Wednesday, 9th October 2024

ಲೈಂಗಿಕ ಶಿಕ್ಷಣಕ್ಕೆ ಸರಕಾರ, ವೈದ್ಯರು ಒತ್ತು ನೀಡಲಿ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ ೯೬

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಖ್ಯಾತ ಸ್ತ್ರೀ ರೋಗ ಮತ್ತು ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್ 

ಅವೈಜ್ಞಾನಿಕ, ಅವಾಸ್ತವಿಕ ಲೈಂಗಿಕತೆಯ ಪ್ರಭಾವಕ್ಕೆ ಒಳಗಾಗಬೇಡಿ

ಆರೋಗ್ಯಕರ ಲೈಂಗಿಕತೆಯಿಂದ ನೆಮ್ಮದಿ ಜೀವ

ಬೆಂಗಳೂರು: ಲೈಂಗಿಕತೆ ಬಗ್ಗೆ ಅನೇಕ ಜನರಲ್ಲಿ ತಪ್ಪು ತಿಳಿವಳಿಕೆ ಇದೆ. ಆಯಾ ವಯಸ್ಸಿಗೆ ಅನುಗುಣವಾಗಿ ಲೈಂಗಿಕತೆ ಬಗ್ಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ. ವಯಸ್ಸಿನ ತಿಳಿವಳಿಕೆ ಮಟ್ಟಕ್ಕೆ ಅನುಗುಣವಾಗಿ ಸಕಾರಾತ್ಮಕ ಭಾವನೆ ಬೆಳೆಸಬೇಕು ಎಂದು ಖ್ಯಾತ ಸ್ತ್ರೀ ರೋಗ ಮತ್ತು ಲೈಂಗಿಕ ತಜ್ಞರಾದ ಡಾ.ಪದ್ಮಿನಿ ಪ್ರಸಾದ್ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶರೀರ ರಚನೆ, ಸಂಭೋಗ ಕ್ರಿಯೆ, ಗರ್ಭಧಾರಣೆ, ಸುರಕ್ಷಿತ ಲೈಂಗಿಕ ಕ್ರಿಯೆ, ಜನನ ನಿಯಂತ್ರಣ ವಿಧಾನಗಳು, ಸಾಂಕ್ರಾಮಿಕ ಲೈಂಗಿಕ ರೋಗಗಳು ಮುಂತಾದವುಗಳ ಬಗ್ಗೆ ಅವಶ್ಯವಿರುವ ಶಿಕ್ಷಣ ನೀಡಬೇಕು. ಸಾಮಾಜಿಕ ಜಾಲತಾಣ ದಲ್ಲಿನ ಆಶ್ಲೀಲತೆ, ಲೈಂಗಿಕ ದೃಶ್ಯಗಳು, ಅವೈಜ್ಞಾನಿಕ, ಅವಾಸ್ತವಿಕ ಲೈಂಗಿಕತೆಯ ಪ್ರಭಾವಕ್ಕೆ ಒಳಗಾಗ ಬೇಡಿ. ಲೈಂಗಿಕ ಶಿಕ್ಷಣ ಬಗ್ಗೆ ಸರಕಾರ, ವೈದ್ಯರು ಹೆಚ್ಚು ಒತ್ತು ನೀಡಬೇಕು. ಹೆಚ್ಚುತ್ತಿರುವ ದಾಂಪತ್ಯ ವಿರಸ, ಲೈಂಗಿಕ ಕಿರುಕುಳ ಎಂಬ ಸಾಮಾಜಿಕ ಪಿಡುಗು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.

