Saturday, 23rd November 2024

ಫಟಾಫಟ್ ಮಾತಲ್ಲಿ ಫನ್ನಿ ಉತ್ತರ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 72

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕೇಳುಗರ ಕಲರವ 

ಸರ್ಪೈಸ್ ಪ್ರಶ್ನೆಗೆ ಉತ್ತರಿಸಿ ಪ್ರೈಜ್ ಗೆದ್ದ ಸ್ಪರ್ಧಿಗಳು

ಬೆಂಗಳೂರು: ಗರ್ಲ್ ಫ್ರೆಂಡ್ ಇದ್ದರೆ, ಆಕೆಯ ಸಂದೇಶ ಹೆಂಡತಿ ನೋಡಿದರೆ, ನನ್ನ ಹೆಂಡತಿ ಭಟ್ಟರ ಲೇಖನ ಸುಟ್ಟರೆ, ಗಂಡ ಕಿವುಡನಾದರೆ, ಮೊದಲ
ಪ್ರೀತಿ, ನನ್ನ ದೃಷ್ಟಿಯಲ್ಲಿ ಬೆಸ್ಟ್ ಪಾಸ್ವರ್ಡ್ ಇವೆಲ್ಲಾ ವಿಷಯಗಳು ಮೂಡಿ ಬಂದಿದ್ದು ವಿಶ್ವವಾಣಿಯ ಕ್ಲಬ್‌ಹೌಸ್‌ನ ‘ವಿಷಯ ನಮ್ಮದು-ಮಾತು ನಿಮ್ಮದು: ಫಟಾಫಟ್ ಮಾತಾಡಿ’ ಕಾರ್ಯಕ್ರಮದಲ್ಲಿ.

ಸುಮಾರು ೨೫ ವಿಷಯಗಳು ಕೇಳುಗರ ಮನ ಮುಟ್ಟುವಂತಿದ್ದವು. ಪ್ರತಿಯೊಬ್ಬರೂ ತುಂಬಾ ಸೊಗಸಾಗಿ ಉತ್ತರವನ್ನು ನೀಡಿದರು. ಒಂದೊಂದು ವಿಷಯ ಗಳಿಗೂ ಹಾಸ್ಯಭರಿತ ಉತ್ತರಗಳು ಹೊರಹೊಮ್ಮಿದವು. ಕೆಲವರಂತೂ ಯಾರೂ ನಿರೀಕ್ಷೆ ಮಾಡದ ಉತ್ತರ ನೀಡಿದರು. ವಿಘ್ನೇಶ್ ಅವರು ಹೆಂಡತಿ ಜತೆ ಶಾಪಿಂಗ್ ಎಂಬ ವಿಷಯದ ಕುರಿತು ಸೊಗಸಾಗಿ ಉತ್ತರಿಸಿದರು.

ಸುದೀಪ್-ಅಪರಿಚಿತರನ್ನು ಹೇಗೆ ಮಾತಿಗೆಳೆಯುತ್ತೀರಾ? ಎಂಬ ವಿಷಯ ಬಗ್ಗೆ ಮಾತನಾಡಿ, ಮನುಷ್ಯನನ್ನು ಮಾತನಾಡಿಸುವುದೇ ಮಾತು. ಒಲಿಂಪಿಕ್,
ರಾಜಕೀಯ, ಸಿನಿಮಾದಲ್ಲಿ ಮಾತನಾಡುವ ಹವ್ಯಾಸ ಇರುತ್ತದೆ. ಮಾತಿನಲ್ಲಿ ಸತ್ವ ಇರಬೇಕು. ಮಾತು ವಿಜ್ಞಾನದ ಕಡೆ ಇರುತ್ತದೆ ಎಂದು ಮೂರೇ  ನಿಮಿಷಗಳಲ್ಲಿ ಅನೇಕ ವಿಷಯಗಳನ್ನು ಮುಂದಿಟ್ಟರು.

