Wednesday, 11th December 2024

ಪ್ರಪಂಚ ಸುತ್ತಿ ಸಾಧಿಸಿದ ಹೆಣ್ಮಕ್ಕಳೇ ಸ್ಟ್ರಾಂಗು

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – ೨೨೫

ಪ್ರವಾಸದಲ್ಲಿ ಅಪರಿಚಿತರ ಜತೆಯಲ್ಲಿ ನಾವು ಹೇಗೆ ವ್ಯಕ್ತವಾಗುತ್ತೇವೆ ಎಂಬುದೇ ನಮ್ಮ ನಿಜವಾದ ವ್ಯಕ್ತಿತ್ವ ಮಹಿಳೆಯರ ಪ್ರವಾಸ- ಪ್ರಯಾಸ ಕಾರ್ಯಕ್ರಮದಲ್ಲಿ ವಕೀಲೆ ಅಂಜಲಿ ರಾಮಣ್ಣ ಅರಿವಿನ ಉಪನ್ಯಾಸ

ಬೆಂಗಳೂರು: ಗಂಡು ಕೂತು ಕೆಟ್ಟ, ಹೆಣ್ಣು ತಿರುಗಿ ಕೆಟ್ಟಳು ಎಂಬ ಗಾದೆಯಿದೆ. ಆದರೆ, ಮನೆಯಲ್ಲಿ ಕುಳಿತ ಗಂಡಸರು ಅಚ್ಚುಕಟ್ಟಾಗಿ ಸಂಸಾರ ನಿಭಾ ಯಿಸುತ್ತಿರುವ ಉದಾಹರಣೆಗಳಿವೆ. ಅದೇ ರೀತಿ ಅನೇಕ ಹೆಣ್ಣು ಮಕ್ಕಳು ಪ್ರಪಂಚ ಸುತ್ತಿ ಬಂದು ಯಶಸ್ಸು ಸಾಧಿಸಿದ್ದಾರೆ. ಆ ಮೂಲಕ ಹೆಣ್ಣು ಮಕ್ಕಳು
ಪ್ರವಾಸದಲ್ಲಿ ತೊಡಗಿಕೊಂಡು, ಆ ಪ್ರವಾಸದ ಅನುಭವವನ್ನು ಜನರಿಗೆ ನೀಡಿ, ಗಾದೆ ಮಾತನ್ನು ಸುಳ್ಳು ಮಾಡಿದ್ದೇವೆ. ಹೀಗೆಂದು ತಮ್ಮ  ಅನುಭವ ಗಳನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ, ವಕೀಲರೂ ಆದ ಅಂಜಲಿ ರಾಮಣ್ಣ ಹೇಳಿಕೊಂಡಿದ್ದು ಹೀಗೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಮಹಿಳೆಯರ ಪ್ರವಾಸ-ಪ್ರಯಾಸ ಕಾರ್ಯಕ್ರಮದಲ್ಲಿ ಅರಿವಿನ ಉಪನ್ಯಾಸ ನೀಡಿ ಅವರು ಪ್ರವಾಸ ಕುರಿತಂತೆ ಹೇಳಿದ್ದಿಷ್ಟು… ಪ್ರವಾಸವನ್ನು ಹಿಂದಿನ ದಿನಮಾನಗಳಲ್ಲಿ ಪ್ರಪಂಚದ ಅಧ್ಯಯನದಂತೆ, ವ್ಯಾಖ್ಯಾನಕ್ಕಾಗಿ ಮತ್ತು ಅಧ್ಯಾತ್ಮಿಕ ಉದ್ದೇಶಗಳಿಗಾಗಿ ಮಾಡಲಾಗುತ್ತಿತ್ತು. ಲಕ್ಷಾಂತರ ಮಂದಿ ಈ ಉದ್ದೇಶಕ್ಕಾಗಿಯೇ ಪ್ರವಾಸ ಮಾಡಿದವರಿದ್ದಾರೆ. ಅವರ ನಡುವೆ ಪ್ರಪಂಚವನ್ನು ಸಾಸಿವೆ ಕಾಳಿ ನಷ್ಟು ನೋಡಿರದವಳು ನಾನು. ಆದರೂ ಪ್ರಪಂಚ ಸುತ್ತಿದ್ದೇನೆ.