ದೇಹ, ಮನಸುಗಳ ಮಿಲನ: ಮಾನವನ ದೈಹಿಕ ಹಸಿವುಗಳಲ್ಲಿ ಲೈಂಗಿಕತೆ ಒಂದು. ಅದರ ಬಗ್ಗೆ ಕೀಳರಿಮೆ ಬೇಡ. ಆರೋಗ್ಯಕರ ಲೈಂಗಿಕತೆಯಿಂದ ನೆಮ್ಮದಿಯ ಕೌಟುಂಬಿಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಲೈಂಗಿಕ ತೃಪ್ತಿ ಎಂಬುದು ದೇಹ ಮನಸುಗಳ ಮಿಲನ. ಲೈಂಗಿಕತೆ ಎಂಬ ಪದ ಬಳಕೆ ಮಾಡಿದಾಗ ಪ್ರತಿ ಯೊಬ್ಬರಲ್ಲೂ ಹಲವಾರು ಭಾವನೆಗಳು ಮೂಡುತ್ತವೆ. ತಪ್ಪು, ಹೇಳಿಕೊಳ್ಳಲಾಗದ ವಿಷಯ. ಹಲವಾರು ಜನರಲ್ಲಿರುವ ಮುಜುಗರ ಭಾವನೆ ಇರುತ್ತದೆ. ಬದುಕಿನಲ್ಲಿ ನಮ್ಮ ಅನುಭವಕ್ಕೆ ಬಂದರೂ ಅವರಿಗೆ ಬಾರದವು ಸಾಕಷ್ಟು ಇವೆ ಎಂದರು.

ಲೈಂಗಿಕತೆ ಇಲ್ಲದಿದ್ದರೆ ಜೀವ ಸಂಕುಲವೇ ಸ್ತಬ್ಧ: ಆರೋಗ್ಯ, ಅಂಗಾಂಗಳ ರಚನೆ ಬಗ್ಗೆ ಮಾಹಿತಿ ನೀಡಬೇಕು. ಲೈಂಗಿಕ ಸಂಪರ್ಕ, ಗರ್ಭಧಾರಣೆ ದಾಂಪತ್ಯ
ಜೀವನದ ಬಗ್ಗೆ ಹಲವು ಹೆಣ್ಣು ಮಕ್ಕಳಿಗೆ ಅರಿವಿಲ್ಲ. ಗಂಡಸರಲ್ಲಿಯೂ ಸಂಭೋಗ, ವೀರ್ಯಸ್ಖಲನ, ನೋವಿನ ಸಂಭೋಗದಂತಹ ಸಮಸ್ಯೆ ಕಾಡುತ್ತಿವೆ. ಇದಕ್ಕೆ ಸಲಹೆ, ಚಿಕಿತ್ಸೆ ಪಡೆಯಬಹುದು. ಲೈಂಗಿಕತೆ ಇಲ್ಲದಿದ್ದರೆ ಜೀವ ಸಂಕುಲವೇ ಸ್ತಬ್ಧ. ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಲೈಂಗಿಕತೆ.

ವೈಜ್ಞಾನಿಕ ಮಾಹಿತಿ ಪಡೆದು ದಾಂಪತ್ಯ ಜೀವನ, ಲೈಂಗಿಕ ಜೀವನ ನಡೆಸಬಹುದು. ಲೈಂಗಿಕತೆ ಬಗ್ಗೆ ಸಕಾರಾತ್ಮಕ ನಕಾರಾತ್ಮಕ ಭಾವನೆಗಳು ಇರುತ್ತದೆ. ಲೈಂಗಿಕತೆ ಬೆಂಕಿಯಲ್ಲಿ ಸುಟ್ಟು ಬೂದಿಯಾಗಬಾರದು, ಬೆಳಗುವ ಜ್ಯೋತಿಯಾಗಬೇಕು ಎಂದು ಹೇಳಿದರು. ಅನಾರೋಗ್ಯ ಎಂದರೆ ಜ್ವರ, ಕೆಮ್ಮು, ನೆಗಡಿ ಮಾತ್ರ ವಲ್ಲ. ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸುಸ್ಥಿರವಾಗಿರಬೇಕು.

ಶಾರೀರಿಕವಾಗಿಯಲ್ಲದೆ, ಮನಸ್ಸು, ಭಾವನೆ ಸಂಬಂಧಗಳು ಹರ್ಷವಾಗಿರಬೇಕು. ಲೈಂಗಿಕತೆ ಬಗ್ಗೆ ಅಪರಾಧ ಎಂದು ತಿಳಿಯುವ ಕಾಲವಿತ್ತು. ಏಡ್ಸ್ ಬಂದಾಗ
ಅಪಾಯಕಾರಿ ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಯಿತು. ಇತ್ತಿಚೀನ ದಿನಗಳಲ್ಲಿ ಲೈಂಗಿಕ ಸಮಸ್ಯೆಗಳ ಬಗ್ಗೆ ಚರ್ಚೆ ಚಿಕಿತ್ಸೆ ಪಡೆಯಲು ಹೆಚ್ಚು ಜನರು ಬರುತ್ತಿದ್ದಾರೆ. ಲೈಂಗಿಕತೆ ಜೀವನದ ಅವಿಭಾಜ್ಯ ಅಂಗವಾಗಿತ್ತು.

