Saturday, 23rd November 2024

Viral Video: ಛೇ..ಇದೆಂಥಾ ಕ್ರೌರ್ಯ! ವಾಚ್ ಕದ್ದರೆಂದು ಹುಡುಗರನ್ನು ತಲೆಕೆಳಗಾಗಿ ನೇತು ಹಾಕಿ ಮೆಣಸಿನ ಹೊಗೆ ಹಾಕಿದ ದುರುಳರು

ಭೋಪಾಲ್‌: ಮಧ್ಯಪ್ರದೇಶ(Madhya Pradesh)ದ ಪಂಧುರ್ನ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದೆ. ವಾಚ್ ಕದ್ದ(theft) ಆರೋಪದಡಿಯಲ್ಲಿ 14 ವರ್ಷದ ಇಬ್ಬರು ಬಾಲಕರನ್ನು(teens) ತಲೆಕೆಳಗಾಗಿಸಿ ನೇತು ಹಾಕಿ ಅವರ ಮೇಲೆ ಮೆಣಸಿನ ಹೊಗೆ ಹಾಕಿದ ಘಟನೆ ಅ.31ರಂದು ನಡೆದಿದ್ದು ಈ ಘಟನೆಯ ವಿಡಿಯೋ(Viral video) ಬಹಿರಂಗವಾದ ಬಳಿಕ ನ.03ರಂದು ಬೆಳಕಿಗೆ ಬಂದಿದೆ.

ಮೋಹ್ ಗಾಂವ್ ಪೊಲೀಸ್(police) ಠಾಣೆಯ ಉಸ್ತುವಾರಿ ರೂಪಲಾಲ್ ಉಯ್ಕೆ ಹೇಳುವ ಪ್ರಕಾರ, ಮೊಸರಿಗೆಂದು ಪಡೆದುಕೊಂಡಿದ್ದ ಹಣವನ್ನು ಹಿಂದಿರುಗಿಸಲು ಇಬ್ಬರು ಹುಡುಗರು ಸ್ಥಳೀಯ ಮನೆಯೊಂದಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರು ಅಲ್ಲಿಂದ ವಾಚೊಂದನ್ನು ತೆಗದುಕೊಂಡು ಬಂದಿದ್ದಾರೆ.

ಬಳಿಕ, ತಮ್ಮ ತಪ್ಪಿನ ಅರಿವಾಗಿ, ಅವರು ತಾವು ತಂದಿದ್ದ ವಾಚನ್ನು ಅದೇ ಜಾಗದಲ್ಲಿ ತಂದಿರಿಸಿದ್ದಾರೆ. ಇದನ್ನು ಗ್ರಾಮಸ್ಥರಾಗಿರುವ ನಿಖಿಲ್ ಕಲಂಬೆ ಮತ್ತು ಸುರೇಂದ್ರ ಭವಾಂಕರ್ ಎಂಬವರು ನೋಡಿದ್ದಾರೆ. ಅವರು ಬಳಿಕ ಆ ಇಬ್ಬರು ಹುಡುಗರನ್ನು ಬಲಾತ್ಕಾರದಿಂದ ಟ್ರ್ಯಾಕ್ಟರ್ ಗ್ಯಾರೆಜೊಂದಕ್ಕೆ ಎಳೆದೊಯ್ದು, ಕಳ್ಳತನ ಮಾಡಿರುವುದನ್ನು ವಿಚಾರಿಸಿ, ಆ ಹುಡುಗರನ್ನು ಥಳಿಸಿ ಬಳಿಕ ಅವರಿಗೆ ಮೆಣಸಿನ ಹೊಗೆಯನ್ನುಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆ ನಡೆದ ಬಳಿವೂ ಹುಡುಗರು ಈ ಬಗ್ಗೆ ಮನೆಯಲ್ಲಿ ಬಾಯಿ ಬಿಟ್ಟಿರಲಿಲ್ಲ. ಆದರೆ ಯಾವಾಗ ಥಳಿತ ಆರೋಪಿಗಳಲ್ಲಿ ಒಬ್ಬನಾಗಿರುವ ಸುರೇಂದ್ರ ಭವಾಂಕರ್ ರೆಕಾರ್ಡ್ ಮಾಡಿದ್ದನೆನ್ನಲಾಗಿರುವ ಈ ಘಟನೆಯ ವಿಡಿಯೋ ಬಹಿರಂಗಗೊಂಡಿತೋ, ಇದು ಆ ಹುಡುಗರ ಹೆತ್ತವರಿಗೂ ತಲುಪಿದೆ. ಶಾಕ್ ಗೊಳಗಾದ ಹುಡುಗರ ಹೆತ್ತವರು ತಮ್ಮ ಮಕ್ಕಳನ್ನು ಕರೆದು ಘಟನೆಯ ಬಗ್ಗೆ ಕೇಳಿದಾಗ ಮಕ್ಕಳು ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ. ಬಳಿಕ ತಂದೆ ಮಗನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೂರನ್ನು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಿಖಿಲ್ ಕಲಂಬೆ, ಸುರೇಂದ್ರ ಭವಾಂಕರ್ ಮತ್ತು ಇನ್ನೊಬ್ಬ ಶಂಕಿತನನ್ನು ವಶಕ್ಕೆ ಪಡೆದುಕೊಂಡಿದ್ದು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 137, 2, 140, 3, 115, 35, 127, 2 ಮತ್ತು 75ರಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಮುಚ್ಚಿಹೋಗುತ್ತಿದ್ದ ಈ ಅಮಾನವೀಯ ಥಳಿತ ಪ್ರಕರಣ ಇದೀಗ ವಿಡಿಯೋ ಹೊರಬಂದ ಪರಿಣಾಮ ಘಟನೆ ಬೆಳಕಿಗೆ ಬಂದು ಆರೋಪಿಗಳು ಪೊಲೀಸ್ ವಶಕ್ಕೆ ಸಿಕ್ಕುವಂತಾಗಿದೆ ಮತ್ತು ಹುಡುಗರ ಮೇಲೆ ಈ ರೀತಿಯಾಗಿ ಅಮಾನವೀಯ ವರ್ತನೆ ತೋರಿದ ಕಿಡಿಗೇಡಿಗಳ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ನೆಟ್ಟಿಗರಲ್ಲಿ ಆಕ್ರೋಶ ಕಂಡುಬಂದಿದೆ.

ಈ ಸುದ್ದಿಯನ್ನೂ ಓದಿ: Rupali Ganguly: ನನ್ನ ತಂದೆಗೆ ಅಪಾಯಕಾರಿ ಔಷಧ ಕೊಡುತ್ತಿದ್ದಾರೆ…ಖ್ಯಾತ ನಟಿ ವಿರುದ್ಧ ಮಲಮಗಳಿಂದ ಗಂಭೀರ ಆರೋಪ; ಪೋಸ್ಟ್ ವೈರಲ್