ಪ್ರವಾಸ ಮಾಡುವುದು ನನಗೆ ಅಪ್ಪನಿಂದ ಬಂದ ಬಳುವಳಿ. ಮೈಸೂರಿನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸು ತ್ತಿದ್ದ ನನ್ನ ತಂದೆಗೆ ಪ್ರವಾಸ ಮಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಕಾರಿನ ಟ್ಯಾಂಕ್ ಫುಲ್ ಪೆಟ್ರೋಲ್ ಹಾಕಿಕೊಂಡು ಹೊರಟರೆ ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಅವರಿಗೇ ಗೊತ್ತಿರು ತ್ತಿರಲಿಲ್ಲ. ಯಾವುದೇ ಪೂರ್ವ ತಯಾರಿ ಇಲ್ಲದೆ ಹೊರಡುತ್ತಿದ್ದರು. ಪೆಟ್ರೋಲ್ ಟ್ಯಾಂಕ್ ಅರ್ಧ ಕಾಲಿ ಆದ ನಂತರ ಹಿಂದಿರುಗಬೇಕು ಎನ್ನುತ್ತಿದ್ದರು. ಅವರೊಂದಿಗೆ ಸುತ್ತಾಡಿದ್ದರಿಂದಲೇ ನನ್ನ ಪಾಲಿಗೆ ಪ್ರವಾಸ ಎಂದರೆ ಈಗ ಅನ್ನ-ಸಾರಿನಷ್ಟೇ ಮುಖ್ಯ ಎನ್ನುವಂತಾಗಿದೆ. ಚಿಕ್ಕ ಮಕ್ಕಳಾಗಿದ್ದಾಗ ಅಕ್ಕ ಮತ್ತು ನಾನು ತಂದೆ ಮತ್ತು ಅವರ ಸ್ನೇಹಿತರಾದ ಪ್ರಸನ್ನ ಮತ್ತು ಕೃಷ್ಣ ವಟ್ಟಂ ಅಂಕಲ್ ಜತೆ ಪ್ರಯಾಣ ಮಾಡುತ್ತಿದ್ದೆವು.

ಅದರಲ್ಲೂ ರಾತ್ರಿ ಪ್ರಯಾಣವೇ ಹೆಚ್ಚು. ಪ್ರವಾಸದಲ್ಲಿ ಭೇಟಿ ನೀಡುತ್ತಿದ್ದ ಸ್ಥಳಗಳ ಬಗ್ಗೆ ನಮ್ಮಲ್ಲಿ ಪ್ರಶ್ನೆ ಕೇಳುತ್ತಿದ್ದರು. ಅವರಿಗೆ ಉತ್ತರಿಸಬೇಕು
ಎಂಬ ಹುಮ್ಮಸ್ಸು ಮತ್ತು ಇಷ್ಟದಿಂದ ಪ್ರವಾಸಕ್ಕೆ ತೆರಳುತ್ತಿದ್ದೆವು. ಇದೇ ವೇಳೆ ಪ್ರವಾಸದ ಸಂಪೂರ್ಣ ಜವಾಬ್ದಾರಿಯನ್ನು ಮಕ್ಕಳಾದ ನಮಗೆ
ವಹಿಸಿ, ನಾವು ಸ್ವಾಲಂಬಿಗಳಾಗುವಂತೆ ಮಾಡುತ್ತಿದ್ದರು.

