ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಗರದ ಐತಿಹಾಸಿಕ ಸ್ಥಳಗಳ ಪರಿಚಯ
ತಮ್ಮ ಪ್ರವೃತ್ತಿಯ ಕುರಿತು ಕುತೂಹಲಕಾರಿ ಅಂಶಗಳ ಹಂಚಿಕೆ
ಬೆಂಗಳೂರು: ಬೆಂದಕಾಳೂರಿನ ಬಗ್ಗೆ ಇತಿಹಾಸದ ತಜ್ಞರು ಅನೇಕ ಕುತೂಹಲಕಾರಿ ಸಂಗತಿಗಳನ್ನು ಕಲೆಹಾಕಿದ್ದಾರೆ. ಆದರೆ, ಇಲ್ಲೊಬ್ಬರು ಚಾಲಕ ರಾಗಿದ್ದುಕೊಂಡು ಐತಿಹಾಸಿಕ ಪರಂಪರೆ ಸಾರುತ್ತಾ ಪ್ರಯಾಣಿಕರ ಮನಗೆಲ್ಲುವ ಮೂಲಕ ವಿಶಿಷ್ಟ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅವರೇ ಬಿಎಂಟಿಸಿ ಬಸ್ ಚಾಲಕ ಧನಪಾಲ್.
ಧನಪಾಲ ಅವರು ಸಕಲ ಕಲಾವಲ್ಲಭ ಅಂದರೆ ತಪ್ಪಾಗಲಾರದು. ಇವರು ಕೇವಲ ಚಾಲಕ. ಗೈಡ್ ಅಷ್ಟೇ ಅಲ್ಲ. ಸ್ಮಾರಕ, ಶಾಸನಗಳ ಬಗ್ಗೆಯೂ ಅನ್ವೇಷಣೆ, ಸಂಶೋಧನೆಯಲ್ಲೂ ತೊಡಗಿಕೊಂಡಿದ್ದಾರೆ. ಜತೆಗೆ ಬೆಂಗಳೂರಿನ ಪ್ರವಾಸಿ, ಐತಿಹಾಸಿಕ ತಾಣಗಳ ಕುರಿತು ನಮ್ಮ ಬೆಂಗಳೂರು ಪುಸ್ತಕ ವನ್ನು ವೇಮಗಲ್ ಸೋಮಶೇಖರ್ ಜತೆ ಗೂಡಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆದಿದ್ದಾರೆ. ಒಟ್ಟಾರೆ ಬೆಂಗಳೂರಿನ ಪರಂಪರೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ಧನಪಾಲ್ ಈ ಸೇವೆ ನಿಜಕ್ಕೂ ಶ್ಲಾಘನೀಯ ಎನ್ನಬಹುದು.
ಇಂತಹ ವಿಶಿಷ್ಟ ವ್ಯಕ್ತಿ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಭಾಗವಹಿಸಿ ಅನೇಕ ಐತಿಹಾಸಿಕ ಸಂಗತಿಗಳನ್ನು ಕೇಳುಗರ ಮುಂದಿಟ್ಟರು. ಪ್ರವಾಸಿಗಳಿಗೆ ಮಾರ್ಗದರ್ಶನ ನೀಡಲು ಅಧ್ಯಯನದಲ್ಲಿ ತೊಡಗಿದ್ದ ಪುಸ್ತಕವೊಂದರಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮಾಹಿತಿ ಇತ್ತು. ಬೆಂಗಳೂರಿನಲ್ಲಿಯೇ ತನ್ನ ಸಮಾಧಿ ಆಗಬೇಕು ಎಂಬ ಇಚ್ಛೆ ಯನ್ನು ಅವರು ವ್ಯಕ್ತಪಡಿಸಿದ್ದರು. ಬೆಂಗಳೂರು ಮತ್ತು ಮೈಸೂರು ರಾಜ್ಯದ ಬೆಳವಣಿಗೆಗೆ ಸಾಕಷ್ಟು ಕೊಡುಗೆ
ನೀಡಿರುವ ಮಿರ್ಜಾ ಅವರ ಸಮಾಧಿ ಎಲ್ಲಿದೆ ಎಂದು ಹುಡುಕಾಡಲು ಪ್ರಯತ್ನಿಸಿದೆ.
