Monday, 3rd October 2022

ಬರಾಕ್‌ – ೮ ಕ್ಷಿಪಣಿ ಖರೀದಿಗೆ ವಿಯೆಟ್ನಾಂ ಉತ್ಸುಕ

ಕದನ ಕುತೂಹಲ 

ಗಿರೀಶ್ ಲಿಂಗಣ್ಣ

ಭಾರತದಿಂದ ಬರಾಕ್-8 ಕ್ಷಿಪಣಿ ವ್ಯವಸ್ಥೆ ಖರೀದಿಸಲು ವಿಯೆಟ್ನಾಂ ಉತ್ಸುಕವಾಗಿರುವುದರ ಹಿಂದೆ, ಚೀನಾ ಆಕ್ರಮಣ ದಿಂದ ತನ್ನ ವಾಯುಪ್ರದೇಶವನ್ನು ಕಾಪಾಡಿಕೊಳ್ಳುವ ಉದ್ದೇಶವಷ್ಟೇ ಇಲ್ಲ; ಕ್ಷಿಪಣಿ ಅಭಿವೃದ್ಧಿಯಲ್ಲಿ ಭಾರತದ ಪಾತ್ರವಿರುವುದೂ ಈ ಖರೀದಿಗಿರುವ ಪ್ರಮುಖ ಕಾರಣ.

ಭಾರತ ತನ್ನ ರಕ್ಷಣಾ ಉಪಕರಣಗಳಿಗೆ ವಿದೇಶಿ ಆಮದಿನ ಮೇಲೆ ಅವಲಂಬಿತವಾಗಿತ್ತು. ದಶಕಗಳ ಕಾಲ ಕ್ಷಿಪಣಿ, ಯುದ್ಧನೌಕೆ ಮತ್ತು ವಿಮಾನಗಳು ಸೇರಿದಂತೆ ಬಹುತೇಕ ರಕ್ಷಣಾ ಉಪಕರಣಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಬದಲಾ ಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾರತವು ರಕ್ಷಣಾ ಉಪಕರಣಗಳ ರಫ್ತುದಾರ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗುತ್ತಿದೆ.

ಭಾರತದಿಂದ ಇವನ್ನು ಪಡೆಯಲು ಹಲವು ರಾಷ್ಟ್ರಗಳು ತುದಿಗಾಲಲ್ಲಿ ನಿಂತಿವೆ. ಇತ್ತೀಚಿನ ಒಂದು ವರದಿಯ ಪ್ರಕಾರ, ಭಾರತ-  ಇಸ್ರೇಲ್ ಜಂಟಿ ಸಹಯೋಗದಲ್ಲಿ ನಿರ್ಮಿಸಿರುವ ಬರಾಕ್-8 ಕ್ಷಿಪಣಿಯನ್ನು ಭಾರತದಿಂದ ಖರೀದಿಸಲು ಏಷ್ಯಾದ ಮತ್ತೊಂದು ರಾಷ್ಟ್ರ ವಿಯೆಟ್ನಾಂ ಉತ್ಸುಕವಾಗಿದೆ. ಚೀನಾದ ಆಕ್ರಮಣಕಾರಿ ಪ್ರವೃತ್ತಿ ಯಿಂದ ತನ್ನನ್ನು ರಕ್ಷಿಸಿಕೊಳ್ಳಲು ವಿಯೆಟ್ನಾಂ ಈ ನಿಟ್ಟಿನಲ್ಲಿ ಆಲೋಚಿಸುತ್ತಿದೆ ಎಂಬುದು ಗಮನಾರ್ಹ. ಕಳೆದ ಮೂರು ದಶಕಗಳಲ್ಲಿ ಭಾರತ ಮತ್ತು ವಿಯೆಟ್ನಾಂ ರಕ್ಷಣಾ ಕ್ಷೇತ್ರ ದಲ್ಲಿ ಸಕ್ರಿಯ ಪಾಲುದಾರ ರಾಷ್ಟ್ರಗಳಾಗಿ ರೂಪುಗೊಂಡಿವೆ.

