Wednesday, 1st February 2023

ಸಹಸ್ರಮಾನಗಳ ತಪ್ಪು ತಿದ್ದಿದ ವೆಸಾಲಿಯಸ್

ಹಿಂದಿರುಗಿ ನೋಡಿದಾಗ

ಆಧುನಿಕ ವೈದ್ಯವಿಜ್ಞಾನದ ಪಿತಾಮಹ ಗ್ರೀಸ್ ದೇಶದ ಹಿಪ್ಪೋಕ್ರೇಟ್ಸ್. ಈ ಜಗತ್ತು ಕಂಡ ಪ್ರತಿಭಾವಂತ ವೈದ್ಯರಲ್ಲಿ ಒಬ್ಬ ರೋಮನ್ ಸಾಮ್ರಾಜ್ಯದ ಗ್ಯಾಲನ್. ಹಿಪ್ಪೋಕ್ರೇಟ್ಸ್ ಮತ್ತು ಗ್ಯಾಲನ್ ಕಾಲಾವಧಿಯಲ್ಲಿ ಮಾನವ ಶರೀರ ವಿಚ್ಛೇದನ ಮತ್ತು
ಅಧ್ಯಯನಕ್ಕೆ ಅವಕಾಶವಿರಲಿಲ್ಲ.

ಬಾರ್ಬರಿ ಮಂಗಗಳು ಮತ್ತು ಇತರ ಪ್ರಾಣಿಗಳ ಶರೀರವನ್ನು ಛೇದಿಸಿ ಅಧ್ಯಯನ ಮಾಡಿದ ಗ್ಯಾಲನ್, ಅವುಗಳ ಶರೀರ ರಚನೆ ಯಂತೆಯೇ ಮಾನವ ಶರೀರವು ರಚನೆ ಯಾಗಿರಬೇಕು ಎನ್ನುವ ಅವೈಜ್ಞಾನಿಕ ಮತ್ತು ಅಪಾಯಕಾರಿ ತೀರ್ಮಾನಕ್ಕೆ ಬಂದ. ಅಂದು ಗ್ಯಾಲನ್ ಮಾಡಿದ ತಪ್ಪುಗಳು 1300 ವರ್ಷಗಳ ಕಾಲ ಪರಮಸತ್ಯವೆಂದು ಬಿಂಬಿತವಾದ ಪರಿಯು ಮಾನವ ಇತಿಹಾಸದ ಮಹಾನ್ ವಿಪರ್ಯಾಸಗಳಲ್ಲಿ ಒಂದಾಗಿದೆ.

ಹಿಪ್ಪೋಕ್ರೇಟ್ಸ್ ಮತ್ತು ಗ್ಯಾಲನ್ ಮಾಡಿದ್ದ ತಪ್ಪುಗಳನ್ನು ಆಂಡ್ರಿಯಸ್ ವೆಸಾಲಿಯಸ್ (1514-1564) ತೋರಿಸಿಕೊಟ್ಟು, ವಾಸ್ತವತೆ ಅನಾವರಣ ಮಾಡಿ, ಆಧುನಿಕ ಅಂಗರಚನಾ ವಿಜ್ಞಾನಕ್ಕೆ ಭದ್ರಬುನಾದಿ ಹಾಕಿದ. ಈತ 1543ರಲ್ಲಿ ಪ್ರಕಟಿಸಿದ ‘ಡಿ ಹ್ಯೂಮಿನಿ ಕಾರ್ಪೊರಸ್ ಫ್ಯಾಬ್ರಿಕ’ ಎಂಬ 7 ಸಂಪುಟಗಳ ಪುಸ್ತಕವು ಜ್ಞಾನ-ವಿಜ್ಞಾನ ಲೋಕದಲ್ಲಿ ಕ್ರಾಂತಿಯನ್ನೇ ಮಾಡಿತು. ವಿಜ್ಞಾನಿಗಳು ಪರಂಪರಾನುಗತವಾಗಿ ಬಂದ ಅರಿವನ್ನು ಕಣ್ಣುಮುಚ್ಚಿ ಪರಿಪಾಲಿಸುವುದನ್ನು ನಿಲ್ಲಿಸಿ, ಎಲ್ಲವನ್ನು ಪ್ರಶ್ನಿಸಿ, ಸಮಕಾಲೀನ ತಿಳಿವು ಮತ್ತು ಸ್ವಾನುಭವದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಹೊಸ ಪದ್ಧತಿ ಶುರುವಾಯಿತು.