ಸಂತಾನೋತ್ಪತ್ತಿಯ ಮಹತ್ವ: ಹಿಂದೂ ಧರ್ಮದಲ್ಲಿ ಸಂತಾನೋತ್ಪತ್ತಿಯ ಮಹತ್ವ ಇದೆ. ಲಿಂಗಪೂಜೆ, ಯೋನಿ ಪೂಜೆ ಹಲವೆಡೆ ನಡೆಯುತ್ತದೆ. ಲೈಂಗಿಕತೆ ಬಗ್ಗೆ ಧಾರ್ಮಿಕ ಭಾವನೆ ಇದೆ. ಧರ್ಮ, ಅರ್ಥ, ಕಾಮ ಭಾವನೆ ಕುರಿತು ಹಿಂದೆ ಒಳ್ಳೆಯ ಭಾವನೆ ಇತ್ತು. ಸಮಾಜದಲ್ಲಿ ಧರ್ಮ, ಕಾನೂನು ಮನುಷ್ಯನ ನಂಬಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಲೈಂಗಿಕತೆಗೆ ದೈಹಿಕ, ಮಾನಸಿಕ ಸಾಂಸ್ಕೃತಿಕ ಆಯಾಮದಿಂದ ಪ್ರತಿಯೊಬ್ಬರಿಗೂ ಭಾವನೆ ಇರುತ್ತದೆ. ಒಂದು ಮಗು ಹುಟ್ಟಿದಾಗ ಸಂಬಂಧ ಹೆಚ್ಚುತ್ತದೆ ಎಂದರು.

ಮಕ್ಕಳಾಗದಿರಲು ವೀರ್ಯ ನಾಶ ಎಂಬ ತಪ್ಪು ತಿಳಿವಳಿಕೆ ಇದೆ. ಸ್ತ್ರೀಯರಲ್ಲಿ ಮೊದಲ ಸಂಭೋಗದಲ್ಲಿ ಎದುರಾಗುವ ಆತಂಕ, ಲೈಂಗಿಕತೆ ಆಸಕ್ತಿ ಇಲ್ಲದಿರುವಿಕೆ ಇವು ಅವರಲ್ಲಿ ಕಾಣುವ ಸಮಸ್ಯೆಗಳು. ಪುರುಷರಲ್ಲಿಯೂ ಲೈಂಗಿಕ ಸಮಸ್ಯೆಗಳು ಇವೆ. ನಿಮಿರುವಿಕೆ, ಸ್ಖಲನದ ಸಮಸ್ಯೆ ಕಾಣಬಹುದು. ಹಸ್ತಮೈಥುನದಿಂದ ಕೆಲವೊಮ್ಮೆ ಮದುವೆ ಮಾಡಿಕೊಳ್ಳಲು ಮುಂದಾಗುವುದಿಲ್ಲ. ಮದುವೆಯಾದ ಹೊಸದರಲ್ಲಿ ಇಬ್ಬರಿಗೂ ಆತಂಕ ಇರುತ್ತದೆ. ನಿಮಿರು ದೌರ್ಬಲ್ಯ ಸಾಮಾನ್ಯ  ವಾದುದು. ಸ್ಖಲನದ ಸಮಸ್ಯೆ ನೆಗಡಿಯಷ್ಟೆ ಸಾಮಾನ್ಯ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ನಕಲಿ ವೈದ್ಯರ ಬಳಿ ಹೋಗಬೇಡಿ. ಯಾವುದೇ ಕಾಯಿಲೆಯ ಶಸಚಿಕಿತ್ಸೆ ಲೈಂಗಿಕತೆ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಗೂ (ಹೆಣ್ಣಿರಲಿ, ಗಂಡಿರಲಿ) ತನ್ನದೇ ಆದ ಲೈಂಗಿಕ ಭಾವನೆಗಳು, ವರ್ತನೆಗಳು, ನಂಬಿಕೆಗಳು ಮತ್ತು ಅವುಗಳ ಅಭಿವ್ಯಕ್ತಿಯ ಸ್ವಾತಂತ್ರ್ಯ ವಿರುತ್ತದೆ ಮತ್ತು ಪ್ರತಿ ವ್ಯಕ್ತಿಯ ಲೈಂಗಿಕ ರೀತಿ ವಿಭಿನ್ನ ವಾಗಿರುತ್ತದೆ. ಇದು ಆ ವ್ಯಕ್ತಿಯ ವ್ಯಕ್ತಿಗತ ವೈಯಕ್ತಿಕ ಅನುಭವಗಳು ಹಾಗೂ ಸುತ್ತಮುತ್ತಲಿನ ಪರಿಸರದ, ಸಮಾಜದ ಪ್ರಭಾವವನ್ನು ಅವಲಂಬಿಸಿರುತ್ತದೆ. ಮಗು ಹುಟ್ಟಿದಾಗ ಹೆಣ್ಣು ಅಥವಾ ಗಂಡು ಎಂದು ಲಿಂಗ ನಿರ್ಧಾರವಾದ ನಂತರ ಅದು ಹೆಣ್ಣಾಗಿ ಅಥವಾ
ಗಂಡಾಗಿ ಬೆಳೆಯಲು ತಂದೆ-ತಾಯಿ, ಪೋಷಕರು, ಸ್ನೇಹಿತರು, ಶಿಕ್ಷಕರು ಮತ್ತು ಸುತ್ತಲಿನ ಸಮಾಜ ಮುಖ್ಯ ಪಾತ್ರ ವಹಿಸುತ್ತದೆ.

