ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Air India: ʼʼಕೆಟ್ಟ ಏರ್‌ಲೈನ್ಸ್‌ಗಾಗಿ ಯಾವುದೇ ಪ್ರಶಸ್ತಿ ನೀಡೋದಿದ್ರೆ ಏರ್ ಇಂಡಿಯಾಗೆ ನೀಡಿʼʼ: ಜೈವೀರ್ ಶೆರ್ಗಿಲ್ ಕಿಡಿ

ಒಂದು ಕಾಲದಲ್ಲಿ ಸರ್ಕಾರದ ಪಾಲಿಗ ಬಿಳಿಯಾನೆಯಾಗಿದ್ದ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ನಿರ್ವಹಣೆಯನ್ನು ಇದೀಗ ಟಾಟಾ ವಹಿಸಿಕೊಂಡಿದೆ. ಆದರೂ ಈ ವಿಮಾನಗಳ ಕಳಪೆ ಸೇವೆಗಳ ಬಗ್ಗೆ ಪ್ರಮುಖರೇ ಅಪಸ್ವರವೆತ್ತಿದ್ದು, ಬಿಜೆಪಿ ವಕ್ತಾರ ಶೆರ್ಗಿಲ್ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಟೀಕೆ ಇದೀಗ ಗಮನ ಸೆಳೆದಿದೆ.

ಏರ್ ಇಂಡಿಯಾವನ್ನು ‘ಕೆಟ್ಟ ಏರ್‌ಲೈನ್’ ಎಂದು ಜರಿದ ಬಿಜೆಪಿ ನಾಯಕ

ಜೈವೀರ್‌ ಶೆರ್ಗಿಲ್.

Profile Sushmitha Jain Feb 27, 2025 11:26 PM

ನವದೆಹಲಿ: ಬಿಜೆಪಿ ರಾಷ್ಟ್ರಿಯ ವಕ್ತಾರ ಜೈವಿರ್ ಶೆರ್ಗಿಲ್ (Jaiveer Shergill) ಇದೀಗ ಏರ್ ಇಂಡಿಯಾ (Air India) ಕಳಪೆ ಸೇವೆಗಳ ಬಗ್ಗೆ ಓಪನ್ ಆಗಿ ಟೀಕಿಸಿದ್ದು, ಸುದ್ದಿಯಾಗಿದ್ದಾರೆ. ಇದು ಏರ್ ಇಂಡಿಯಾದ ಸೇವೆಗಳ ಗುಣಮಟ್ಟದ ಬಗ್ಗೆ ಹಲವಾರು ಪ್ರಶ್ನೆಗಳು ಏಳುವಂತೆ ಮಾಡಿದೆ. ನಮ್ಮ ದೇಶದ ಹೆಮ್ಮೆಯ ವಿಮಾನಯಾನ ಸಂಸ್ಥೆಯಾಗಿರುವ ಏರ್ ಇಂಡಿಯಾದ ಕಳಪೆ ಗುಣಮಟ್ಟದ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಿರುವುದು ನಿಜವಾಗಿಯೂ ಕಳವಳಕಾರಿ. ‘ಮುರಿದ ಸೀಟುಗಳು’, ಕಳಪೆ ಸೇವೆಗಳನ್ನು ನೀಡುವ ‘ಅತ್ಯಂತ ಕೆಟ್ಟ ಏರ್ ಲೈನ್ಸ್’ ಎಂದು ಶೆರ್ಗಿಲ್ ತನ್ನ ಎಕ್ಸ್ ಖಾತೆಯಲ್ಲಿ ಕಿಡಿಕಾರಿದ್ದಾರೆ. ಮಾತ್ರವಲ್ಲದೇ ಅವರ ವಾಗ್ದಾಳಿ ಎಷ್ಟು ತಿವ್ರವಾಗಿತ್ತೆಂದರೆ, ಅತೀ ಕಳಪೆ ಏರ್‌ಲೈನ್ಸ್‌ಗಳಿಗೆ ಆಸ್ಕರ್ ಸಮನಾದ ಯಾವುದಾದರೂ ಪ್ರಶಸ್ತಿಯಿದ್ದರೆ ಎಲ್ಲ ವಿಭಾಗಗಳ ಪ್ರಶಸ್ತಿಗಳನ್ನು ಖಂಡಿತವಾಗ್ಲೂ ಏರ್ ಇಂಡಿಯಾಗೆ ಕೊಡಬಹುದು ಎಂದು ಅವರು ಕಿಡಿಕಾರಿದ್ದಾರೆ.