ಯೂರೋಪಿನ ಪುನರುತ್ಥಾನದ (ರಿನೇಸಾನ್ಸ್) ಅಲೆಗೆ ಹೊಸ ಇಂಬುಕೊಟ್ಟಿತು. ಆಂಡ್ರಿಯಸ್ ವೆಸಾಲಿಯಸ್‌ನ ೫೦೦ನೆಯ ಜನ್ಮದಿನವನ್ನು 2014ರ ಡಿಸೆಂಬರ್ 31ರಂದು ವಿಶ್ವಾದ್ಯಂತ ಆಚರಿಸಲಾಯಿತು. ಆಂಡ್ರಿಯಸ್ ವೆಸಾಲಿಯಸ್ ಬ್ರಸೆಲ್ಸ್ ನಗರದಲ್ಲಿ ಹುಟ್ಟಿದ. ತಂದೆ ಆಂಡ್ರೀಸ್ ವಾನ್ ವೀಸಲ್. ತಾಯಿ ಇಸಬೆಲ್ ಕ್ರಾಬೆ. ಇಬ್ಬರು ಸೋದರರು, ಒಬ್ಬ ಸೋದರಿ. ತಂದೆಯು ಆಸ್ಟ್ರಿಯಾ ಸಾಮ್ರಾಜ್ಯದ ಒಡತಿ ಮಾರ್ಗರೆಟ್ಟಳ ಖಾಸಗಿ ಔಷಧಿಕಾರ ಆಗಿದ್ದ. ೬ನೆಯ ಹರೆಯದಲ್ಲಿ ಶಾಲೆ ಸೇರಿದ ವೆಸಾಲಿಯಸ್, ಗಣಿತ, ಲ್ಯಾಟಿನ್ ಮತ್ತು ಇತರ ಭಾಷೆಗಳನ್ನು ಕಲಿತ.

ತಂದೆಯು ಔಷಧಕಾರನಾಗಿದ್ದ ಕಾರಣ ಮನೆಯಲ್ಲಿ ಉತ್ತಮ ಗ್ರಂಥಭಂಡಾರವಿತ್ತು. ಅಲ್ಲಿದ್ದ ಪುಸ್ತಕಗಳನ್ನು ಓದಲಾರಂಬಿಸಿದ ವೆಸಾಲಿಯಸ್, ೧೫ ವರ್ಷಗಳಾಗುತ್ತಿರುವಂತೆ ಬ್ರಸೆಲ್ಸ್ ನಿಂದ ೩೦ ಕಿ.ಮೀ. ದೂರದ ಲೌವೇನ್ ವಿಶ್ವವಿದ್ಯಾಲಯವನ್ನು ಸೇರಿದ. ಇದು ತಂದೆ ಆಂಡ್ರೀಸ್‌ಗೆ ಸಂತಸ ತಂದಿತು. ಆಂಡ್ರೀಸ್ ಮದುವೆಯಾಗದವರಿಗೆ ಮಗನಾಗಿ ಹುಟ್ಟಿದ್ದ ಕಾರಣ, ಆತನಿಗೆ ವಿಶ್ವವಿದ್ಯಾಲಯದಲ್ಲಿ ಪ್ರವೇಶಾವಕಾಶ ದೊರೆತಿರಲಿಲ್ಲ.

