Tuesday, 18th January 2022

ಶೇಂಗಾ, ಪುಟಾಣಿ ಕದ್ದಿದ್ದರೆ ವೀರಪ್ಪನ್‌ ಆಗುತ್ತಿರಲಿಲ್ಲ !

ಮಿಶ್ರಾ ಕೃಷಿ

ಕವಿತಾ ಮಿಶ್ರಾ

mishraformkvt@gmail.com

ಪುಟಾಣಿ, ಬಟಾಣಿ, ಶೇಂಗಾ, ಟೊಮೇಟೊ ಬೆಳೆಗಳನ್ನ ಕಳ್ಳತನ ಮಾಡುತ್ತಿದ್ದರೆ ವೀರಪ್ಪನ್ ಕುಖ್ಯಾತನಾಗುತ್ತಲೇ ಇದ್ದಿಲ್ಲ. ಅವನು ಕದ್ದಿದ್ದು ಶ್ರೀಗಂಧವನ್ನ. ನಾವು ಅಂತಹಾ ಶ್ರೀಗಂಧವನ್ನೇ ಬೆಳೆಯುತ್ತೇವೆ ಅಂದರೆ ನಮ್ಮ ಸಾಮರ್ಥ್ಯವನ್ನ ನೀವೇ ಅರ್ಥ ಮಾಡಿಕೊಳ್ಳಿ. ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ.

ನಾಗರಿಕ ಸಮಾಜ ಅಂತ ಕರೆಸಿ ಕೊಳ್ಳಲ್ಪಡುವ ಸಮಾಜದೆದುರು ರೈತನೊಬ್ಬ ಎದುರಾದರೆ ಆತನೊಬ್ಬ ಅನಾಗರಿಕ, ಹಿಂದುಳಿದ ವ್ಯಕ್ತಿಯಾಗಿ ಕಾಣುತ್ತಾನೆ. ಯಾವುದೇ ಅನ್ಯಭಾಷೆಗಳನ್ನು ಚೌಚೌ ಮಾಡದೆ ತನ್ನ ಸ್ವಂತ ಮಾತಿನಲ್ಲಿ ಮಾತನಾಡುತ್ತಿದ್ದರೆ ಅವನೊಬ್ಬ ಗಳ್ಳಿ ಗಮಾಡ್, ನಗೆಪಾಟಲಿಗೆ ಕಾರಣವಾಗುವ ಕ್ಷುಲ್ಲಕ ವ್ಯಕ್ತಿ.

ಇಡೀ ಮಾನವ ಸಂಕುಲದ ಹೊಟ್ಟೆಗೆ ಹಿಟ್ಟು ನೀಡಿ ಹಸಿವಿನಿಂದ ತೊಳಲಾಟ ನಡೆಸದಂತೆ ಪ್ರತಿಯೊಬ್ಬರಿಂದ ಮಾತೃ ಸ್ಥಾನವನ್ನು ಹೊಂದಬೇಕಿದ್ದ ವ್ಯಕ್ತಿ ಇಂದು ಅನಾಗರಿಕನೆಂದು ಕರೆಸಿಕೊಳ್ಳುತ್ತಿದ್ದಾನೆ ಅಂದರೆ ಅದಕ್ಕಿಂತ ಘೋರ ದುರಂತ ಇನ್ನೇನು ಬೇಕು? ನಮ್ಮ ಸಮಾಜ ಎಷ್ಟು ಮುಂದೆ ಹೋಗುತ್ತಿದೆ ಅನ್ನೋದನ್ನ ಚಿಂತನಾ ಒರೆಗಲ್ಲಿಗೆ ಹಚ್ಚಿನೋಡಿ. ಮನುಷ್ಯ ಯಾವಾಗ ಹಸಿವನ್ನು ತಾಳಲಾರದೆ ಹಾಹಾಕಾರ ದಿಂದ ಬಳಲುವುದಕ್ಕೆ ಪ್ರಾರಂಭಿಸಿದ್ದನೋ ಅಂದಿನಿಂದಲೇ ಆಹಾರ ಪದಾರ್ಥಗಳನ್ನ ಬೆಳೆದು ಇನ್ನೊಬ್ಬರಿಗೆ ಉಣಿಸುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ಅದು ಇಂದು ನಿನ್ನೆ ಮಾರ್ಕೆಟ್‌ಗಳಲ್ಲಿ ಬಂದ ಪಿಜ್ಜಾ ಬರ್ಗರ್‌ಗಳಲ್ಲ, ಅವು ಅಮೃತಸದೃಶ ಧವಸ ಧಾನ್ಯಗಳು, ಅದಕ್ಕೊಂದು ಭವ್ಯವಾದ ಇತಿಹಾಸವೇ ಇದೆ.

