Tuesday, 9th August 2022

ಪರಿಷತ್ ಫೈಟ್: ಶರಣು ತಳ್ಳಿಕೇರಿಗೆ ಟಿಕೆಟ್ ಸಾಧ್ಯತೆ

– ವರಿಷ್ಠರ ಬಳಿ ಇವೆ ೨ ಹೆಸರು
– ಸ್ಥಳೀಯರಲ್ಲದ ವಿಶ್ವನಾಥ ಬನ್ನಟ್ಟಿ ರೇಸ್‌ನಲ್ಲಿ

ಬಸವರಾಜ ಕರ್ಕಿಹಳ್ಳಿ, ಕೊಪ್ಪಳ

ಕೊಪ್ಪಳ-ರಾಯಚೂರು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆ ಡಿ. ೧೦ಕ್ಕೆ ನಿಗದಿ ಯಾಗಿದೆ. ನ. ೧೬ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರ ಎಣೆದಿವೆ. ವೀಕ್ಷಕರ ಸಭೆ ನಡೆಸುವ ಮೂಲಕ ತನ್ನದೇ ಆದ ಕಾರ್ಯ ಯೋಜನೆ ರೂಪಿಸಿರುವ ಬಿಜೆಪಿ ಇದೀಗ ಅಂತಿಮವಾಗಿ ೨ ಹೆಸರು ವರಿಷ್ಠರ ಬಳಿಗೆ ಕಳುಹಿಸಿದೆ.

ಈಗಾಗಲೇ ಬಿಜೆಪಿ ವೀಕ್ಷಕರ ಸಭೆ ನಡೆಸಿ ಟಿಕೆಟ್ ಯಾರಿಗೆ ನೀಡಬೇಕು ಎಂದು ಎರಡೂ ಜಿಲ್ಲೆಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸಿದೆ. ಬಿಜೆಪಿ ವರಿಷ್ಠರ ಕೈಗೆ ೨ ಹೆಸರುಗಳನ್ನು ಕಳುಹಿಸಿದ್ದು, ಸಿ.ವಿ. ಚಂದ್ರಶೇಖರ್ ಸ್ಪರ್ಧೆಗೆ ನಿರಾಕರಿಸಿದ ಕಾರಣಕ್ಕೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದವರಾದ ವಿಶ್ವನಾಥ ಬನ್ನಟ್ಟಿ ಎನ್ನುವವರ ಹೆಸರನ್ನು ವರಿಷ್ಠರ ಬಳಿಗೆ ಕಳುಹಿಸಿದ ಮಾಹಿತಿ ವಿಶ್ವವಾಣಿಗೆ ದೊರೆತಿದೆ. ಈ ಪೈಕಿ ಯಾರಿಗೆ ಅಂತಿಮವಾಗಿ ಟಿಕೆಟ್ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಶರಣುಗೆ ಅವಕಾಶ ಹೆಚ್ಚು: ೨೦೦೩ರಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವ ಹಾಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನುವುದು ತಿಳಿದುಬಂದಿದೆ. ಶರಣು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ೨೦೧೮ರ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ೫ ಕ್ಷೇತ್ರಗಳ ಪೈಕಿ ಮೂರರಲ್ಲಿ ಪಕ್ಷ ಗೆಲ್ಲಲು ಇವರ ಪಾತ್ರ ಸಹ ಇದೆ. ಅಲ್ಲದೆ ರಾಜ್ಯ ಕಾರ್ಯಕಾರಣಿ ಸದಸ್ಯ ರಾಗಿ ಇದೀಗ ನಿಗಮದ ಅಧ್ಯಕ್ಷರಾಗಿ ರಾಜ್ಯಾದ್ಯಂತ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಎಲ್ಲರಿಗೂ ಚಿರ ಪರಿಚಿತರಾಗಿದ್ದಾರೆ. ಹೀಗಾಗಿ ಇವರಿಗೆ ಅವಕಾಶ ನೀಡಿದರೆ ಉತ್ತಮ ಎನ್ನುವುದು ಪಕ್ಷದ ಅಭಿಪ್ರಾಯ.