ಕೆಲ ತಿಂಗಳು ಕಾಲ ಹಲವಾರು ಸ್ಮಶಾನಗಳಲ್ಲಿ ಹುಡುಕಿದರೂ ಅದು ಪತ್ತೆಯಾಗಲಿಲ್ಲ. ಕೊನೆಗೆ ಜಾನ್ಸನ್ ಮಾರು ಕಟ್ಟೆ ಬಳಿಯ ಈದ್ಗಾ ಮೈದಾನದಲ್ಲಿ ಮಿರ್ಜಾ ಇಸ್ಮಾಯಿಲ್ ಸಮಾಧಿ ಪತ್ತೆಯಾಯಿತು. ಸಮೀಪದ ನಟ ಫಿರೋಜ್ ಖಾನ್ ಸಮಾಧಿಯೂ ಇತ್ತು ಎಂದು ವಿವರಿಸಿದರು. ಟೈಗರ್ ಪ್ರಭಾಕರ್ ಹಾಗೂ ಕ್ರುಂಬಿಗಲ್ (ಲಾಲ್ ಬಾಗ್ ಅಭಿವೃದ್ಧಿಗೆ ಶ್ರಮಿಸಿದ್ದ ತೋಟ ಗಾರಿಕಾ ಅಧಿಕಾರಿ) ಅವರ ಸಮಾಧಿ ಪತ್ತೆ ಹಚ್ಚಿದೆ. ಈ ಅವಧಿಯಲ್ಲಿ ಅವರಿಗೆ ಕಾಕ್ಸ್‌ಟೌನ್ ಬಳಿಯ ಕಪ್ಪಳ್ಳಿ ಸ್ಮಶಾನದಲ್ಲಿ ನೀಲಂ ಸಂಜೀವರೆಡ್ಡಿ (ದೇಶದ ಆರನೇ ರಾಷ್ಟ್ರಪತಿ) ಅವರ ಸಮಾಧಿಯೂ ಪತ್ತೆಯಾಯಿತು.
ಅದೇ ಸ್ಮಶಾನದಲ್ಲಿ ಕನ್ನಡ ಚಿತ್ರರಂಗದ ಸುಬ್ಬಯ್ಯ ನಾಯ್ಡು ಅವರ ಸಮಾಧಿ ಇತ್ತು. ಬಿ.ಡಿ. ಜತ್ತಿ ಅವರ ಸಮಾಧಿ ಕೆಂಗೇರಿಯಲ್ಲಿದೆ ಎಂದು ಅವರು ಹೇಳಿದರು. ದೇವಿಕಾರಾಣಿ ಅವರ ೪೬೦ ಎಕರೆ ಜಾಗ ಹೊಂದಿದ್ದ ಇವರ ಸಮಾಧಿ ಬೆಂಗಳೂರಿನಲ್ಲಿಯೇ ಇದೆ. ನಟಿ ಕಲ್ಪನಾ ಸಮಾಧಿ ನೋಡಲು ಕುತೂ ಹಲ ಇತ್ತು. ಬನಶಂಕರಿ ಬಳಿ ಇರುವುದು ಪತ್ತೆಯಾಯಿತು. ಮೈಸೂರಿನ ಮಹಾರಾಜರ ಸಮಾಧಿ, ನಟರಾದ ಎಂ.ಪಿ. ಶಂಕರ್, ಸುಬ್ಬಯ್ಯ ನಾಯ್ಡು, ಎಸ್. ಸಜ್ಜನ್‌ರಾವ್ ಅವರ ಸಮಾಧಿಗಳನ್ನು ಹುಡುಕಾಟ ನಡೆಸಿದ್ದೇನೆ ಎಂದು ಅವರು ಮಾಹಿತಿ ನೀಡಿದರು.
ಲೇಖಕ ವೇಮಗಲ್ ಸೋಮಶೇಖರ್, ಇತಿಹಾಸಕಾರ ಸುರೇಶ್ ಮೂನ, ಶಾಸನ ತಜ್ಞ ಪ್ರೊ. ಕೆ.ಆರ್. ನರಸಿಂಹನ್, ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಡಾ.
