Monday, 16th May 2022

ದೇಶದ ಪ್ರಧಾನಿ ರಕ್ಷಣೆ ಪೊಲೀಸರ ಕರ್ತವ್ಯ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಡೆದ ‘ಹೇಗಿರುತ್ತದೆ ನಮ್ಮ ಪ್ರಧಾನಿಯವರ ಭದ್ರತೆ’ ಕುರಿತ ಚರ್ಚೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಡಾ.ಗುರುಪ್ರಸಾದ್ ಅಭಿಪ್ರಾಯ

ಬೆಂಗಳೂರು: ಒಬ್ಬ ಪ್ರಧಾನಿಯ ಪ್ರವಾಸದಲ್ಲಿ ಬಹುಮುಖ್ಯವಾದ ಪಾತ್ರ ಎಂದರೆ ಅವರ ಭದ್ರತೆಯ ಬಗ್ಗೆ ವಿಶೇಷವಾದ ಎಚ್ಚರಿಕೆ ವಹಿಸುವುದು. ಇದರಲ್ಲಿ ಸ್ವಲ್ಪ ಯಡವಟ್ಟಾದರೂ ಅದು ಕರ್ತವ್ಯ ಲೋಪವಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ ವೇಳೆ ಆದ ಭದ್ರತಾ ಲೋಪಕ್ಕೆ
ಪೊಲೀಸರ ವೈಫಲ್ಯವೇ ಕಾರಣ. ಇದರಲ್ಲಿ ಯಾವ ಅನುಮಾನವೂ ಇಲ್ಲ. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಡೆದ ಹೀಗಿರುತ್ತದೆ ನಮ್ಮ ಪ್ರಧಾನಿಗಳ ಭದ್ರತೆ’‘ಕುರಿತ ಮಾತುಕತೆಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ.ವಿ.ಗುರುಪ್ರಸಾದ್ ಅವರು ಹೇಳಿದ್ದು ಹೀಗೆ.

ಪ್ರಧಾನಿಯರ ಭದ್ರತೆ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯಿಂದ ಗಮನಹರಿಸಬೇಕಾಗುತ್ತದೆ. ಪ್ರಧಾನಿ ಎಂದರೆ ನಮ್ಮ ದೇಶದ ಆಸ್ತಿ. ಈ ಆಸ್ತಿ ರಕ್ಷಿಸ ಬೇಕಾಗಿರು ವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಅದರಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಅಮೆರಿಕದಲ್ಲಿ ಬಾಂಬ್ ಸ್ಫೋಟಿಸಿದ್ದ ಒಸಾಮ ಬಿನ್ ಲ್ಯಾಡೆನ್ ತನ್ನ ಈ ಕೆಲಸವನ್ನು ಪ್ರಪಂಚದಾದ್ಯಂತ ಬಿಂಬಿಸಲು ಪಾಕಿಸ್ತಾನದ ಪತ್ರಕರ್ತನನ್ನು ಆಹ್ವಾನಿಸಿದ್ದ. ಅದರಂತೆ ಬಂದ ಅತನನ್ನು ಕಂಬಳಿಯಲ್ಲಿ ಸುತ್ತಿ ವ್ಯಾನ್‌ನಲ್ಲಿ ಕರೆತಂದು ವಿವಸ್ತ್ರಗೊಳಿಸಿ ತಪಾಸಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದ ಪತ್ರಕರ್ತನಿಗೆ ಉತ್ತರ ನೀಡಿದ್ದ ಲಾಡೆನ್, ನನ್ನ ಮಕ್ಕಳು ಮತ್ತು ನನ್ನ ಹೆಂಡತಿ ನನ್ನ ಬಳಿ ಬಂದರೂ ಈ ತಪಾಸಣೆಗೆ ಒಳಗಾಗಲೇಬೇಕು ಎಂದಿದ್ದನಂತೆ.

ಒಸಾಮ ಬಿನ್ ಲಾಡೆನ್‌ನಂತಹ ಉಗ್ರಗಾಮಿಗಳೇ ತಮ್ಮ ಭದ್ರತೆಯ ಬಗ್ಗೆ ಎಚ್ಚರ ವಹಿಸಿರುವಾಗ, ಒಂದು ದೇಶವನ್ನು ಪ್ರತಿನಿಧಿಸುವ ಪ್ರಧಾನಿಗೆ ಎಷ್ಟರಮಟ್ಟಿಗೆ ಭದ್ರತೆ ಇರಬೇಕು ಎಂಬುದು ನಾವು ಅರಿಯಬೇಕಾಗಿದೆ.

ಭದ್ರತಾ ಲೋಪದಿಂದಾಗಿ ಪ್ರಾಧಾನಿಗಳಾಗಿದ್ದ ಇಂದಿರಾಗಾಂಧಿ ಮತ್ತು ರಾಜಿವ್‌ಗಾಂಧಿ ಹತ್ಯೆಯಾದ ಉದಾ ಹರಣೆ ನಮ್ಮ ಮುಂದಿದೆ. ಇಂದಿರಾಗಾಂಧಿ ಹತ್ಯೆಯ ಬಳಿಕ ಕೆಂದ್ರ ಸರಕಾರ 1984ರಲ್ಲಿ ಎಸ್‌ಪಿಜಿ ವಿಶೇಷ ಭದ್ರತಾ ಸಂಸ್ಥೆಯನ್ನು ಸ್ಥಾಪಿಸಿತು. ಈ ಎಸ್‌ಪಿಜಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡುವು ದಾದರೆ, ಪ್ರಧಾನಿ ಯವರ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಇವರು ನೋಡಿಕೊಳ್ಳುತ್ತಾರೆ. ಒಂದುವೇಳೆ ಪ್ರಧಾನಿ ರಾಜ್ಯಗಳಿಗೆ ಪ್ರವಾಸ ಕೈಗೊಂಡಲ್ಲಿ ಅವರು ತಂಗುವ ಸ್ಥಳದಿಂದ ಮೊದಲುಗೊಂಡು ಯಾವ ರಸ್ತೆ ಮೂಲಕ ಪ್ರಯಾಣ ಮಾಡಬೇಕು? ಬದಲಿ ಮಾರ್ಗದ ವ್ಯವಸ್ಥೆ, ಅವರ ಊಟ ಉಪಚಾರದ ಬಗ್ಗೆ ಎಚ್ಚರ… ಹೀಗೆ ಸಂಪೂರ್ಣ ಜವಾಬ್ದಾರಿ ಅವರ ಹೆಗಲ ಮೇಲಿರುತ್ತದೆ.

ಪ್ರಧಾನಿ ಒಂದು ರಾಜ್ಯಕ್ಕೆ ಭೇಟಿ ನೀಡುವುದಾದರೆ ಸಂಬಂಧಪಟ್ಟ ರಾಜ್ಯದ ಗುಪ್ತಚರ ಇಲಾಖೆಯೊಂದಿಗೆ ಚರ್ಚಿಸಿ ಅವರ ಪ್ರವಾಸದ ಸಂಪೂರ್ಣ ಸಿದ್ಧತೆಗಳನ್ನು
ಕೇಂದ್ರದಿಂದ ಮಾಡಿಕೊಳ್ಳಲಾಗುತ್ತದೆ. ರಾಜ್ಯಕ್ಕೆ ಭೇಟಿ ನೀಡಿದ ಮೇಲೆ ಅಲ್ಲಿಂದ ತೆರಳುವವರೆಗೆ ಆ ರಾಜ್ಯದ ಪೊಲೀಸರೇ ಪ್ರಧಾನಿಯ ಭದ್ರತೆಗೆ ಸಂಪೂರ್ಣ ಜವಬ್ಧಾರರಾಗಿರುತ್ತಾರೆ. ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ಇರುವ, ಪ್ರಧಾನಿ ತಂಗುವ ಸ್ಥಳಕ್ಕೆ ವಿಶೇಷ ಮತ್ತು ಹೆಚ್ಚಿನ ಭದ್ರತೆ ಒದಗಿಸಲಾಗಿರುತ್ತದೆ. ಸಾಮಾಜಿಕ ಕಾರ್ಯಕ್ರಮಗಳಿಗೆ ತೆರಳಿದಾಗ ಪ್ರಧಾನಿಗೆ ಭದ್ರತೆ ನೀಡುವುದು ಸವಾಲಿನ ಕೆಲಸ. ಸಾವಿರಾರು ಜನರ ಮಧ್ಯೆ ಯಾವಾಗ, ಏನಾದರೂ ಆಗಬಹುದು. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆರೋಗ್ಯದಲ್ಲಿ ಸಮಸ್ಯೆಯಾದರೆ ಹಿಂದೆಯೇ ಸುಸರ್ಜಿತ ಆಬುಲೆನ್ಸ್ ಕೂಡ ಪ್ರಧಾನಿ ವಾಹನವನ್ನು ಹಿಂಬಾಲಿಸುತ್ತದೆ.