ಸೋಮಶೇಖರ್ ಅವರು ‘ನನ್ನ ಹೆಂಡತಿ ಭಟ್ಟರ ಲೇಖನ ಸುಟ್ಟರೆ’ ಎಂಬ ವಿಷಯದ ಬಗ್ಗೆ ಮಾತನಾಡಿದ್ದು ಸ್ವಾರಸ್ಯಕರವಾಗಿತ್ತು. ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ. ನಾನು ಅಂಕಣಗಳನ್ನು ಟೇಬಲ್ ಮೇಲೆ ಇಟ್ಟಾಗ ಅದನ್ನು ಹೊರಗೆ ಹಾಕಿದಾಗ ನಾನು ವಾಪಸ್ ಮನೆಗೆ ತಗೊಂಡು ಬರುತ್ತೇನೆ. ನನಗೆ ಓದುವ ಚಟ. ನನ್ನಾಕೆ ಜತೆ ಜಗಳ ಆಡುತ್ತೇನೆ ಎಂದು ತಿಳಿಸಿದರು.

ಫಟಾಫಟ್ ಕಣ್ಣನ್ ಮಾಮ ರೋಲ್ ಮಾಡೆಲ್! 
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾಮ ಮಾತನಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಪದಗಳ ಸಂಕೋಲೆಗಳನ್ನು ಮರೆತರೆ
ಮಾತನಾಡಲು ಸಾಧ್ಯವಿಲ್ಲ. ಕನ್ನಡದ ಸಾಹಿತ್ಯ ಪ್ರಪಂಚ ನೀರಿನಲ್ಲಿ ಹುಟ್ಟುವ ವಿದ್ಯುತ್ ಉತ್ಪಾದನೆ ರೀತಿ. ನೀರಿನಲ್ಲಿ ಉಪಾಯ, ಅಪಾಯವಿದೆ. ಕನ್ನಡ ಬಳಕೆ, ಗ್ರಹಿಸುವ ಶಕ್ತಿ ನಮ್ಮದಾಗಬೇಕು. ಪದ ಕೊಟ್ಟ ಕೂಡಲೇ ಯಾವ ವಿಷಯ ಎಂಬುದನ್ನು ತಕ್ಷಣ ಸೆರೆಹಿಡಿಯಬೇಕು. ಭಕ್ತನ ಬಾಯಿ ಹಾಡತಾ ಇರಬೇಕು. ಬಸವನ ಬಾಯಿ ಆಡತಾ ಇರಬೇಕು. ಬಕದಂತೆ ಧ್ಯಾನ, ಗಜದಂತೆ ಜ್ಞಾನ, ಮೇಕೆಯಂತೆ ಮೆಲುಕು ಹಾಕಬೇಕು. ಭಾಷಾ ಸಂಪತ್ತು ಹೃದಯದಲ್ಲಿ ಖಜಾನೆ ಇದ್ದ ಹಾಗೆ. ನಿತ್ಯ ಭಾಷೆಯನ್ನು ನಿರ್ಮತ್ಸರತೆಯಿಂದ ಬಳಸಿದರೆ ಯಶಸ್ಸು ಎಂದರು ಕಣ್ಣನ್ ಮಾಮ.

ಮೊದಲ ಬಹುಮಾನ: ವಿಘ್ನೇಶ್- ಹೆಂಡತಿ ಜತೆ ಶಾಪಿಂಗ್
ಎರಡನೇ ಬಹುಮಾನ: ಸುದೀಪ್- ಅಪರಿಚಿತರನ್ನು ಹೇಗೆ ಮಾತಿಗೆಳೆಯುತ್ತೀರಾ?
ಮೂರನೇ ಬಹುಮಾನ: ನಯನಾ- ಬೆಳೆ ತುಂಬಾ ಚೆಂದಾಗಿ ಬಂದರೆ ಏನು ಮಾಡುವಿರಿ?
ಪ್ರೋತ್ಸಾಹಕ ಬಹುಮಾನ: ಬನ್ನಿ (ಸಂಸ್ಕೃತದ ಸಾಲು), ಶ್ರೀವಾಣಿ (ರಾಮಾಯಣದ ಪ್ರಸಂಗ), ಲೋಕಮಾತೆ (ಅತ್ತೆ, ಸೊಸೆ)
ತೀರ್ಪುಗಾರರು: ಎಸ್.ಷಡಕ್ಷರಿ ಹಾಗೂ ಪೂರ್ಣಿಮಾ ಕೃಷ್ಣಮೂರ್ತಿಆ