿ, ಅಷ್ಟೇ ಬೆಳಕು ನೀಡುತ್ತವೆ. ಆರಂಭದಲ್ಲಿ ಎಲ್.ಇ.ಡಿ. ಬಲ್ಬ್ ಖರೀದಿಸಲು ತುಸು ದುಬಾರಿ ಎನಿಸಿದರೂ, ಒಟ್ಟಾರೆ ಅವು ಉಳಿಸುವ ವಿದ್ಯುತ್ ಪ್ರಮಾಣ ಮಾತ್ರ ಅಗಾಧ. ಆದ್ದರಿಂದಲೇ, ಈಗ ಐದು ವರ್ಷಗಳ ಹಿಂದೆ ಸರಕಾರದ ಇಲಾಖೆಗಳು ರಿಯಾಯಿತಿ ದರದಲ್ಲಿ ಎಲ್ಲರಿಗೂ ಎಲ್.ಇ.ಡಿ.ಬಲ್ಬ್‌ಗಳನ್ನು ವಿತರಿಸುವ ಅಭಿಯಾನವನ್ನೇ ಕೈಗೊಂಡವು.

ಪ್ರತಿ ರಾತ್ರಿ ನಮಗೆ ಬೇಕಾದ ಬೆಳಕನ್ನು ಪಡೆಯಲು, ಇದೊಂದು ಸಣ್ಣ ಬದಲಾವಣೆಯ ಮೂಲಕ, ಸಾಕಷ್ಟು ವಿದ್ಯುತ್ ಉಳಿತಾಯವಾಗಿದೆ. ಈ ಉಳಿತಾಯವು, ದೇಶಕ್ಕೂ ಹೌದು, ನಮ್ಮ ಮನೆಗಳ ಪ್ರತಿ ತಿಂಗಳ ಬಿಲ್ ಮೊತ್ತ ಕಡಿಮೆ ಮಾಡಲೂ ಹೌದು. ಇನ್ನೂ ಯಾರಾದರೂ ಎಲ್‌ಇಡಿ ಬಳಸದೇ ಇದ್ದರೆ, ತಕ್ಷಣ ಎಲ್‌ಇಡಿ ಬಲ್ಬ್‌ಗಳ ಬಳಕೆ ಆರಂಭಿಸಿ. ಇದರಿಂದ ವೈಯಕ್ತಿಕವಾಗಿಯೂ ಲಾಭ, ದೇಶಕ್ಕೂ ಲಾಭ.

ಬೃಹತ್ ನಗರಗಳಲ್ಲಿ ತೊಡಕು  
ಆದರೆ, ದೊಡ್ಡ ನಗರ ಪ್ರದೇಶಗಳಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿ, ನೂರಾರು ಮನೆಗಳಿರುವ ಸಂಕೀರ್ಣಗಳಲ್ಲಿ ಎಲ್ಲರೂ ಸೋಲಾರ್ ವಾಟರ್ ಹೀಟರ್ ಬಳಸುವುದು ತುಸು ತೊಡಕಿನ ವಿಚಾರ. ಇಂದು ಕಂಡುಬರುವ ಮಧ್ಯಮ ವೆಚ್ಚದ ವಸತಿ ಸಂಕೀರ್ಣಗಳಲ್ಲಿ, ಒಳಭಾಗದಲ್ಲಿರುವ ಮನೆಗಳಿಗೆ ನೇರ ಬಿಸಿಲಿನ ಸೌಲಭ್ಯ ಕಡಿಮೆ; ಅಂತಹವರು ಸೋಲಾರ್ ವಾಟರ್ ಹೀಟರ್ ಅಳವಡಿಸುವುದು ಕಷ್ಟ. ಇದನ್ನು ಹೊರತು ಪಡಿಸಿ, ಬಹುಮಹಡಿ ಕಟ್ಟಡಗಳ ಹಲವು ಮನೆ ಗಳವರು ಸೋಲಾರ್ ವಾಟರ್ ಹೀಟರ್ ಅಳವಡಿಸಬಹುದು; ಜತೆಗೆ, ಸಾಮೂಹಿಕವಾಗಿ ಉಪಯೋಗಿಸ ಬಹುದಾದ ಸೋಲಾರ್ ಹೀಟರ್‌ಗಳನ್ನು ಬಹುಮಹಡಿ ಕಟ್ಟಡಗಳಲ್ಲಿ ಅಳವಡಿಸುವ ಕುರಿತು ಹೆಚ್ಚು ಚಿಂತನೆ ನಡೆಸಬೇಕಾಗಿದೆ. ಈ ಉಪಕ್ರಮ ಅದೇಕೋ ಬೆಂಗಳೂರಿನಂತಹ ನಗರದಲ್ಲಿ ಜನಪ್ರಿಯತೆ ಪಡೆದಿಲ್ಲ. ಈ ಕುರಿತು ಸರಕಾರವು ಒಂದು ಅಭಿಯಾನ ಕೈಗೊಳ್ಳಬಹುದು ಅಥವಾ ಹೊಸ ನಿಯಮವನ್ನು ರೂಪಿಸುವುದು ಒಳ್ಳೆಯದು.