ಎಸ್‌ಪಿಜಿ ಗೆ ಆಯ್ಕೆ ಪ್ರಕ್ರಿಯೆ ತುಂಬಾ ಕಠಿಣವಾದದ್ದು. ಆ ಕೆಲಸಕ್ಕೆ ಸೇರಲು ಬರುವ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ತಪಾಸಣೆ, ಆತನ ಚಲನವಲನ,
ವೈದ್ಯಕೀಯ ಪರೀಕ್ಷೆ, ವ್ಯಕ್ತಿಯ ಪೂರ್ವಾಪರಗಳನ್ನು ಗಮನಿಸಲಾಗುತ್ತದೆ. ಆಯ್ಕೆಗೊಂಡ ನಂತರ ತರಬೇತಿಯೂ ತುಂಬಾ ಕಠಿಣವಾಗಿರುತ್ತದೆ.

೨ರಿಂದ ೩ ವರ್ಷದ ಬಳಿಕ ಎಸ್‌ಪಿಜಿಗಳನ್ನು ಬದಲಿಸಲಾಗುತ್ತದೆ. ಇಷ್ಟೆಲ್ಲ ಪೂರ್ವಭದ್ರತೆ ಇದ್ದರೂ ಪಂಜಾಬಿನ ಹುಸೇನಿವಾಲಕ್ಕೆ ತೆರಳುವಾಗ ಹವಾಮಾನ
ವೈಪರಿತ್ಯದಿಂದ ಹೆಲಿಕಾಪ್ಟರ್ ಬದಲು ರಸ್ತೆ ಮೂಲಕ ತೆರಳಲು ನಿರ್ಧರಿಸಲಾಯಿತು. ಸಮಾನ್ಯವಾಗಿ 110 ಕಿ.ಮೀ.ನಷ್ಟು ದೂರ ರಸ್ತೆ ಸಂಚಾರಕ್ಕೆ ಅವಕಾಶ
ಇರುವುದಿಲ್ಲ. ಆದರೂ ಅನಿವಾರ್ಯ ಸಂದರ್ಭದಲ್ಲಿ ಪ್ರಯಾಣ ಬೆಳೆಸಲಾಯಿತು. ಹೀಗಿದ್ದರೂ ಮುಂದೆ ಹೋಗುತ್ತಿದ್ದ ಅಡ್ವಾಂಸ್ ಪೈಲೆಟ್ ಏಕೆ ಪ್ರತಿಭಟನೆಯ ಮುನ್ಸೂಚನೆ ನೀಡಲಿಲ್ಲ? ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಿಂದ 300 ಮೀ. ಹತ್ತಿರ ಏಕೆ ವಾಹನವನ್ನು ನಿಲ್ಲಿಸಲಾಯಿತು? ಪಕ್ಕದಲ್ಲಿದ್ದ ರಸ್ತೆಯಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಹೇಗೆ ಅವಕಾಶ ನೀಡಲಾಗಿತ್ತು? ಎಂಬ ಪ್ರಶ್ನೆಗಳು ಮೂಡುತ್ತವೆ. ಹೀಗಾಗಿಯೇ ಇದನ್ನು ಪೊಲೀಸ್ ವೈಫಲ್ಯ ಎಂದು ಪರಿಗಣಿಸಬೇಕಾಗುತ್ತದೆ.

ಇಂದಿರಾಗಾಂಧಿ, ರಾಜಿವ್‌ಗಾಂಧಿ, ಎಚ್.ಡಿ.ದೇವೇಗೌಡ, ವಿ.ಪಿ.ಸಿಂಗ್ ಮುಂತಾದವರು ಪ್ರಧಾನಿಗಳಾಗಿದ್ದ ವೇಳೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾನು ರಕ್ಷಣಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದೇನೆ. ನನಗೂ ಅನೇಕ ಅನುಭವಗಳಾಗಿವೆ. ಅದನ್ನು ನಾನು ಬರೆದ ಪುಸ್ತಕದಲ್ಲಿ ಬರೆದಿದ್ದೇನೆ ಎಂದರು.

೭ ಸುತ್ತಿನ ಕೋಟೆಯ ಭದ್ರತೆ
ಪ್ರಧಾನಿಯವರಿಗೆ ಹಿಂದೆ ಮಹಾರಾಜರಿಗೆ ನೀಡುತ್ತಿದ್ದ ಏಳು ಸುತ್ತಿನ ಕೋಟೆಯ ಭದ್ರತೆಯಂತೆಯೇ ಸುರಕ್ಷತೆ ನಿಯೋಜಿಸಲಾಗಿರುತ್ತದೆ. ದಾಳಿಗೊಳಗಾಗುವ ವ್ಯಕ್ತಿಯ ಸಂಪೂರ್ಣ ರಕ್ಷಣೆಯೇ ಇದರ ಮುಖ್ಯ ಉದ್ದೇಶವಾಗಿರುತ್ತದೆ. ಈ ಸುರಕ್ಷತೆಗೆ ಸಲಹೆ ಸೂಚನೆ ನೀಡುವ ಒಂದು ಪುಸ್ತಕ ಬರೆಯಲಾಗಿದೆ. ಅದರ ಹೆಸರು, ಬ್ಲೂಬುಕ್. ಜಿಲ್ಲೆಯ ಎಲ್ಲ ಎಸ್‌ಪಿ ಮತ್ತು ಕಮೀಷನರ್ ಕೊಠಡಿಯಲ್ಲಿ ಈ ಪುಸ್ತಕ ಕಡ್ಡಾಯವಾಗಿರುತ್ತದೆ ಎಂದು ಡಾ.ಡಿ.ವಿ.ಗುರುಪ್ರಸಾದ್ ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳಿಗೆ ಭದ್ರತಾ ವ್ಯವಸ್ಥೆಯ ಕುರಿತಂತೆ ಯಲ್ಲೋ ಬುಕ್‌ಅನ್ನು ಕೆಲವು ಅಧಿಕಾರಿಗಳು ಸೇರಿ ಮಾಡಿದ್ದೇವೆ.
? ಇಂದಿರಾಗಾಂಧಿ ಹತ್ಯೆಯ ನಂತರ ದೇಶದಲ್ಲಿ ಎಸ್‌ಪಿಜಿ ಭದ್ರತಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಎಸ್‌ಪಿಜಿ ಪ್ರಧಾನಿಯವರ ಭದ್ರತೆ ನೋಡಿಕೊಳ್ಳತ್ತಾರೆ.
? ಪ್ರಧಾನಿ ಯಾವುದೇ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಾದರೆ ಪೂರ್ವಭಾವಿ ಸಿದ್ಧತೆ ಮಾಡಲಾಗಿರುತ್ತದೆ. ಅದರಲ್ಲಿ ಮುಖ್ಯವಾಗಿ ವೇದಿಕೆಯ ಬಳಿ ಒಂದು ಶೌಚಾಲಯ ನಿರ್ಮಾಣವಾಗಿರಲೇಬೇಕು.
? ಪ್ರಧಾನಿನಿ ಚಲಿಸುವ ವಾಹನಕ್ಕಿಂತ ೧೦ ಕಿ.ಮೀ. ಮುಂದೆಯೇ ಒಂದು ಅಡ್ವಾಂಸ್ ಪೈಲೆಟ್ ಕಾರು ಸಂಚರಿಸುತ್ತದೆ. ಮುಂದೆ ಪ್ರಾಧಾನಿ ಸಂಚಾರಕ್ಕೆ
ಯಾವುದೆ ತೊಂದರೆ ಇದ್ದರೂ ವಯರ್‌ಲೆಸ್ ಮೂಲಕ ಮಾಹಿತಿಯನ್ನು ಪ್ರಧಾನಿಯ ಭದ್ರತಾ ಸಿಬ್ಬಂದಿಗೆ ತಿಳಿಸಲಾಗುತ್ತದೆ. ಕೂಡಲೇ ಪ್ರಧಾನಿ ಸಂಚರಿಸುವ ಮಾರ್ಗವನ್ನು ಬದಲಿಸಲಾಗುತ್ತದೆ.