ಈ ಎಲ್ಲ ಕಾರಣಗಳಿಂದ ನನಗೆ ಈಗಲೂ ಪ್ರವಾಸದ ಹುಚ್ಚು ಕಮ್ಮಿಯಾಗಿಲ್ಲ. ಹದಿನೈದು ದಿನ ಎಲ್ಲೂ ಪ್ರವಾಸ ಮಾಡಲಿಲ್ಲ ಎಂದರೆ ಡಿಪ್ರೆಶನ್‌ಗೆ ಒಳಗಾಗಿದ್ದೇನೊ ಎಂಬ ಭಯವಾಗುತ್ತದೆ. ಈ ಕ್ಷಣದವರೆಗೂ ಯಾವುದೇ ಪ್ರವಾಸದಲ್ಲಿ ನನಗೆ ಕೆಟ್ಟ ಅನುಭವವಾಗಿಲ್ಲ. ಒಬ್ಬಳೇ ಹೋದಾಗಲು ಯಾವುದೇ ತೊಂದರೆ ಅನುಭವಿಸಿಲ್ಲ. ವೈಯಕ್ತಿಕವಾಗಿಯೂ ನನ್ನ ಘನತೆಗೆ ಚುತಿ ಬರುವ ಯಾವುದೇ ಅನುಭವವಾಗಿಲ್ಲ.

ಪುಸ್ತಕ ಮಳಿಗೆಗೆ ಭೇಟಿ: ನಾನು ಯಾವುದೇ ದೇಶಕ್ಕೆ ಭೇಟಿ ನೀಡಿದರೂ, ಅಲ್ಲಿಯ ಪುಸ್ತಕದ ಅಂಗಡಿಗೆ ಹೋಗುವುದು ಅಭ್ಯಾಸ. ಜತೆಗೆ ಅಲ್ಲಿನ ದಿನಪತ್ರಿಕೆ
ಕುರಿತೂ ತಿಳಿದುಕೊಳ್ಳುತ್ತಿದ್ದೆ. ಮಹಿಳಾ ಅಧಿಕಾರಿಗಳು, ಹೌಸ್ ಕೀಪಿಂಗ್, ಸಮಯವಾದಾಗ ಅಲ್ಲಿಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವುದು ನನ್ನ ಪ್ರವಾಸದ ಒಂದು ಮುಖ್ಯ ಭಾಗವಾಗಿರುತ್ತದೆ.

ಕೇಂಬ್ರಿಡ್ಜ್‌ನಲ್ಲಿ ಮರ್ಯಾದೆ ಹತ್ಯೆ: ಕೇಂಬ್ರಿಡ್ಜ್‌ಗೆ ಪ್ರವಾಸ ಹೋಗಿದ್ದೆ. ಅಲ್ಲಿಗೆ ಭೇಟಿ ನೀಡಿದ್ದ ಸಮಯದಲ್ಲಿ ನವಜಾತ ಹೆಣ್ಣು ಶಿಶುವೊಂದನ್ನು ಕವರ್‌ನಲ್ಲಿ ಸುತ್ತಿಟ್ಟಿರುವ ಸುದ್ದಿ ಬಂತು. ಹಿಂದೆ ಅಲ್ಲಿ ಓಡಾಡಿದ್ದಾಗ ಪೊಲೀಸರ ಪರಿಚಯ ಮಾಡಿಕೊಂಡಿದ್ದೆ. ಹಾಗೆ ಪರಿಚಯವಿದ್ದ ಅಲೆಗ್ಸಾಂಡರ್
ಎಂಬ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಗುವನ್ನು ಕವರ್‌ನಲ್ಲಿ ಸುತ್ತಿಟ್ಟಿದ್ದ ವಿಚಾರ ತಿಳಿಸಿದೆ. ಆತ ಮಕ್ಕಳ ಹಕ್ಕುಗಳ ಬಗ್ಗೆ ಪಿಎಚ್‌ಡಿ ಕೂಡ ಮಾಡುತ್ತಿ
ದ್ದರು. ನಂತರ ಮಾತನಾಡುತ್ತ, ಅವರು ಅಲ್ಲಿಯ ಮಕ್ಕಳ ಹಕ್ಕು ಮತ್ತು ಸೌಲಭ್ಯಗಳ ಬಗ್ಗೆ ತಿಳಿಸಿದರು. ಮಕ್ಕಳನ್ನು ಏಕೆ ಬಿಟ್ಟು ಹೋಗುತ್ತಾರೆ? ಮತ್ತು ಯಾರು ಬಿಟ್ಟು ಹೋಗುತ್ತಾರೆ? ಎಂಬುದನ್ನು ಹೇಳಿದರು.

