Saturday, 20th April 2024

ದೇಶ ಕಾಪಾಡುವ ಮಹಾತ್ಮ ನರೇಂದ್ರ ಮೋದಿ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಪತ್ರಕರ್ತ ರವೀಂದ್ರ ಜೋಷಿ ಅವರಿಂದ ಉಪನ್ಯಾಸ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಇತ್ತೀಚೆಗೆ ಪ್ರತಿಪಕ್ಷದವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುದು ಸುಲಭ ಸಾಧ್ಯವಿಲ್ಲ. ದೇಶದ ಹಿತವನ್ನೆ ಪ್ರಧಾನ ವನ್ನಾಗಿಸಿಕೊಂಡ ಪ್ರಧಾನಿ ಮೋದಿ ದೇಶ ಕಾಪಾಡುವ ಮಹಾತ್ಮರಾಗಿ ಹೊರ ಹೊಮ್ಮಿ ದ್ದಾರೆ ಎಂದು ಪತ್ರಕರ್ತ ರವೀಂದ್ರ ಜೋಷಿ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಒಬ್ಬ ವ್ಯಕ್ತಿ ಹಣವನ್ನು ಹೇಗೆ ಸದ್ವಿನಿಯೋಗ ಮಾಡಬಹುದು ಎಂಬ ಕಲ್ಪನೆ ಮತ್ತು ದೂರದರ್ಶಿತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕಾಣಬಹುದು.

ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳು ಮತ್ತು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪರಿಗಣಿಸಿ ರಾಜಪಥವನ್ನು ‘ಕರ್ತವ್ಯ ಪಥ’ ಎಂದು ಮರುನಾಮಕರಣ ಮಾಡಿದ ಧೀಮಂತ ನಾಯಕನ ವ್ಯಕ್ತಿತ್ವವನ್ನು ಇದರಿಂದ ಅರಿತುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಉಡುಪಿಯ ಪೇಜಾವರ ಮಠದ ಸ್ವಾಮೀಜಿಯವರಿಗೆ ಆಹ್ವಾನ ನೀಡಿದ್ದರು. ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲಿ ಪ್ರಧಾನಿಯಾದವರು ಯಾರನ್ನು ಆಹ್ವಾನ ನೀಡಬೇಕು ಎಂಬುದನ್ನು ತುಂಬಾ ಆಳವಾಗಿ ಚಿಂತಿಸುತ್ತಾರೆ. ಆದರೆ, ದಕ್ಷಿಣ ಭಾರತದಲ್ಲಿ ಸ್ವಾಮೀಜಿಯೊಬ್ಬರನ್ನು ಆಹ್ವಾನ ನೀಡಿದ್ದರಿಂದ ಅವರಲ್ಲಿನ ಸ್ವಭಾವ ಅರ್ಥವಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರತಿ ಮಾತಿನಲ್ಲೂ ಘನತೆ, ಗೌರವ, ಅಸ್ಮಿತೆ ಉಳಿಸಿಕೊಂಡಿದ್ದಾರೆ. ದೇಶ ಎಂಬ ಪರಿಕಲ್ಪನೆ ಯನ್ನು ಜತೆಗೆ ಅರ್ಥಮಾಡಿಸಿಕೊಟ್ಟಿದ್ದಾರೆ. ನನ್ನ ದೇಶ, ನನ್ನ ಸಂಸ್ಕೃತಿ ಎಂಬ ಭಾವನೆ ಅವರದು. ಅವರು ಪ್ರಧಾನಿಯಾದ ಮೊದಲ ಐದು ವರ್ಷ ನಿರಂತರ ಪ್ರವಾಸ ಮಾಡಿದ್ದಾರೆ. ೬೩ ದೇಶಗಳನ್ನು ಸುತ್ತಿದ್ದಾರೆ. ಆಗ ಕಾಂಗ್ರೆಸ್ ನವರು ಪ್ರವಾಸದಲ್ಲೇ ದಿನಗಳನ್ನು ಕಳೆದಿದ್ದಾರೆ ಎಂದು ಟೀಕಿಸಿದ್ದರು.

ಆಗ ಪ್ರಧಾನಿ ಮೋದಿ, ‘ಭಾರತ ದೇಶ ಹೊಸ ಪ್ರಧಾನಿ ಪಡೆದಿದೆ. ಗಾಂಽ ಪರಿವಾರದ ಆಡಳಿತದ ನಂತರ ಒಬ್ಬ ಸಾಧಾರಣ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ದೇಶದ ವಿಶ್ವಾಸಾರ್ಹತೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಬೇಕು. ಇತರ ದೇಶಗಳ ಜತೆ ಒಡಂಬಡಿಕೆ ಮಾಡಿಕೊಳ್ಳದಿದ್ದರೆ ನಮ್ಮ ದೇಶಕ್ಕೆ ಸಹಾಯ ಪಡೆಯಲು ಹೇಗೆ ಸಾಧ್ಯ’ಎಂಬ ಪ್ರತ್ಯುತ್ತರ ನೀಡಿದ್ದರು, ಈ ಹೇಳಿಕೆ ನಿಜಕ್ಕೂ ಮೆಚ್ಚುವಂತಹದ್ದು ಎಂದರು.

ಇತ್ತೀಚಿನ ದಿನಗಳಲ್ಲಿ ಅವರು ಮೂರು ದಿನದ ಪ್ರವಾದಸಲ್ಲಿ ೧೫ ಸಭೆಗಳನ್ನು ಮಾಡುತ್ತಾರೆ. ಮೋದಿಯವರ ಕಾಲಘಟ್ಟದಲ್ಲಿ ವಿಶ್ವಾಸಾರ್ಹತೆ ಆಶಾಕಿರಣವಾಗಿದೆ. ೨೦೦೪ ರಿಂದ ೧೪ ರವರೆಗೂ ಇದ್ದಂತಹ ಸರಕಾರದಲ್ಲಿ ಭ್ರಷ್ಟಾಚಾರಕ್ಕೆ ಮತ್ತೊಂದು ಪದ ರಾಜಕಾರಣ ಎಂಬಂತಿತ್ತು. ತದನಂತರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನೋಟು ಅಮಾನ್ಯ ಮಾಡಿದರು. ಇದನ್ನು ಸಹಿಸಿ ಕೊಳ್ಳದ ಪ್ರತಿಪಕ್ಷದವರು ಟೀಕೆಗಳು ಮಾಡಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿದ ನಂತರ ಪ್ರತಿಪಕ್ಷದವರು ಮಾಡಿದ ಕುತಂತ್ರಗಳು ಅಷ್ಟಿಷ್ಟಲ್ಲ.

ಐದು ವರ್ಷಗಳ ಕಾಲದಲ್ಲಿ ಬಡತನ, ನಿರುದ್ಯೋಗ, ಹಣದುಬ್ಬರ, ಭ್ರಷ್ಟಾಚಾರ ಕೊನೆಗಾಣಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದೂ ಇವೆಲ್ಲವನ್ನೂ ಹೋಗಲಾಡಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು. ಈ ದೇಶದ ಜನ ಧಾರ್ಮಿಕ ಹಿನ್ನೆಲೆಯಿಂದ ಬಂದವರು. ಸ್ವಾವಲಂಬಿಗಳಾಗಿ ಬದುಕುವ ಜನ. ಮನೆಯಲ್ಲಿ ದೇವರು ಎಷ್ಟು ಮುಖ್ಯವೂ, ದೇಶಕ್ಕೆ ಕಾಪಾಡುವ ವ್ಯಕ್ತಿ ಬೇಕು
ಎಂದುಕೊಂಡಿದ್ದರು. ಬಯಸಿದಂತೆ ಜನತೆಗೆ ಸಿಕ್ಕಿದ್ದು ನರೇಂದ್ರ ಮೋದಿ ಅವರು. ಅವರೊಬ್ಬ ಜನರ ಕಷ್ಟ, ಸುಖ ಅರಿತ ವ್ಯಕ್ತಿ ಎಂದು ಮೋದಿಯವರ ವ್ಯಕ್ತಿತ್ವ ಕುರಿತು ಮಾಹಿತಿ ನೀಡಿದರು.

ದೇಶದ ಹಿರಿಯಣ್ಣ ಮೋದಿ; ಶ್ರಮಜೀವಿ
೧೩೫ ಕೋಟಿ ಜನರ ಮೆಚ್ಚಿನ ನಾಯಕರಾಗಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಪ್ರಧಾನಿಯ ಸಾರ್ವಜನಿಕ ನಡವಳಿಕೆ, ಚರ್ಯೆಗಳು ಸಚಿವ ಸಂಪುಟದ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಅವರು ಹಿರಿಯಣ್ಣ ಸ್ಥಾನದಲ್ಲಿದ್ದಾಗ ಎಲ್ಲಾ ಆಲೋಚನೆ ಗಳು ವಿಭಿನ್ನವಾಗಿರುತ್ತದೆ. ಚಾಣಾಕ್ಷ ನಿಸ್ಪೃಹ, ಶ್ರಮಜೀವಿ ಅವರು. ಕರೋನಾ ಸಂದರ್ಭದಲ್ಲಿ ದೇಶದ ಜನರ ಆರೋಗ್ಯ ಕಾಪಾಡಿದ ಕ್ಷಣಗಳನ್ನು ಮೆಲುಕು ಹಾಕಿದರೆ ಅವರು ಪಟ್ಟ ಕಷ್ಟ ಅರ್ಥವಾಗುತ್ತದೆ.

ಮೋದಿ ಅವರ ಪ್ರಧಾನಿ ಪಟ್ಟ ಮುಳ್ಳಿನ ಹಾಸಿಗೆ. ಹಿಂದೆ ಪ್ರಧಾನಿಯಾದಂತಹವರಿಗೆ ಆ ಪಟ್ಟ ಸುಖದ ಸುಪ್ಪತ್ತಿಗೆಯಾಗಿತ್ತು ಎಂದು ರವೀಂದ್ರ ಜೋಷಿ ಅಭಿಪ್ರಾಯಪಟ್ಟರು.

error: Content is protected !!