ಶರಣು ತಳ್ಳಿಕೇರಿ ಕುರುಬ ಸಮುದಾಯಕ್ಕೆ ಸೇರಿದ್ದು, ಯುವಕರೂ ಆಗಿದ್ದಾರೆ. ಪಕ್ಷ ಸಂಘಟನೆ ಜೊತೆಗೆ ಅಭಿವೃದ್ಧಿ ನಿಗಮದಲ್ಲಿ ಹಲವು ಉತ್ತಮ ಕಾರ್ಯ ಮಾಡಿರುವುದು ಇವರ ಗೆಲುವಿಗೆ ಸಹಕಾರಿಯಾಗಲಿದೆ. ಕೆ.ಆರ್. ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ನೀಡಿದ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಿ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರುಳುವಂತೆ ಮಾಡುವಲ್ಲಿ ಇವರ ಪಾತ್ರ ಕೂಡ ದೊಡ್ಡದಿದೆ ಎನ್ನುವುದು ಪಕ್ಷದ ಮುಖಂಡರ ಮಾತು. ಈ ಅಂಶಗಳು ಶರಣುಗೆ ಟಿಕೆಟ್ ನೀಡುವಲ್ಲಿ ಪರಿಗಣನೆ ಆಗಲಿವೆ ಎನ್ನುತ್ತಾರೆ ಕಮಲ ನಾಯಕರು.

ಹೊಸ ಮುಖ: ಇನ್ನು ಲಿಕ್ಕರ್ ಉದ್ಯಮಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ವಿಶ್ವನಾಥ ಬನ್ನಟ್ಟಿ ಹೆಸರು ಸಹ ಇದೆ. ವಿಶ್ವನಾಥ ಎರಡೂ ಜಿಲ್ಲೆಗೆ ಹೊಸಮುಖ. ಪಕ್ಷದ ಯಾವ ಜವಾಬ್ದಾರಿ ಸಹ ಇಲ್ಲ. ಪಕ್ಷಕ್ಕಾಗಿ ದುಡಿಯುವ ಕೆಲಸವನ್ನೂ ಮಾಡಿಲ್ಲ. ಆದರೆ ರಾಯಚೂರು ಶಾಸಕ ಶಿವನಗೌಡ ನಾಯಕ ಸೇರಿ ಇನ್ನು ಕೆಲ ಶಾಸಕರು, ರಾಯಚೂರು ಮುಖಂಡರು ಇವರಿಗೆ ಟಿಕೆಟ್ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಪಕ್ಷಕ್ಕಾಗಿ ದುಡಿಯದೇ ನೇರವಾಗಿ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಕಾರ್ಯಕರ್ತರಿಗೆ ಬೇರೆಯದೇ ಸಂದೇಶ ಹೋಗುತ್ತದೆ ಎನ್ನುವ ಆತಂಕ ಕೂಡ ಪಕ್ಷಕ್ಕಿದೆ. ಇತ್ತೀಚಿನ ಉಪಚುನಾವಣೆಯಲ್ಲಿ ಕಾರ್ಯಕರ್ತರ, ಜಿಲ್ಲಾ ಮಟ್ಟದ ಮುಖಂಡರ ಮಾತು ಪರಿಗಣಿಸದೇ ಏಕಾಏಕಿ ನಿರ್ಧಾರ ತೆಗೆದುಕೊಂಡ ಕಾರಣ ಸೋಲು ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಿ ಪಕ್ಷ ಸೂಕ್ತ ವ್ಯಕ್ತಿಗೆ ಟಿಕೆಟ್ ನೀಡಲಿದೆ ಎಂಬ ಮಾಹಿತಿ ಇದೆ.

ಫಾರ್ವರ್ಡ್-ಬ್ಯಾಕ್ವರ್ಡ್ ಕಾಂಬಿನೇಷನ್..
ಪಕ್ಕದ ಬಳ್ಳಾರಿ ಜಿಲ್ಲೆಯ ಕ್ಷೇತ್ರಕ್ಕೆ ಲಿಂಗಾಯತ ರಡ್ಡಿ ಸಮುದಾಯ ಸತೀಶ್ ಎನ್ನುವವರಿಗೆ ಬಿಜೆಪಿ ಮಣೆ ಹಾಕಲಿದೆ. ಅಲ್ಲಿ ಫಾರ್ವರ್ಡ್ ಸಮುದಾಯಕ್ಕೆ ಅವಕಾಶ ನೀಡಿದರೆ ಇಲ್ಲಿ ಹಿಂದುಳಿದ ವರ್ಗಕ್ಕೆ ನೀಡಲೇಬೇಕಿದೆ. ಹೀಗಾಗಿ ಪಕ್ಷ ಈ ಕಾಂಬಿನೇಷನ್‌ ನಲ್ಲಿ ಚುನಾವಣೆ ಎದುರಿಸಲಿದೆ ಎನ್ನಲಾಗಿದೆ. ಒಬಿಸಿಗೆ ಸೇರಿದ ಶರಣು ಅವರಿಗೆ ಈ ಹಿನ್ನೆಲೆಯಲ್ಲಿ ಅವಕಾಶ ಸಿಗುವ ಎಲ್ಲಾ ಸಾಧ್ಯತೆ ಇದೆ ಎನ್ನುವುದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.