ಅದರಿಂದ ಮರ್ಯಾದೆ ಹತ್ಯೆಗಳಾಗುವ ಬಗ್ಗೆ ಮಾಹಿತಿ ನೀಡಿದರು. ಮದುವೆಗೆ ಮುನ್ನ ಹೆಣ್ಣು ಗರ್ಭ ಧರಿಸಿದರೆ ಆಗ ಹುಟ್ಟಿದ ಮಗುವನ್ನು ಈ ರೀತಿ
ಬಿಟ್ಟುಹೋಗುತ್ತಾರೆ ಎಂದರು. ಅಷ್ಟೇ ಅಲ್ಲ, ಭಾರತಕ್ಕಿಂತ ಹೆಚ್ಚು ಮರ್ಯಾದೆ ಹತ್ಯೆಗಳು ಅಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು. ನಾನು
ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆ ಎಂದರೆ, ಪ್ರವಾಸದಿಂದ ಎಂತೆಂಥಾ ಕಟು ಸತ್ಯಗಳು ನಮ್ಮ ಅರಿವಿಗೆ ಬರುತ್ತದೆ ಎಂಬುದನ್ನು ತಿಳಿಸಲು ಎಂದು ಅಂಜಲಿ ರಾಮಣ್ಣ ಹೇಳಿದರು.

ಅರುಣಾಚಲ ಪ್ರದೇಶ ಪ್ರವಾಸದ ನೆನಪು
ಈ ಸ್ಥಳ ಭಾರತ ಮತ್ತು ಚೀನಾ ದೇಶದ ಗಡಿ. ಅಲ್ಲಿ ೨೧ ದಿನ ಪ್ರವಾಸ ಮಾಡಿದ್ದೆ. ನನ್ನನ್ನು ನಾನು ಹುಡುಕಿಕೊಳ್ಳಲು ಆ ಪ್ರವಾಸ ಅವಶ್ಯಕವಾಗಿತ್ತು. ಸಮೀಪದ ‘ಅಪತಾನಿ’ ಎಂಬ ಹಳ್ಳಿಯಲ್ಲಿ ಅಪರೂಪದ ಬುಡಕಟ್ಟು ಜನಾಂಗವನ್ನು ಭೇಟಿ ಮಾಡುವ ಆಸೆ ನನ್ನದಾಗಿತ್ತು. ಹಳ್ಳಿಯಲ್ಲಿ ಸಂಜೆ ೬ ಗಂಟೆ ನಂತರ ಪ್ರಯಾಣ ಮಾಡುವ ಹಾಗಿಲ್ಲ. ಹಾಗೆ ಕಾನೂನೇ ಅಲ್ಲಿ ಇದೆ.

ಒಂದು ವೇಳೆ ಪ್ರಯಾಣ ಮಾಡಿದರೆ ಜಾಮೀನು ರಹಿತ ಅಪರಾಧವಾಗುತ್ತದೆ. ಸಂಜೆ ೬ ಗಂಟೆಗೆ ಸರಿಯಾಗಿ ರಿಜಿಸ್ಟರ್ಡ್ ಮೊಬೈಲ್‌ಗೆ ‘ಪ್ರಯಾಣದ ಅವಧಿ ಮುಗಿದಿದೆ’ ಎಂದು ಸಂದೇಶ ಬರುತ್ತದೆ. ಆ ಪ್ರದೇಶದಲ್ಲಿ ಯಾವುದೇ ಗೂಗಲ್ ನೆಟ್‌ವರ್ಕ್ ಸಿಗುವುದಿಲ್ಲ. ಗಡಿಭಾಗವಾದ್ದರಿಂದ ಹೆಜ್ಜೆಹೆಜ್ಜೆಗೂ ಪರಿಶೀಲನೆ ಮಾಡಲಾಗುತ್ತಿತ್ತು. ಎಷ್ಟರಮಟ್ಟಿಗೆ ಎಂದರೆ, ಪರಿಶೀಲಿಸಲು ಕಾರ್ ಒಳಗೆ ತಲೆ ಹಾಕಿದ ವ್ಯಕ್ತಿಯಿಂದ ಬರುತ್ತಿದ್ದ ಮದ್ಯದ ವಾಸನೆ ಮುಂದೆ ಸಾಗಿದರೂ ಕಾರಿನಿಂದ ಹೊರಹೋಗದಷ್ಟರ ಮಟ್ಟಿಗೆ ತಪಾಸಣೆ ನಡೆಯುತ್ತಿತ್ತು.

