ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿದುಷಿ ಡಾ.ಪ್ರಸನ್ನಾಕ್ಷಿ ಅವರಿಂದ ಅರಿವಿನ ಉಪನ್ಯಾಸ
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ಸರಸವೇ ಜನನ, ವಿಸರವೇ ಮರಣ, ಸಮರಸವೇ ಜೀವನ ಎಂಬ ಮಾತಿದೆ. ಸಾಮರಸ್ಯಕ್ಕೆ ಮತ್ತೊಂದು ಹೆಸರೇ ಕುಟುಂಬ. ಆದರೆ,
ಇತ್ತೀಚಿನ ದಿನಗಳಲ್ಲಿ ಕುಟುಂಬದಲ್ಲಿ ಸಾಮರಸ್ಯದ ಸಮಸ್ಯೆ ಎದುರಾಗುತ್ತಿದೆ. ವೈಯಕ್ತಿಕ ಪ್ರತಿಷ್ಠೆ, ಅಹಂ ಮುಂತಾದವು ಇದಕ್ಕೆ
ಕಾರಣ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಮತ್ತು ಸಾಮರಸ್ಯದ ಬದುಕಿನ ಕುರಿತು ನಿವೃತ್ತ ಸಂಸ್ಕೃತ ಪ್ರಾಧ್ಯಾಪಕಿ, ವಿದುಷಿ
ಡಾ.ಪ್ರಸನ್ನಾಕ್ಷಿ ಮಾತನಾಡಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಕುಟುಂಬ ಮತ್ತು ಸಾಮರಸ್ಯ ಬದುಕು’ ವಿಚಾರದ ಕುರಿತು ಅರಿವಿನ ಉಪನ್ಯಾಸ ನೀಡಜಿ, ಒಂದು ಶಬ್ದ ಹೇಳಬೇಕಾದರೆ ಅದಕ್ಕೆ ಅರ್ಥ ಇರಬೇಕಾಗುತ್ತದೆ. ನಾವಾಡುವ ಮಾತು ಮತ್ತು ಅದರ ಅರ್ಥ ಒಂದರಲ್ಲಿ ಒಂದು ಬೆರೆತು ಹೋಗಿದೆ. ನಮ್ಮ ಅರಿವಿಗೇ ಬರದಷ್ಟು ಅವು ಸಮ್ಮಿಳಿತಗೊಂಡಿರುತ್ತದೆ. ಆ ರೀತಿಯಲ್ಲಿ ಭಗವಂತ ಕುಟುಂಬದ ಮತ್ತು ಸಾಮರಸ್ಯವನ್ನು ಬೆರೆಸಿಟ್ಟಿದ್ದಾನೆ ಎಂದರು.
ಭಾರತದಲ್ಲಿ ಕುಟುಂಬ ಎಂಬುದು ಹಿರಿಮೆ ಇರುವ ಒಂದು ಸಂಸ್ಥೆ. ಅದು ಸಂಘಟಿತ ಸಂಸ್ಥೆಯೂ ಹೌದು. ಈ ಕುಟುಂಬ ಮನುಷ್ಯನಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದೆ ಎಂಬುದಕ್ಕೆ ಭಾರತೀಯರ ಕುಟುಂಬ ವ್ಯವಸ್ಥೆಯೇ ಉದಾಹರಣೆ. ಸಮಾಜ ಸುವ್ಯವಸ್ಥಿತ ವಾಗಿರಲು, ಕುಟುಂಬ ಸುವ್ಯವಸ್ಥೆಯಲ್ಲಿರಬೇಕು. ಹೀಗಾಗಿಯೇ ಸನಾತನ ಋಷಿ-ಮುನಿ ಗಳು ಕುಟುಂಬಕ್ಕೆ ಉನ್ನತ ಸ್ಥಾನ ನೀಡಿದ್ದಾರೆ. ಒಂದು ಹಂತದಲ್ಲಿ ಈ ಕುಟುಂಬಕ್ಕೆ ಋಷಿಮುನಿಗಳಿಗಿಂತ ಹೆಚ್ಚಿನ ಸ್ಥಾನಮಾನ ನೀಡಲಾಗಿದೆ. ಇದಕ್ಕೆ ಅನೇಕ ದೃಷ್ಟಾಂತಗಳು ಸಿಗುತ್ತವೆ ಎಂದು ಹೇಳಿದರು.