ಲ್ಯಾಟಿನ್, ಗ್ರೀಕ್, ಹೀಬ್ರೂ ಭಾಷೆಗಳನ್ನು ಕಲಿತು ಕಲಾವಿಷಯದಲ್ಲಿ ಪದವಿ ಪಡೆದ ವೆಸಾಲಿಯಸ್, ನಂತರ ಪ್ಯಾರಿಸ್ ವಿಶ್ವ ವಿದ್ಯಾಲಯ ಸೇರಿ ವೈದ್ಯಕೀಯದ ಅಭ್ಯಾಸದಲ್ಲಿ ತೊಡಗಿದ. ಆಗ ಆತನಿಗೆ ೧೯ ವರ್ಷಗಳು. ಆ ಕಾಲಘಟ್ಟದಲ್ಲಿ, 1300 ವರ್ಷಗಳ ಹಿಂದೆ ಗ್ಯಾಲನ್ ಬರೆದಿದ್ದನ್ನೇ ಸಾರ್ವಕಾಲಿಕ ಸತ್ಯವೆಂದು ಇಡೀ ಯೂರೋಪ್ ಮಾನ್ಯ ಮಾಡಿತ್ತು. ಆತನನ್ನು ಪ್ರಶ್ನಿಸುವ
ಎದೆಗಾರಿಕೆ ಯಾರಿಗೂ ಇರಲಿಲ್ಲ. ಅಂದಿನ ವೈದ್ಯರು ಗ್ಯಾಲನ್ ಬರೆದಿರುವುದನ್ನು ಚಾಚೂ ತಪ್ಪದಂತೆ ಪರಿಪಾಲಿಸುತ್ತಿದ್ದರು.

ಪ್ಯಾರಿಸ್ ವಿ.ವಿ.ಯಲ್ಲಿ ಜೊಹಾನ್ ವಿಂಟರ್ (ಗುಂಥರ್) ವಾನ್ ಆಂಡೆರ್ನಾಚ್ ಎಂಬ ವೈದ್ಯ ಪ್ರಾಧ್ಯಾಪಕನಾಗಿದ್ದ. ಇವನು ದೊರೆತದ್ದು ವೆಸಾಲಿಯಸ್‌ನ ಅದೃಷ್ಟವೆನ್ನಬೇಕು. ಅಂದಿನ ದಿನಗಳಲ್ಲಿ ವೈದ್ಯರೆನಿಸಿಕೊಂಡವರು ಶವವಿಚ್ಛೇದನ ಮಾಡು ತ್ತಿರಲಿಲ್ಲ. ಅಧ್ಯಾಪಕನು ಗ್ಯಾಲನ್ ಬರೆದ ಭಾಗವನ್ನು ಓದುತ್ತಿದ್ದ, ಕಟುಕನೊಬ್ಬ ದೇಹವನ್ನು ಛೇದಿಸುತ್ತಿದ್ದ. ಛೇದಿಸಲ್ಪಟ್ಟ ಭಾಗಗಳನ್ನು ಸಹಾಯಕನೊಬ್ಬ ವಿದ್ಯಾರ್ಥಿಗಳಿಗೆ ತೋರಿಸುತ್ತಿದ್ದ. ವಿದ್ಯಾರ್ಥಿಗಳು ಯಾವುದೇ ರೀತಿಯ ಅನುಮಾನಗಳನ್ನು ವ್ಯಕ್ತಪಡಿಸುವಂತಿರಲಿಲ್ಲ, ಪ್ರಶ್ನಿಸುವಂತಿರಲಿಲ್ಲ. ಏಕೆಂದರೆ ಗ್ಯಾಲನ್ ಬರಹವು ಪ್ರಶ್ನಾತೀತ ಎಂದು ಅಂದಿನವರು ನಂಬಿದ್ದರು.

ಈ ಪದ್ಧತಿಯನ್ನು ಅವೈಜ್ಞಾನಿಕವೆಂದ ಆಂಡೆರ್ನಾಚ್, ವಿದ್ಯಾರ್ಥಿಗಳೇ ಶವವನ್ನು ವಿಚ್ಛೇದಿಸಿ ಅಂಗರಚನೆ ಕಲಿಯಲು ಪ್ರೋತ್ಸಾಹಿಸಿದ. ಇದನ್ನು ಇತರರು ಪ್ರತಿಭಟಿಸಿದರೂ, ಆಂಡ್ರೆನಾಚ್ ಲೆಕ್ಕಿಸಲಿಲ್ಲ. ಹಾಗಾಗಿ ವೆಸಾಲಿಯಸ್ ಉತ್ಸಾಹದಿಂದ ಶವವನ್ನು ವಿಚ್ಛೇದಿಸಿ ಸೊಗಸಾಗಿ ಅಂಗರಚನೆಯನ್ನು ವಿವರಿಸಲಾರಂಭಿಸಿದ. ‘ಇನ್‌ಸ್ಟಿಟ್ಯೂಟನೆಸ್ ಅನಟಾಮಿಕೆ’ ಎಂಬ ಪುಸ್ತಕವನ್ನು ಆಂಡೆರ್ನಾಚ್ ಬರೆಯುತ್ತಿದ್ದ ಕಾರಣ, ವೆಸಾಲಿಯಸ್‌ನನ್ನು ಸಹಾಯಕನಾಗಿ ನೇಮಿಸಿಕೊಂಡ.

