ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 85
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಪೊವಾಯ್ ಸಂಸ್ಥಾಪಕ ಸ್ವಾಮಿ ಚಿದಾನಂದ ಸಲಹೆ
ಬೆಂಗಳೂರು: ಕತ್ತಲೆಯಿಂದ ಬಂದ ಬಾಳು ಮಧ್ಯದಲ್ಲಿ ಪ್ರಕಾಶಿಸುತ್ತಾ, ಮತ್ತೆ ಕತ್ತಲೆಯತ್ತ ಸಾಗುತ್ತದೆ. ನಾವಿರುವಷ್ಟು ದಿನದ ಬಯಕೆ ಏನೆಂದರೆ ಸಾರ್ಥಕ ಜೀವನ ನಡೆಸುವುದು. ಬದುಕಿನಲ್ಲಿ ಸಂತೃಪ್ತಿ, ಸಮಾಧಾನ ಇರಬೇಕು ಎಂದು ಪೊವಾಯ್ (ಫೈನ್ ಔಟ್ ಹು ಆಮ್ ಐ) ಸಂಸ್ಥಾಪಕ ಸ್ವಾಮಿ ಚಿದಾನಂದ ಅವರು
ತಿಳಿಸಿದರು.
ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ಒಟ್ಟಾರೆ ಏನೋ ಅಸಮಾಧಾನ ಇರುತ್ತದೆ. ನನ್ನ ಬದುಕು ಸರಿಯಿಲ್ಲ ಎಂಬಂತೆ ಇರುತ್ತದೆ ಮನಸ್ಸು. ಸಜ್ಜನರೂ ಆಗಿದ್ದು ಒಳ್ಳೆಯ ಕೆಲಸದಲ್ಲಿ ತೊಡಗಿ ಹೆಚ್ಚಿನ ದಕ್ಷತೆ, ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದರು.
ಲೇಖಕ ಸ್ಟೀವನ್ ಕೋವಿನ್ ಅವರು ’ಬಹಳ ಪರಿಣಾಮಕಾರಿ ಜನರ ಏಳು ಅಭ್ಯಾಸಗಳು’ ಪುಸ್ತಕ ಬರೆದಿದ್ದಾರೆ. ೨೦ ನಿಮಿಷ ನನ್ನನ್ನು ಮಾತನಾಡಿಸಿದರು. ಅವರ ಪುಸ್ತಕ ಹಾಗೂ ವ್ಯಕ್ತಿತ್ವ ನನ್ನ ಮೇಲೆ ಪ್ರಭಾವ ಬೀರಿದೆ. ಅವರು ವಿಶ್ವದಾದ್ಯಂತ ಪ್ರಭಾವ ಬೀರಿದ್ದರು. ಅವರ ಸಹೋದರ ಜಾನ್ ಕೋವಿನ್ ಅವರು ಹೇಳಿದರು, ನಾನು ಪುಸ್ತಕ ಬರೆಯುತ್ತಿದ್ದೇನೆ ಅದೆಂದರೆ ’ಬಹಳ ಪರಿಣಾಮಕಾರಿ ಜನರ ಏಳು ದುರಭ್ಯಾಸಗಳು’ ಎಂದು ಹಾಸ್ಯ ಮಾಡಿದರು ಎಂಬ ಪ್ರಸಂಗ ತಿಳಿಸಿದರು.
ನಮ್ಮ ಸಂಸ್ಕೃತಿಯಲ್ಲಿ ಬದುಕಿನ ಬಗ್ಗೆ ದೃಷ್ಟಿಕೋನ ಬಂದಿದೆ. ಸ್ವೀವನ್ ಕೋವಿನ್ ಅವರ ಪುಸ್ತಕಗಳಲ್ಲಿ ಪೌರ್ರಾತ್ಯ ಸತ್ಯದ ಅಂಶಗಳು ಇವೆ. ಅವರ ಪುಸ್ತಕದಲ್ಲಿ ಮೊದಲ ಮೂರು ಅಭ್ಯಾಸಗಳು ವೈಯಕ್ತಿಕ ದಕ್ಷತೆ, ಪರಿಣಾಮಕಾರಿ ಹೆಚ್ಚಿಸಿಕೊಳ್ಳಲು ನಮ್ಮ ಮನೆಯನ್ನು(ಮನಸ್ಸು) ಮೊದಲು ಸುವ್ಯವಸ್ಥಿತಗೊಳಿಸಿ ಎಂದು ತಿಳಿಸಿದ್ದಾರೆ. ನಮ್ಮನ್ನು ನಾವು ಸುಧಾರಿಸಿಕೊಳ್ಳುವುದು, ಇತರರ ಜತೆ ಇರುವ ಸಂಬಂಧಗಳನ್ನು ಉತ್ತಮ ಪಡಿಸಿಕೊಳ್ಳಬೇಕು. ವೈಯಕ್ತಿಕ ಬದುಕಿನಲ್ಲಿ ಗೆಲುವು. ಕೊನೆ ಉಸಿರು ತನಕ ನಮ್ಮನ್ನು ನಾನು ಸುಧಾರಿಸಿಕೊಳ್ಳಬೇಕು ಎಂದರು.