ಕುಟುಂಬವನ್ನು ಒಂದು ಮರಕ್ಕೆ ಹೋಲಿಸಿ ನೋಡುವುದಾದರೆ, ಚಳಿ, ಗಾಳಿ, ಮಳೆ, ಬಿಸಿಲು ಎಲ್ಲದಕ್ಕೂ ಮರ ತನ್ನನ್ನು ತಾನು
ತೆರೆದುಕೊಂಡಿರುತ್ತದೆ. ತನ್ನಲ್ಲಿ ಇರುವವರು ಮತ್ತು ಬರುವವರಿಗೆ ಆಶ್ರಯ ನೀಡುತ್ತದೆ. ಹಣ್ಣು ನೀಡಿ ಪಾಲಿಸುತ್ತದೆ. ಆ ಮರ ವನ್ನು ಅಲುಗಾಡಿಸಿದರೆ ಕೋಟಿ ಕೋಟಿ ಕೀಟ, ಪಕ್ಷಿ ಸೇರಿದಂತೆ ಅನೇಕರ ಆಶ್ರಯವನ್ನು ಹಾಳು ಮಾಡಿದಂತಾಗುತ್ತದೆ. ಈ
ಮರದ ರೀತಿಯಲ್ಲಿ ಒಬ್ಬ ಗೃಹಸ್ಥ ನನ್ನು ಚಿತ್ರಣ ಮಾಡುತ್ತಾರೆ.
ಕುಟುಂಬದಲ್ಲಿ ಪ್ರಧಾನ ಸ್ಥಾನ ಮಾನ ಪಡೆದಿರುವವರು ತಂದೆ ಮತ್ತು ತಾಯಿ. ಇವರಿಬ್ಬರು ಅನ್ಯೋನ್ಯವಾಗಿ, ಸಾಮರಸ್ಯದಿಂದ
ಇದ್ದಾಗ ಅವರ ಪ್ರಭಾವ ಕುಟುಂಬದ ಉಳಿದವರೆಲ್ಲರ ಮೇಲೂ ಬಿದ್ದು ಅದು ಆದರ್ಶ ಕುಟುಂಬವಾಗುತ್ತದೆ. ಆದರೆ ಇಂದು
ಇವೆಲ್ಲವೂ ಅಲುಗಾಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಏನು ವ್ಯತ್ಯಾಸವಾಗಿದೆ?: ಮನೆಯಲ್ಲಿ ತಂದೆ, ತಾಯಿ, ಮಗ, ಸೊಸೆ ಇದ್ದಾಗ ಎಲ್ಲಾ ಚೆನ್ನಾಗಿ ಇರುತ್ತದೆ. ಆದರೆ, ಇಬ್ಬರು
ಗಂಡು ಮಕ್ಕಳು, ಇಬ್ಬರು ಸೊಸೆಯಂದಿರಿದ್ದಾಗ, ಮೊದಲನೆ ಮಗ-ಸೊಸೆ ಮನೆಗೆ ಯಾವುದಾದರೂ ಒಂದು ವಸ್ತು ತಂದರೆ,
ಎರಡನೆಯವರು ನಮಗೂ ಬೇಕು. ಅದಕ್ಕಿಂತ ಚೆನ್ನಾಗಿರುವುದನ್ನು ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಾರೆ. ಒಂದೊಮ್ಮೆ
ಅಂತಹ ಆಲೋಚನೆ ಬಂದರೆ ಆ ಕುಟುಂಬದಲ್ಲಿ ವಿರಸ ಪ್ರಾರಂಭವಾಗುತ್ತದೆ. ಆದರೆ, ಮೊದಲೆಲ್ಲಾ ಕುಟುಂಬದ ಯಾರೇ ಆಗಲಿ, ಒಂದು ವಸ್ತುವನ್ನು ಮನೆಗೆ ತಂದಾಗ ಅದು ಒಬ್ಬ ವ್ಯಕ್ತಿಯದ್ದಾಗಿರುತ್ತಿರಲಿಲ್ಲ.
ಇಡೀ ಕುಟುಂಬಕ್ಕೆ ಸೇರಿದ್ದಾಗಿರುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಅದು ನಿನ್ನದು, ಇದು ನನ್ನದು ಎಂಬ ಭಾವನೆ ಬಂದಿದೆ. ಎಲ್ಲಿ ನನ್ನದು ಎಂಬ ಭಾವನೆ ಹೆಚ್ಚು ಪ್ರಬಲವಾಗಿರುತ್ತದೋ ಅಲ್ಲಿ ವಿರಸ ಆರಂಭವಾಗುತ್ತದೆ. ಇದರಿಂದ ಕುಟುಂಬದಲ್ಲಿ ಸಣ್ಣ ಸಣ್ಣ ಬಿರುಕು ಮೂಡಲು ಕಾರಣವಾಗುತ್ತದೆ ಎಂದು ಹೇಳಿದರು.
