Thursday, 12th December 2024

Viral Video: ವಿಮಾನದ ಎಮರ್ಜೆನ್ಸಿ ಡೋರ್‌ ತೆರೆಯಲು ಯತ್ನಿಸಿದ ಕಿಡಿಗೇಡಿ; ಮುಂದೇನಾಯ್ತು? ವಿಡಿಯೊ ಇದೆ

Viral Video

ಬ್ಯಾಂಕಾಕ್‍: ಕೊರಿಯನ್ ಏರ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಥೈಲ್ಯಾಂಡ್‍ನ ಬ್ಯಾಂಕಾಕ್‍ನಿಂದ ದಕ್ಷಿಣ ಕೊರಿಯಾದ ಸಿಯೋಲ್‍ಗೆ ಪ್ರಯಾಣಿಸುತ್ತಿದ್ದ ಕೆಇ 658 ವಿಮಾನದಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಪ್ರಯಾಣಿಕ ತುರ್ತು ನಿರ್ಗಮನವನ್ನು ತೆರೆಯಲು ಪ್ರಯತ್ನಿಸಿದ್ದರಿಂದ ಸಹ ಪ್ರಯಾಣಿಕರೆಲ್ಲರೂ ಭಯಭೀತರಾಗಿದ್ದರು. ಆದರೆ ಕ್ಯಾಬಿನ್ ಸಿಬ್ಬಂದಿ ಧೈರ್ಯಮಾಡಿ ಮಧ್ಯಪ್ರವೇಶಿಸಿ ವ್ಯಕ್ತಿಯನ್ನು ತಡೆದು ನಿಲ್ಲಿಸಿ ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.

ಈ ಘಟನೆಯ ವಿಡಿಯೊವನ್ನು ಬಳಕೆದಾರ ಜಾಕ್ಸನ್ ಲೀ (@whojacksonlee) ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ  ತುರ್ತು ನಿರ್ಗಮನ ದ್ವಾರದ ಹ್ಯಾಂಡಲ್‍ ಅನ್ನು ತಿರುಗಿಸಲು ಪ್ರಯಾಣಿಕನು ಪದೇ ಪದೇ ಪ್ರಯತ್ನಿಸಿದ್ದಾನೆ ಅದೃಷ್ಟವಶಾತ್, ಬಾಗಿಲು ತೆರೆಯಲಿಲ್ಲ, ಆದರೆ ಸಿಬ್ಬಂದಿ ಸದಸ್ಯರು ಬೇಗನೆ ಮಧ್ಯೆ ಪ್ರವೇಶಿಸಿ, ವ್ಯಕ್ತಿಯನ್ನು ಸುತ್ತುವರಿದು ತಡೆಯಲು ಪ್ರಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನವಾಗಿತ್ತಂತೆ. ಮೊದಲಿಗೆ ಮಹಿಳಾ ಫ್ಲೈಟ್ ಅಟೆಂಡೆಂಟ್ ತುರ್ತು ನಿರ್ಗಮನ ಬಾಗಿಲಿನ ಹ್ಯಾಂಡಲ್ ಹಿಡಿದುಕೊಂಡು ವ್ಯಕ್ತಿ ಬಾಗಿಲು ತೆರೆಯದಂತೆ ತಡೆದಿದ್ದಾರೆ. ನಂತರ ಇತರ ಕ್ಯಾಬಿನ್ ಸಿಬ್ಬಂದಿ ತಕ್ಷಣ ಬಂದು ವ್ಯಕ್ತಿಯನ್ನು ತಡೆದು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಒಂದು ವೇಳೆ ಆ ವ್ಯಕ್ತಿಯು ಬಾಗಿಲು ತೆರೆದಿದ್ದರೆ ದುರಂತ ಸಂಭವಿಸುತ್ತಿತ್ತು. ವಿಮಾನ ಅಪಘಾತ ಸಂಭವಿಸಿ ಸಾವುನೋವುಗಳು ಆಗುತ್ತಿತ್ತು, ಅದೃಷ್ಟವಶಾತ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಈ ಅವಗಢ ತಪ್ಪಿದೆ.

ವರದಿ ಪ್ರಕಾರ, ತುರ್ತು ನಿರ್ಗಮನದ ಬಳಿ ಆ ಪ್ರಯಾಣಿಕ ನಿಂತಿದ್ದಾಗ ಸಿಬ್ಬಂದಿಗಳು ನಿಗದಿಪಡಿಸಿದ ಆಸನದಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದ್ದಾರೆ. ಅದಕ್ಕೆ ಆತ ನಿರಾಕರಿಸಿ ಆಕ್ರಮಣಕಾರಿಯಾಗಿ ವರ್ತಿಸಲು ಪ್ರಾರಂಭಿಸಿದ್ದಾನಂತೆ. ಅಲ್ಲದೇ ಬೆದರಿಕೆಯ ಸನ್ನೆಗಳನ್ನು ಮಾಡುತ್ತಾ ವಿಮಾನ ಸಿಬ್ಬಂದಿಗಳಿಗೆ ಅವಾಚ್ಯ ಪದಗಳಿಂದ ಬೆದರಿಕೆ ಹಾಕಿದ್ದಾನೆ.

“ಈ ಘಟನೆಯ ಬಳಿಕ  ಕ್ಯಾಪ್ಟನ್ ಅಧಿಕಾರದ ಅಡಿಯಲ್ಲಿ, ಸಂಯಮ ಕ್ರಮಗಳನ್ನು ಜಾರಿಗೆ ತರಲಾಯಿತು” ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.ಇಂತಹ ಕೃತ್ಯ ಎಸಗಿದ ಪ್ರಯಾಣಿಕನನ್ನು ನಂತರ ವಿಮಾನದೊಳಗಿನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು, ಅಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂಬುದಾಗಿ ವಿಮಾನಯಾನ ಸಂಸ್ಥೆ ಹೇಳಿಕೆ ನೀಡಿದೆ.

ಇದನ್ನೂ ಓದಿ:ಮೂವರು ಹೆಣ್ಣು ಮಕ್ಕಳ ಮದುವೆ ಮಾಡಲು ʼಸ್ವಯಂವರʼ ಏರ್ಪಡಿಸಿದ್ದಾರೆ ಖ್ಯಾತ ಜಾದೂಗಾರ!

ಪ್ರಯಾಣಿಕನನ್ನು ಹೆಚ್ಚಿನ ತನಿಖೆಗಾಗಿ ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಕೊರಿಯನ್ ಏರ್ ಪ್ರಯಾಣಿಕರ ಗುರುತು ಅಥವಾ ಯಾವುದೇ ಸಂಭಾವ್ಯ ಶುಲ್ಕಗಳ ಬಗ್ಗೆ ವಿವರಗಳನ್ನು ಹಂಚಿಕೊಂಡಿಲ್ಲ.