ರಾಮಾಯಣ ಮಹಾಭಾರತದ ಕಾಲದಲ್ಲೂ ಸಾಂಪ್ರದಾಯಿಕ ಕೃಷಿಯನ್ನ ಮಾಡುತ್ತಿದ್ದರು ಅನ್ನೋದಕ್ಕೆ ಪುರಾವೆಗಳಿವೆ. ಕಲಾ ಜಗತ್ತಿನ ಕೇಂದ್ರಬಿಂದುವಾಗಿದ್ದ ದೇವಸ್ಥಾಗಳಲ್ಲೂ ಕೆತ್ತಲ್ಪಟ್ಟಿರುವ, ರೈತೋಪಯೋಗಿ ಪಶು ಪಕ್ಷಿಗಳ ಉಲ್ಲೇಖಗಳೇ ನಮ್ಮ ಪೂರ್ವಜರು ಎಷ್ಟು ಸುಸ್ಥಿರ ಮತ್ತು ಸಮಗ್ರ ಕೃಷಿಗೆ ಒತ್ತು ನೀಡಿದ್ದರು ಅನ್ನೋದಕ್ಕೆ ಇನ್ನೂ ಉತ್ತಮವಾದ ಉದಾಹರಣೆ ಗಳು ಬೇಕಿಲ್ಲ ಅನ್ನೋದು ನನ್ನ ಭಾವನೆ. ಪ್ರಾರಂಭದಲ್ಲಿ ಒಂಟಿ ಬೆಳೆ ಪದ್ಧತಿಯಲ್ಲಿಯೇ ಲಾಭ ಹಾಗೂ ಸಸ್ಯ ಗಳೆರಡನ್ನೂ ಕಂಡಿದ್ದೆ (ಮೋನೋ ಕ್ರಾಪಿಂಗ್ ಸಿಸ್ಟಮ್). ಸಾಮಾನ್ಯವಾಗಿ ನಾವು ಲಾಭವಾಗುತ್ತಿದ್ದಾಗ ಎಲ್ಲವೂ ಸರಿಯಿದೆ ಅಂತಲೇ ಭಾವಿಸಿಬಿಡುತ್ತೇವೆ, ಕಾರಣ ವನ್ನ ಹುಡುಕೋದು ನಷ್ಟವಾದಾಗಲೇ ಅನ್ನೋ ಸತ್ಯ ನೆನಪಿರಲಿ.