ಗೋಪಾಲ, ಐಸಿಎಚ್‌ಆರ್ ಬೆಂಗಳೂರು ವಿಭಾಗದ ನಿರ್ದೇಶಕ ಎಸ್.ಕೆ. ಅರುಣಿ ಅವರನ್ನು ಭೇಟಿ ಮಾಡಿ ಅವರಿಂದ ಬೆಂಗಳೂರಿನ ಪ್ರವಾಸಿ ಸ್ಥಳಗಳು, ಐತಿಹಾಸಿಕ ತಾಣ, ಸ್ಮಾರಕಗಳು, ಶಾಸನಗಳ ಕುರಿತು ಪರಿಚಯ ಮಾಡಿಕೊಂಡೆ. ವಾರದ ರಜೆ ಸಮಯದಲ್ಲಿ ನರಸಿಂಹನ್, ಕೃಷ್ಣಮೂರ್ತಿ, ಗೋಪಾಲ್ ಅವರೊಡನೆ ಕ್ಷೇತ್ರಕಾರ್ಯ, ಶಾಸನ ಸಂಶೋಧನೆ, ಅಧ್ಯಯನದಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದೆ ಎಂದು ಹೇಳಿದರು.
ಕೊಡಿಗೆಹಳ್ಳಿ ದಾನ ಶಾಸನ, ಜಕ್ಕೂರು, ಅಳಸಂದ್ರ, ಬೇಗೂರು ವೀರಕಲ್ಲು ಶಾಸನ, ಕಟ್ಟಿಗೇನಹಳ್ಳಿ, ಅಗ್ರಹಾರ (ಯಲಹಂಕ), ಸಿಂಗಾಪುರ, ಕಲ್ಲೂರು,
ಬನ್ನೇರುಘಟ್ಟ ರಸ್ತೆ ಶಾಸನಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪ್ರತಿಯೊಂದು ಶಾಸನದ ರೋಚಕ ಕಥೆ ವಿವರಿಸಿದರು.
***
ಬೆಂಗಳೂರು ರೌಂಡ್ಸ್‌ನ ಚಾಲಕ, ಸಮಾಧಿಗಳ ಶೋಧನೆಯಲ್ಲಿ
ಬೆಂಗಳೂರಿನ ದರ್ಶನ ಮಾಡಿಸುವ ಬಿಎಂಟಿಸಿಯ ‘ಬೆಂಗಳೂರು ರೌಂಡ್ಸ್’ ಬಸ್‌ನ ಚಾಲಕರಾಗಿರುವ ಕೆ. ಧನಪಾಲ್‌ರದ್ದು ವಿಶಿಷ್ಟ ವ್ಯಕ್ತಿತ್ವ. ಪ್ರಯಾಣಿಕ ರಿಗೆ ನಗರದ ಬಗ್ಗೆ ಹೆಚ್ಚಿನ ಮಾಹಿತಿ ಕೊಡ ಬೇಕು ಎಂಬ ಕಾರಣಕ್ಕೆ ವಿವಿಧ ಪುಸ್ತಕಗಳನ್ನು ಓದುವುದರಲ್ಲಿ ತೊಡಗಿದವರು ಅವರು. ಕ್ರಮೇಣ ಇತಿಹಾಸ, ಸ್ಮಾರಕ, ಶಾಸನಗಳ ಬಗ್ಗೆ ಕುತೂಹಲ ಬೆಳೆಸಿಕೊಂಡ ಅವರು ಅವುಗಳ ಅನ್ವೇಷಣೆ, ಸಂಶೋಧನೆಯಲ್ಲೂ ತೊಡಗಿಕೊಂಡಿzರೆ. ಅಷ್ಟೇ ಅಲ್ಲದೆ ಮಹಾನ್ ವ್ಯಕ್ತಿಗಳ ಸಮಾಧಿಗಳ ಶೋಧನೆಯಲ್ಲೂ ನಿರತರಾಗಿದ್ದಾರೆ.
***
ಓದಿದ್ದು ಹತ್ತನೇ ತರಗತಿ, ಜ್ಞಾನ ಪಿ.ಎಚ್‌ಡಿಯಷ್ಟು!
ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಧನಪಾಲ್ ಅವರು ಓದಿರುವುದು ೧೦ನೇ ತರಗತಿವರೆಗೆ. ೧೯೮೧ರಲ್ಲಿ ಬೆಂಗಳೂರಿಗೆ ಬಂದ ಅವರಿಗೆ ೧೯೮೭ರಲ್ಲಿ ಬಿಎಂಟಿಸಿಯಲ್ಲಿ ಚಾಲಕರ ಕೆಲಸ ದೊರೆಯಿತು. ೨೦೦೬ರಿಂದ ಅವರು ‘ಬೆಂಗಳೂರು ದರ್ಶಿನಿ’ (ಬೆಂಗಳೂರು ರೌಂಡ್ಸ್) ವಾಹನದ ಚಾಲಕ ರಾದರು. ಅವರು ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿ, ಉರ್ದು, ಇಂಗ್ಲಿಷ್ ಭಾಷೆಯಲ್ಲೂ ಮಾತನಾಡಬಲ್ಲರು. ಆರಂಭದಲ್ಲಿ ತನ್ನ ಹಿರಿಯ ಸಿಬ್ಬಂದಿ ದೀನ್‌ದಯಾಳ್ ಅವರ ಮಾರ್ಗದರ್ಶನದಂತೆ ಅಲ್ಪಸ್ವಲ್ಪ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡುತ್ತಿದ್ದ ಅವರಿಗೆ, ಪ್ರಯಾಣಿಕರೊಬ್ಬರು ಸ್ಯಾಂಕಿ ‘ಕೆರೆಗೆ ಸ್ಯಾಂಕಿ’ ಎಂಬ ಹೆಸರು ಏಕೆ ಬಂತು ಎಂದು ಪ್ರಶ್ನಿಸಿದರು.
ಆಗ ಕಕ್ಕಾಬಿಕ್ಕಿಯಾದ ಧನಪಾಲ, ಮರು ದಿನದಿಂದಲೇ ನಗರದ ಪ್ರವಾಸಿ ತಾಣಗಳು, ದೇವಾಲಯಗಳು, ಐತಿಹಾಸಿಕ ಸ್ಮಾರಕಗಳ ಬಗ್ಗೆ ಮಾಹಿತಿ ತಿಳಿದು ಕೊಳ್ಳುವ ಸಲುವಾಗಿ ಓದುವುದರಲ್ಲಿ ತಲ್ಲೀನರಾದರು. ಬೆಂಗಳೂರಿನ ಕುರಿತು ಪ್ರಕಟವಾಗಿರುವ ಪುಸ್ತಕಗಳನ್ನು ಸಂಗ್ರಹಿಸಿ ಓದಿದರು. ಇವರು ವಿದ್ಯಾ ಭ್ಯಾಸದಿಂದ ತಿಳಿದಿದ್ದು ಅಷ್ಟಕಷ್ಟೆ ಆದರೆ ಅಧ್ಯಯನದಿಂದ ಸಾಕಷ್ಟು ವಿಷಯಗಳನ್ನು ತಿಳಿದಿದ್ದಾರೆ.
***
ಶಾಸನ ಮತ್ತು ಸಮಾಧಿಗಳ ಕುರಿತು ಅನೇಕ ಜನರಿಗೆ ಗೊತ್ತಿಲ್ಲ. ಶಾಸನಗಳು ಕರ್ನಾಟಕದ ಐತಿಹಾಸಿಕ ಘಟನೆಗಳನ್ನು ಹೇಳುವ ಸಾಧನ. ಸಮಾಧಿ, ಸ್ಮಾರಕ, ಶಾಸನ ಅಧ್ಯಯನ ಮಾಡಿದ ಬಿಎಂಟಿಸಿ ಬಸ್ ಚಾಲಕ ಕೆ.ಧನಪಾಲ್ ಒಬ್ಬರು ಇತಿಹಾಸಕಾರರು. ಬಿಎಂಟಿಸಿ ಬಸ್‌ನ ಚಾಲಕರಾಗಿರುವ ಕೆ.
ಧನಪಾಲ್‌ರದ್ದು ವಿಶಿಷ್ಟ ವ್ಯಕ್ತಿತ್ವ. ಗಣ್ಯರ ಸಮಾಧಿಗಳಿಗೆ ಕಾಯಕಲ್ಪ ಕಲ್ಪಿಸಿದ್ದಾರೆ. ಕನ್ನಡ ಜತೆಗೆ ತಮಿಳು, ತೆಲುಗು, ಹಿಂದಿ, ಉರ್ದು, ಇಂಗ್ಲಿಷ್‌ನಲ್ಲೂ ಮಾತನಾಡಬಲ್ಲರು.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು