Friday, 13th December 2024

Viral Video: ಪತ್ನಿ ಎದುರು ‘ಅಂಕಲ್’ ಎಂದು ಕರೆದ ಶಾಪ್ ಕೀಪರ್ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ ‘ಸ್ಮಾರ್ಟ್ ಪತಿ’!!

ಭೋಪಾಲ್: ಅಂಕಲ್ ಅಂದಿದ್ದಕ್ಕೇ ಗ್ರಾಹಕನೋರ್ವ ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌(Bhopal)ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಸಿ ಟಿವಿ ದೃಶ್ಯವೊಂದು ವೈರಲ್‌(Viral Video) ಆಗಿದ್ದು, ಮಧ್ಯಪ್ರದೇಶ( Madhya Pradesh) ದ ಬೋಪಾಲ್​ ನಗರದ ಜತ್ಖೇಡಿ ಏರಿಯಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ತನ್ನ ಪತ್ನಿಯ ಮುಂದೆ ತನ್ನನ್ನು ‘ಅಂಕಲ್’ ಎಂದು ಕರೆದಿದ್ದಕ್ಕಾಗಿ ಆಕ್ರೋಶಗೊಂಡ ಗ್ರಾಹಕ ಸಿಟ್ಟಿಗೆದ್ದು ಅಂಗಡಿ ಮಾಲೀಕನಿಗೆ ಥಳಿಸಿದ್ದಾನೆ.

ಸೀರೆ ಅಂಗಡಿ ಮಾಲೀಕ ವಿಶಾಲ್ ಶಾಸ್ತ್ರಿ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಆರೋಪಿಯನ್ನು ರೋಹಿತ್ ಎಂದು ಗುರುತಿಸಲಾಗಿದೆ. ShabnazKhanam ಹೆಸರಿನ ಎಕ್ಸ್(twitter) ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೋಹಿತ್‌ ತನ್ನ ಸ್ನೇಹಿತರೊಂದಿಗೆ ವಿಶಾಲ್‌ಗೆ ಥಳಿಸಿಲು ಅಂಗಡಿಯೊಳಗೆ ನುಗ್ಗುವಂತಹ ದೃಶ್ಯವನ್ನು ಕಾಣಬಹುದಾಗಿದೆ. ಹಲ್ಲೆಗೊಳಗಾದ ಮಾಲೀಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಸದ್ಯ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಲಾಗಿದ್ದು, ಆರೋಪಿಯನ್ನು ರೋಹಿತ್ ಎಂದು ಗುರುತಿಸಲಾಗಿದೆ. ಆದರೆ ಹಲ್ಲೆ ಮಾಡಿರುವ ಆತನನ್ನು ಇದುವರೆಗೂ ಪೊಲೀಸರು ಬಂಧಿಸಿಲ್ಲ ಎಂದು ಹೇಳಲಾಗಿದೆ.

ಘಟನೆ ಹಿನ್ನೆಲೆ

ತನ್ನ ಮಡದಿಗೆ ಸೀರೆ ಕೊಡಿಸಲೆಂದು ರೋಹಿತ್, ವಿಶಾಲ್ ಶಾಸ್ತ್ರಿಯ ಸೀರೆ ಅಂಗಡಿಗೆ ಬಂದಿದ್ದು, ಸೀರೆ ಆಯ್ಕೆಯಲ್ಲಿಯೇ ಗಂಟೆಗಟ್ಟಲೆ ಕಳೆದ ದಂಪತಿ ಹಲವಾರು ಸೀರೆಗಳನ್ನು ನೋಡಿದರೂ ಯಾವುದನ್ನು ಆಯ್ಕೆ ಮಾಡಿಕೊಳ್ಳದೇ ಸಮಯ ವ್ಯರ್ಥಿಸಿದ್ದಾರೆ. ಗ್ರಾಹಕರ ವರ್ತನೆಯನ್ನು ಕಂಡು ಬೇಸತ್ತ ಅಂಗಡಿ ಮಾಲೀಕ ವಿಶಾಲ್ ತಾಳ್ಮೆಗೆಟ್ಟು ನಿಮಗೆ ಯಾವ ಬೆಲೆಯಲ್ಲಿ ಸೀರೆ ಬೇಕು ‘ಅಂಕಲ್‘ ಎಂದು ಕೇಳಿದ್ದಾನೆ. ಇದಕ್ಕೆ ರೋಹಿತ್ 1,000 ರೂಪಾಯಿ ಬೆಲೆಯಲ್ಲಿ ಬೇಕು ಎಂದಿದ್ದಾರೆ. ಇದಕ್ಕೆ ಮರು ಉತ್ತರಿಸಿದ ವಿಶಾಲ್ ಸ್ವಲ್ಪ ಹೆಚ್ಚಿನ ಬೆಲೆಯ ಸೀರೆಯನ್ನು ಖರೀದಿಸುವಂತೆ ಸಲಹೆ ನೀಡಿದ್ದಾನೆ. ಆದರೆ ಅಂಕಲ್ ಎಂದು ಕರೆದಿದ್ದಕ್ಕೆ ರೊಚ್ಚಿಗೆದ್ದ ರೋಹಿತ್ ವಿಶಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇಷ್ಟಕ್ಕೆ ಅಂಕಲ್ ಅಂತ ಕರೆಯಬೇಡ ಎಂದು ರೋಹಿತ್ ಗಲಾಟೆ ಮಾಡಿ, ಸೀರೆಯನ್ನು ಖರೀದಿಸದೇ ವಿಶಾಲ್ ಗೆ ಬೈದು ಹೆಂಡತಿಯನ್ನು ಹಿಂದಿರುಗಿ ಕರೆದುಕೊಂಡು ಹೋಗಿದ್ದಾನೆ.

