ಪರಿಸರದ ಅರಿವು ಮೂಡಬೇಕಿರುವುದು ಹಳ್ಳಿಗರಲ್ಲಲ್ಲ, ಪಟ್ಟಣಿಗರಲ್ಲಿ
ಜಲಪತ್ರಕರ್ತ ರಾಧಾಕೃಷ್ಣ ಭಡ್ತಿ ಅಭಿಮತ
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ಕನಿಷ್ಠ ಅಗತ್ಯವನ್ನು ಹೊಂದುತ್ತೇನೆ ಎಂದುಕೊಂಡರೆ ಮತ್ತು ಪರಿಸರದ ಜತೆಯಲ್ಲಿ ಸಹಬಾಳ್ವೆ ನಡೆಸಲು ಸಮರ್ಥನಾದರಷ್ಟೇ ನಾನು ಅದೃಷ್ಟವಂತ ಎಂಬ ಅರಿವನ್ನು ಪರಿಸರ ದಿನ ದಂದು ಮೂಡಿಸಿಕೊಳ್ಳಬೇಕಿದೆ ಎಂದು ಜಲ ಪತ್ರಕರ್ತ ರಾಧಾಕೃಷ್ಣ ಭಡ್ತಿ
ಹೇಳಿದ್ದಾರೆ.
ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಶನಿವಾರ, ‘ವಿಶ್ವವಾಣಿ ಕ್ಲಬ್‌ಹೌಸ್’ ಹಮ್ಮಿ ಕೊಂಡಿದ್ದ ‘ಪರಿಸರ ಪ್ರಜ್ಞೆ’ ಕಾರ್ಯಕ್ರಮದಲ್ಲಿ ‘ಲೋಕಧ್ವನಿ’ ಸಂಪಾದಕರೂ ಆಗಿರುವ ‘ವಿಶ್ವವಾಣಿ ’ ಕಾರ್ಯನಿರ್ವಾಹಕ ಸಂಪಾದಕ ಭಡ್ತಿಯವರು ಅರಿವಿನ ಉಪನ್ಯಾಸ ನೀಡಿ, ಗ್ರಾಮೀಣರಿಗೆ ಮನೆ ಹಿತ್ತಿಲುಗಳೇ ಜೀವಾಳ. ಆದರೆ, ನಗರಗಳಲ್ಲಿ ಇಂಥ ಸಂಪ್ರದಾಯ ಮಾಯವಾಗಿದ್ದೇ ವಾತಾವರಣ ಹದ ಗೆಡಲು ಕಾರಣವಾಗಿದೆ. ಪರಿಸರದ ಜತೆಯಲ್ಲಿ ಬದುಕುವ ಮನಃಸ್ಥಿತಿಯನ್ನು ಬಳಸಿಕೊಂಡರೆ ನಾವು ಸಂತಸದಿಂದ ಬದುಕ ಬಹುದು. ಸ್ಥಳದಲ್ಲಿ ಲಭ್ಯ ಸಂಪನ್ಮೂಲವನ್ನಷ್ಟೇ ಬಳಸಿ ಕೃಷಿ ಮಾಡಿದರೆ, ನಷ್ಟ ಅನುಭವಿಸುವು ದಿಲ್ಲ. ನಾವು ಹೊರಗಿನಿಂದ ರಾಸಾಯನಿಕ ಸೇರಿದಂತೆ ಬೃಹತ್ ಬಂಡವಾಳ ಬೇಡುವ ಕೃಷಿಯ ಮೊರೆ ಹೋಗಿದ್ದೇ ರೈತನಿಗೆ ಇಂದಿನ ದುಃಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದರು.
ಗಂಗಾ ನದಿಯ ಪುನಶ್ಚೇತನ ಒಳ್ಳೆಯ ಕಾರ್ಯ. ಅದು ಬೇಕಾಗಿದೆ. ಆದರೆ, ಮುಂದಿನ ದಿನಗಳಲ್ಲಿ ನಮ್ಮ ನದಿಗಳನ್ನು ಕಲುಷಿತ ಗೊಳ್ಳದಂತೆ ನೋಡಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು. ನದಿ ಜೋಡಣೆಯನ್ನು ವೈಯಕ್ತಿವಾಗಿ ವಿರೋಧಿಸುವುದಾಗಿ ಹೇಳಿದ ಭಡ್ತಿಯವರು, ನದಿಗಳಿಗೆ ಅವುಗಳದೇ ಆದ ವೈವಿಧ್ಯಮಯ ವ್ಯಕ್ತಿತ್ವಗಳಿರುತ್ತವೆ.
ಜೈವಿಕ ವೈರುಧ್ಯ, ರಭಸವಿರುತ್ತದೆ. ಹೀಗಾಗಿ, ಜಲಸಂಪನ್ಮೂಲ ಹೆಚ್ಚಳ ಮಾಡಬೇಕೆ ವಿನಃ ನದಿ ಜೋಡಣೆ ನೀರಿನ ಸಮಸ್ಯೆಗೆ ಪರಿಹಾರವಲ್ಲ. ಕೆರೆಗಳನ್ನು ಉಳಿಸಿಕೊಂಡರೆ ಬೃಹತ್ ನೀರಾವರಿ ಯೋಜನೆಗಳೇ ಬೇಕಿಲ್ಲ. ಜಲ ಮತ್ತು ಪರಿಸರದ ಬಗ್ಗೆ
ಪಾರಂಪರಿಕರಿಗೆ ಇದ್ದ ಪ್ರಜ್ಞೆ ಈಗಿನ ತಲೆಮಾರಿಗೆ ಇಲ್ಲ. ಹೀಗಾಗಿಯೇ ಸಮಸ್ಯೆಯಾಗಿದೆ ಎಂದರು.
ಇಂದು ನಮ್ಮ ದೇಶದ ಅಸಂಖ್ಯಾತ ಹಳ್ಳಿಗಳಲ್ಲಿ ಮಾಲಿನ್ಯದ ನೀರನ್ನು ಕುಡಿಯುವ ಪರಿಸ್ಥಿತಿಯಿದೆ. ಪರಿಸರ ದಿನ ಎಂದರೆ ಸಸಿಗಳನ್ನು ನೆಡುವುದು ಎಂಬಂತಾಗಿದೆ. ಅಭಿವೃದ್ಧಿ ಹೆಸರಲ್ಲಿ ಆಗುವ ಅವಾಂತರಗಳು, ಪ್ರಾಕೃತಿಕ ಸಂಪನ್ಮೂಲಗಳ ದುಂದು ಗಮನಿಸಿದರೆ, ಇದು ದೊಡ್ಡ ಅಪಾಯ. ಮನೆ ಕಟ್ಟಿದ್ದಾನೆ, ಕಾರು ಕೊಂಡಿದ್ದಾನೆ. ಮನೆಯಲ್ಲಿ ಐಷಾರಾಮಿ ವಸ್ತುಗಳಿವೆ ಎಂಬ ಸಂಗತಿಗಳಿಂದ ಶ್ರೀಮಂತಿಕೆ ಅಳೆಯುವ ಪರಿಪಾಠ ಜಾರಿಗೆ ಬರುತ್ತಿದೆ. ಆತನ ಬೊಕ್ಕಸ ಬೆಳೆಯುತ್ತಿದೆ. ಆದರೆ, ಪರಿಸರಕ್ಕೆ ಸಂಬಂಧಿ ಸಿದ ಆರೋಗ್ಯ, ನೆಮ್ಮದಿ ನಶಿಸುತ್ತಿದೆ ಎಂದು ತಿಳಿಸಿದರು.
ಪರಿಸರ ಎಂದರೆ ಕಾಡಷ್ಟೇ ಅಲ್ಲ
ಜಗತ್ತಿನ ಬಹುತೇಕ ರಾಷ್ಟ್ರಗಳು ವಿದ್ಯುತ್ ಸೇರಿ ಇಂಧನ ಕೊರತೆ ಎದುರಿಸುತ್ತಿವೆ. ಪರಿಸರ ಎಂದೊಡನೆ ಕಾಡು, ಮರ- ಗಿಡ ಮಾತ್ರ ಎಂಬ ನಂಬಿಕೆಯಿದೆ. ಮರುಭೂಮಿ, ಬಯಲು, ಕರಾವಳಿಗಳೂ ಪರಿಸರದ ಭಾಗವೇ. ನಿಸರ್ಗದಲ್ಲಿ ಅವುಗಳದ್ದೂ ಪಾತ್ರವಿದೆ. ನಮಗೆ ಹುಲಿಗಳ ಸಂಖ್ಯೆಯ ಬಗೆಗಿದ್ದಷ್ಟು ಗೆದ್ದಲುಗಳ ಬಗ್ಗೆ ಚಿಂತೆ ಏಕಿಲ್ಲ? ಇರುವೆಗಳ ಬಗ್ಗೆ ಏಕೆ ಯೋಚನೆ ಮಾಡುತ್ತಿಲ್ಲ? ಕಾಡಾಮೆಗಳ ಬಗ್ಗೆ, ಕಬ್ಬೆಕ್ಕುಗಳ ಬಗ್ಗೆ ಮಾತನಾಡುತ್ತಿಲ್ಲ. ಅತೀ ಅಮೂಲ್ಯವೆನಿಸಿದ ಮಣ್ಣು ತನ್ನ ಸುವಾಸನೆ ಕಳೆದುಕೊಳ್ಳು ತ್ತಿದೆ. ಏಳು ಪದರಗಳ ಪೈಕಿ ಮೂರು ಸ್ತರದ ಮಣ್ಣು ತನ್ನ ವೈವಿದ್ಯ ಕಳೆದುಕೊಂಡಿದೆ ಎಂದು ವಿಶ್ವ ಪರಿಸರ ಸಂಸ್ಥೆ ತಿಳಿಸಿದೆ. ಆದರೆ, ಈ ಬಗ್ಗೆ ನಾವೆಲ್ಲ ಮಾತನಾಡುತ್ತಿಲ್ಲ. ಪರಿಸರ ಎಂದರೆ ಮನುಷ್ಯನ ದೇಹವೂ ಸೇರಿದಂತೆ ನಮ್ಮ ಸುತ್ತಲಿನ ಎಲ್ಲ ಪ್ರದೇಶ,
ಪ್ರಾಣಿ, ಪಕ್ಷಿಗಳು ಬಹುಮುಖ್ಯ ಅಂಶ. ಇವೆಲ್ಲವುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರಿಗೆ ಸೇರಿದೆ. ನಾವೆಲ್ಲ ಆ ನಿಟ್ಟಿನಲ್ಲಿ ಜಾಗೃತರಾಗಬೇಕಿದೆ ಎಂದು ಹೇಳಿದರು.
ಪರಿಸರದ ವಿಚಾರದಲ್ಲಿ ಪುರಾತನಿಗಳಾಗೋಣ
ನಾವು ಪರಿಸರ ಸಂರಕ್ಷಣೆ ವಿಚಾರದಲ್ಲಿ ಪುರಾತನ ಕಾಲಕ್ಕೆ ಹೋದರೆ ಒಳ್ಳೆಯದು. ಈಶಾನ್ಯ ರಾಜ್ಯಗಳಲ್ಲಿ ಇಡೀ ರಾತ್ರಿ ವಿದ್ಯುತ್ ದೀಪ ಕಾಣುವುದಿಲ್ಲ. ಹಾಗೆಂದ ಮಾತ್ರಕ್ಕೆ ಅಲ್ಲಿನ ಜನ ನೆಮ್ಮದಿಯಿಂದ ಇಲ್ಲ ಎಂದರ್ಥವಲ್ಲ. ಅಭಿವೃದ್ಧಿ ಎಂದೊಡನೆ ಕೈಗಾರಿಕೆಗಳು, ದೊಡ್ಡ ದೊಡ್ಡ ಕಟ್ಟಡಗಳು, ಝಗಮಗಿಸುವ ದೀಪಗಳು, ಬೃಹತ್ ನೀರಾವರಿ ಯೋಜನೆಗಳು, ಉಷ್ಣ ವಿದ್ಯುತ್
ಸ್ಥಾವರಗಳಲ್ಲ.
ಇದೆಲ್ಲವನ್ನು ಮೀರಿ ನಮ್ಮ ಮನಸಿಗೆ ಮುದ ನೀಡುವ, ನೆಮ್ಮದಿ ನೀಡುವ ಬದುಕೇ ಅಭಿವೃದ್ಧಿ ಎಂಬುದನ್ನು ನಾವೆಲ್ಲರು
ಮನಗಾಣಬೇಕಿದೆ. ಆರೋಗ್ಯ ಮತ್ತು ಶೈಕ್ಷಣಿಕ ವಿಚಾರದಲ್ಲಿ ಮಾತ್ರ ಅಭಿವೃದ್ಧಿ ಆಗಬೇಕಿದೆಯೇ ಹೊರತು, ಉಳಿದೆಲ್ಲವೂ ಅಭಿವೃದ್ಧಿಯ ಆಯಾಮವಲ್ಲ. ಇದನ್ನು ನಮ್ಮ ನಾಯಕತ್ವ ಗಮನಿಸಬೇಕು ಎಂದು ಸಲಹೆ ನೀಡಿದರು.