ಈಗ್ಗೆ ಕೆಲವು ವರ್ಷಗಳ ಹಿಂದಷ್ಟೇ ಸ್ವರಕ್ಷಣೆಗೆ ಬೇಕಾಗುವ ಆಯುಧಗಳಿಗಾಗಿ ಭಾರತ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಆದರೆ, ಕಳೆದ ೮ ವರ್ಷಗಳ ಅವಧಿಯಲ್ಲಿ ಭಾರತದ ದೇಶೀಯ ರಕ್ಷಣಾ ಉತ್ಪಾದನಾ ಕ್ಷೇತ್ರ ಅಪಾರ ಅಭಿವೃದ್ಧಿ ಹೊಂದಿದ್ದು, ರಕ್ಷಣಾ ಉಪಕರಣಗಳನ್ನು ವ್ಯಾಪಕವಾಗಿ ತಯಾರಿಸುತ್ತಿದೆ. ಇತರ ದೇಶಗಳಿಗೆ ರಕ್ಷಣಾ ಉಪಕರಣಗಳ ರಫ್ತು ಮಾರುಕಟ್ಟೆಯ
ಬಾಗಿಲನ್ನು ತೆರೆಯಲೂ ಈ ಉಪಕ್ರಮ ಸಹಕಾರಿಯಾಗಿದ್ದು, ವಿಯೆಟ್ನಾಂನಂಥ ದೇಶಗಳು ಭಾರತೀಯ ನಿರ್ಮಾಣದ ಉಪ ಕರಣಗಳ ಖರೀದಿಗೆ ತುದಿಗಾಲಲ್ಲಿ ನಿಂತಿವೆ.

ಸೆಪ್ಟೆಂಬರ್ ತಿಂಗಳಲ್ಲಿ ವಿಯೆಟ್ನಾಂ ನಿಯೋಗ ಭಾರತಕ್ಕೆ ಭೇಟಿನೀಡಿತು. ಇದರ ನಾಯಕತ್ವ ವಹಿಸಿದ್ದ ವಿಯೆಟ್ನಾಂ ಪೀಪಲ್ಸ್ ಏರ್ ಫೋರ್ಸ್ ಡೆಪ್ಯುಟಿ ಕಮಾಂಡರ್ ಇಸ್ರೇಲ್‌ಗೆ ಭೇಟಿ ನೀಡಲಿದ್ದು, ಆಯುಧ ಖರೀದಿ ಕುರಿತಾದ ಮಾತುಕತೆ ನಡೆಸಲಿದ್ದಾರೆ. ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ನಾಯಕರ ಜತೆ ಅವರು ಸಭೆಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.

ವಾಯುಮಾರ್ಗದಿಂದ ಬರುವ ಎಂಥದೇ ಅಪಾಯದಿಂದಲೂ ಒಂದು ಪ್ರದೇಶವನ್ನು ರಕ್ಷಿಸಲು ಅತ್ಯಂತ ಸಮರ್ಥ ಆಯುಧ ವಾಗಿದೆ ಬರಾಕ್-8 ಕ್ಷಿಪಣಿ. ಅಂದರೆ, ಶತ್ರುಪಾಳಯದ ಫಿಕ್ಸ್‌ಡ್-ವಿಂಗ್ ಯುದ್ಧವಿಮಾನ, ಹೆಲಿಕಾಪ್ಟರ್, ಮಾನವರಹಿತ ವಾಯು ವಾಹನ, ಬ್ಯಾಲಿಸ್ಟಿಕ್ ಕ್ಷಿಪಣಿ, ಕ್ರೂಸ್ ಕ್ಷಿಪಣಿ ಮತ್ತು ಆಂಟಿ-ಶಿಪ್‌ಗಳಿಗೆ ಪ್ರತಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಬಲ್ಲ ಈ ಕ್ಷಿಪಣಿಯನ್ನು ನೆಲದ ಮೇಲಿಂದ ಮತ್ತು ನೌಕಾಪಡೆಯ ಪ್ಲಾಟ್ ಫಾರ್ಮ್ ಮೂಲಕವೂ ಯಶಸ್ವಿಯಾಗಿ ಉಡಾವಣೆಗೊಳಿಸಬಹುದು.

70 ಕಿ.ಮೀ.ವರೆಗಿನ ಎಂಥದೇ ಗುರಿಯ ಮೇಲೆ ಕರಾರುವಾಕ್ಕಾಗಿ ದಾಳಿಮಾಡಬಲ್ಲ ಈ ಕ್ಷಿಪಣಿಗೆ 360 ಡಿಗ್ರಿ ಕಾರ್ಯವ್ಯಾಪ್ತಿಯೂ ಇದೆ. ವಿಯೆಟ್ನಾ ಜತೆ ಮಧುರ ಬಾಂಧವ್ಯ ಭಾರತದಿಂದ ಬರಾಕ್-8 ಕ್ಷಿಪಣಿ ವ್ಯವಸ್ಥೆ ಖರೀದಿಸಲು ವಿಯೆಟ್ನಾಂ ಉತ್ಸುಕ ವಾಗಿರುವುದರ ಹಿಂದೆ, ಚೀನಾ ಆಕ್ರಮಣದಿಂದ ತನ್ನ ವಾಯು ಪ್ರದೇಶವನ್ನು ಕಾಪಾಡಿಕೊಳ್ಳುವ ಉದ್ದೇಶವಷ್ಟೇ ಇಲ್ಲ;
ಕ್ಷಿಪಣಿ ಅಭಿವೃದ್ಧಿಯಲ್ಲಿ ಭಾರತದ ಪಾತ್ರವಿರುವುದೂ ಈ ಖರೀದಿಗಿರುವ ಪ್ರಮುಖ ಕಾರಣ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಹಾಗೂ ಇಸ್ರೇಲಿನ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಇ) ಸಂಸ್ಥೆಗಳ ಜಂಟಿ ಸಹಯೋಗದ ಉತ್ಪನ್ನವಾಗಿರುವ ಈ ಕ್ಷಿಪಣಿಯ ನಿರ್ಮಾಣದಲ್ಲಿ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಭಾರತ್ ಡೈನಮಿಕ್ಸ್
ಲಿಮಿಟೆಡ್ ಮತ್ತು ರಫೆಲ್ ಅಡ್ವಾನ್ಸ್‌ಡ್ ಡಿಫೆನ್ಸ್ ಸಿಸ್ಟಮ್ಸ್ ಸಂಸ್ಥೆಗಳ ಮಹತ್ತರ ಪಾತ್ರವಿದೆ.

ಬರಾಕ್-8 ಕ್ಷಿಪಣಿ ಮಾತ್ರವಲ್ಲದೆ, ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ, ವರುಣಾಸ್ತ್ರ ಆಂಟಿ ಸಬ್‌ಮರೀನ್ ಟಾರ್ಪೆಡೋ, ಆಕಾಶ್ ವಾಯುರಕ್ಷಣಾ ವ್ಯವಸ್ಥೆ ಮತ್ತು ಕೋಸ್ಟಲ್ ರೆಡಾರ್‌ನಂಥ ಹಲವಾರು ರಕ್ಷಣಾ ಉಪಕರಣಗಳನ್ನು ಭಾರತದಿಂದ ಖರೀದಿಸುವ ಆಸಕ್ತಿ ವಿಯೆಟ್ನಾಂನಿಂದ ಹೊಮ್ಮಿದೆ. ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ ‘ಮೇಡ್ ಇನ್ ಇಂಡಿಯಾ’ ಉಪಕ್ರಮದಡಿ ನಿರ್ಮಿಸಲಾದ ರಕ್ಷಣಾ ಉಪಕರಣಗಳ ಖರೀದಿಗೆ ಭಾರತವು ವಿಯೆಟ್ನಾಂಗೆ ಧನಸಹಾಯವನ್ನೂ ಒದಗಿಸುತ್ತಿದ್ದು, ಈಗಾಗಲೇ ಬಹುತೇಕ ೬೦೦ ದಶಲಕ್ಷ ಡಾಲರ್ ಮೊತ್ತದಷ್ಟು ಸಾಲವನ್ನು ಮಂಜೂರು ಮಾಡಿದೆ.

* ಅತ್ಯುತ್ತಮ ರಕ್ಷಣಾ ಸಹಯೋಗ ಭಾರತ-ವಿಯೆಟ್ನಾಂ ನಡುವಿನ ರಕ್ಷಣಾ ಸಹಯೋಗಕ್ಕೆ 1990ರ ದಶಕದ  ಆರಂಭದಿಂದಲೂ ಸಾಗಿ ಬಂದಿರುವ ಇತಿಹಾಸವಿದೆ. ಆ ಕಾಲಘಟ್ಟದಲ್ಲಿ ಭಾರತ ಜಾರಿಗೆ ತಂದಿದ್ದ ‘”Look East Policy’ ಕಾರ್ಯನೀತಿ
(ತರುವಾಯದ ಮೋದಿ ಕಾಲಘಟ್ಟದಲ್ಲಿ ಇದನ್ನು ‘Act East Policy’ ಎಂದು ಮರುಬ್ರ್ಯಾಂಡ್ ಮಾಡಲಾಯಿತು) ಇದರ ಹಿಂದಿರುವ ಮಹತ್ತರ ಕಾರಣ. 2000ನೇ ದಶಕದ ಆರಂಭದಲ್ಲಿ ಭಾರತ ಮತ್ತು ವಿಯೆಟ್ನಾಂ ರಕ್ಷಣಾ ಒಪ್ಪಂದವೊಂದಕ್ಕೆ ಸಹಿಹಾಕಿದ್ದರ ಪರಿಣಾಮವಾಗಿ ವಿಯೆಟ್ನಾಂ ರಕ್ಷಣಾ ಉಪಕರಣಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಖರೀದಿಸುವುದು,  ವಿಯೆಟ್ನಾಮಿ ಯುದ್ಧವಿಮಾನಗಳನ್ನು ದುರಸ್ತಿಗೊಳಿಸುವುದು ಸುಲಭವಾಗಿದೆ.

