Tuesday, 10th December 2024

Viral News: ಪ್ರೀತಿಯ ಶ್ವಾನ ಕಣ್ಮರೆ; ಕಂಗಾಲಾದ ದಂಪತಿಯಿಂದ 50,000 ರೂ. ಬಹುಮಾನ ಘೋಷಣೆ!

Viral News

ದೆಹಲಿ : ಶ್ವಾನ ಪ್ರಿಯರೇ (Dog) ಹಾಗೆ ತಾವು ಸಾಕಿದ ನಾಯಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಕೆಲವರಿಗಂತೂ ತಮ್ಮ ನಾಯಿಯನ್ನು ನಾಯಿ ಎಂದು ಕರೆದರೆ ಸಿಟ್ಟೇ ಬಂದು ಬಿಡುತ್ತದೆ. ಸಾಕಿದ ಶ್ವಾನಗಳು ಮನೆಯ ಸದಸ್ಯರೇ ಆಗಿಬಿಡುತ್ತವೆ. ಅಂತಹ ಶ್ವಾನಗಳು ಒಂದು ನಿಮಿಷ ಎಲ್ಲಾದರೂ ಕಾಣದೆ ಇದ್ದರೆ ಜೀವವೇ ಹೋಗಿ ಬಿಡುವಂತಾಗುತ್ತದೆ ನಾಯಿಗಳನ್ನು ಸಾಕಿದವರಿಗೆ . ಇದೀಗ ದೆಹಲಿ ಮೂಲದ ದಂಪತಿ ಒಂದು ಅದೇ ಪರಿಸ್ಥಿತಿಯಲ್ಲಿದ್ದು ತಾವು ಸಾಕಿದ ನಾಯಿಯನ್ನು ಕಳೆದುಕೊಂಡು ಎಲ್ಲೆಡೆ ಹುಡುಕುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಶ್ವಾನ ಹುಡುಕಿ ಕೊಟ್ಟವರಿಗೆ 50,000ರೂ. ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ ಆಗಿದೆ. (Viral News)

ದೆಹಲಿಯ (Dehli) ದೀಪಯನ್ ಘೋಷ್ ಮತ್ತು ಕಸ್ತೂರಿ ಪತ್ರ ದಂಪತಿ ತಾವು ಸಾಕಿದ್ದ ಶ್ವಾನವನ್ನು ಕಳೆದುಕೊಂಡು ಎಲ್ಲೆಡೆ ಹುಡುಕುತ್ತಿದ್ದಾರೆ.  ನ.1ರಂದು ದಂಪತಿ ತಮ್ಮ ಎರಡು ಶ್ವಾನಗಳೊಂದಿಗೆ ಆಗ್ರಾಗೆ ತೆರಳಿದ್ದರು. ಅಲ್ಲಿನ ಪ್ರತಿಷ್ಟಿತ ಹೊಟೇಲ್‌ವೊಂದರಲ್ಲಿ ತಂಗಿದ್ದರು. ನಂತರ ಅವರಿಗೆ ಫತೇಫುರ್‌ ಸಿಕ್ರಿಗೆ ಹೋಗಬೇಕಾಗಿರುವುದರಿಂದ ತಮ್ಮ ನಾಯಿಗಳನ್ನು ಹೊಟೇಲ್‌ನಲ್ಲಿ ಬಿಟ್ಟು ಹೋಗಿದ್ದರು. ನಾಯಿಗಳ ಆರೈಕೆಗಾಗಿ ಹೊಟೇಲ್‌ನ ಸಿಬ್ಬಂದಿಗಳನ್ನು ನೇಮಿಸಿ 2000 ರೂ. ನೀಡಿದ್ದರು.

ನವೆಂಬರ್ 3 ರಂದು ಫತೇಪುರ್ ಸಿಕ್ರಿಗೆ ಹೋದ ದಂಪತಿಗೆ ಹಿಂದಿರುಗಿ ಬಂದಾಗ ಶಾಕ್‌ ಕಾದಿತ್ತು. ಎರಡು ನಾಯಿಗಳ ಪೈಕಿ ಒಂದು ಕಣ್ಮರೆಯಾಗಿರುವುದು ಕಂಡುಬಂದಿದೆ. ಹೊಟೆಲ್‌ ಸಿಬ್ಬಂದಿಗಳನ್ನು ವಿಚಾರಿಸಿದಾಗ ಹಾರಿಕೆ ಉತ್ತರ ನೀಡಿದ್ದಾರೆ. ನಾಯಿ ಕಾಣದಿರುವುದು ದಂಪತಿಯ ನಿದ್ದೆಗೆಡಿಸಿದೆ. ಸುತ್ತ ಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದ್ದಾರೆ. ಕೊನೆಯದಾಗಿ ನಾಯಿ ತಾಜ್‌ ಮಹಲ್‌ ಮೆಟ್ರೋ ನಿಲ್ದಾಣದ ಬಳಿ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಕೊನೆಗೆ ನಾಯಿಯನ್ನು ಪತ್ತೆ ಮಾಡಲು ಬಹುಮಾನ ಘೋಷಿಸಿದ್ದಾರೆ. ಮೊದಲು 20,000 ರೂ. ಬಹುಮಾನ ಘೋಷಿಸಿದ್ದರು. ಆದರೆ ಎರಡು ದಿನಗಳು ಕಳೆದರೂ ಕೂಡ ನಾಯಿಯ ಸುಳಿವಿಲ್ಲದ ಕಾರಣ ಈಗ ನಾಯಿಯನ್ನು ಹುಡುಕಿ ಕೊಟ್ಟವರಿಗಾಗಿ  50 ಸಾವಿರ ರೂ. ಘೋಷಿಸಿದ್ದಾರೆ.

ಇದನ್ನೂ ಓದಿ :Viral Video: ನಾಯಿಯ ವಿಚಾರದಲ್ಲಿ ಜಗಳ; ವೃದ್ಧ ದಂಪತಿಗೆ ಕಪಾಳಮೋಕ್ಷ ಮಾಡಿದ ಸಹೋದರಿಯರು

ಕಾಣೆಯಾದ ನಾಯಿಗಾಗಿ  ಸುಮಾರು 30 ಕಿಮೀ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅದಕ್ಕಾಗಿಯೇ ಬಹುಮಾನ ಘೋಷಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ದಂಪತಿ ಹೇಳಿದ್ದಾರೆ. ಇಷ್ಟೇ ಅಲ್ಲದೆ ಪೊಲೀಸರ ಸಹಾಯವನ್ನು ತೆಗೆದುಕೊಂಡಿರುವ ಅವರು ಶ್ವಾನ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸರು ನಾಯಿ ಹುಡುಕುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.