ಆದರೆ ಇಷ್ಟಕ್ಕೆ ಸುಮ್ಮನಾಗದೇ ಪತ್ನಿಯನ್ನ ಮನೆಯಲ್ಲಿ ಬಿಟ್ಟು, ಹೆಂಡತಿ ಎದುರು ತನ್ನನ್ನು ಅಂಕಲ್ ಎಂದು ಕರೆದು ಅವಮಾನ ಮಾಡಿದ್ದಕ್ಕೆ ತನ್ನ ಸ್ನೇಹಿತರ ಗುಂಪಿನ ಜೊತೆ ಪುನ: ಬಂದು ಸೀರೆ ಅಂಗಡಿ ಮಾಲೀಕನೊಂದಿಗೆ ಗಲಾಟೆ ಮಾಡಿದ್ದಲ್ಲದೇ, ಸರಿಯಾಗಿ ಥಳಿಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಾಲೀಕ ಚಿಕಿತ್ಸೆ ಪಡೆದುಕೊಂಡು ನಂತರ ವಿಶಾಲ್‌ ಮಿಸ್ರೋಡ್‌ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದು, ದೂರಿನ ಆಧಾರದ ಮೇರೆಗೆ ರೋಹಿತ್‌ ಮತ್ತು ಆತನ ಸ್ನೆಹಿತರ ವಿರುದ್ಧ ಪೊಲೀಸರು ಎಫ್.‌ಐ.ಆರ್‌ ದಾಖಲಿಸಿಕೊಂಡಿದ್ದಾರೆ.

ನಮ್ಮ ಮಧ್ಯೆ ಎಂತಹ ಎಂತಹ ಚಿತ್ರ ವಿಚಿತ್ರ ಜನಗಳು ಇರ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದ್ದು, ಈ ಹಿಂದೆ ಡೆಹ್ರಾಡೂನ್ ನಲ್ಲಿ 18ರ ಯುವತಿ ಅಂಕಲ್ ಅಂದಿದ್ದಕ್ಕೇ ಅಂಗಡಿ ಮಾಲೀಕನೋರ್ವ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿತ್ತು. ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್‌ಗಂಜ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಅಂಕಲ್ ಎಂದು ಕರೆದಿದ್ದಕ್ಕೆ ನಿಶಾ ಅಹ್ಮದ್ ಎಂಬ 18 ವರ್ಷದ ಯುವತಿಗೆ 35 ವರ್ಷದ ಅಂಗಡಿ ಮಾಲೀಕ ಥಳಿಸಿದ್ದ. ಹಲ್ಲೆಗೊಳಗಾದ ಯುವತಿ ತಲೆಗೆ ತೀವ್ರ ಪೆಟ್ಟಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: BBK 11: ಅವಳ ಪರವಾಗಿ ನಾನು ಕ್ಷಮೆ ಕೇಳುತ್ತೇವೆ: ಮಾನಸಾ ಔಟಾದ ಬೆನ್ನಲ್ಲೇ ತುಕಾಲಿ ಸಂತು ಮಾತು