? ಪ್ರಧಾನ ಮಂತ್ರಿ ಚಲಿಸುವ ಮಾರ್ಗಮಧ್ಯೆ ಯಾವುದಾದರು ಆಪತ್ತು ಎದುರಾದರೆ, ಕೂಡಲೆ ಅವರನ್ನು ಸುರಕ್ಷಿತ ಕೋಣೆಗೆ ಕರೆದೊಯ್ದು, ಎಲ್ಲ ನಿಯಂತ್ರಣಕ್ಕೆ ಬಂದ ನಂತರವಷ್ಟೇ ಅವರನ್ನು ಹೊರಗೆ ಕರೆತರಲಾಗುತ್ತದೆ. ಈ ಸುರಕ್ಷತಾ ಕೊಣೆಯ ಸ್ಥಳವನ್ನು ಮೊದಲೇ ಆಯ್ಕೆ ಮಾಡಲಾಗಿರುತ್ತದೆ.
? ಸಿಆರ್‌ಪಿಎಫ್ ಕಮ್ಯಾಂಡ್ ಕೆಲಸಕ್ಕೆ ೨೦೨೦ರಿಂದ ಮಹಿಳೆಯರನ್ನು ಆಯ್ಕೆ ಮಾಡಿ ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ.

***

ಪ್ರಪಂಚದಲ್ಲೆ ಅತಿ ಹೆಚ್ಚು ಭದ್ರತೆ ಹೊಂದಿರುವ ಪ್ರದೇಶವೆಂದರೆ ಅಮೆರಿಕದ ವೈಟ್‌ಹೌಸ್. ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಮ್ಮ ಬ್ಲೂ ರೂಂನಲ್ಲಿ ಕೇವಲ ೫ ಜನರ ಔತಣಕೂಟಕ್ಕೆ ಆಹ್ವಾನ ನೀಡಲಾಗಿತ್ತು. ಅವರಲ್ಲಿ ಒಬ್ಬ ಆಹ್ವಾನವಿಲ್ಲದ ವ್ಯಕ್ತಿ ಭಾಗಿಯಾಗಿದ್ದು, ಭದ್ರತಾ ಲೋಪಕ್ಕೆ ಹಿಡಿದ ಕೈಗನ್ನಡಿ. ನಂತರ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ ಏರ್ಪಡಿಸಿದ್ಧ ಸುದ್ದಿಗೋಷ್ಠಿಯಲ್ಲಿ ಸಿನಿಮಾ ತಾರೆ ಒಬ್ಬಳು ಪತ್ರಕರ್ತೆ ಎಂದು ಸುಳ್ಳು ಹೇಳಿ ಬಂದು ಪ್ರಶ್ನೆ ಕೇಳಿ ಅಧ್ಯಕ್ಷರನ್ನು ಮುಜುಗರಕ್ಕೇಡು ಮಾಡಿದ ಉದಾಹರಣೆಯೂ ಇದೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ಪತ್ರಿಕೆ