ಮಥುರಾ: ಶ್ರೀ ಕೃಷ್ಣ ಪರಮಾತ್ಮನ ಚರಣ ತೀರ್ಥ ಎಂದುಕೊಂಡು ಆನೆ ಮೊಗದ ಮೂರ್ತಿಯೊಂದರ ಬಾಯಿಯಿಂದ ಹೊರಬರುತ್ತಿರುವ ನೀರನ್ನು ಭಕ್ತಾದಿಗಳು ‘ಚರಣ ಅಮೃತ’ವೆಂದು (Charan Amrit) ಸ್ವೀಕರಿಸಲು ಸಾಲುಗಟ್ಟಿ ನಿಂತಿರುವ ಮತ್ತು ನಿಜವಾಗಿಯೂ ಅದು ಏರ್ ಕಂಡೀಷನರ್ ನಿಂದ ಹೊರಬರುತ್ತಿರುವ ನೀರು ಎಂಬ ಕಹಿ ಸತ್ಯವನ್ನು ತೋರಿಸುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral video) ಆಗಿದೆ.
ಉತ್ತರಪ್ರದೇಶದ ಮಥುರಾದಲ್ಲಿರುವ (Mathura ) ಭಂಕೇ ಬಿಹಾರಿ ಮಂದಿರದಲ್ಲಿ (Banke Bihari Temple) ಈ ವಿಚಿತ್ರ ಘಟನೆ ನಡೆದಿದ್ದು, ಆನೆ ಮೊಗದ ಮೂರ್ತಿಯೊಂದ ಬಾಯಿಯಿಂದ ಹೊರಬೀಳುತ್ತಿರುವ ನೀರನ್ನು ಸೇವಿಸಲು ಮತ್ತು ಅದನ್ನು ಮನೆಗೆ ಕೊಂಡೊಯ್ಯಲು ಪೇಪರ್ ಲೋಟಗಳನ್ನು ಹಿಡಿದುಕೊಂಡು ಭಕ್ತರು ಸಾಲುಗಟ್ಟಿ ನಿಂತಿರುವುದು ಈ ವೈರಲ್ ವಿಡಿಯೋದಲ್ಲಿ ದಾಖಲಾಗಿದೆ.
Serious education is needed 100%
— ZORO (@BroominsKaBaap) November 3, 2024
People are drinking AC water, thinking it is 'Charanamrit' from the feet of God !! pic.twitter.com/bYJTwbvnNK
ಆದರೆ, ವಿಪರ್ಯಾಸವೆಂದರೆ ದೇವಸ್ಥಾನದಲ್ಲಿ ಅಳವಡಿಸಲಾಗಿರುವ ಏರ್ ಕಂಡೀಷನರ್ ಗಳ ತ್ಯಾಜ್ಯ ನೀರನ್ನು ಹೊರಹಾಕಲು ಆನೆಮೊಗದ ರಚನೆಯನ್ನು ವಿನ್ಯಾಸ ಮಾಡಲಾಗಿದ್ದು, ಇಲ್ಲಿ ಆನೆ ಮೊಗದ ರಚನೆಯ ಬಾಯಿಯ ಮೂಲಕ ಆ ನೀರು ಸಾಗುವ ಪೈಪ್ ಅಳವಡಿಸಲಾಗಿದೆ ಎಂಬುದನ್ನು ಜಾಗರಣ್ ಮಾಧ್ಯಮದ ವರದಿ ಬಹಿರಂಗಗೊಳಿಸಿದೆ. ಆದರೆ ಇದರ ಅರಿವಿಲ್ಲದೇ ಭಕ್ತರು, ಆನೆಮೊಗದ ರಚನೆಯ ಬಾಯಿಯಿಂದ ಹೊರಬರುತ್ತಿರುವ ನೀರು ‘ಚರಣಾಮೃತ’ ಎಂದು ಸ್ವೀಕರಿಸಲು ತಾಮುಂದು ತಾಮುಂದು ಎಂದು ಸಾಲುಗಟ್ಟಿ ನಿಂತಿರುವುದು ಮಾತ್ರ ವಿಪರ್ಯಾಸವೇ ಸರಿ!
ಭಕ್ತರು ಸಾಲಾಗಿ ಬಂದು ಈ ಜಲವನ್ನು ಸ್ವೀಕರಿಸುತ್ತಾ, ಕೆಲವರು ತಮ್ಮ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುತ್ತಾ ಇರುವ ಸಂದರ್ಭದಲ್ಲಿ ಇದನ್ನೆಲ್ಲಾ ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಭಕ್ತಾದಿಗಳಿಗೆ, ‘ಇದು ಚರಣ ತೀರ್ಥವಲ್ಲ’ ಬದಲಾಗಿ ಇದು ಎ.ಸಿ.ಯಿಂದ ಹೊರಬರುತ್ತಿರುವ ಜಲ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದಕ್ಕೆ ಕೆಲವು ಭಕ್ತಾದಿಗಳು ನಗುತ್ತಾ ಮುಂದೆ ಸಾಗಿದರೆ, ಮತ್ತೆ ಕೆಲವರು ಅದನ್ನು ಕೇಳಿಸಿಕೊಂಡ ಬಳಿಕವೂ ಆ ನೀರನ್ನು ಸೇವಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ವಿಡಿಯೋ ಇದೀಗ ಎಕ್ಸ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದ್ದು, ಬರೀ ‘ಎಕ್ಸ್’ನಲ್ಲಿ ಮಾತ್ರವೇ ಈ ವಿಡಿಯೋ 2.8 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಿಡಿಯೋಗೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಕೆಲವರು ಇದು ಭಕ್ತಿಯ ಪರಾಕಾಷ್ಠೆಯ ಪ್ರಭಾವ ಎಂದಿದ್ದರೆ, ಇನ್ನು ಕೆಲವರು, ನಮ್ಮ ಜನರಲ್ಲಿ ವೈಜ್ಞಾನಿಕ ಮನೋಭಾವದ ಕೊರತೆಯೇ ಇದಕ್ಕೆಲ್ಲಾ ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ.
“ಕಟ್ಟು ಕಥೆ, ಮೂಢನಂಬಿಕೆ, ದ್ವೇಷ, ವಿಭಜನೆ ಹುಟ್ಟಿಕೊಂಡ ನಾಡಿನಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಯಾವತ್ತಿದ್ದರೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ” ಎಂಬ ಕಮೆಂಟನ್ನು ಎಕ್ಸ್ ಬಳಕೆದಾರರೊಬ್ಬರು ವ್ಯಕ್ತಪಡಿಸಿದ್ದಾರೆ.
“ಯಾಕೆ ಯಾರೊಬ್ಬರೂ ಒಂದರೆಕ್ಷಣ ನಿಂತು ಅಲ್ಲಿ ಏನಾಗುತ್ತಿದೆ ಎಂಬುದನ್ನು ಯೋಚಿಸುತ್ತಿಲ್ಲ? ಇದೊಂದು ಸಮೂಹ ಸನ್ನಿ ಮಾನಸಿಕತೆ” ಎಂದು ಇನ್ನೊಬ್ಬ ಎಕ್ಸ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಇನ್ನು ಈ ವಿಡಿಯೋವನ್ನು ಉಲ್ಲೇಖಿಸಿ ಲಿವರ್ ಡಾಕ್ ಒಂದು ಎಚ್ಚರಿಕೆಯನ್ನು ತನ್ನ ಫಾಲೋವರ್ಸ್ ಗೆ ನೀಡಿದ್ದು, ಎಸಿ ನೀರನ್ನು ಕುಡಿಯದಂತೆ ಸಲಹೆ ನೀಡಿದ್ದಾರೆ ಮತ್ತು ‘ಕೂಲಿಂಗ್ ಮತ್ತು ಏರ್ ಕಂಡೀನ್ ವ್ಯವಸ್ಥೆಯಲ್ಲಿ ಹಲವು ವಿಧದ ಸೋಂಕುಗಳು ಉತ್ಪತ್ತಿಯಾಗುತ್ತವೆ ಮತ್ತಿದು ಖಂಡಿತವಾಗಿಯೂ ಆರೋಗ್ಯಕ್ಕೆ ಹಾನಿಕಾರಕ..’ ಎಂದು ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದಾರೆ.
2012ರಲ್ಲಿ ಇಂತಹದ್ದೇ ಒಂದು ಘಟನೆ ಮುಂಬಯಿಯ (Mumbai) ವೀಪಿಂಗ್ ಸರ್ಫಿಕ್ಸ್ ನಲ್ಲಿ (Weeping crucifix) ನಡೆದಿತ್ತು, ಅಲ್ಲಿ, ಜೀಸಸ್ ಮೂರ್ತಿಯ ಪಾದದಡಿಯಿಂದ ಇದ್ದಕ್ಕಿದ್ದಂತೆ ನೀರು ಹರಿಯಲು ಪ್ರಾರಂಭಗೊಂಡಿತ್ತು ಮತ್ತು ಇದನ್ನು ಕಂಡ ನೂರಾರು ಭಕ್ತಾದಿಗಳು ಇದನ್ನೊಂದು ಪವಾಡ ಎಂದುಕೊಂಡು ಸಾಲುಗಟ್ಟಿ ಅಲ್ಲಿಗೆ ಬರತೊಡಗಿದರು. ಆದರೆ, ಆ ಬಳಿಕ ಗೊತ್ತಾದದ್ದೇನೆಂದರೆ ಅದು ಒಳಚರಂಡಿ ವ್ಯವಸ್ಥೆಯಲ್ಲಿ ದೋಷದಿಂದಾಗಿ ನೀರು ಮೇಲೆ ಹರಿಯತೊಡಗಿತ್ತು ಎಂಬುದು..! ಈ ವಿಚಾರವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Aishwarya Rai: ಐಶ್ವರ್ಯ ಬರ್ತ್ ಡೇಗೆ ಬಚ್ಚನ್ ಫ್ಯಾಮಿಲಿಯಿಂದ ನೋ ವಿಶಸ್… ಬಿಗ್ ಬಿಯ ಹಳೆಯ ಟ್ವೀಟ್ ವೈರಲ್! ಈಗ ಏನೂ ಸರಿ ಇಲ್ಲ ಅಂತಿದ್ದಾರೆ ಫ್ಯಾನ್ಸ್