Thursday, 12th December 2024

Viral Video: ವಿನಮ್ರತೆಯಿಂದ ತಲೆ ಬಾಗುವ ಜಿಂಕೆಯ ಕಂಡೀರಾ..!? – ಚಿಗರೆಯ ವಿನಯತೆಗೆ ಪ್ರಾಣಿಪ್ರಿಯರು ಫುಲ್‌ ಫಿದಾ!

ಪ್ರಾಣಿಗಳಿಗೂ ಸೂಕ್ಷ್ಮ ಮನಸ್ಸಿರುತ್ತದೆ ಹಾಗೂ ಅವುಗಳೂ ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ ಎನ್ನುವ ವಿಚಾರವನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ ಮತ್ತು ನೋಡುತ್ತಿರುತ್ತೇವೆ. ಇದಕ್ಕೊಂದು ತಾಜಾ ನಿದರ್ಶನವೆಂಬಂತೆ ಜಪಾನ್‌ನ (Japan) ಉದ್ಯಾನವನವೊಂದರಲ್ಲಿರುವ ಜಿಂಕೆಯೊಂದು ತಲೆ ಬಾಗಿ ಪ್ರವಾಸಿಗರನ್ನು ಸ್ವಾಗತಿಸುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಟ್ರಾವೆಲರ್‌ ಇನ್‌ಫ್ಲ್ಯುವೆನ್ಸರ್‌ ಆಗಿರುವ ದಿವ್ಯಾ ಎಂಬವರು ತಾವು ಇತ್ತೀಚಿಗೆ ಕೈಗೊಂಡಿದ್ದ ಜಪಾನ್‌ ಪ್ರವಾಸಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿದ್ದರು. ಅದರಲ್ಲಿ ಅವರು ಅಲ್ಲಿನ ಪಾರ್ಕ್‌ ಒಂದರಲ್ಲಿರುವ ನಾರಾ ಜಿಂಕೆಯನ್ನು ಭೇಟಿ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿರುವಂತೆ ದಿವ್ಯಾ ಅವರು ಪಾರ್ಕ್‌ ನಲ್ಲಿ ನಡೆದಾಡುತ್ತಾ ನಾರಾ ಜಿಂಕೆಯ ಸಮೀಪಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿ ಆಕೆ ಜಿಂಕೆಯ ಮುಂಭಾಗದಲ್ಲಿ ವಿನಮ್ರತೆಯಿಂದ ತಲೆ ಬಾಗುತ್ತಾರೆ, ಇದಕ್ಕೆ ಪ್ರತಿಯಾಗಿ ಜಿಂಕೆಯೂ ಸಹ ಆಕೆಯನ್ನು ನೋಡಿ ತಲೆಬಾಗಿ ವಂದಿಸುತ್ತದೆ. ಬಳಿಕ ದಿವ್ಯಾ ಆ ಜಿಂಕೆಗೆ ಬಿಸ್ಕತ್ತು ನೀಡುತ್ತಾರೆ.

ಈ ಜಿಂಕೆ ದಿವ್ಯಾ ಅವರಿಗೆ ತಲೆಬಾಗಿ ಅವರಿಂದ ಬಿಸ್ಕತ್ತು ಸ್ವೀಕರಿಸಿದ ಬಳಿಕ ಪಾರ್ಕ್‌ ನಲ್ಲಿದ್ದ ಉಳಿದ ಪ್ರವಾಸಿಗರ ಜೊತೆಯೂ ಹೀಗೇ ವರ್ತಿಸುತ್ತದೆ. ಇನ್ನೊಬ್ಬ ಪ್ರವಾಸಿ ಈ ಜಿಂಕೆಯ ಮುಂದೆ ತಲೆಬಾಗಿದಾಗ ಅದೂ ಕೂಡಾ ಅದೇ ರೀತಿಯ ಪ್ರತಿಕ್ರಿಯೆ ನೀಡುತ್ತದೆ. ಬಳಿಕ ಆ ಪ್ರವಾಸಿ ಅದಕ್ಕೆ ತಿಂಡಿಯನ್ನು ನೀಡುತ್ತಾರೆ.

ಈ ವಿಡಿಯೋವನ್ನು ತನ್ನ ಇನ್‌ ಸ್ಟಾ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ದಿವ್ಯಾ ಅವರು, “ಇದೇ ಕಾರಣಕ್ಕೆ ನಾನು ಜಪಾನ್‌ ಗೆ ಹೋಗಲು ಬಯಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ಇನ್‌ ಸ್ಟಾಗ್ರಾಂನಲ್ಲಿ ೧೭ ಮಿಲಿಯನ್‌ ವೀಕ್ಷಣೆಯನ್ನು ಪಡೆದುಕೊಂಡಿದ್ದು ಸಾವಿರಾರು ಜನರು ಇದಕ್ಕೆ ಕಮೆಂಟ್‌ ಮಾಡಿದ್ದಾರೆ. “ನೋಡಿ ಈ ಜಿಂಕೆ ಎಷ್ಟು ಗೌರವ ಕೊಡ್ತಿದೆ..? ತುಂಬಾ ನಾಚಿಕೆ ಸ್ವಭಾವದ್ದು, ತುಂಬಾ ಸ್ಮರಣಶಕ್ತಿಯುಳ್ಳದ್ದು..ʼ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು, “ಅವುಗಳಿಗೆ ಆಹಾರವನ್ನು ಕೊಡಿ.. ಸುಮ್ಮನೆ ದಿನಕ್ಕೆ 100 ಬಾರಿ ಬಾಗುವಂತೆ ಮಾಡಬೇಡಿ..ʼ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Navjot Singh Sidhu: ‘ಠೋಕೋ ಭಾಯಿ ಠೋಕೋ..’- ಕಪಿಲ್ ಶರ್ಮಾ ಶೋಗೆ ಮರಳಿದ ನವಜೋತ್ ಸಿಂಗ್ ಸಿಧು -5 ವರ್ಷಗಳ ಹಿಂದೆ ಏನಾಗಿತ್ತು? 

ಜಪಾನ್‌ ನ ನಾರಾ ಜಿಂಕೆ ಪಾರ್ಕ್‌ ನ ವಿಶೇಷತೆಗಳೇನು?

ಇಲ್ಲಿರುವ ಜಿಂಕೆ ವಿನಮ್ರತೆಯಿಂದ ಪ್ರವಾಸಿಗರ ಮುಂದೆ ತಲೆಬಾಗುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಜಿಂಕೆಗಳಿಗಾಗಿಯೇ ಮೀಸಲಾಗಿರುವ ಈ ಪಾರ್ಕ್‌ ಜಪಅನಿನ ಮೌಂಟ್‌ ವಾಕಾಕುಸ ಪರ್ವತದ ತಪ್ಪಲಿನಲ್ಲಿದ್ದು, ಇಲ್ಲಿಗೆ ದೇಶ-ವೀದೇಶಗಳ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಜಪಾನಿನ ಟ್ರಾವೆಲ್‌ ವೆಬೆ ಸೈಟ್‌ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ನಾರಾ ನಿಲ್ದಾಣದ ಮೂಲಕ ಸಾಗಿ ಈ ಭಾಗಕ್ಕೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ. ಈ ಪಾರ್ಕಿಗೆ ಪ್ರವೇಶಿಸುವ ಸಂದರ್ಭದಲ್ಲೇ ಪ್ರವಾಸಿಗರಿಗೆ ಜಿಂಕೆಯ ಜೊತೆ ಸಂವಹನ ನಡೆಸಲು ಮತ್ತು ಅವುಗಳಿಗೆ ಉಣಿಸಲು ತಿಳಿಸಲಾಗುತ್ತದೆ ಮತ್ತು ಇದರೊಂದಿಗೆ ಜಗತ್ತಿನಲ್ಲೇ ಅತೀ ದೊಡ್ಡದಾಗಿರುವ ಬುದ್ಧನ ಕಂಚಿನ ಪ್ರತಿಮೆಗೆ ನಮಸ್ಕರಿಸುವಂತೆ ಸೂಚಿಸಲಾಗುತ್ತದೆ.

ಇಲ್ಲಿ ಪ್ರವಾಸಿಗರು ಜಿಂಕೆಗಳಿಗೆ ಡಿಯರ್‌ ಕ್ರ್ಯಾಕರ್‌ ಗಳನ್ನು ತಿನ್ನಿಸುತ್ತಾರೆ. ಈ ಆಹಾರವನ್ನು ತಿಂದ ಬಳಿಕ ಜಿಂಕೆ ಕೆಲವೊಮ್ಮೆ ಕೃತಜ್ಞತಾಪೂರ್ವಕವಾಗಿ ತಲೆಬಾಗುತ್ತದೆ.