Wednesday, 11th December 2024

ಗೊರಕೆ ಹೊಡೆಯುವ ಗಂಡನ ಜತೆ ದಾಂಪತ್ಯ

Club House

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ 91

ಫಟಾಫಟ್ ಮಾತುಕತೆಯಲ್ಲಿ ಕೇಳುಗರ ಸತ್ವಯುತ ಚರ್ಚೆ 

ಹಗಲಲ್ಲಿ ಮಲಗುವ ಗಂಡ ದೊರೆತರೆ ಎಂಬ ವಿಷಯದಲ್ಲಿ ಮಾತನಾಡಿದ ಗೀತಾ ಪಾಟೀಲ್‌ಗೆ ಪ್ರಥಮ ಬಹುಮಾನ

ಬೆಂಗಳೂರು: ಮನೆತುಂಬಾ ಜನ ಇದ್ದಾಗ ಮೂರು ಜೋಕ್ ಹೇಳಿ ಅಂದ್ರೆ, ಲವ್ ಲೆಟರ್ ಬರೆದು ಬೇರೆಯವರಿಗೆ ಈಮೇಲ್ ಹೋದಾಗ, ಗೊರಕೆ ಹೊಡೆಯುವ ಗಂಡನ ಜತೆ ದಾಂಪತ್ಯ, ಬೆಳಗಾವಿಯಿಂದ ಬಸ್‌ಚಾರ್ಜ್ ಉಳಿಕೆ ಹಣ ಪಡೆಯಬೇಕು, ನನ್ನ ಪ್ರಕಾರ ಸುದ್ದಿ ಅಂದ್ರೆ,ಭಜನೆಯಲ್ಲಿ ತಮಾಷೆ, ವಿದ್ಯಾರ್ಥಿನಿಯೊಬ್ಬಳು ರಾಕೆಟ್ ಹೊಡೆದಾಗ, ಚಕ್ರವರ್ತಿ ಸೂಲಿಬೆಲೆಯಲ್ಲಿ ನಾನು ಕಂಡ ಉತ್ತಮ ಗುಣಗಳು, ಬಹಳ ವರ್ಷಗಳ ಹಿಂದಿನ ಸ್ನೇಹಿತೆ ಅಚಾನಕ್ ಆಗಿ ಸಿಕ್ಕಾಗ, ಫ್ಯಾನ್ಸಿ ಸ್ಟೋರ್‌ನಲ್ಲಿ ಫ್ಯಾನ್ಸಿ ಐಟಮ್ ಹೇಗೆ ಮಾರುತ್ತೀರಾ? ಬಣ್ಣ ಹೊಂದಿಸಿಕೊಂಡು ವೇಷ ತೊಡಬೇಕು, ನನ್ನೆಜಮಾನ್ರ ಗುಂಡಾಕಿ ಬಂದ್ರೆ,ಗಂಡನ ಕಿವಿ ಮೇಲೆ ನೀವು ಹೂ ಇಡೋದಾ ನಿಮ್ ಗಂಡ ನಿಮ್ ಕಿವಿ ಮೇಲೆ ಹೂ ಇಡೋದಾ? ವೇದಿಕೆಗೆ ಬಂದಾಗ ಮಾತು ಮರೆತು ಹೋದರೆ? ಗಂಡ ಮೊದಲ ಬಾರಿ ಇಷ್ಟವಾಗದ ಸೀರೆ ತಂದುಕೊಟ್ಟಾಗ, ಯಾರನ್ನಾದರೂ ಅವಾಚ್ಯ ಶಬ್ದಗಳಿಂದ ಬೈದರೆ? ಮೊಬೈಲ್ ಫೊನ್ ಕಳೆದುಹೋದರೆ? ಮನೆಗೆ ಅತಿಥಿ ಬಂದಾಗ ಮಗ ಅಪ್ಪನೇ ಅಡುಗೆ ಮಾಡಿದ ಸತ್ಯ ಹೇಳಿದರೆ, ಬಹಳ ವರ್ಷಗಳ ಹಿಂದಿನ ಸ್ನೇಹಿತೆಯ ಹೆಸರು ಮರೆತರೆ? ನಾನು ಎದುರಿಸಿದ ಕ್ಲಿಷ್ಟಕರ ರೋಗಿ, ಅಚಾನಕ್ ಆಗಿ ಲೇಡಿಸ್ ಟಾಯ್ಲೆಟ್‌ಗೆ ಹೋದಾಗ, ನೆಂಟರಿಗೆ ಬಂದಾಗ ರುಚಿ ರುಚಿಯಾದ ಅಡುಗೆ ಮಾಡುವಂತೆ ಗಂಡ ಬೈದರೆ, ರಾತ್ರಿಯಿಡೀ ತಿನ್ನುವ ಹಗಲಿಡೀ ಮಲಗುವ ಗಂಡ ಎಂಬ ವಿಷಯಕ್ಕೆ ಹಾಸ್ಯಮಯವಾಗಿ ಮಾತು ಗಾರಿಕೆ ಕಂಡುಬಂದಿತು.

ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಭಾನುವಾರ ನಡೆದ ವಿಷಯ ನಮ್ಮದು, ಮಾತು ನಿಮ್ಮದು: ಫಟಾಫಟ್ ಮಾತಾಡಿ ಎಂಬ ಕಾರ್ಯಕ್ರಮದಲ್ಲಿ ಮೂಡಿಬಂದ ಸಾಕಷ್ಟು ವಿಷಯಗಳು ಕೇಳುಗರಿಗೆ ಹಿತವಾಗಿತ್ತು. ಪ್ರತಿಯೊಂದು ವಿಷಯ ಗಳು ತನ್ನದೆ ಶೈಲಿಯಲ್ಲಿ ಉತ್ತರಿಸಿದ್ದು ಕೇಳುಗರ ಗಮನ ಸೆಳೆದಿತ್ತು. ಮನೆಗೆ ಅತಿಥಿ ಬಂದಾಗ ಅವರೆದುರು ಅಡುಗೆ ಮಾಡಿರುವುದು ನನ್ನಪ್ಪ ಎಂದು ಮಗ ಹೇಳಿದಾಗ ವಿಷಯಕ್ಕೆ ಭವಿ ಪ್ರಭವಿ ಮಾತನಾಡಿ, ಮನೆಗೆ ಅತಿಥಿ ಬಂದಾಗ ನನ್ನ ಮಗ ಅದ್ಯಾಕೋ ಅವನ್ಯಾಕೋ ಎಷ್ಟು ಹೇಳಿದರೂ ನಿಜ ಹೇಳಿ ಬಿಡ್ತಾನೆ. ಅದೂ ಮೊನ್ನೆ ಅಷ್ಟೇ ನಾನು ವ್ಯಾಕ್ಸೀನ್ ಹಾಕಿಸಿಕೊಂಡು ಅದಕ್ಕೆ ಸಣ್ಣಕ್ಕೆ ಜ್ವರ ಬಂದಿತ್ತು. ಅದೇ ಸಂದರ್ಭಕ್ಕೆ ಮನೆಗೆ ನೆಂಟರು ಬಂದು ಬಿಟ್ರು.

ನಮ್ಮೆಜಮಾನ್ರಿಗೆ ಅಡುಗೆ ಏನು ಮಾಡೋಕೆ ಬರೋದಿಲ್ಲ. ಆದರೆ ಸಾಂಬಾರ್ ಅವರೇ ಮಾಡಿದ್ರೂ. ನಾನು ಸ್ವಲ್ಪ ತರಕಾರಿ ತೊಳೆದುಕೊಟ್ಟೆ, ಪ್ಯಾನ್‌ಗೆ ಎಣ್ಣೆ
ಹಾಕಿಕೊಟ್ಟೆ, ಒಗ್ಗರಣೆ ಅವರೇ ಹಾಕಿದ್ರು. ನಾನು ತರಕಾರಿ ಬೇಯಿಸೋಕೆ ನೀರು ಹಾಕಿ ಕೊಟ್ಟೆ ಅಷ್ಟೇ. ಇನ್ನು ಅನ್ನ ಮಾಡೋಕೆ ನೀರು ಎಷ್ಟು ಹಾಕೋದು
ಅಂತ ಮಾತ್ರ ನಾನು ಹೇಳಿಕೊಟ್ಟೆ. ಅವರೇನು ಅಂತಹಾ ಕೆಲಸ ಮಾಡಲ್ಲ. ಅವರಿಗೆ ಹುಳಿ ಹಿಂಡೋಕೆ ಗೊತ್ತಿಲ್ಲ. ಅದನ್ನೂ ನಾನೇ ಹಾಕ್ಕೊಟ್ಟೆ. ನೆಂಟರು ಬಂದಿದಾರಲ್ಲ ಪಾನಕ ಮಾಡ್ಬೇಕಲ್ಲ ಅಂತ ಅವರೂ ಸಕ್ಕರೆ ಹಾಕಿ ನೆನೆಸಿಟ್ಟರು ಅಷ್ಟೇ ನೀರು ನಾನೇ ಹಾಕಿದೆ.ಬಟ್ಟೆ ನೆನೆಸಿಟ್ಟೆ ಅಷ್ಟೇ ಅವರೇ ವಾಶ್ ಮಾಡಿದ್ರು ಪೊರಕೆ ತಂದುಕೊಟ್ಟೆ ಅವರೇ ಕಸ ಗುಡಿಸಿದರು ಅಷ್ಟೇ ಅವರೇನೂ ಕೆಲಸ ಮಾಡೋದೇ ಇಲ್ಲ. ಇನ್ನೇನು ಬಾತ್ ಮಾಡ್ಬೇಕು ಅದನ್ನೂ ನಾನೇ ಹೇಳ್ಕೊಟ್ಟೆ ಎಂದು ಹಾಸ್ಯಮಯವಾಗಿ ಮಾತನಾಡಿದರು.