ಏರ್ ಇಂಡಿಯಾ ಮೂಲಕ ಹಾರಾಟ ನಡೆಸುವುದೆಂದರೆ ಅದೊಂದು ಸಂತೋಷದ ವಿಷಯವೇ ಅಲ್ಲ. ಎಲ್ಲ ದಾಖಲೆಗಳನ್ನು ಅವರು ಮುರಿದಿದ್ದಾರೆ ಎಂದು ಶೆರ್ಗಿಲ್ ಬರೆದುಕೊಂಡಿದ್ದಾರೆ.

ಶೆರ್ಗಿಲ್ ಅವರು ಏರ್ ಇಂಡಿಯಾ ಸೇವೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೊಶ ವ್ಯಕ್ತಪಡಿಸುತ್ತಿರುವಂತೆ ಎಚ್ಚೆತ್ತುಕೊಂಡಿರುವ ಏರ್ ಇಂಡಿಯಾ ಕೂಡಲೇ ಅವರಿಗಾದ ಅನನುಕೂಲಕ್ಕೆ ಖೇದವನ್ನು ವ್ಯಕ್ತಪಡಿಸಿದೆ. ‘ಆತ್ಮೀಯ ಶೆರ್ಗಿಲ್ ಅವರೇ ನಿಮಗಾದ ಅನನುಕೂಲಕ್ಕೆ ನಾವು ಕ್ಷಮೆ ಕೇಳುತ್ತಿದ್ದೇವೆ. ದಯವಿಟ್ಟು ನಿಮ್ಮ ಪ್ರಯಾಣದ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ, ನಾವು ನಿಮ್ಮನ್ನು ಮತ್ತೆ ಸಂಪರ್ಕಿಸುತ್ತೇವೆ’ ಎಂದು ಏರ್ ಇಂಡಿಯಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.



ಏರ್ ಇಂಡಿಯಾ ತನ್ನ ಕಳಪೆ ಸೇವೆಗಳ ಕಾರಣಕ್ಕಾಗಿ ಪ್ರತಿಷ್ಠಿತ ರಾಜಕಾರಣಿಗಳಿಂದ ಟೀಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲ ಸಲವೇನಲ್ಲ. ಇತ್ತೀಚೆಗಷ್ಟೇ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೂ ಸಹ ಏರ್ ಇಂಡಿಯಾದ ಕಳಪೆ ಸೇವೆಗಳ ಬಗ್ಗೆ ಬಹಿರಂಗವಾಗಿ ಟೀಕಿಸಿದ್ದರು. ತಾವು ಪ್ರಯಾಣಿಸಿದ ಏರ್ ಇಂಡಿಯಾ ವಿಮಾನದಲ್ಲಿ ಮುರಿದ ಸೀಟುಗಳ ಬಗ್ಗೆ ಚೌಹಾಣ್ ಖೇದ ವ್ಯಕ್ತಪಡಿಸಿದ್ದರು ಮತ್ತು ವಿಮಾನಗಳನ್ನು ಸುಸ್ಥಿತಿಯಲ್ಲಿರಿಸದ ಕುರಿತು ಚೌಹಾಣ್ ವಿಮಾನ ಯಾನ ಸಂಸ್ಥೆಯ ವಿರುದ್ಧ ಕಿಡಿ ಕಾರಿದ್ದರು.

ಇದನ್ನೂ ಓದಿ: SS Rajamouli: ಆ ಮಹಿಳೆಗಾಗಿ ನನ್ನ ಜೀವನವನ್ನೇ ಹಾಳು ಮಾಡಿಬಿಟ್ಟ- ಡೆತ್‌ನೋಟ್‌ ಬರೆದಿಟ್ಟು, ವಿಡಿಯೋ ಮಾಡಿ ರಾಜಮೌಳಿ ಆಪ್ತ ಸೂಸೈಡ್‌