ಆ ಸಂದರ್ಭದಲ್ಲಿ ನನಗೆ ಪ್ರೇರಣೆಯಾಗಿದ್ದು, ಸೂರ್ತಿಯ ಸೆಳೆತ ಉಂಟಾಗಿದ್ದು ಹಳೆಯ ದೇವಸ್ಥಾನಗಳ ಮೇಲೆ ಕೆತ್ತಲ್ಪಟ್ಟಿದ್ದ ಸಮಗ್ರ ಕೃಷಿಯ ಕೆತ್ತನೆಗಳು. ಸಮಗ್ರ ಕೃಷಿಯಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಲೆ ಬಂದಿದ್ದು ಮುಖ್ಯವಾಗಿ ಕುರಿ, ಕೋಳಿ, ಹಸು, ಎಮ್ಮೆಗಳ ತಳಿಯ ಆಯ್ಕೆಗಳು ನಿರಂತರವಾಗಿತ್ತು. ಕೋಳಿಗಳ ವಿಷಯಕ್ಕೆ ಬಂದ್ರೆ ಹಲವರು ಮೊಟ್ಟೆ ಮತ್ತು ಮಾಂಸಕ್ಕಾಗಿ ಸಾಕುತ್ತಾರೆ. ಅವುಗಳಿಗೆ ಶೆಡ್‌ಗಳು, ವಿದ್ಯುತ್ ನೀರು ಅಂತೆಲ್ಲ ಹಣವನ್ನು ವ್ಯಯಿಸುತ್ತಾರೆ. ಈ ವಿಚಾರದಲ್ಲಿ ನನ್ನ ನಿರ್ಧಾರವೇ ಬೇರೆಯಾಗಿತ್ತು. ಹಣದ ವೆಚ್ಚವನ್ನು ಕಡಿಮೆ ಮಾಡಿ ಅವುಗಳಿಂದ ಇನ್ನೂ ಹೆಚ್ಚಿನ ಲಾಭವನ್ನು ಪಡೆಯುವುದಕ್ಕೆ ಮಾರ್ಗಗಳು ದೊರೆತಿದ್ದರಿಂದ ಅವುಗಳಿಗೆ ಫಾರಂನಲ್ಲಿ ಸ್ವೇಚ್ಛೆಯಾಗಿ ಓಡಾಡಿಕೊಂಡಿರುವುದಕ್ಕೆ ಬಿಟ್ಟೆ, ಮೊಟ್ಟೆ ಮತ್ತು ಮಾಂಸಗಳ ಆದಾಯದ ಜತೆಗೆ ಇನ್ನೊಂದು ಅದ್ಭುತ ಕೆಲಸಗಳನ್ನು ಮಾಡುತ್ತಿದ್ದವು.

ನಮ್ಮ ಇಡೀ ತೋಟಕ್ಕೆ ಹನಿನೀರಾವರಿ ಪದ್ಧತಿಯನ್ನು ಅಳವಡಿಸಿದ್ದರಿಂದ ಕಳೆಗಳು ನಿಯಂತ್ರಣದಲ್ಲಿತ್ತು. ಆದ್ರೆ ಹಸಿಯಾದ, ತೇವಾಂಶಭರಿತ ಮಣ್ಣು ಇದ್ದು ದರಿಂದ ಸಹಜವಾಗಿಯೇ ಕೀಟಗಳ ಬಾಧೆ ಕಾಡುತ್ತಿತ್ತು. ಈ ಕೋಳಿಗಳನ್ನು ನಮ್ಮ ತೋಟದಲ್ಲಿ ಬಿಡುವುದರಿಂದ ತಮ್ಮ ಕಾಲಿನಿಂದ ಹಸಿಮಣ್ಣನ್ನು ಕರೆದು ಅಲ್ಲಿಯ ಹುಳು- ಹುಪ್ಪಟೆಗಳನ್ನು ತಿಂದು ನನಗೆ ಸುಮಾರು 30 ಪ್ರತಿಶತ ಸಿಂಪಡಣಾ ವೆಚ್ಚ ಗಳನ್ನುಕಡಿಮೆ ಮಾಡುತ್ತಿದ್ದವು.

ಸಾಮಾನ್ಯವಾಗಿ ಉತ್ತರಕರ್ನಾಟಕ, ಆಂಧ್ರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಕೋಳಿ ಕಾಳಗಗಳನ್ನ ನಡೆಸಲಾಗುತ್ತೆ, ಆ ಕಾಳಗಕ್ಕೆ ಬಳಸುವ ಕೋಳಿಗಳೂ ಭಿನ್ನವಾಗಿಯೇ ಇರುತ್ತೆ ಅನ್ನೋದನ್ನ ಅರಿತ ನಾನು, ದಷ್ಟಪುಷ್ಟವಾದ ಹುಂಜಗಳನ್ನು ಸಾಕುವುದಕ್ಕೆ ಪ್ರಾರಂಭ ಮಾಡಿದ್ದೆ. ಈ ಹುಂಜ ಗಳು ಕೋಳಿಗಳಂತೆಯೆ ತೋಟ, ಹೊಲದಲ್ಲಿರುವ ಕೀಟಗಳನ್ನು ತಿನ್ನುತ್ತಿದ್ದವು. ಜತೆಗೆ ಮೂರರಿಂದ ಹತ್ತು ಸಾವಿರಗಳಿಗೆ ಮಾರಾಟವಾಗುತ್ತಿದ್ದವು. ನನ್ನ ಫಾರ್ಮ್‌ನಲ್ಲಿ ತಯಾರಾಗುತ್ತಿದ್ದ ಹುಂಜಗಳಿಗೆ ಕರ್ನಾಟಕದ ಕಕ್ಕೇರಿ, ತಮಿಳುನಾಡಿನ ಸೇಲಂ, ಆಂದ್ರಪ್ರದೇಶದ ಹೋಗೋಲ್‌ಗಳಲ್ಲಿ ಬೇಡಿಕೆ ಹೆಚ್ಚಿತ್ತು.

ಇಲಿಯಾರೆ ಮಹಾರಾಜರ ಬೇಸಿಗೆಯ ರಾಜಧಾನಿಯಾಗಿದ್ದ ಮಧ್ಯಪ್ರದೇಶದ ಶಿವಪುರಿಗೊಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅದೊಂದು ಅದ್ಭುತವಾದ ಪ್ರದೇಶ. ವಿಶಾಲವಾದ ಮಹಲ್‌ಗಳು, ಮಹಾರಾಣಿ ಬಾಗ್ ಮತ್ತು ಮೊಸಳೆಗಳೇ ತುಂಬಿರುವ ಮಗರ್‌ಮಚ್ ತಲಾಬ್‌ಗಳನ್ನು ನೋಡೋದಂದ್ರೆ ಕಣ್ಣುಗಳಿಗೊಂದು ಹಬ್ಬ. ಪ್ರದೇಶದ ಹವಾಮಾನಗಳ ಬಗ್ಗೆ ಸ್ಥಳೀಯ ಕೃಷಿ ತಜ್ಞರಾದ ಪವನ್ ಪಾಂಡೆಯವರಿಂದ ಅಲ್ಲಿನ ಬೆಳೆಪದ್ಧತಿಗಳು, ಜನಜೀವನ, ಆಹಾರಶೈಲಿ, ಮಳೆಯ ಪ್ರಮಾಣ ಗಳನ್ನು ತಿಳಿದುಕೊಂಡ ಮರುದಿನ ‘ಹೌ ಟು ಓವರ್‌ಕಮ್ ದ ಫಾರ್ಮರ‍್ಸ್ ಇನ್ಕಮ್’ ವಿಷಯದಲ್ಲಿ ಉಪನ್ಯಾಸ ನೀಡಿ ದೀರ್ಘಾವಧಿ ಬೆಳೆಯಲ್ಲಿ ಶ್ರೀಗಂಧ
ಉತ್ತಮ ವಾದ ಬೆಳೆಯೆಂದು ತಿಳಿಸಿದ್ದೆ.

15-20 ವರ್ಷಗಳಲ್ಲಿ ಕೋಟಿ ಗಳಿಸಬಹುದು ಎನ್ನುವ ವಿಚಾರವನ್ನು ಮನಗಾಣುತ್ತಿದ್ದ ರೈತರಿಗೆ ಶ್ರೀಗಂಧ ತುಂಬಾ ಆಕರ್ಷಣೀಯವಾಗಿರುವುದರ ಜತೆಗೆ ನಾವು ಕೋಟಿ ಕಾಣದಿದ್ದರೂ ನಮ್ಮ ಮುಂದಿನ ಪೀಳಿಗೆ ಕಾಣಲಿದೆ ಎನ್ನುವ ಆಶಾಭಾವನೆಯಿತ್ತು. ಅವರು ಎಷ್ಟೇ ಕನಸುಗಳನ್ನು ಕಾಣುತ್ತಿದ್ದರೂ ಆ ಭಾಗದ ಹೆಚ್ಚಿನ
ಕೃಷಿಕರು ಸಣ್ಣ ಹಿಡುವಳಿದಾರರಾದ್ದರಿಂದ ಸಸಿಗಳ ಪೂರೈಕೆ ಕಷ್ಟವಾಗಿತ್ತು. ರೈತರ ಆಸೆಯಂತೆ ಅವರಿಗೆ ಸಸಿಗಳನ್ನು ನೀಡುವ ಇಚ್ಛೆ ನನ್ನಲ್ಲಿದ್ದ ಕಾರಣ, ಯಾರಾದರೂ ವಿದ್ಯಾವಂತರಾಗಿದ್ದು ಚಿಕ್ಕ ಹಿಡುವಳಿದಾರರಾಗಿದ್ದರೂ ಸಮಸ್ಯೆಯಿಲ್ಲ, ಆ ಯುವಕನಿಗೆ ಶ್ರೀಗಂಧ ತಯಾರಿಕೆಯ ತಂತ್ರಜ್ಞಾನವನ್ನು ನೀಡಿದರೆ ಸ್ಥಳೀಯ ರೈತರಿಗೆ ಇವನಿಂದಲೇ ಸಸಿಗಳು ಪೂರೈಕೆ ಮಾಡಬಹುದೆಂದು ವಿಚಾರ ಮಾಡಿ ಆ ದಿನವೇ ಡಾ. ಪವನ್ ಪಾಂಡೆಯವರೊಟ್ಟಿಗೆ ಮಾತನಾಡಿ
ಈ ವಿಚಾರವನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಪ್ರಸ್ತಾಪ ಮಾಡಿದ್ದೆ.

ತಕ್ಷಣ ಧನಾತ್ಮಕವಾಗಿ ಪ್ರತಿಕ್ರಿಯಿಸಿ, ಕಿರಣ್ ಶುಕ್ಲಾ ಹೆಸರಿನ ವ್ಯಕ್ತಿಗೆ ಆ ಜವಾಬ್ದಾರಿಯನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಕಿರಣ್ ಶುಕ್ಲಾನಿಗೆ ಸುಮಾರು ಎರಡು ತಿಂಗಳುಗಳ ಕಾಲ ನನ್ನದೇ ತೋಟದಲ್ಲಿ ಶ್ರೀಗಂಧದ ಬೀಜಗಳ ಆಯ್ಕೆ, ಬ್ರೀಡಿಂಗ್, ಬೆಡ್ ತಯಾರಿಕೆ, ಸಸಿಗಳ ಉತ್ಪಾದನೆ, ಪಾಲಿಥಾನ್
ಬ್ಯಾಗ್‌ಗಳಿಗೆ ಶಿಪ್ಟಿಂಗ್ ಮಾಡುವಂಥ ಕೆಲವು ಕೃಷಿ ತಂತ್ರಗಳನ್ನು ತಿಳಿಸಿಕೊಡುತ್ತಿದ್ದೆ, ಆ ಹುಡುಗನೂ ಹೇಳಿದ್ದನ್ನೆಲ್ಲಾ ನೋಟ್ ಮಾಡಿಕೊಳ್ಳುತ್ತ ತುಂಬಾ ಶ್ರದ್ಧೆ ಯಿಂದ ಕಲಿಯುತ್ತಿದ್ದ. ಎಲ್ಲವನ್ನೂ ಕಲಿತ ನಂತರ ತನ್ನ ಊರಿಗೆ ಹೋಗಿ ಶ್ರೀಗಂಧದ ನರ್ಸರಿಯನ್ನು ಪ್ರಾರಂಭಿಸಿ, ಊರಿನ ಅನೇಕ ರೈತರಿಗೆ ಕಡಿಮೆ ದರದಲ್ಲಿ ಸಸಿಗಳನ್ನು ನೀಡಿ ತಾನು ಹಣವನ್ನು ಸಂಪಾದಿಸುವುದರ ಜತೆಗೆ ಊರಿನ ನಾಲ್ಕು ಹೆಣ್ಣುಮಕ್ಕಳಿಗೆ ಕೆಲಸವನ್ನು ನೀಡಿದ್ದ.

ಈ ವಿಧಾನದಿಂದ ನಮ್ಮ ಹೆಮ್ಮೆಯ ಶ್ರೀಗಂಧ ಕರ್ನಾಟಕದಿಂದ ಉಳಿದ ರಾಜ್ಯಗಳಿಗೆ ವಿಸ್ತರಿಸುತ್ತಿದೆ. ಯಾವುದೇ ಬೆಳೆಯಾದರೂ ಒಂದು ರೂಪಾಯಿ ಖರ್ಚಿಲ್ಲದೆ ಬೆಳೆಯುವುದು ಅಸಾಧ್ಯ. ಶ್ರೀಗಂಧವನ್ನು ಬೆಳೆಸುವುದಕ್ಕೆ ಕೆಲವು ದುಬಾರಿ ವಿಧಾನಗಳೂ, ಕಡಿಮೆ ಖರ್ಚಿನಲ್ಲಿ ಕೆಲವು ಸರಳ ವಿಧಾನಗಳೂ ಇವೆ. ಕೃಷಿಗೆ ಯಾವ ಪ್ರಮಾಣದಲ್ಲಿ ಹಣವಿನಿಯೋಗ ಮಾಡುತ್ತೇವೆ ಅನ್ನೋದು ಆಯಾ ರೈತನ ಅನುಕೂಲಕ್ಕೆ ಬಿಟ್ಟದ್ದು. ಶ್ರೀಗಂಧವನ್ನು ಬೆಳೆಯುವ ಪ್ರಾರಂಭಿಕ ದಿನಗಳಲ್ಲಿ ಸರಳ ಮತ್ತು ಕಡಿಮೆ ಖರ್ಚಿನ ಬಗ್ಗೆಯೇ ಹೆಚ್ಚು ಒತ್ತು ನೀಡುವುದು ಉತ್ತಮ.

ನಾವು ಅದೆಷ್ಟೇ ಶ್ರಮಪಟ್ಟು ಶ್ರೀಗಂಧವನ್ನು ಉಳಿಸಿಕೊಂಡು ಬಂದ್ರೂ ಕೆಲವು ಗಿಡ/ಮರಗಳು ಇನ್ನೊಬ್ಬರ ಪಾಲಾಗಿಡುತ್ತವೆ. ಇದಕ್ಕೆ ಯಾರೂ ಕೂಡ ಹಿಂಜರಿ ಕೆಯ ಮನೋಭಾವವವನ್ನು ತಾಳುವ ಅಗತ್ಯವಿಲ್ಲ. 500 ಮರಗಳನ್ನು ನಾವು ಬೆಳೆದರೆ ಸುಮಾರು 50 ಮರಗಳು ಕಳ್ಳರ ಪಾಲಾಗಬಹುದು. ಉಳಿದ ೪೫೦ ಮರಗಳು ನಮಗೆ ದೊರೆತರೂ ನಾವು ಕೋಟ್ಯಧಿಪತಿಗಳೇ… ಕಾಲಚಕ್ರಕ್ಕೆ ಒಂದು ತೃಣವಾಗಿರೋ ನಮಗೆ ದಿನಗಳು ಉರುಳಿದಂತೆ ಮುಪ್ಪು ಆವರಿಸಿ ಕೊಳ್ಳೋದು ಜಗದ ನಿಯಮ. ಅದನ್ನ ಯಾರೂ ನಿಲ್ಲಿಸೋಕೆ ಸಾಧ್ಯವಿಲ್ಲ.