ಗೊರಕೆ ಹೊಡೆಯುವ ಗಂಡ ಜತೆ ದಾಂಪತ್ಯ ಎಂಬ ವಿಷಯಕ್ಕೆ ಭಾರತೀ ವೀರೇಶ್ ಮಾತನಾಡಿ, ಗೊರಕೆ ಹೊಡೆಯುವ ಗಂಡನ ಜತೆ ದಾಂಪತ್ಯ ಹೊಸದೇನಲ್ಲ. ಮೊದ ಮೊದಲು ಅಸಹನೀಯವಾಗಿತ್ತು. ಆದರೆ ಕೊನೆ ಕೊನೆಗೆ ಅದೇ ಅಭ್ಯಾಸವಾಗಿ ಹೋಗಿತ್ತು. ಒಂದೊಂದು ಬಾರಿ ಟ್ರೈನ್‌ನ ಗೊರ ಗೊರ ಸದ್ದಿನಂತಿದ್ದರೆ, ಮತ್ತೊಮ್ಮೆ ಸಿಳ್ಳಿನಂತಿತ್ತು. ಹೀಗೆ ಈ ಗೊರಕೆಯನ್ನು ನಾನು ತುಂಬಾ ಇಷ್ಟಪಡ್ತಿದ್ದೇನೆ. ನನಗಂತೂ ಗಂಡನ ಗೊರಕೆ ಜೋಗುಳದಂತಾಗಿ ಹೋಗಿದೆ. ಮನೆಯಿಂದ ಹೊರಗುಳಿದರೆ ಗಂಡನಿಗೆ ಕರೆ ಮಾಡಿ ಅವರನ್ನು ಆನ್ ಇಟ್ಟಿರಿ ನಿಮ್ಮ ಗೊರಕೆ ಕೇಳುತ್ತಾ ನಾನು ನಿದ್ರೆ ಮಾಡ್ತೀನಿ ಅಂತ ಹೇಳ್ತಾ ಇದ್ದೀನಿ. ಇನ್ನು ನನ್ನ ಗಂಡನ ಗೊರಕೆ ನನಗೊಂಥರಾ ಜೋಗುಳ ಇದ್ದಂತೆ.ನಾನು ಗೊರಕೆಯನ್ನು ತುಂಬಾ ಎಂಜಾಯ್ ಮಾಡ್ತೀನಿ. ಗೊರಕೆ ಇಲ್ಲದೇ ನಿದ್ರೆಯೇ ಬರುತ್ತಿಲ್ಲ ಎಂದರು.

ಕಟ್ಟಿಕೊಂಡಿದ್ದೇನೆ ಅಂತ ಮಾಡಿ ಹಾಕ್ತಿದ್ದೀನಿ: ನನಗೆ ರಾತ್ರಿಯಿಡೀ ತಿಂದು ಹಗಲಲ್ಲಿ ಮಲಗುವ ಗಂಡ ದೊರೆತರೆ ಎಂಬ ವಿಷಯದ ಬಗ್ಗೆ ಗೀತಾ ಪಾಟೀಲ್ ಮಾತನಾಡಿ, ನನ್ನ ಗಂಡನಿಗೆ ರಾತ್ರಿಯಿಡೀ ಅಡುಗೆ ಮಾಡಿ ಸಾಕಾಗಿ ಹೋಗಿದೆ. ಎಲ್ಲರೂ ರಾತ್ರಿ ನಿದ್ರೆ ಮಾಡಿ ಹಗಲು ಕೆಲಸ ಮಾಡ್ತಾರೆ. ಬೇಗ ಮಲಗಿ, ಬೇಗ ಏಳಬೇಕು ಅಂತಾರೆ. ಆದರೆ ನನ್ನ ಗಂಡ ಅಂತೂ ರಾತ್ರಿಯೆಲ್ಲಾ ತಿಂಡಿ ಮಾಡಿಕೊಡು ಅಂತಾರೆ.

ಅಮ್ಮನಿಗೆ ಹೇಳಿದರೆ ಹೊಂದಿಕೊಂಡು ಹೋಗು ಅಂತಾರೆ ಅತ್ತೆಗೆ ಹೇಳಿದರೂ ನಿನ್ನ ಗಂಡ ನೀನು ಹೊಂದಿಕೊಳ್ಳಬೇಕು. ರಾತ್ರೆ ಆದರೇನು ಹಗಲಾದರೇನು ಮಾಡಿ ಹಾಕು ಅಂತಾರೆ. ಇವರಿಗಾದ್ರೂ ರಾತ್ರಿ ಹೊತ್ತಿಗೆ ಸಡನ್ ಆಗಿ ರೊಟ್ಟಿ ಮಾಡಿಕೊಡು ಅಂತಾರೆ. ಆದರೆ ನಾನಿರೋದು ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ ಕೂತು ರೊಟ್ಟಿ ತಟ್ಟಿದರೆ ಅಪಾರ್ಟ್ ಮೆಂಟ್‌ನಲ್ಲಿ ಇರೋರೆಲ್ಲ ಎದ್ದು ಕೂರಬೇಕಾಗುತ್ತೆ ಅದಕ್ಕೆ ಲಟ್ಟಿಸಿ ರೊಟ್ಟಿ ಮಾಡ್ತೀನಿ ಅಂದರೆ ಅದಕ್ಕೂ ಗಂಡ ಸಿದ್ಧವಿಲ್ಲ. ತಟ್ಟಿನೇ ಮಾಡಿಕೊಡು ಅಂತಾರೆ. ಇನ್ನು ಗಂಡನಿಗೆ ರಾತ್ರಿ ಮಲಗು ಆರೋಗ್ಯ ಹಾಳಾಗ್ತದೆ ಅಂತಂದ್ರು ಐದು ನಿಮಿಷ ಮಲಗಿದಂಗೆ ಮಾಡಿ ಮತ್ತೆ ಎದ್ದು ಕೂತು
ಏನಾದರೂ ತಿನ್ನೋಕೆ ಮಾಡಿಕೊಡು ಅಂತಾರೆ. ಇವರಿಗೆ ತಿಂಡಿ ಮಾಡಿ ಕೊಟ್ಟು ಬೆಳಗಾದರೆ ಆಫ್ ಲೈನ್ ಕ್ಲಾಸ್ ಇರೋದಕ್ಕೆ ಗಂಟೆಗೇ ಎದ್ದು ಹೋಗ್ತಾಳೆ ಅವಳಿಗೆ ತಿಂಡಿ ಮಾಡಿಕೊಡ್ಬೇಕು. ಕಟ್ಟಿಕೊಂಡಿದ್ದೇನೆ ಅಂತ ಮಾಡಿ ಹಾಕ್ತಿದ್ದೀನಿ ಎಂದು ಉತ್ತರಕನ್ನಡ ಭಾಷೆಯಲ್ಲಿ ಮಾತನಾಡಿದರು.

ಬಹುಮಾನ ವಿಜೇತರು
ಮೊದಲ ಬಹುಮಾನ: ಗೀತಾ ಪಾಟೀಲ್
? ಎರಡನೇ ಬಹುಮಾನ: ಭವಿ ಪ್ರಭವಿ ( ಭವ್ಯಾ ವಿಜಯ್)
? ಮೂರನೇ ಬಹುಮಾನ: ಭಾರತೀ ವೀರೇಶ್
? ಪ್ರೋತ್ಸಾಹಕ ಬಹುಮಾನ: ಯಶಿಕಾ ಎಂ.ಜೆ, ಸೌಮ್ಯ ಶ್ರೀ
? ತೀರ್ಪುಗಾರರು: ಅವಿನಾಶ್, ಕವಿತಾ ಎಂ.ಬಿ