2013ರಲ್ಲಿ ಭಾರತವು 100 ದಶಲಕ್ಷ ಡಾಲರ್ ಮೊತ್ತದ ಸಾಲ ಒದಗಿಸಿದ್ದರ ಫಲವಾಗಿ ವಿಯೆಟ್ನಾಂ ತನ್ನ ನೌಕಾಪಡೆಗೆ ಉನ್ನತ ವೇಗದ 12 ಆಫ್ ಶೋರ್ ಗಸ್ತುದೋಣಿಗಳನ್ನು ಖರೀದಿಸಲು ಸಾಧ್ಯವಾಯಿತು. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ವರ್ಷಾರಂಭದಲ್ಲಿ ಹಾಯ್‌ಪೋಂಗ್ ಪ್ರದೇಶದ ‘ಹಾಂಗ್ ಹಾ’ ಶಿಪ್‌ಯಾರ್ಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಯೆಟ್ನಾಂ ಆಡಳಿತ ವರ್ಗಕ್ಕೆ ಈ ಗಸ್ತುದೋಣಿಗಳನ್ನು ಹಸ್ತಾಂತರಿಸಿದರು. ಅದೇ ಭೇಟಿಯ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಮತ್ತು ವಿಯೆಟ್ನಾಂ ರಕ್ಷಣಾ ಸಚಿವರು, ‘ಭಾರತ ಮತ್ತು ವಿಯೆಟ್ನಾಂ ತಮ್ಮ ರಕ್ಷಣಾ ಸಹಯೋಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿವೆ’ ಎಂಬ ಅಧಿಕೃತ ಜಂಟಿ ಹೇಳಿಕೆ ನೀಡಿದ್ದರು ಹಾಗೂ ರಕ್ಷಣಾ ಸಹಯೋಗದ ಕುರಿತಾದ 2030ರವರೆಗಿನ ‘ಜಾಯಿಂಟ್ ವಿಷನ್ ಸ್ಟೇಟ್ ಮೆಂಟ್’ಗೆ ಸಹಿಹಾಕಿದ್ದರು.

ಭಾರತ ಮತ್ತು ವಿಯೆಟ್ನಾಂಗಳ ಪಾಲಿಗೆ ಖಳನಾಯಕನಾಗಿ ಪರಿಣಮಿಸಿರುವ ಚೀನಾ, ಎರಡೂ ರಾಷ್ಟ್ರಗಳ ಪ್ರಾದೇಶಿಕ ಸಾರ್ವ ಭೌಮತ್ವವನ್ನು ಉಲ್ಲಂಘಿಸುವ ಉದ್ಧಟತನವನ್ನೂ ತೋರುತ್ತ ಬಂದಿದೆ. ಚೀನಾದ ಇಂಥ ಆಕ್ರಮಣಶೀಲತೆಯನ್ನು ಈಗಾಗಲೇ ಮಟ್ಟಹಾಕಿದ್ದರೆ, ಚೀನಾವನ್ನು ಮಣಿಸುವ ಸಾಮರ್ಥ್ಯವನ್ನು ಭಾರತವೂ ಪ್ರದರ್ಶಿಸಿದೆ. ಆದರೆ, ಪರರಾಷ್ಟ್ರಗಳ ಭೂ ರಾಜಕೀಯ ದಲ್ಲಿ ವಿನಾಕಾರಣ ಮೂಗುತೂರಿಸುವ ಚೀನಾ, ಮತ್ತೆ ಯಾವಾಗ ಮೈಕೊಡವಿಕೊಂಡು ಏಳುತ್ತದೋ ಗೊತ್ತಿಲ್ಲ.

ಹೀಗಾಗಿ ರಕ್ಷಣಾ ಸನ್ನದ್ಧತೆ ಭಾರತ ಮತ್ತು ವಿಯೆಟ್ನಾಂ ಪಾಲಿಗೆ ಈ ಕ್ಷಣದ ಅನಿವಾರ್ಯತೆಯಾಗಿದೆ. ಉಭಯ ದೇಶಗಳ ನಡುವಿನ
ರಕ್ಷಣಾ ಸಹಯೋಗ ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಲಿರುವುದಂತೂ ದಿಟ.