ಹಾಗಾಗಿ ಗ್ಯಾಲನ್ ಬರೆದಿರುವುದು ಸರಿಯೋ ತಪ್ಪೋ ಎನ್ನುವುದನ್ನು ಪರೀಕ್ಷಿಸಿ ತಿಳಿಯಲು ಸಾಧ್ಯವಾಯಿತು. ಆದರೆ ಫ್ರಾನ್ಸ್ ಮತ್ತು ರೋಮನ್ ಸಾಮ್ರಾಜ್ಯದ ನಡುವೆ ಯುದ್ಧ ಶುರುವಾದ ಕಾರಣ ಪ್ಯಾರಿಸ್ಸನ್ನು ಬಿಟ್ಟ ವೆಸಾಲಿಯಸ್, ವೈದ್ಯಕೀಯ ವಿದ್ಯಾ ಭ್ಯಾಸವನ್ನು ಪೂರ್ಣಗೊಳಿಸಲು ಲೌವೇನ್ ವಿಶ್ವವಿದ್ಯಾಲಯಕ್ಕೆ ಹಿಂದಿರುಗಿದ. ೧೮ ವರ್ಷದ ಶ್ರೀಮಂತೆಯೊಬ್ಬಳು ಹಠಾತ್ತನೆ ಮರಣಿಸಿದಾಗ ಆಕೆಯ ಶವವಿಚ್ಛೇದನವಾಗಬೇಕಾಗಿತ್ತು.

ಲೌವೇನ್ ನಲ್ಲಿದ್ದ ವೈದ್ಯನಿಗೆ ಅಗತ್ಯ ಕುಶಲತೆಯಿರಲಿಲ್ಲ. ಹಾಗಾಗಿ ವೆಸಾಲಿಯಸ್ ಮುಂದೆ ಬಂದ. ಅವನ ಕೈಚಳಕವನ್ನು
ಎಲ್ಲರೂ ಹೊಗಳಲಾರಂಭಿಸಿದರು. ಆದರೆ ವೆಸಾಲಿಯಸ್‌ಗೆ ತನ್ನ ತಿಳಿವಿನ ಬಗ್ಗೆ ಅಂಥ ಹೆಮ್ಮೆಯಿರಲಿಲ್ಲ. ತಾನಿನ್ನೂ ಕಲಿಯ ಬೇಕಿದೆ ಎಂದೇ ಭಾವಿಸಿದ್ದ. ಆದರೆ ವಿಚ್ಛೇದನಕ್ಕೆ ಶವಗಳು ಸುಲಭವಾಗಿ ದೊರೆಯುತ್ತಿರಲಿಲ್ಲ. ಒಮ್ಮೆ ಊರ ಹೊರಗೆ ಅನಾಥ ಶವವೊಂದು ಬಿದ್ದಿದೆಯೆಂದು ವೆಸಾಲಿಯಸ್ಸನ ಗೆಳೆಯ ಹೇಳಿದಾಗ, ರಾತ್ರಿಯೇ ಹೋಗಿ, ಸದ್ದಿಲ್ಲದಂತೆ ಶವವನ್ನು ತಂದು ವಿಚ್ಛೇದಿಸಿದ.

ನಂತರ ಅದರ ಮೂಳೆಗಳನ್ನೆಲ್ಲ ಪ್ರತ್ಯೇಕಿಸಿ, ಜಗತ್ತಿನ ಮೊತ್ತಮೊದಲ ಅಸ್ಥಿ ಪಂಜರವನ್ನು ಸಿದ್ಧಗೊಳಿಸಿದ. ಕೇಳಿದವರಿಗೆ ಇದನ್ನು ಪ್ಯಾರಿಸ್ಸಿನಿಂದಲೇ ತಂದಿರುವುದಾಗಿ ಸುಳ್ಳನ್ನು ಹೇಳಿದ. ಈ ಅಸ್ಥಿಪಂಜರ ಇಂದಿಗೂ ಬಾಸೆಲ್ ವಿಶ್ವವಿದ್ಯಾಲಯದ ಅಂಗರಚನಾ ವಸ್ತುಸಂಗ್ರಹಾಲಯದಲ್ಲಿದೆ. ವೆಸಾಲಿಯಸ್ ೨೨ನೆಯ ವಯಸ್ಸಿನಲ್ಲಿ ವೈದ್ಯಕೀಯ ಸ್ನಾತಕ ಪದವಿ ಪಡೆದ. ನಂತರ
ಉನ್ನತ ಶಿಕ್ಷಣಕ್ಕೆಂದು ಇಟಲಿಯ ಪಡುವ ವಿಶ್ವವಿದ್ಯಾಲಯಕ್ಕೆ ಬಂದ.

ಅಲ್ಲಿ ಅಂಗವಿಚ್ಛೇದನದಲ್ಲಿನ ಇವನ ಪ್ರತಿಭೆ ಕಂಡು ಅಂತಿಮ ಪರೀಕ್ಷೆಗೆ ನೇರವಾಗಿ ಕುಳಿತುಕೊಳ್ಳಲು ವಿಶೇಷ ಅನುಮತಿ ನೀಡಿದರು. ಅದರಲ್ಲಿ ವೆಸಾಲಿಯಸ್ ಉತ್ತೀರ್ಣ ನಾಗುತ್ತಿದ್ದಂತೆ ವಿಶ್ವವಿದ್ಯಾಲಯದ ಅನಾಟಮಿ ಮತ್ತು ಶಸ್ತ್ರ ವೈದ್ಯಕೀಯದ ಪ್ರಾಚಾರ್ಯನನ್ನಾಗಿ ಆಯ್ಕೆ ಮಾಡಿದರು. ಆಗ ವೆಸಾಲಿಯಸ್‌ಗೆ ಕೇವಲ ೨೩ ವರ್ಷ!

ಪ್ರಾಚಾರ್ಯನಾಗಿ ೧ ವರ್ಷ ಕೆಲಸ ಮಾಡಿದ ವೆಸಾಲಿಯಸ್, ಒಮ್ಮೆ ಸಾರ್ವಜನಿಕವಾಗಿ ಮಾನವ ದೇಹವನ್ನು ವಿಚ್ಛೇದಿಸಿ ವಿವರಿಸಿದ. ಅಂಗರಚನೆಯನ್ನು ಅರ್ಥಮಾಡಿಕೊಳ್ಳಲು ‘ಟ್ಯಾಬುಲೆ ಅನಟಾಮಿಕೆ ಸೆಕ್ಸ್’ ಎನ್ನುವ ಪುಸ್ತಕವನ್ನು ಪ್ರಕಟಿಸಿದ. ಅದು ಅಪಾರ ಪ್ರಸಿದ್ಧಿ ಪಡೆಯಿತು. ಪಡುವ ನಗರದ ಓರ್ವ ನ್ಯಾಯಾಧೀಶನಿಗೆ ಅಂಗರಚನಾ ವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಮೂಡಿ,
ಮರಣದಂಡನೆಗೆ ಒಳಗಾದವರ ಶವಗಳನ್ನು ವೆಸಾಲಿಯಸ್ ಗೆ ನೀಡಲಾರಂಭಿಸಿದ. ಈ ವೇಳೆಗೆ ವೆಸಾಲಿಯಸ್‌ಗೆ ಗ್ಯಾಲನ್
ಮಾಡಿರುವ ತಪ್ಪುಗಳೆಲ್ಲ ಮನದಟ್ಟಾಗಿದ್ದವು. ಆದರೆ ಪ್ರಮಾಣಿಸಿ ತೋರಿಸಿದರೂ ಅವನ ಸಮಕಾಲೀನರು ಗ್ಯಾಲನ್ ತಪ್ಪು ಮಾಡಿಲ್ಲವೆಂದೇ ವಾದಿಸಿದರು, ಗ್ಯಾಲನ್ ಕಾಲದಲ್ಲಿದ್ದ ಮನುಷ್ಯರ ಶರೀರ ರಚನೆ ಈಗ ಬದಲಾಗಿದೆ ಎಂಬ ಒಡ್ಡುವಾದವನ್ನೂ ಮಂಡಿಸಿದರು.

೨೫ರ ಹರೆಯದಲ್ಲಿ ವೆಸಾಲಿಯಸ್ ‘ಡಿ ಹ್ಯೂಮನಿ ಕಾರ್ಪೊರಸ್ ಫ್ಯಾಬ್ರಿಕ’ ಎಂಬ ಪುಸ್ತಕವನ್ನು ಬರೆಯಲಾರಂಭಿಸಿದ. 1543ರ ವೇಳೆಗೆ ಅದು ಸಿದ್ಧವಾಯಿತು, ಹಸ್ತಪ್ರತಿಯೊಡನೆ ಸ್ವಿಜರ್ಲೆಂಡಿನ ಬಾಸೆಲ್ ನಗರಕ್ಕೆ ಹೊರಟ. ಈ ಪುಸ್ತಕದಲ್ಲಿ ಮೊದಲ ಬಾರಿಗೆ
ವೈದ್ಯಕೀಯ ಇತಿಹಾಸದಲ್ಲಿ ಮಾನವ ಶರೀರ ರಚನೆಯ ಎಲ್ಲ ಘಟ್ಟಗಳನ್ನು ಕಣ್ಣಿಗೆ ಕಟ್ಟುವಂತೆ ತೋರುವ 270 ಸುಂದರ
ಚಿತ್ರಗಳಿದ್ದವು. ಪುಸ್ತಕವು ದುಬಾರಿಯಾಗಿತ್ತು. ವೃತ್ತಿಪರ ವೈದ್ಯರು, ಗ್ರಂಥಾಲಯಗಳು, ಶ್ರೀಮಂತರು ಮಾತ್ರ ಅದನ್ನು ಕೊಳ್ಳಲು ಸಾಧ್ಯವಿತ್ತು. ಹಾಗಾಗಿ ಅಂಗರಚನೆಯಲ್ಲಿ ಆಸಕ್ತಿಯಿರುವ ಶ್ರೀಸಾಮಾನ್ಯರಿಗೂ ಉಪಯುಕ್ತವಾಗಬಲ್ಲ ಎಪಿಟೋಮ್ ಎನ್ನುವ ಲಘು ಆವೃತ್ತಿಯನ್ನು ಬಿಡುಗಡೆ ಮಾಡಿದ.

ವೆಸಾಲಿಯಸ್‌ನ ಪುಸ್ತಕದಲ್ಲಿ ಪ್ರಧಾನವಾಗಿ ಪುರುಷನ ಅಂಗರಚನೆಯ ವಿವರಗಳಿದ್ದವು. ಸ್ತ್ರೀ ಅಂಗರಚನೆಯ ವಿವರಗಳು ಸೀಮಿತವಾಗಿದ್ದವು. ಏಕೆಂದರೆ ಮರಣದಂಡನೆಗೆ ಗುರಿಯಾಗುವ ಸೀಯರ ಪ್ರಮಾಣ ಸೀಮಿತವಾಗಿತ್ತು. ವೆಸಾಲಿಯಸ್ ಕಣ್ಣಾರೆ ಕಂಡದ್ದನ್ನು ಮಾತ್ರ ಬರೆದ, ವೈಜ್ಞಾನಿಕ ತರ್ಕಕ್ಕೆ ಅವಕಾಶ ನೀಡಲಿಲ್ಲ. ಹಿಪ್ಪೋಕ್ರೇಟ್ ಮತ್ತು ಗ್ಯಾಲನ್ ಮಾಡಿದ ಕೆಲವು ತಪ್ಪುಗಳು ಹೀಗಿದ್ದವು: ಮನುಷ್ಯನ ಹೃದಯವು ಯಾವುದೇ ಮೂಳೆಯ ಮೇಲೆ ನಿಂತಿಲ್ಲ. ಗ್ಯಾಲನ್ ಜಿಂಕೆಗಳ ಹೃದಯವನ್ನು
ಅಧ್ಯಯನ ಮಾಡಿ, ಅಲ್ಲಿರುವಂಥ ರಚನೆಯು ಮನುಷ್ಯರಲ್ಲಿ ಇದೆಯೆಂದಿದ್ದ.