ಯಾವುದಾದರೂ ಒಂದು ವಸ್ತುವನ್ನು ನೋಡಿದಾಗ ಅದು ನನ್ನದಾಗಬೇಕು ಎಂಬ ಯೋಚನೆಯೊಂದಿಗೆ ವಿರಸಕ್ಕೆ ವೇದಿಕೆ
ಸೃಷ್ಟಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ನೋಟ ಬೀರುವ ಕಣ್ಣನ್ನು ಸರಿಯಾಗಿ ಇರಿಸಬೇಕು. ಆಗ ಮಾತ್ರ ಜೀವನದಲ್ಲಿ ಕುಣಿ
ದಾಟ, ಹಾರಾಟ, ನೆಗೆದಾಟ ಹತೋಟಿಯಲ್ಲಿರುತ್ತದೆ. ಜೀವನ ದಲ್ಲಿ ಸೌಹಾರ್ದತೆ ಇರುತ್ತದೆ ಎಂದು ಹಿರಿಯರು ಹೇಳುತ್ತಿದ್ದರು.
ನಮ್ಮ ಮನೆಯಲ್ಲಿದ್ದ ಅಜ್ಜ- ಅಜ್ಜಿಯ ನಡೆಯನ್ನು ಗಮನಿಸಿದಾಗ ಅವರ ಜೀವನವೇ ನಮಗೆ ಆದರ್ಶವಾಗುತ್ತದೆ. ಆದರೆ, ಅದನ್ನು ಗಮನಿಸುವ ದೃಷ್ಠಿ ಮುಖ್ಯವಾಗುತ್ತದೆ. ಎಲ್ಲಿ ಸೌಶೀಲ್ಯ ಇರುತ್ತದೆಯೋ ಅಲ್ಲಿ ಎಲ್ಲವೂ ಇರುತ್ತದೆ. ಜೀವನದಲ್ಲಿ ಎಲ್ಲರೂ ಹೊಡೆದಾಡುತ್ತಿರುವುದು ಲಕ್ಷ್ಮಿ(ಹಣ) ಗಾಗಿ. ಆ ಲಕ್ಷ್ಮಿ ಸದಾಚಾರ ಇರುವ ಕಡೆ ಸದಾ ನೆಲೆಸಿರುತ್ತಾಳೆ. ಲಕ್ಷ್ಮಿ ವಾಸ ಮಾಡುವುದೇ ಸೌಶೀಲ್ಯವನ್ನು ಆಶ್ರಯಿಸಿಕೊಂಡು. ನಮ್ಮ ಪಾಲಿನದ್ದು ನಮಗೆ ಸಿಕ್ಕೇ ಸಿಗುತ್ತದೆ. ಅದಕ್ಕೆ ಹೊರಾಟ ಮಾಡುವುದು ಬೇಕಿಲ್ಲ.
ಏಕೆಂದರೆ, ನಮ್ಮ ಪಾಲು ಪಡೆಯುವುದಕ್ಕೆ ಹೋರಾಟ, ಪಡೆದ ಮೇಲೆ ಉಳಿಸಿಕೊಳ್ಳಲಿಕ್ಕೆ ಹೋರಾಟ, ಉಳಿಸಿದ ಮೇಲೆ ಬೆಳೆಸ ಲಿಕ್ಕೆ ಹೋರಾಟ.. ಹೀಗೆ ಪಡೆದು, ಉಳಿಸಿಕೊಳ್ಳಲು ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ಮೊದಲು ಅರಿಯಬೇಕು ಎಂದರು. ಹಣಕ್ಕಾಗಿ ಅವರನ್ನು ಕೊಂದ, ಇವರನ್ನು ಕೊಂದ ಎಂಬ ವಿಚಾರ ದಿನ ಬೆಳಗಾದರೆ ಪತ್ರಿಕೆಗಳಲ್ಲಿ ನೊಡುತ್ತಿದ್ದೇವೆ. ಇಷ್ಟು ವಿವೇಕವನ್ನು ಕಳೆದುಕೊಳ್ಳಲು ಕಾರಣ ನಮ್ಮ ಕಣ್ಣು, ನಮ್ಮ ನೋಟ ಮತ್ತು ದೃಷ್ಟಿ. ನಾವು ಅದನ್ನು ತಿದ್ದುಕೊಳ್ಳಬೇಕಿದೆ. ಆಗ ಮಾತ್ರ ಸಾಮರಸ್ಯದ ಕುಟುಂಬ ಜೀವನ ಸಾಧ್ಯವಾಗುತ್ತದೆ ಎಂದರು.