***
ಚಿದಾನಂದ ಸ್ವಾಮೀಜಿ ಅವರು ನನಗೆ ೨೫ ವರ್ಷಗಳಿಂದ ಪರಿಚಿತರು. ಕನ್ನಡ, ಹಿಂದಿ, ಇಂಗ್ಲಿಷ್ ಭಾಷಾ ಪರಿಣತಿ ಹೊಂದಿದ್ದಾರೆ. ಚಿನ್ಮಯ ಮಿಷನ್ ಮೂಲಕ
ಮುಂಬೈ, ಬೆಂಗಳೂರು, ದೆಹಲಿ, ಕೊಚ್ಚಿ ಅಮೆರಿಕದಲ್ಲಿ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಪೊವಾಯ್ ಎಂಬ ಸಂಸ್ಥೆ ಸ್ಥಾಪಿಸಿ ಉಪನ್ಯಾಸ, ಸಾಧಕರಿಗೆ ಬೋಧನೆ ಮಾಡುತ್ತಿದ್ದಾರೆ. ಅನೇಕ ಸಾಮಾಜಿಕ ಕೈಂಕರ್ಯಗಳಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ. ಅವರ ನಂಬಿಕೆಗಳು ಕೇಳಲು ಆಸಕ್ತಿದಾಯಕ.
–ಷಡಕ್ಷರಿ ಅಂಕಣಕಾರರು
***
ಸ್ವಾಮಿ ಚಿದಾನಂದ ಅವರು ಹೇಳಿದ ಸಜ್ಜನರ ಏಳು ಸದಭ್ಯಾಸಗಳು
ಉದ್ಯಮಶೀಲತೆ (ಸಕ್ರಿಯತೆ): ಎದುರಾಗುವ ಸವಾಲುಗಳನ್ನು ಮುಂದಾಲೋಚನೆ ಮಾಡಿ ಪೂರ್ವ ತಯಾರಿ ಮಾಡಿಕೊಳ್ಳುವ ಗುಣ ರೂಢಿಸಿಕೊಳ್ಳಬೇಕು. ಬೇರೆ ಜನರನ್ನು ದೂರುವುದು ಬೇಡ. ನಮ್ಮಲ್ಲಿ ಅನೇಕರಿಗೆ ದೇವರು ಬುದ್ಧಿ ಕೊಟ್ಟಿರುತ್ತಾರೆ. ನಮ್ಮಲ್ಲಿನ ದೌರ್ಬಲ್ಯಗಳನ್ನು ಸುಧಾರಿಸಿಕೊಂಡು ಹೋಗಬೇಕು.
ಬಯಕೆಯ ಬಗ್ಗೆ ಸ್ಪಷ್ಟತೆ: ನಮ್ಮ ಬುದ್ಧಿ ಹೆಮ್ಮೆಗೆ ಕಾರಣ. ಮನುಷ್ಯನ ಮನಸ್ಸು ಮಂಗ ಇದ್ದಹಾಗೆ. ಅಹಂಕಾರ ಎಂಬ ಭೂತ, ಆಸೆ ಎಂಬ ಮದ್ಯಪಾನ, ಮತ್ಸರ
ಎಂಬ ಚೇಳು ಮಂಗನನ್ನು ಕಚ್ಚುತ್ತದೆ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಬಯಕೆಯ ಬಗ್ಗೆ ಸ್ಪಷ್ಟತೆ, ಕೊನೆಯಲ್ಲಿ ಏನು ಬೇಕು ಎಂದು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಬದುಕು ಸರಿಯಾಗಿ ನಡೆಯುತ್ತಿಲ್ಲ ಎಂಬ ಬೇಸರ ಮಾಡಿಕೊಳ್ಳುವುದಲ್ಲ. ಏನು ಬೇಕು ಎಂಬುದನ್ನು ಚಿಂತಿಸುವುದಲ್ಲ. ಜಾನ್ ಕೊವಿನ್ ಅವರು ಹೇಳಿದಂತೆ ಯಾವುದೇ ಕೆಲಸ ಕುರಿತು ಮನಸ್ಸಿನಲ್ಲಿ ಚಿತ್ರಣ ರೂಪಿಸಿಕೊಳ್ಳಬೇಕು.
ಮುಖ್ಯವಾದ ಕೆಲಸ ಮೊದಲು ಮಾಡಬೇಕು: ವೈಯಕ್ತಿಕ ಸಂದರ್ಭದಲ್ಲಿ ದಿನವೂ ಪಟ್ಟಿಗಳನ್ನು ಮಾಡುತ್ತೇವೆ. ಅದರಂತೆ ಅನುಸರಿಸುವುದಿಲ್ಲ. ಕಡಿಮೆ ಆದ್ಯತೆ ಇರುವ ಕೆಲಸ ಮೊದಲು ಮಾಡಬಾರದು. ಅನೇಕ ಬಾರಿ ಮುಖ್ಯವಾದ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ಕಠಿಣ ಇರುವ ಕೆಲಸ ಮೊದಲು ಮಾಡಬೇಕು.
ಉಭಯ ಪಕ್ಷಕ್ಕೂ ಹಿತ ಬಯಸಲು ಪ್ರಯತ್ನಿಸಬೇಕು: ಸಂಘರ್ಷದಲ್ಲಿ ಇಬ್ಬರಿಗೂ ಹಿತ ತರುವಂತಿರಬೇಕು. ಉಭಯ ಪಕ್ಷ ಹಿತಕ್ಕಾಗಿ ಶ್ರಮಿಸಬೇಕು. ದಕ್ಷತೆ, ಸಕ್ರಿಯತೆ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಬೇರೆಯವರನ್ನು ಮೊದಲು ನಾವು ಅರ್ಥಮಾಡಿಕೊಂಡು ಮಾತನಾಡಬೇಕು.
ಮೊದಲು ನಾವು ಬೇರೆಯರನ್ನು ಅರ್ಥ ಮಾಡಿಕೊಳ್ಳಬೇಕು: ನಮ್ಮಲ್ಲರಲ್ಲೂ ಒಂದು ದೂರು ಇರುತ್ತದೆ. ನಮಗಿಂತ ಮೇಲಧಿಕಾರಿಗಳು ನಮ್ಮನ್ನು ಅರ್ಥ ಮಾಡಿಕೊಂಡಿಲ್ಲ ಎಂದು. ಮೊದಲು ನಾವು ಅವರನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿದಾಗ ನಮ್ಮ
ನಡತೆ ಗೊತ್ತಾಗುತ್ತದೆ.
ತಂಡದಲ್ಲಿ ಪರಿಶ್ರಮದಿಂದ ಕೆಲಸ ಮಾಡಿ: ನಾಲ್ಕು ಜನರ ಜತೆಗೂಡಿ ಕೆಲಸ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಒಂದು ತಂಡ ಕಟ್ಟಿ ಉತ್ತಮ ಕಾರ್ಯ ಕೈಗೊಳ್ಳುವ ನೇತಾರರು ಆಗಬೇಕು. ಪ್ರತ್ಯೇಕವಾಗಿ ಇದ್ದು ಕೆಲಸ ಮಾಡುವುದರಿಂದ ಯಾವುದೇ ಕಾರ್ಯ ಪೂರ್ಣಗೊಳ್ಳುವುದಿಲ್ಲ. ತಂಡದಲ್ಲಿ ದಕ್ಷತೆ ಹೆಚ್ಚಿಸುವಂತೆ ಕೆಲಸ ಮಾಡಬೇಕು.
ಆರು ಸದಭ್ಯಾಸಗಳನ್ನು ಪುನಃ ಪ್ರಯತ್ನಿಸು: ಗರಗಸದಂತೆ ಅಭ್ಯಾಸ ಮಾಡಬೇಕು. ಪುನಃ ನಮ್ಮನ್ನು ಪರೀಕ್ಷಿಸಿಕೊಳ್ಳಬೇಕು. ನಾವು ಈ ಆರು ಅಭ್ಯಾಸಗಳು ಸರಾಗವಾಗಿ ರೂಢಿಸಿಕೊಂಡು ಹೋಗುವುದರಿಂದ ಉತ್ತಮ ಜೀವನ ಕಾಣಬಹುದು.