ತನಗೆ ಮುರಿದ ಸೀಟುಗಳನ್ನು ನೀಡಲಾಗಿತ್ತು ಎಂದು ಚೌಹಾಣ್ ಬೇಸರ ವ್ಯಕ್ತಪಡಿಸಿದ್ದರು. ‘ನಾನಿಂದು ಭೋಪಾಲ್‌ನಿಂದ ದೆಹಲಿಗೆ ಪ್ರಯಾಣಿಸಿದೆ. ಪೂಸಾದಲ್ಲಿ ಕಿಸಾನ್ ಮೇಳವನ್ನು ಉದ್ಘಾಟಿಸಿ, ನೈಸರ್ಗಿಕ ಕೃಷಿ ಯೋಜನೆ ಬಗ್ಗೆ ಕುರುಕ್ಷೇತ್ರದಲ್ಲಿ ಒಂದು ಮೀಟಿಂಗ್‌ನಲ್ಲಿ ಭಾಗಿಯಾಗಿ ಬಳಿಕ ಚಂಡೀಗಢದಲ್ಲಿ ಕಿಸಾನ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದೆ. ನಾನು ಎಐ436 ಏರ್ ಇಂಡಿಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದೆ. ನನಗೆ 8ಸಿ ಸಿಟ್ ನೀಡಲಾಗಿತ್ತು. ನಾನು ನನಗೆ ನೀಡಲಾದ ಸೀಟಿನಲ್ಲಿ ಹೋಗಿ ಕುಳಿತುಕೊಂಡೆ. ಆದರೆ ಆ ಸೀಟು ಮುರಿದಿತ್ತು ಮತ್ತು ನಾನು ಕುಳಿತುಕೊಂಡ ಕೂಡಲೇ ಅದು ಕುಸಿದಂತಾಯಿತು. ನನಗೆ ಇದರಿಂದ ಬಹಳ ಕಿರಿಕಿರಿಯಾಯ್ತು’ ಎಂದು ತನಗಾದ ಕೆಟ್ಟ ಪ್ರಯಾಣದ ಅನುಭವವನ್ನು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದರು.



ಟಾಟಾ ಸಂಸ್ಥೆ ಏರ್ ಇಂಡಿಯಾದ ನಿರ್ವಹಣೆಯನ್ನು ತೆಗೆದುಕೊಂಡ ಬಳಿಕ ಈ ವಿಮಾನ ಯಾನ ಸಂಸ್ಥೆಯ ಸ್ಥಿತಿ ಸುಧಾರಿಸಬಹುದೆಂದು ನಾನು ಅಂದುಕೊಂಡಿದ್ದೆ. ಆದರೆ ನನ್ನ ಯೋಚನೆ ತಪ್ಪು ಎಂದು ನನಗನ್ನಿಸುತ್ತಿದೆ ಎಂದು ಚೌಹಾಣ್ ಬರೆದುಕೊಂಡಿದ್ದಾರೆ. ‘ಸೀಟುಗಳ ವಿಚಾರದಲ್ಲಿ ಕಿರಿಕಿರಿಯಾದ್ರೆ ನಾನು ಸಹಿಸಿಕೊಳ್ಳಬಲ್ಲೆ, ಆದರೆ ಪ್ರಯಾಣಿಕರನ್ನು ಕೆಟ್ಟ ಸ್ಥಿತಿಯಲ್ಲಿರುವ ಸೀಟಿನಲ್ಲಿ ಕುಳಿತುಕೊಳ್ಳಿಸುವುದು ಯಾವುದೇ ಸಂಸ್ಥೆಯ ನೈತಿಕತೆಗೆ ಮಾರಕ. ನೀವು ಟಿಕೆಟ್ ನಲ್ಲಿ ಯಾವುದೇ ರಿಯಾಯಿತಿ ತೋರುವುದಿಲ್ಲವೆಂದಾದ ಮೇಲೆ ಎಲ್ಲರಿಗೂ ಉತ್ತಮ ಆಸನ ವ್ಯವಸ್ಥೆ ಒದಗಿಸಬೇಕಲ್ಲವೇ? ಎಂದು ಚೌಹಾಣ್ ಪ್ರಶ್ನಿಸಿದ್ದಾರೆ.

ಇದೆಲ್ಲ ಪ್ರಕರಣಗಳ ಬಳಿಕ ಎಚ್ಚೆತ್ತುಕೊಂಡಿರುವ ಏರ್ ಇಂಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ತನಿಖೆಗೆ ಆದೇಶಿಸಿದೆ. ಮತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಏರ್ ಇಂಡಿಯಾದಿಂದ ವರದಿಯನ್ನು ಕೇಳಿದೆ.