ಸ್ಮಾರ್ಟ್ ಬಲ್ಬ್
ವಿದ್ಯುತ್ ಬಳಕೆ ಕಡಿಮೆ ಮಾಡಲು ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಬೇಕಾದ ಕಾಲ ಇದು. ಮನೆ ಮನೆಗಳಲ್ಲಿ ಸ್ಮಾರ್ಟ್ ಗೆಜೆಟ್‌ಗಳನ್ನು ಉಪಯೋಗಿಸುವುದರ ಮೂಲಕ ಸಾಕಷ್ಟು ವಿದ್ಯುತ್ ವೆಚ್ಚ ಕಡಿಮೆಯಾಗುತ್ತದೆ. ಸ್ಮಾರ್ಟ್ ಬಲ್ಬ್ ಅಳವಡಿಸಿವುದು ಅಂತಹ ಒಂದು ಸರಳ ಕ್ರಮ. ಜನರ ಓಡಾಟ ಇಲ್ಲದೇ ಇರುವಾಗ, ತನ್ನಷ್ಟಕ್ಕೆ ತಾನೇ ಆಫ್ ಆಗುವಂತಹ ಸೆನ್ಸರ್ ಅಳವಡಿಸಿರುವ ಸ್ಮಾರ್ಟ್‌ಬಲ್ಬ್‌ಗಳು, ಕಾರಿಡಾರ್‌ಗಳಲ್ಲಿ, ಹೊರಭಾಗದ ವೆರಾಂಡಗಳಲ್ಲಿ ಹೆಚ್ಚು ಅನುಕೂಲ. ಸುಮಾರು ಹತ್ತರಿಂದ ಹದಿನೈದು ನಿಮಿಷ ಚಟುವಟಿಕೆ ಇಲ್ಲದ ಸಮಯದಲ್ಲಿ (ಈ ಸಮಯವನ್ನು ಸೆಟ್ ಮಾಡುವ ಅವಕಾ ಶವೂ ಇದೆ) ಸ್ಮಾರ್ಟ್ ಬಲ್ಬ್‌ಗಳು ತನ್ನಷ್ಟಕ್ಕೆ ತಾನೇ ಆಫ್ ಆಗುತ್ತವೆ. ವಿದ್ಯುತ್ ಬಳಕೆ ಕಡಿಮೆ ಮಾಡಲು ಇದೊಂದು ದೊಡ್ಡ ಅವಕಾಶ.