ಎದೆಮೂಳೆ ಅಥವ ಸ್ಟೆರ್ನಮ್ ೩ ಭಾಗಗಳಿಂದಾದ ರಚನೆ. ವಾನರಗಳ ಎದೆಮೂಳೆಯಲ್ಲಿ 7 ಭಾಗಗಳಿವೆ. ಹಾಗಾಗಿ ಮನುಷ್ಯ ರಲ್ಲೂ ೭ ಮೂಳೆಗಳಿವೆ ಎಂದು ತೀರ್ಮಾನಿಸಿದ್ದ. ಹೃದಯದ ನಡುತಡಿಕೆಯಲ್ಲಿ ಅದೃಶ್ಯ ರಂಧ್ರಗಳಿವೆ ಎಂದಿದ್ದ. ವೆಸಾಲಿಯಸ್ ನಡುತಡಿಕೆಯಲ್ಲಿ ಯಾವುದೇ ರಂಧ್ರಗಳಿಲ್ಲದಿರುವುದನ್ನು ತೋರಿದ. ಹೃದಯದ ಮಹಾಸಿರೆಗಳು (ವೆನಾಕೇವ) ಯಕೃತ್ತಿನಿಂದ ಹುಟ್ಟುತ್ತವೆ ಎಂದಿದ್ದ ಗ್ಯಾಲನ್. ವಾಸ್ತವದಲ್ಲಿ ಮೇಲಿನ ಮಹಾಸಿರೆ (ಸುಪೀರಿಯರ್ ವೆನಾಕೇವ) ಹಾಗೂ ಕೆಳಗಿನ ಮಹಾಸಿರೆಯು (ಇನ್‌ಫೀರಿಯರ್ ವೆನಾಕೇವ) ಹೃದಯದ ಭಾಗಗಳು.

ಮಹಿಳೆಯರಿಗಿಂತ ಪುರುಷರಲ್ಲಿ ಕಡಿಮೆ ಪಕ್ಕೆಲುಬುಗಳಿರುತ್ತವೆ ಎನ್ನುವುದನ್ನು ಸುಳ್ಳೆಂದು ತೋರಿದ (ಬೈಬಲ್ಲಿನಲ್ಲಿ ಪುರುಷನ ಪಕ್ಕೆಲುಬಿನಿಂದ ಸ್ತ್ರೀಯರನ್ನು ರಚಿಸಿದ ಕಥೆಯಿದೆ) ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಹಲ್ಲುಗಳಿರುತ್ತವೆ ಎಂದಿರುವು ದನ್ನು ಸುಳ್ಳೆಂದು ನಿರೂಪಿಸಿದ. ಸ್ತ್ರೀ -ಪುರುಷರಿಬ್ಬರಲೂ ಹಲ್ಲುಗಳ ಪ್ರಮಾಣವುಏಕರೂಪವಾಗಿರುತ್ತದೆ. ವಿಜ್ಞಾನದಲ್ಲಿ ಕಲ್ಪನೆಗೆ ಅವಕಾಶವಿಲ್ಲ. ಒಂದು ಪ್ರಾಣಿಯ ಅಧ್ಯಯನವನ್ನು ಮತ್ತೊಂದು ಪ್ರಾಣಿಗೆ ಅನ್ವಯಿಸಲಾಗುವುದಿಲ್ಲ. ಪ್ರತಿ ಯೊಂದನ್ನು ಕಣ್ಣಾರೆ ಕಂಡು, ಪ್ರಮಾಣಿಸಿ ನಂಬಬೇಕು ಎನ್ನುವ ಸತ್ಯವನ್ನು ಜಗತ್ತಿಗೆ ಸಾರಿದ ವೆಸಾಲಿಯಸ್ ನಿಜಕ್ಕೂ ಅಮರ ನಾಗಿದ್ದಾನೆ.

error: Content is protected !!