ಆ ವರ್ಗಕ್ಕೆ (ಹೆಣ್ಣು ಅಥವಾ ಗಂಡು) ಸಂಬಂಧಪಟ್ಟಂತೆ ಮಾತುಕತೆ, ಉಡುಗೆ-ತೊಡುಗೆ, ಆಟಗಳು, ನಡವಳಿಕೆ ಇವೆಲ್ಲದರ ಪ್ರಭಾವವೂ ಇರುತ್ತದೆ. ಮಗುವು ಕಿಶೋರಾವಸ್ಥೆ, ಬಾಲ್ಯಾವಸ್ಥೆ, ಪ್ರೌಢಾವಸ್ಥೆಗಳಿಗೆ ಕಾಲಿಟ್ಟಾಗ, ಸಂದರ್ಭಕ್ಕೆ ತಕ್ಕಂತೆ ಶಾರೀರಿಕ, ಮಾನಸಿಕ ಬದಲಾವಣೆಗಳಾಗಿ ಅದರ ಲೈಂಗಿಕತೆಗೆ, ಲಿಂಗ ಸಂಬಂಧಿತ ನಡವಳಿಕೆ, ಭಾವನೆಗಳಿಗೆ ಸರಿಯಾದ ಆಯಾಮ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.

ಸಮಸ್ಯೆಯನ್ನು ಮುಕ್ತವಾಗಿ ಚರ್ಚಿಸಿ: ಸಮಾಜ ಎರಡು ಲಿಂಗಗಳನ್ನು ಮಾತ್ರ ಗುರುತಿಸುತ್ತದೆ. ಇವಲ್ಲದೆ ಮದುವೆಯಾಗಿ ಐದಾರು ವರ್ಷವಾದರೂ ಕೆಲವರು
ಮೊದಲ ರಾತ್ರಿಯ ಸುಖವನ್ನು ಕಂಡಿರುವುದಿಲ್ಲ. ಲೈಂಗಿಕ ಜೀವನ ಸಹಜವಾಗಿರದಿದ್ದರೆ ಗಂಡ, ಹೆಂಡತಿ ನಡುವೆ ದೈಹಿಕ ಮತ್ತು ಮಾನಸಿಕ ಸಂಪರ್ಕ ಕಡಿದು
ಹೋಗುತ್ತದೆ. ಸಮಸ್ಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗುವ ದಂಪತಿಯಲ್ಲಿ ಕೋಪ, ಮುನಿಸು, ಮನಸ್ತಾಪ, ಕಲಹ ಶುರುವಾಗುತ್ತವೆ. ಯುವ ದಂಪತಿಗಳು ಪೋಷಕರು, ಆಪ್ತರ ಜತೆ ಸಮಸ್ಯೆಯನ್ನು ಮುಕ್ತವಾಗಿ ಚರ್ಚಿಸಬೇಕು. ಲೈಂಗಿಕ ತಜ್ಞರನ್ನು ಕಾಣಬೇಕು.