ಸ್ವಿಚ್ ಆಫ್ ಮಾಡಲು ಸಂಕೋಚ ಬೇಡ
ಉಪಯೋಗವಿಲ್ಲದಾಗ ವಿದ್ಯುತ್ ಬಲ್ಬ್ ಸ್ವಿಚ್ ಆಫ್ ಮಾಡಲು ಸಂಕೋಚ ಬೇಡವೇ ಬೇಡ. ಜತೆಗೆ, ಟಿ.ವಿ. ಮೊದಲಾದ ಕೆಲವು ಗೆಜೆಟ್‌ಗಳು ನಮಗೆ ಗೊತ್ತಿಲ್ಲದೇ
ವಿದ್ಯುತ್ ತಿನ್ನುತ್ತಿರುತ್ತವೆ! ಹಲವು ಬಾರಿ, ಟಿವಿ ಆಫ್ ಮಾಡುವಾಗ, ಆ ಕಾರ್ಯಕ್ರಮವನ್ನು ಬಂದ್ ಮಾಡುತ್ತೇವೆ, ಆದರೆ, ಸ್ಕ್ರೀನ್ ತನ್ನ ಪಾಡಿಗೆ ತಾನು ಆನ್
ಇರುತ್ತದೆ. ಅದು ಸದ್ದಿಲ್ಲದೇ ವಿದ್ಯುತ್ ಖರ್ಚು ಮಾಡುತ್ತಲೇ ಇರುತ್ತದೆ. ಹೆಚ್ಚು ಕಾಲ ಉಪಯೋಗಿಸದೇ ಇರುವಾಗ, ಟಿವಿಯ ಮುಖ್ಯ ಸ್ವಿಚ್‌ನ್ನು ಆಫ್ ಮಾಡುವುದು ಅಗತ್ಯ. ಆಗ ಅದಕ್ಕೆ ಜೋಡಿಸಿರುವ ಸ್ಕ್ರೀನ್, ರಿಸೀವರ್ ಎಲ್ಲವೂ ಸ್ವಿಚ್ ಆಫ್ ಆಗುತ್ತವೆ. ಇದರಿಂದಾಗಿ, ತಿಂಗಳ ಲೆಕ್ಕದಲ್ಲಿ ನೋಡಿದರೆ ಸಾಕಷ್ಟು ವಿದ್ಯುತ್ ಉಳಿತಾಯ ವಾಗುತ್ತದೆ. ಇಂತಹ ಇತರ ಗೆಜೆಟ್‌ಗಳು ಮನೆಯಲ್ಲಿದ್ದರೆ, ಅವುಗಳನ್ನು ಉಪಯೋಗಿಸದೇ ಇರುವಾಗ ಸ್ವಿಚ್ ಆಫ್ ಮಾಡುವುದು ಮುಖ್ಯ.

ನಿಮ್ಮ ನಿಮ್ಮ ಮನೆಗಳ ವಿದ್ಯುತ್ ಬಿಲ್ ಉಳಿಸಲು ಹೆಚ್ಚು ಹೆಚ್ಚು ಎಚ್ಚರಿಕೆ ವಹಿಸಿ. ಅಕ್ಕಪಕ್ಕದವರು, ಬಂಧುಗಳು ನಿಮ್ಮ ಈ ಅಭಿಯಾನವನ್ನು ಕಂಡು ತಮಾಷೆ ಮಾಡಿದರೂ ಪರವಾಗಿಲ್ಲ, ನಿಮ್ಮನ್ನು ಜಿಪುಣರು ಎಂದು ಕರೆದರೂ ಚಿಂತಿಲ್ಲ. ಏಕೆಂದರೆ, ನೀವು ಉಳಿಸುವ ಪ್ರತಿಯೊಂದು ಯುನಿಟ್ ವಿದ್ಯುತ್, ತಿಂಗಳ ವೆಚ್ಚ ವನ್ನು ಕಡಿಮೆ ಮಾಡುವುದು ಮಾತ್ರವಲ್ಲ, ದೇಶಕ್ಕೆ ಕೊಡುಗೆ ನೀಡಬಲ್ಲದು. ಜತೆಗೆ, ಭೂಮಿಯ ಪರಿಸರದ ಆರೋಗ್ಯ ಕಾಪಾಡಲು ಅಳಿಲು ಸೇವೆ ಮಾಡಿ ದಂತಾಗುತ್ತದೆ.

ವಾಟರ್ ಹೀಟರ್ ಬಳಕೆ 

ಇತ್ತೀಚಿನ ದಿನಗಳಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ವಿದ್ಯುತ್ ವಾಟರ್ ಹೀಟರ್ ಹೆಚ್ಚು ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಒಂದು ಕಟುವಾಸ್ತವವೆಂದರೆ, ಕಾಯಿಲ್
ಮೂಲಕ ನೀರನ್ನು ಬಿಸಿ ಮಾಡುವ ವಾಟರ್ ಹೀಟರ್‌ಗಳು ಅತಿ ಹೆಚ್ಚು ವಿದ್ಯುತ್‌ನ್ನು ಬಳಸುತ್ತವೆ. ಇದನ್ನು ಬಳಸುವಾಗ ಹೆಚ್ಚು ಎಚ್ಚರಿಕೆ ವಹಿಸಿದರೆ, ಸಾಕಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಆದರೆ, ಬಹುಮಟ್ಟಿಗೆ ವರ್ಷವಿಡೀ ಬಿಸಿಲು ಸಾಕಷ್ಟು ಬೀಳುವ ನಮ್ಮ ದೇಶದಲ್ಲಿ, ನೀರನ್ನು ಬಿಸಿ ಮಾಡುವ ಅತ್ಯುತ್ತಮ ವಿಧಾನವೆಂದರೆ ಸೋಲಾರ್ ವಾಟರ್ ಹೀಟರ್.

ಸರಕಾರದ ಸಬ್ಸಿಡಿಯೂ ದೊರೆಯುವ ಈ ಒಂದು ಉಪಕರಣವು ನಮ್ಮ ದೇಶದಲ್ಲಿ ಅದೆಷ್ಟೋ ಜನರ ವಿದ್ಯುತ್ ಬಿಲ್‌ನ್ನು ಕಡಿಮೆ ಮಾಡಿದೆ. ಒಮ್ಮೆ ಅಳವಡಿಸಿದರೆ ದಶಕಗಳ ಕಾಲ ಬಿಸಿನೀರನ್ನು ಒದಗಿಸುವ ಸೋಲಾರ್ ವಾಟರ್ ಹೀಟರ್ ಬಳಕೆಯಿಂದ, ಸಾಕಷ್ಟು ವಿದ್ಯುತ್ ಉಳಿತಾಯವಾಗಿದೆ. ಅನುಕೂಲ ಇರುವವರೆಲ್ಲರೂ ಸೋಲಾರ್ ವಾಟರ್ ಹೀಟರ್ ಹಾಕಿಸಿಕೊಳ್ಳುವುದು ವೈಯಕ್ತಿಕವಾಗಿ ಜೇಬಿಗೂ ಹಗುರ, ದೇಶಕ್ಕೂ ಹಿತ

ಒಂದು ಪುಟ್ಟ ಹೆಜ್ಜೆ

ನಮ್ಮ ದೇಶದಲ್ಲಿ ಸೂರ್ಯನ ಶಕ್ತಿ ಹೇರಳ. ದೇಶವಾಸಿಗಳೆಲ್ಲರೂ ಬಿಸಿ ನೀರು ಬೇಕೆನಿಸಿದಾಗ ಸೋಲಾರ್ ವಾಟರ್ ಹೀಟರ್ ಬಳಸಬೇಕು ಎಂಬ ನಿರ್ದೇಶನ
ನೀಡಿ, ಸೌಲಭ್ಯ ಮಾಡಿಕೊಟ್ಟರೆ, ದೊಡ್ಡ ಪ್ರಮಾನದ ಇಂಧನ ಉತಾಯವಾಗುತ್ತದೆ. ಅದು ವಿದ್ಯುತ್ ಆಗಿರಬಹುದು, ಸೌದೆ ಆಗಿರಬಹುದು ಅಥವಾ ಗ್ಯಾಸ್
ಆಗಿರಬಹುದು. ಸೂರ್ಯ ಶಕ್ತಿಯನ್ನು ಅತಿ ಹೆಚ್ಚು ಬಳಸಿಕೊಳ್ಳುವ ಮೂಲಕ ಸಂಪತ್ತನ್ನು ಉಳಿಸಬಹುದು, ಗಳಿಸಬಹುದು. ಇಂತಹ ಒಂದು ಉಪಕ್ರಮ ನಮ್ಮ ದೇಶದ ನಗರಗಳಲ್ಲಿ ಇನ್ನಷ್ಟು ನಡೆಸಬೇಕಾದ ಅಗತ್ಯವಿದೆ. ಹೆಚ್ಚು ಬಿಸಿಲು ಇರುವ ನಮ್ಮ ನಾಡಿಗೆ ಇದು ಅತಿ ಸೂಕ್ತ ಎನಿಸುವ ಶಕ್ತಿ ಮೂಲ.

Leave a Reply

Your email address will not be published. Required fields are marked *