ನಮ್ಮ ಬಳಿ ಒಂದಿಷ್ಟು ಹಣ, ನಮ್ಮ ಹೆಸರಿನಲ್ಲಿ ಒಂದಿಷ್ಟು ಹೊಲ ಇದ್ರೆ ವಯಸ್ಸಾದ ನಂತರಾನೂ ನಮ್ಮನ್ನ ಸಾಕುವ ಜನ ಇರ್ತಾರೆ. ಅದೇ ಕೈಕಾಲು ಗಿಡ್ಡ
ಹೊಟ್ಟೆ ಡುಮ್ಮಣ್ಣನಾಗಿ ದೇಹದಲ್ಲಿನ ಶಕ್ತಿ ನಿಸ್ಸಾರವಾಯ್ತು ಅಂದ್ರೆ, ನಾವೇ ಹೆತ್ತ ಮಕ್ಕಳೂ ನಮ್ಮನ್ನ ದೂಷಣೆ ಮಾಡೋದಕ್ಕೆ ಪ್ರಾರಂಭ ಮಾಡ್ತಾರೆ. ಇಲ್ಲ ಸಲ್ಲದ ಆರೋಪಗಳನ್ನು ನಮ್ಮ ಮೇಲೆ ಮಾಡೋದಕ್ಕೆ ಕಾಯುತ್ತ ಕುಳಿತುಬಿಡ್ತಾರೆ. ಅಂತಹಾ ಸ್ಥಿತಿಗಳು ನಮಗೆ ಬಾರದಿರಲಿ, ನಮ್ಮ ಭವಿಷ್ಯವನ್ನ ಬಂಗಾರವಾಗಿಸುವ ಸಾಮರ್ಥ್ಯ ಶ್ರೀಗಂಧಕ್ಕಿದೆ, ಅದರ ಸದುಯಪಯೋಗವನ್ನು ಪಡೆದುಕೊಳ್ಳದಿದ್ದರೆ, ವಯಸ್ಸಾದ ನಂತರ ಮಕ್ಕಳು ಸೊಸೆಯರಿಂದ ನಮ್ಮ ಬಳಿ ಏನೂ ಇಲ್ಲವೆಂದು ಛೀಮಾರಿ ಹಾಕಿಸಿಕೊಳ್ಳುವ ದಿನಗಳು ಬಂದರೂ ಉತ್ಪ್ರೇಕ್ಷೆಯಿಲ್ಲ.

ಪುಟಾಣಿ, ಬಟಾಣಿ, ಶೇಂಗ, ಟೊಮೇಟೊ ಬೆಳೆಗಳನ್ನ ಕಳ್ಳತನ ಮಾಡುತ್ತಿದ್ದರೆ ವೀರಪ್ಪನ್ ಕುಖ್ಯಾತನಾಗುತ್ತಲೇ ಇದ್ದಿಲ್ಲ. ಅವನು ಕದ್ದಿದ್ದು ಶ್ರೀಗಂಧವನ್ನ. ನಾವು ಅಂತಹಾ ಶ್ರೀಗಂಧವನ್ನೇ ಬೆಳೆಯುತ್ತೇವೆ ಅಂದರೆ ನಮ್ಮ ಸಾಮರ್ಥ್ಯವನ್ನ ನೀವೇ ಅರ್ಥ ಮಾಡಿಕೊಳ್ಳಿ. ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ. ಇಡೀ ಜಗತ್ತಿಗೆ ಅನ್ನವನ್ನು ನೀಡುವ ನಮಗೆ ಇಡೀ ಜಗತ್ತನ್ನೇ ನಡುಗಿಸುವ ಸಾಮರ್ಥ್ಯವಿದೆ ಎನ್ನುವ ವಿಚಾರವನ್ನ ರೈತರು ಅರ್ಥ ಮಾಡಿ ಕೊಳ್ಳಬೇಕು. ಪೃಕೃತಿ ಮಾತೆಯನ್ನ ಅತ್ಯಂತ ಹತ್ತಿರದಿಂದ ಗಮನಿಸುತ್ತ, ಇರುವ ಒಂದು ಬೀಜದಿಂದ ಸಾವಿರ ಸಸಿಗಳನ್ನು ತಯಾರಿಸುತ್ತ ಎಷ್ಟೋ ಹೊಸ ಜೀವಗಳನ್ನು ಸೃಷ್ಟಿಸಿ, ಇನ್ನೆಷ್ಟೋ ಜೀವಿಗಳಿಗೆ ಆಹಾರವನ್ನು ನೀಡುವ ರೈತ ದೇವರನ್ನು ತುಂಬಾ ಹತ್ತಿರದಿಂದ ನೋಡಿರುತ್ತಾನೆ ಅಂತ ರವೀಂದ್ರನಾಥ ಟ್ಯಾಗೋರ್ ಹೇಳ್ತಾರೆ ನಮ್ಮ ಹಿಂಜರಿಕೆಯನ್ನು ಬಿಟ್ಟು ಕೃಷಿಭೂಮಿಗೆ ಧುಮಿಕಿದ್ರೆ ಎಷ್ಟು ಎತ್ತರಕ್ಕೆ ಬೇಕಿದ್ರೂ ಏರಬಹುದು ಅನ್ನೋದ್ರಲ್ಲಿ ನಿಸ್ಸಂಶಯ.