ಸಾಮರಸ್ಯದ ದೃಷ್ಟಿಯಿಂದ ನೋಡುವ ಭಾವನೆ ಅರಿತರೆ ಜೀವನವೂ ಸಾಮರಸ್ಯದಿಂದ ಕೂಡಿರುತ್ತದೆ. ಅಂತರಂಗದ ಬಲವನ್ನು ಗಳಿಸುವಂತಹ ಜಾಗವೇ ಕುಟುಂಬ. ಅದರಲ್ಲಿ ತಾಯಿ-ತಂದೆಯ ಜಾಗ ಉನ್ನತವಾದದ್ದು. ಇದಿಷ್ಟನ್ನು ಮೊದಲು ತಂದೆ-ತಾಯಿ ನಡೆದು ತೋರಿಸಿದರೆ, ಮಕ್ಕಳಲ್ಲೂ ಈ ಗುಣ ಬೆಳೆಯಬಹುದು. ಸಂತೃಪ್ತಿಯ ಬದುಕು ನಾವು ಪಡೆದುಕೊಳ್ಳಬೇಕಿದೆ. ನಾನು ಮಾತ್ರ ಬದುಕುವುದಲ್ಲ. ನಾನು ಮಾತ್ರಬದುಕಲು ಸಾಧ್ಯವೂ ಇಲ್ಲ. ನಮ್ಮ ಶರೀರವೂ ಮತ್ತೊಂದರ ಆಶ್ರಯ ಹೊತ್ತುಕೊಂಡೇ ಬಂದಿದೆ. ನಮ್ಮ ಬದುಕು ಇರುವುದೇ ಎಲ್ಲರನ್ನು ಆಶ್ರಯಿಸಿಕೊಂಡು. ಆದ್ದರಿಂದ ಎಲ್ಲರೂ ಚೆನ್ನಾಗಿದ್ದರೆ ನಮ್ಮ ಬದುಕು
ಚೆನ್ನಾಗಿರುತ್ತದೆ. ಎಲ್ಲಾ ಜೀವಕೊಟಿಗಳು ಚೆನ್ನಾಗಿದ್ದರೆ ನಾವು ತೃಪ್ತಿಯಾಗಿರುತ್ತೇವೆ. ಇದರಲ್ಲಿ ಯಾವುದಾದರೂ ಒಂದನ್ನು
ಕಳೆದುಕೊಂಡರೆ ಇಡೀ ವಿಶ್ವವೇ ಅಲುಗಾಡುತ್ತದೆ ಎಂದು ಹೇಳಿದರು.
***
ಕುಟುಂಬ ಒಂದು ಕೋಟೆ ಇದ್ದಂತೆ. ಪ್ರತೀ ಜೀವಿಗೆ ರಕ್ಷಣೆ ನೀಡುತ್ತದೆ. ಸಹನೆ, ದಯೆ, ಪ್ರೀತಿ, ವಾತ್ಸಲ್ಯ, ತ್ಯಾಗ ತುಂಬಿದ್ದಾಗ ಕುಟುಂಬದಲ್ಲಿ ಸಮರಸ ಭಾವ ತುಂಬಿರುತ್ತದೆ. ಇದರಲ್ಲಿ ಯಾವುದಾದರು ಒಂದು ಕಳೆದುಕೊಂಡರೆ ಆ ಕೋಟೆ ಒಡೆದು ಚೂರು ಚೂರಾಗುತ್ತದೆ.
ಉಪ್ಪನ್ನು ಉಪ್ಪಾಗಿ, ಸಿಹಿಯನ್ನು ಸಿಹಿಯಾಗಿ ಹಾಗೆಯೇ ನೋವನ್ನು ನೋವಾಗಿ, ನಲಿವನ್ನು ನಲಿವಾಗಿ, ಸಂತೋಷವನ್ನು ಸಂತೋಷವಾಗಿ ಸ್ವೀಕರಿಸುವುದೇ ಸಾಮರಸ್ಯ.
***
ಸಮರಸದ ಬದುಕಿಗೆ ಪ್ರಮುಖ ರಹದಾರಿಯೇ ಕುಟುಂಬ.
ಕುಟುಂಬದಲ್ಲಿ ತೃಪ್ತಿ ಇರಬೇಕು. ಅದಕ್ಕೆ ಬೇಕಾದ ದೃಷ್ಟಿ ನಮ್ಮಲ್ಲಿರಬೇಕು.
ಜನರ ಹೊಗಳಿಕೆ, ತೆಗಳಿಕೆಯ ಆಧಾರದ ಮೇಲೆ ಬದುಕಬಾರದು