ವಾಸ್ತವ್ಯ ಹುಡುಕುತ್ತ ರಸ್ತೆ ತಪ್ಪಿ ನಿರ್ಬಂಧಿತ ಪ್ರದೇಶಕ್ಕೆ ಹೋದೆವು. 2-3 ನಿಮಿಷದಲ್ಲಿ ಸೈನಿಕರು ಸುತ್ತುವರಿದರು. ನಾನು ಏನು ಹೇಳಿದರೂ ಕೇಳದೆ,
ಮೈ ಮೇಲಿನ ಬಟ್ಟೆ ಒಂದನ್ನು ಬಿಟ್ಟು ಎಲ್ಲವನ್ನು ವಶಕ್ಕೆ ಪಡೆದುಕೊಂಡರು. ಭಾಷೆಯ ತೊಂದರೆಯಿಂದ ನಾವು ಹೇಳಿದ್ದು ಅವರಿಗೆ ಅರ್ಥವಾಗು ತ್ತಿರಲಿಲ್ಲ. ಅವರ ಮಾತು ನಮಗೆ ತಿಳಿಯುತ್ತಿರಲಿಲ್ಲ. ಅಷ್ಟರಲ್ಲಿ ದೂರದಲ್ಲಿದ್ದ ಮತ್ತೊಬ್ಬ ಸೈನಿಕ ನನ್ನನ್ನು ನೋಡಿ, ‘ಸೌತ್ ಇಂಡಿಯನ್ ಹೋ‘ ಎಂದು ಗುರುತಿಸಿ ನಂತರ ಕಳುಹಿಸಿದರು. ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಿಕೊಟ್ಟರು. ಯಾವುದೇ ತಯಾರಿ ಇಲ್ಲದೆ ಪ್ರವಾಸ ಮಾಡಿದಾಗಲೂ, ನಾವು ಅನೇಕ ಮಜಲುಗಳನ್ನು ಅನುಭವಿಸುತ್ತೇವೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

***

ಕನ್ನಡದಲ್ಲಿ ಪ್ರವಾಸಕಥನ ಹಳೆಯ ಸಾಹಿತ್ಯ ರಚನೆ. ಅಮೆರಿಕದಲ್ಲಿ ಗೋರೂರು, ಅನುಪಮ ನಿರಂಜನ ಅವರ ಬ್ರಿಟನ್ ಪ್ರವಾಸದ ಕಥೆಗಳನ್ನು ಓದಿದರೆ, ಪ್ರವಾಸ ಕಥನ ಅತ್ಯಂತ ಹುಲುಸಾಗಿ, ಶ್ರೀಮಂತವಾಗಿ ಬೆಳೆದಿರುವುದ ಕಾಣಬಹುದಾಗಿದೆ. ಪ್ರವಾಸ ಕಥನ ಪ್ರಕಟಿಸದ ಪತ್ರಿಕೆಯೇ ಇಲ್ಲ. ವಾರಕೊಮ್ಮೆ ನಮ್ಮ ವಿಶ್ವವಾಣಿಯಲ್ಲಿ ಪ್ರವಾಸ ಕಥೆಗಳನ್ನು ಪ್ರಕಟಿಸಲಾಗುತ್ತದೆ. ನಮ್ಮ ನಡುವೆ ಒಳ್ಳೆಯ ಅನೇಕ ಪ್ರವಾಸಿಗರಿದ್ದಾರೆ. ಅದರಲ್ಲೂ ಮಹಿಳಾ ಸೋಲೋ ಟ್ರಿಪ್ ಮಾಡುವವರು ಹೆಚ್ಚಾಗಿರುವುದನ್ನು ಕಾಣುತ್ತಿದ್ದೇವೆ. ಅವರಲ್ಲಿ ಅಂಜಲಿ ರಾಮಣ್ಣ ಕೂಡ ಒಬ್ಬರು.

– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ದಿನಪತ್ರಿಕೆ