Wednesday, 11th December 2024

Viral Video: ವೃದ್ಧನ ಜೀವ ಉಳಿಸಿತು ಯುವಕನ ರೀಲ್ಸ್‌!

Viral Video

ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಈಗಿನ ಯುವಜನರು ರೀಲ್ಸ್ ಕ್ರೇಜ್‌ ನೆಚ್ಚಿಕೊಂಡಿದ್ದಾರೆ. ಅಲ್ಲದೇ ರೀಲ್ಸ್‌ಗಾಗಿ ಅಪಾಯಕಾರಿ ಸ್ಟಂಟ್‍ಗಳನ್ನು ಮಾಡಿ ಜೀವ ಕಳೆದುಕೊಂಡವರೂ ಇದ್ದಾರೆ. ತಮ್ಮ ಅಪಾಯಕಾರಿ ರೀಲ್ಸ್‌ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲಿಂಗ್ ಮತ್ತು ಟೀಕೆಗಳಿಗೆ ಒಳಗಾದವರ ಪಟ್ಟಿ ಕೂಡ ತುಂಬಾ ದೊಡ್ಡದಿದೆ. ಆದರೆ ಇಲ್ಲೊಂದು ವಿಶೇಷವಾದ ಘಟನೆ ನಡೆದಿದೆ. ರೀಲ್ಸ್‌ನಿಂದ ಒಬ್ಬ ವ್ಯಕ್ತಿಯ ಜೀವ ಉಳಿದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral Video) ಆಗಿದೆ.

ಇದಕ್ಕೆ ಸಂಬಂಧಪಟ್ಟ ವಿಡಿಯೊವೊಂದನ್ನು ಪೂಜಾ ಭಿಂಚರ್ ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ರೈಲು ವೇಗವಾಗಿ ಚಲಿಸುತ್ತಿರುವ ವೇಳೆ ಯುವಕನೊಬ್ಬ ರೈಲು ಪ್ಲಾಟ್ ಫಾರ್ಮ್‍ನಲ್ಲಿ ನೃತ್ಯ ಮಾಡುತ್ತಾ ರೀಲ್ ಅನ್ನು ರೆಕಾರ್ಡ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ, ವೃದ್ಧರೊಬ್ಬರು ಪ್ಲಾಟ್ ಫಾರ್ಮ್ ಮೇಲೆ ಕುಸಿದು ಬಿದ್ದಿದ್ದಾರೆ. ಆಗ ಅಲ್ಲೇ ರೀಲ್ ಮಾಡುತ್ತಾ ನೃತ್ಯ ಮಾಡುತ್ತಿದ್ದ ಯುವಕ ತಕ್ಷಣ ಅವರನ್ನು ಹಿಡಿದು ರೈಲಿನ ಚಕ್ರಕ್ಕೆ ಸಿಲುಕದಂತೆ ರಕ್ಷಿಸಿದ್ದಾನೆ. ಯುವಕನ ತ್ವರಿತ ಮತ್ತು ಧೈರ್ಯಶಾಲಿ ಕೆಲಸದಿಂದ ಸಂಭವಿಸಬಹುದಾದ ದುರಂತ ತಪ್ಪಿದೆ. ಸೋಶಿಯಲ್ ಮೀಡಿಯಾದ ಬಳಕೆದಾರರು ಯುವಕನ ವೀರೋಚಿತ ಕಾರ್ಯವನ್ನು ಹೊಗಳಿದ್ದಾರೆ. ಹಾಗೇ ರೀಲ್ ಮಾಡುವುದರಿಂದ ಜೀವವನ್ನು ಉಳಿಸಬಹುದು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕ; ಮುಂದೇನಾಯಿತು ನೋಡಿ…

ಈ ವಿಡಿಯೊವನ್ನು ಸೆಪ್ಟೆಂಬರ್ 5 ರಂದು ಅಪ್ಲೋಡ್ ಮಾಡಲಾಗಿದ್ದು, ಈಗಾಗಲೇ 300,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ ಬಳಕೆದಾರರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಕ್ಲೋ ಕೈಸೆ ಭಿ ಲೆಕಿನ್ ಜಾನ್ ತೋ ಬಚ್ ಗಯಿ” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಜೀವನದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಸಹಾಯ ಮಾಡುತ್ತಲೇ ಇರಿ” ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು ಕೃತಜ್ಞತೆಯನ್ನು ವ್ಯಕ್ತಪಡಿಸಿ, “ವೃದ್ಧನನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳು. ನೃತ್ಯ ಮಾಡುತ್ತಲೇ ಇರಿ ಮತ್ತು ರೀಲ್ ಗಳನ್ನು ಮಾಡುತ್ತಲೇ ಇರಿ; ನೀವು ಜೀವನದಲ್ಲಿ ಯಶಸ್ಸನ್ನು ಗಳಿಸಿರಿ ಎಂದು ಹಾರೈಸಿದ್ದಾರೆ.