ಇದರಿಂದ ಬಹಳಷ್ಟು ಕುಟುಂಬಗಳನ್ನು ಉಳಿಸಿಕೊಳ್ಳಬಹುದು. ಮುರಿದು ಬೀಳುವ ಮದುವೆಗಳನ್ನು ಕಾಪಾಡಬಹುದು. ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಮತ್ತು ಚಿಕಿತ್ಸೆಗಳಿವೆ ಎಂಬುವುದನ್ನು ಮರೆಯಬಾರದು ಎಂದು ಹೇಳಿದರು. ಕೆಲವೊಮ್ಮೆ ತಮ್ಮದಲ್ಲದ ತಪ್ಪಿಗೆ, ಜನನಾಂಗಗಳ ಬೆಳವಣಿಗೆಯ ನ್ಯೂನತೆಯಿಂದಾಗಿಯೋ, ಲೈಂಗಿಕ ಅಭಿವ್ಯಕ್ತತೆಯ ತೊಂದರೆಯಿಂದಲೋ, ವರ್ಣತಂತುವಿನ ತೊಂದರೆಯ ಪರಿಣಾಮದಿಂದಲೋ ಅಥವಾ ಮಾನಸಿಕ ಅಸ್ವಸ್ಥತೆಯ ಕಾರಣದಿಂದಾ ಗಿಯೋ, ಕೆಲವರಿಗೆ ಮಾತ್ರ ಪರಿಪೂರ್ಣ ಹೆಣ್ಣು ಅಥವಾ ಪರಿಪೂರ್ಣ ಗಂಡಾಗಿರಲು ಸಾಧ್ಯವಾಗುವುದಿಲ್ಲ.

ಇಂಥ ಗುಂಪಿಗೆ ಸೇರಿದ, ಶಾರೀರಿಕವಾಗಿ ಗಂಡಸಾಗಿದ್ದು, ಹೆಣ್ಣಾಗುವ ಆಸೆ, ಮನಃಸ್ಥಿತಿ ಹೊಂದಿರುವ (ಗಂಡಿನ ದೇಹದಲ್ಲಿ ಸೆರೆಯಾಗಿರುವ ಹೆಣ್ಣು) ವ್ಯಕ್ತಿಗಳು ಮತ್ತು ಜನನಾಂಗಗಳ ನ್ಯೂನತೆ ಇರುವ ವ್ಯಕ್ತಿಗಳು ತಮ್ಮದೇ ಆದ ಒಂದು ಗುಂಪಾಗಿ ಬದುಕು ನಡೆಸಿದ್ದಾರೆ. ಇವರೇ ತೃತಿಯ ಲಿಂಗಿಗಳು ಎಂಬ ಮಾಹಿತಿ ನೀಡಿದರು.

***

ಡಾ. ಪದ್ಮಿನಿ ಪ್ರಸಾದ್ ಅವರು ಲೈಂಗಿಕ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ನಮ್ಮಲ್ಲಿ ಲೈಂಗಿಕ ಶಿಕ್ಷಣ ನೀಡುವ ವೈದ್ಯರ ಸಂಖ್ಯೆ ಕಡಿಮೆ. ಪದ್ಮಿನಿ ಅವರು ದಾಂಪತ್ಯ ಹಾಗೂ ಲೈಂಗಿಕತೆ ಕುರಿತು ಜಾಗೃತಿ ಮೂಡಿಸುತ್ತಿzರೆ. ಲೈಂಗಿಕ ಆರೋಗ್ಯ ಕುರಿತು ೧೧ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅಮೆರಿಕಾದ
ಪ್ರತಿಷ್ಠಿತ ವಿಶ್ವ ಲೈಂಗಿಕ ಆರೋಗ್ಯ ಸಂಸ್ಥೆಯ ಸದಸ್ಯತ್ವ ದೊರೆತಿದೆ. ರಾಜ್ಯದ ಪ್ರಥಮ ಮಹಿಳಾ ಲೈಂಗಿಕ ವಿಜ್ಞಾನ ತಜ್ಞೆ ಅವರು.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು