Saturday, 23rd November 2024

Viral Video: ಐಸ್‍ಕ್ರೀಂಗಾಗಿ ತಂದೆಯ ಜತೆ ಮುದ್ದಾಗಿ ಜಗಳವಾಡಿದ ಮಗಳು; ಈ ಕ್ಯೂಟ್‌ ವಿಡಿಯೊ ನೋಡಿ

Viral Video

ಬೆಂಗಳೂರು: ಚಾಕೋಲೇಟ್, ಐಸ್‍ಕ್ರೀಂಗಳೆಂದರೆ ಪುಟಾಣಿ ಮಕ್ಕಳಿಗೆ ತುಂಬಾ ಇಷ್ಟ. ಅವರ ಕೈಯಿಂದ ಒಂದು ಚಿಕ್ಕ ತುಂಡು ಚಾಕೋಲೆಟ್‌ ತೆಗೆದುಕೊಂಡು ತಿಂದರೆ ಮನೆಯಲ್ಲಾ ರಂಪ ಮಾಡಿ ಬಿಡುತ್ತಾರೆ. ಮಕ್ಕಳ ಈ ತುಂಟಾಟ ನೋಡುವುದಕ್ಕೆ ಕೂಡ ಹಿತವಾಗಿರುತ್ತದೆ. ಇತ್ತೀಚೆಗೆ ಅಂತಹದೊಂದು ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದು ಸಖತ್ ವೈರಲ್ (Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ, ಪುಟ್ಟ ಹುಡುಗಿಯೊಬ್ಬಳು ತನ್ನ ಪಾಲಿನ ಐಸ್‌ ಕ್ರೀಂ ತಿಂದು ಮುಗಿಸಿ ಅಪ್ಪನ ಐಸ್‌ಕ್ರೀಂ ಅನ್ನು ಕಸಿದುಕೊಂಡು ತಿಂದಿದ್ದಾಳೆ. ಅಪ್ಪ ಐಸ್‌ಕ್ರೀಂ ಕೊಡು ಎಂದು ಕೇಳಿದರೆ ʼಇದು ನನ್ನ ಐಸ್‌ಕ್ರೀಂʼ ಎಂದು ಕಣ್ಣಲ್ಲಿ ನೀರು ತುಂಬಿಸಿಕೊಂಡು ಮುದ್ದಾಗಿ ಅತ್ತಿದ್ದಾಳೆ. ಅಪ್ಪ-ಮಗಳ ಐಸ್‌ಕ್ರೀಂ ಜಗಳವನ್ನು ತಾಯಿ ವಿಡಿಯೊ ಮಾಡಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ತನಗೆ ನೀಡಿದ ವೆನಿಲ್ಲಾ ಐಸ್‍ಕ್ರೀಂತಿಂದ ಬಾಲಕಿ ತಂದೆ ಚಾಕೊಲೇಟ್ ಕೋನ್ ಐಸ್‍ಕ್ರೀಂ ತಿನ್ನಲು ಹೋದಾಗ ಚಾಕೋಲೆಟ್‌ ತನಗೆ ಇಷ್ಟವೆಂದು ತಂದೆಯ ಕೈಯಿಂದ ಕಸಿದುಕೊಂಡು ತಿಂದಿದ್ದಾಳೆ. ಎರಡೂ ಐಸ್‌ಕ್ರೀಂ ತನ್ನದೇ ಎಂದು ಮುದ್ದಾಗಿ ಅಮ್ಮನ ಬಳಿ ವಾದ ಮಾಡಿದ್ದಾಳೆ.

ಈ ವಿಡಿಯೊಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅನೇಕರು ಈ ವಿಡಿಯೊಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವು ಬಳಕೆದಾರರು ಹುಡುಗಿಗೆ ಹಂಚಿಕೊಂಡು ತಿನ್ನುವ ಪಾಠ ಕಲಿಸುವ ಅಗತ್ಯವಿದೆ ಎಂದು ತಿಳಿಸಿದರೆ, ಇತರರು ವಿಡಿಯೊವನ್ನು ಒಂದು ರೀತಿಯಲ್ಲಿ ತಮಾಷೆಯಾಗಿ ನೋಡಿದ್ದಾರೆ.

ಇದರಲ್ಲಿ ಒಬ್ಬರು “ಮುದ್ದು ಮಾಡಬೇಡಿ. ಕೆಲವು  ಉತ್ತಮ ನಡವಳಿಕೆಗಳನ್ನು ಕಲಿಸುವ ಸಮಯ ಇದು” ಎಂದು ಹೇಳಿದರೆ, ಇನ್ನೊಬ್ಬರು “ಹೆಣ್ಣು ಮಗು ಏನು ಮಾಡಿದರೂ ಅದು ಮುದ್ದಾಗಿರುತ್ತದೆ” ಎಂದು  ಬರೆದಿದ್ದಾರೆ.

ಹಿಂದೆಯೂ ಪುಟ್ಟ ಬಾಲಕಿಯರ ಈ ತರಹದ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ  ವೈರಲ್ ಆಗಿದ್ದವು. ಈ ಹಿಂದೆ ಅಮೆರಿಕದ ಹಾಸ್ಯ ನಟ ಆಸ್ಟಿನ್ ಗೆಟರ್ ತಮ್ಮ ಎರಡು ವರ್ಷದ ಮಗಳು ಚಾರ್ಲಿ ಬೀಯ  ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಚಾರ್ಲಿ ಐಸ್‍ಕ್ರೀಂ ತಿನ್ನುತ್ತಿದ್ದು,  ಆಸ್ಟಿನ್ ತನ್ನ ಮಗಳನ್ನು ಕೇಳದಿದ್ದರೂ ಕೂಡ ಆಕೆ ತನ್ನ ಐಸ್ ಕ್ರೀಮ್ ಅನ್ನು ತಂದೆಗೆ ನೀಡಿದ್ದಾಳೆ ಮತ್ತು ಅದು ರುಚಿಯಾಗಿದೆ ಎಂದು ಹೇಳಿದ್ದಾಳೆ. ಪುಟ್ಟ ಬಾಲಕಿಯಲ್ಲಿರುವ ಹಂಚಿ ತಿನ್ನುವ  ಗುಣ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Kohli- Anushka: ವಿರುಷ್ಕಾ ಜೋಡಿಯ ಬ್ರಂಚ್‌ ಡೇಟ್‌; ರಜೆಯಲ್ಲಿದ್ದ ಕೆಫೆ ಉದ್ಯೋಗಿ ಮಾಡಿದ್ದೇನು ಗೊತ್ತಾ? ಈಗ ಎಲ್ಲೆಡೆ ಈತನದ್ದೇ ಸುದ್ದಿ