ಕ್ಲಬ್‌ಹೌಸ್‌ನಲ್ಲಿ ಕೇಳಿದ್ದು
? ಅನಪೇಕ್ಷಿತ ಬೆಳವಣಿಗೆಗೆ ಪ್ರಮುಖ ಕಾರಣ ನಗರ ಕೇಂದ್ರಿತ ಭಾರತದ ವ್ಯವಸ್ಥೆ
? ನೆಮ್ಮದಿ-ಹಣದಲ್ಲಿ ಯಾವುದು ಮುಖ್ಯಎಂಬುದರ ಮೇಲೆ ಅಭಿವೃದ್ಧಿ ಬರೆಯಿರಿ.
? ಬಡವನ ಶ್ರಮ, ಪರಿಸರ ಸಂಪನ್ಮೂಲವನ್ನು ನಿವ್ವಳ ಆದಾಯದಲ್ಲಿ ಪರಿಗಣಿಸದಿರುವುದೇಕೆ?
? ಕಿವಿಗಳು ಎಸಿಗಳ ಶಬ್ದದಲ್ಲಿ ಕಿವುಡಾಗಿವೆ, ಕಾರಿನ ಹೊಗೆಯಲ್ಲಿ ಬುದ್ಧಿ ಮಂಕಾಗಿದೆ.
ಅಭಿವೃದ್ಧಿ ಹೆಸರಲ್ಲಿ ಪರಿಸರ ಮೇಲಿನ ದೌರ್ಜನ್ಯ
ವಿದ್ಯುತ್ ಇಲ್ಲದ ಹಳ್ಳಿ ಅನಾಗರಿಕ ಹಳ್ಳಿ ಎಂದು ಕರೆಸಿಕೊಳ್ಳುತ್ತಿದೆ. ಆದರೆ, ಜಲವಿದ್ಯುತ್ ಕೇಂದ್ರಗಳು ನಮ್ಮ ಪರಿಸರ ಸಂಪತ್ತನ್ನು ನಾಶಗೊಳಿಸುತ್ತಿವೆ. ಪರಮಾಣು ವಿದ್ಯುತ್ ಸ್ಥಾವರ ನಮ್ಮ ಪರಿಸರ ನಾಶಪಡಿಸುತ್ತಿಲ್ಲವೇ? ಇದೆಲ್ಲ ಕಾರಣಕ್ಕೆ ಕ್ಯಾನ್ಸರ್ ಎಂಬುದು ಸಾಂಕ್ರಾಮಿಕವಾಗುತ್ತಿದೆ ಎಂದರಲ್ಲದೇ ಸುಸ್ಥಿರವಲ್ಲದ ಯೋಜನೆಗಳು, ಪರಿಸರದ ಮತ್ತು ಮಾನವನ ದೈಹಿಕ ಆರೋಗ್ಯವನ್ನು ಕೆಡಿಸುತ್ತವೆ ಎಂದರು. ಭಾರತದಲ್ಲಿ ಇಡೀ ಜಗತ್ತು ಅಡಗಿದೆ. ಇಲ್ಲಿ ಇಡೀ ಜಗತ್ತಿನ ಎಲ್ಲ ಅಂಶಗಳನ್ನು ಕಾಣಬಹುದು. ನಮ್ಮಲ್ಲಿರುವ ಎಲ್ಲರೂ ಬುದ್ದಿವಂತರೇ. ನಮ್ಮ ಮಾನದಂಡ ಸರ್ಟಿಫಿಕೆಟ್ ಮೇಲೆ ನಿಂತಿದೆ. ಪ್ರಪಂಚದ ೧೬೦ ಕೋಟಿ ಜನ ವಿದ್ಯುತ್ ಅನ್ನೇ ಕಂಡಿಲ್ಲ, ಭಾರತ ಬಿಟ್ಟು ಬಹುತೇಕ ಪೌರಾತ್ಯ ದೇಶಗಳು ತಮ್ಮ ಭಾಷೆಯನ್ನು ಬಿಟ್ಟು ಇಂಗ್ಲಿಷ್ ಬಳಕೆ ಮಾಡಿಯೇ ಇಲ್ಲ. ಆದರೆ ನಮ್ಮಲ್ಲಿ ಇಂಗ್ಲಿಷ್ ಬರಲಿಲ್ಲ ಎಂಬ ಒಂದೇ ಕಾರಣಕ್ಕೆ ರೈತ, ಗ್ರಾಮೀಣ ವ್ಯಕ್ತಿ ದಡ್ಡ ಎನಿಸಿಕೊಳ್ಳುತ್ತಾನೆ. ಇಂತಹದ್ದೇ ಹುಚ್ಚು ಭ್ರಮೆ ಪರಿಸರದ ವಿಚಾರದಲ್ಲಿಯೂ ಆಗಿದೆ ಎಂದು ಭಡ್ತಿ ಪ್ರತಿಪಾದಿಸಿದರು.