Friday, 1st December 2023

ಎಲ್ಲರನ್ನೂ ಸಮನಾಗಿ ನೋಡುವ ಏಕೈಕ ವ್ಯಕ್ತಿ ಯಮ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸಾವು-ಆರ್ಟ್ ಆಫ್ ಡೈಯಿಂಗ್ ಕೃತಿ ಕುರಿತು ಪತ್ರಕರ್ತ, ಸಾಹಿತಿ ಜೋಗಿ ಮಾತು

ಬೆಂಗಳೂರು: ಈ ಜಗತ್ತಿನಲ್ಲಿ ಎಲ್ಲರನ್ನೂ ಸಮನಾಗಿ ನೋಡುವ ವ್ಯಕ್ತಿಯೊಬ್ಬ ಇದ್ದಾನೆ ಎಂದರೆ ಅದು ಯಮ ಮಾತ್ರ ಎಂದು ಲೇಖಕ ಜೋಗಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಸಾವು’ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದೆಡೆ ಸಾವು ಕರೆದೊಯ್ಯಬಾರದು ಎಂಬ ಆಸೆ. ಮತ್ತೊಂದೆಡೆ ಸಾವು ಕರೆದೊಯ್ಯ ಬೇಕು ಎಂಬ ಆಸೆ. ಈ ಎರಡರ ಮಧ್ಯೆ ಮನುಷ್ಯ ಪಡುವಂತಹ ಯಾತನೆ ಹೇಗಿರುತ್ತದೆ ಎಂಬುದರ ಬಗ್ಗೆ ಜಿeಸೆ ನನ್ನನ್ನು ಬಹಳವಾಗಿ ಕಾಡುತ್ತಿತ್ತು ಎಂದರು. ಸಾವಿನ ಕುರಿತು ಅವರು ಪುಸ್ತಕಮೊಂದನ್ನು ಬರೆದಿದ್ದು, ಅದರ ಬಗ್ಗೆಯೂ ಮಾತನಾಡಿದರು.

ಜಗತ್ತಿನಲ್ಲಿ ಯಾರಾದರು ಎಲ್ಲರನ್ನು ಸಮಾನವಾಗಿ ನೋಡುವ ವ್ಯಕ್ತಿ ಇದ್ದಾನೆ ಎಂದರೆ ಅದು ಯಮ ಮಾತ್ರ. ಆತ ಎಲ್ಲರನ್ನೂ ಸರಿಸಮಾನಾಗಿ ನೋಡುತ್ತಾನೆ. ಆತ ಬುದ್ಧಿ ವಂತನೋ, ಪ್ರತಿಭಾವಂತನೋ, ಸೌಂದರ್ಯವಂತನೋ, ಶಕ್ತಿವಂತನೋ ಎಂದು ಏನನ್ನೂ ಪರಿಗಣಿಸುವುದಿಲ್ಲ. ಆತನಿಗೆ ಬೇಕಾದಾಗ ಒಂದು ಚೀಟಿ ಹಾಕಿ, ಬೇಕಾದವ ರನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದರು.

ಎಷ್ಟೋ ಮಂದಿ ಸಾಯಬೇಕು ಎಂದರೂ ಸಾವು ಬರುವುದಿಲ್ಲ. ಅದೇ ರೀತಿ ಸಾಯ ಬಾರದು ಎಂದು ಭಾವಿಸಿದವರನ್ನು ಸಾವು ಹುಡುಕಿಕೊಂಡು ಬರುತ್ತದೆ. ಹೀಗೆ ಬಹಳ ವೈಚಿತ್ರ್ಯಗಳನ್ನು ನಮಗೆ ಉಂಟು ಮಾಡುವ ಸಾವಿನ ಕುರಿತು ಪುಸ್ತಕ ಬರೆಯಲಿಕ್ಕೆ ಕಾರಣ ಹುಡುಕಿದಾಗ ನನಗೆ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ವಿಶ್ವೇಶ್ವರ ಭಟ್ ಮತ್ತು ರವಿ ಹೆಗ್ಡೆ ಅವರೊಂದಿಗೆ ಎಸ್.ಷಡಕ್ಷರಿ ಅವರ ಕಚೇರಿಯಲ್ಲಿ ಮಾತನಾಡುತ್ತಾ ಕುಳಿತಿದ್ದೆವು.

ಸಾಮಾನ್ಯವಾಗಿ ಸಾಹಿತಿಗಳು ಮತ್ತು ಲೇಖಕರು ಜತೆ ಸೇರಿದಾಗ ಬರುವ ಮಾತು, ನಿಮ್ಮ ಮುಂದಿನ ಪುಸ್ತಕ ಯಾವುದು? ಯಾವ ಪುಸ್ತಕ ಓದಿದಿರಿ? ಎಂಬುದರ ಬಗ್ಗೆ. ಒಂದು ಪುಸ್ತಕದ ಸುತ್ತಲೇ ಮಾತು-ಕಥೆ ನಡೆಯುತ್ತದೆ. ಅಂದು ವಿಶ್ವೇಶ್ವರ ಭಟ್ಟರು ನನ್ನನ್ನು ಮುಂದಿನ ಪುಸ್ತಕ ಯಾವುದು ಕೇಳಿದಾಗ, ಸಾವು ಎಂದು ಹೇಳಿದ್ದೆ. ಆದರೆ, ಆ ಬಗ್ಗೆ ನನ್ನಲ್ಲೇ ಆಗ ಅಸ್ಪಷ್ಟತೆ ಇತ್ತು ಎಂದರು.

ಸಾಮಾನ್ಯವಾಗಿ ಯಾರೇ ಮೃತರಾದರೂ ಆ ಬಗ್ಗೆ ಒಂದು ತತ್ತ್ವಶಾಸ (ಫಿಲಾಸಫಿ) ಇರುತ್ತದೆ. ಸಾವಿನ ಜತೆ ನಮಗೆ ಒಂದು ಸ್ಮಶಾನ ವೈರಾಗ್ಯ ಬರುತ್ತದೆ. ಯಾರಾದರೂ ತೀರಿಕೊಂಡ ತಕ್ಷಣ ಅದನ್ನು ನಮ್ಮ ಬದುಕಿಗೆ ಸಂಬಂಧಿಸಿಕೊಂಡು, ಆತ ಏಕೆ ಸತ್ತ ಎಂದು ಕೇಳುತ್ತೇವೆ. ಅವನ ಸಾವಿನ ಕಾರಣಗಳು ನಮ್ಮ ಬದುಕಿನಲ್ಲಿ ಇರಲಿಕ್ಕಿಲ್ಲ ಮತ್ತು ಇರಬಾರದು ಎಂಬ ಎಚ್ಚರಿಕೆಯಿಂದ ಈ ಪ್ರಶ್ನೆ
ಕೇಳಿಕೊಳ್ಳುತ್ತೇವೆ. ಈಗ್ಯೆ ಕೆಲವು ದಿನಗಳ ಹಿಂದೆ, ನಮ್ಮ ಶೇರು ಮಾರುಕಟ್ಟೆಯ ಮಹಾನ್ ಹೂಡಿಕೆದಾರ ರಾಕೇಶ್ ಜುಂಜ ನ್ವಾಲಾ ನಿಧನರಾದ ವಿಚಾರ ಮತ್ತು ಕಾರಣ ತಿಳಿದಾಗ ನನ್ನ ನೆನಪಿಗೆ ಬಂದದ್ದು ಇನ್ನೆರಡು ಸಾವುಗಳು. ನನ್ನ ಜೀವನದಲ್ಲಿ ಬಹಳ ಆಘಾತ ಕೊಟ್ಟಂತ ಮೊದಲ ಸಾವು ಶಂಕರ್‌ನಾಗ್.

ಅಂತಹ ಜೀವಂತಿಕೆಯ ವ್ಯಕ್ತಿ, ಹಲವಾರು ಕನಸುಗಳನ್ನು ಇಟ್ಟುಕೊಂಡವರಿಗೆ ಅಷ್ಟು ಬೇಗ ಸಾವು ಹೇಗೆ ಬಂತು? ಎಂಬ ಪ್ರಶ್ನೆ ನನ್ನನ್ನು ಬಹಳ ದಿನ ಕಾಡುತ್ತಿತ್ತು. ನಮ್ಮ ಜೀವನದ ನಶ್ವರತೆಯ ಅರಿವು ಮಾಡಿಕೊಟ್ಟಂತ ಸಾವು ಅದು ಎಂದು ಹೇಳಿದರು.
ಅಷ್ಟೇ ಆಘಾತ ತಂದುಕೊಟ್ಟ ಮತ್ತೊಂದು ಸಾವು ಎಂದರೆ, ಅದು ಪುನೀತ್ ರಾಜಕುಮಾರ್ ಅವರದ್ದು. ಅವರ ಸಾವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ.

ಒಳ್ಳೆಯ ಹವ್ಯಾಸ, ಹಿತ-ಮಿತವಾದ ಬದುಕು, ಮಾನಸಿಕ ಸಂತೋಷ ಇದ್ದ ವ್ಯಕ್ತಿಯನ್ನು ಸಾವು ಏಕೆ ಕರೆದುಕೊಂಡು ಹೋಯಿತು ಎಂಬ ಪ್ರಶ್ನೆ ನನ್ನನ್ನು ಬಹಳ ದಿನ ಕಾಡಿತು. ಇದರೊಂದಿ ಕೋವಿಡ್ ಬಂದಾಗ ಹಲವಾರು ಮಂದಿ ತೀರಿಕೊಂಡರು. ಈ ಎಲ್ಲಾ ಕಾರಣ ನನ್ನ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡುತ್ತಾ ಹೋದವು. ಬದುಕಿನಲ್ಲಿ ನಾವು ಎಷ್ಟು ದಿನ ಬದುಕುತ್ತೇವೆ? ಎಷ್ಟು ದಿನ ಬದುಕಲಿಕ್ಕೆ ಅವಕಾಶವಿದೆ? ಅಥವ ಸಾವು ಎಲ್ಲಿ ನಿಂತು ನಮ್ಮನ್ನು ಹೊಂಚು ಹಾಕುತ್ತಿದೆ? ಹೀಗೆ ಸಾವನ್ನು ಎದುರಿಸಲು ನಾವು ಹವಣಿಸುತ್ತಾ ಇರುವ ವೇಳೆಗೆ ಬಚ್ಚಿಟ್ಟುಕೊಂಡ ಹುಲಿಯಂತೆ ಎಗರಿ ನಮ್ಮನ್ನು ಹೊತ್ತೊಯ್ಯುತ್ತದೆ ಈ ಸಾವು ಎಂಬ ವಿಚಾರಗಳು ನನ್ನ ಮನಸ್ಸಿನಲ್ಲಿ ಕಾಡುತ್ತಲೇ ಇತ್ತು ಎಂದರು.

ಜಗತ್ತಿನ ಬೇರೆ ಬೇರೆ ಸಂಸ್ಕೃತಿ, ನಾಗರೀಕತೆಗಳಲ್ಲಿ, ಸಾವನ್ನು ಬೇರೆ ಬೇರೆ ರೀತಿಯಲ್ಲಿ, ಬಹಳ ನಿಗೂಢವಾಗಿ ನೋಡಲಾಗಿದೆ. ಸಾವಿನ ಬಗ್ಗೆ ನಾವೆಲ್ಲಾ ಹೇಳುವ ದೊಡ್ಡ ತತ್ತ್ವeನ ಎಂದರೆ, ಸಾಯುವಾಗ ನಾವು ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ
ಎಂದು. ಹಾಗೆಂದು ಸಾಯುವಾಗ ನಾನು ಏನೂ ತೆಗೆದುಕೊಂಡು ಹೋಗುವುದಿಲ್ಲ ಎಂಬ ಕಾರಣಕ್ಕೆ ನಾವು ಬದುಕಿರುವಾಗ ಏನನ್ನೂ ಮಾಡದೇ ಇರುವುದೂ ಇಲ್ಲ. ಹೀಗಾಗಿ ಒಂದು ಮಾಯೆ, ಮತ್ತೊಂದು ಮೋಹ, ಇನ್ನೊಂದು ನಿರ್ಮೋಹ, ನಶ್ವರತೆ, ಅಮರತ್ವದ ಆಸೆ ಎಲ್ಲವೂ ಸೇರಿಕೊಂಡು ನಮ್ಮ ಜೀವನವನ್ನು ನಿಯಂತ್ರಣ ಮಾಡುತ್ತದೆ ಎಂದರು.

ಮನುಷ್ಯನಿಗೆ ಅಮರತ್ವದ ಆಸೆ ಇರುತ್ತದೆ. ಆದರೆ, ಸಾವು ಎಂಬುದು ನಾವು ಯಮನಿಗೆ ಕೊಟ್ಟ ಭಾಷೆ. ಈ ಅಮರತ್ವದ ಆಸೆ ಮತ್ತು ಯಮನಿಗೆ ಕೊಟ್ಟ ಭಾಷೆಯ ನಡುವೆ ಇರುವಂತದ್ದೇ ಈ ಬದುಕು. ಹೀಗಾಗಿ ಈ ಬದುಕನ್ನು ತೀವ್ರವಾಗಿ ಹಾಗೂ ಸುಂದರ ವಾಗಿ ನೋಡುವುದಕ್ಕೆ, ಸಾವಿನ ಮೂಲಕ ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟ ರೀತಿ ಈ ಸಾವು ಎಂಬ ಪುಸ್ತಕ ‘ಆರ್ಟ್ ಆಫ್ ಡೈಯಿಂಗ್’. ಈ ಕೃತಿಯಲ್ಲಿ ಎಲ್ಲಾ ದಿಕ್ಕುಗಳಿಂದ ಸಾವನ್ನು ನೋಡಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.

ಅಧ್ಯಾಯದಲ್ಲಿ ಪುರಾಣದ ಪುಟಗಳಿಂದ ನಚಿಕೇತನ ಕಥೆ, ಪುನರ್ಜನ್ಮ, ಸಾವು ಸಮೀಪಿಸುವ ಬಗ್ಗೆ, ಸಾವಿತ್ರಿಯ ಕಥೆಗಳು, ಉದ್ಧಾಲಕ, ಶ್ರುತಕೇತು ಮತ್ತು ಪ್ರವಹಣ ಎಂಬ ರಾಜನ ಕಥೆ. ಮಹಾಭಾರತದಲ್ಲಿ ಮಹಾಪ್ರಸ್ಥಾನದ ಕಥೆ, ಗಂಡು ಮತ್ತು ಹೆಣ್ಣಿನ ಆತ್ಮ ಒಂದೆಯೇ ಎಂಬ ಪ್ರಶ್ನೆ ಉಪನಿಷತ್ತಿನಲ್ಲಿರುವ ಬಗ್ಗೆ ತಮ್ಮ ಆರ್ಟ್ ಆಫ್ ಡೈಯಿಂಗ್ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು
ಜೋಗಿ ಹೇಳಿದರು.

ನಮ್ಮ ತಂದೆಯ ತಾಯಿ ಹಾಗೂ ಪಕ್ಕದ ಮನೆಯವರ ಸಾವಿನ ಅನುಭವಗಳನ್ನು ಮೆಲಕು ಹಾಕಲಾಗಿದೆ. ಯಾವ ರೀತಿಯ ಸಾವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಎಂಬುದ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದೇನೆ. ನಾವು ಭೇಟಿಯಾಗುವ ಕೊನೆಯ ಗಿರಾಕಿ ಸಾವು. ಆದರೆ, ಹುಟ್ಟಿನೊಟ್ಟಿಗೆ ಹುಟ್ಟುವುದು ಸಾವು. ಟಿ-೨೦ ಮ್ಯಾಚ್‌ನಂತೆ ಇಷ್ಟು ಸಮಯ ಇದೆ. ಅಷ್ಟರಲ್ಲಿ ಎಲ್ಲಾ ಮುಗಿಸಬೇಕು ಎಂಬುದು ಬದುಕು.

***

ಸಾವಿನ ಬಗ್ಗೆ ಪುಸ್ತಕಗಳು ಜಪಾನ್‌ನ ಝೆನ್ ಸಂಸ್ಕೃತಿಯಲ್ಲಿ ಯಾವುದಾದರೂ ವ್ಯಕ್ತಿ ಸಾವಿಗೆ ಸಮೀಪವಿರುವಾಗ ಆತ ಸಾವಿನ ಬಗ್ಗೆ ಒಂದು ಪದ್ಯ ಬರೆದಿಡಬೇಕು ಎಂಬ ಪದ್ಧತಿ ಇದೆ. ಅಂತಹ ನೂರಾರು ಪದ್ಯಗಳಿದ್ದು, ಜಪಾನಿಸ್ ಡೆತ್ ಪೊಯಂ ಪುಸ್ತಕದಲ್ಲಿ ದಾಖಲಾಗಿದೆ. ಇಂಗ್ಲಿಷ್‌ನಲ್ಲಿ ಚರಮಗೀತೆಗಳ ಪರಂಪರೆ ಇದೆ. ಸತ್ತ ವ್ಯಕ್ತಿಯ ಬಗ್ಗೆ ಮತ್ತು ಅವರ ಜೀವನದ ಬಗ್ಗೆ ಹೇಳುವಂತ ಬದುಕಿನ ಸಿದ್ಧಾಂತವನ್ನು ತಮಾಷೆಯಾಗಿ ಹೇಳುವ ೫೦-೬೦ ಪುಸ್ತಕಗಳಿದೆ. ಕೆಲವು ತಮಾಷೆಯಾಗಿದ್ದರೆ, ಕೆಲವು ಗಂಭೀರ
ಪದ್ಯಗಳೂ ಇವೆ.

*

ಸಾವು ಇದೆ ಎಂದು ಹೇಳುವ ಖಚಿತತೆ, ಸಾವು ಇದೆ ಎಂದು ಹೇಳುವ ಕಲ್ಪನೆ ನಮ್ಮ ಬದುಕಿನ ಎಲ್ಲವನ್ನು ಬದಲಾಯಿಸುತ್ತದೆ ಎಂಬುದು ನನಗೆ ಬಹಳ ಮುಖ್ಯ ಎಂದು ಅನ್ನಿಸಿದ್ದೇ ಈ ಪುಸ್ತಕ ಬರೆಯಲು ಪ್ರೇರೆಪಣೆ ನೀಡಿತು. – ಜೋಗಿ ಲೇಖಕ

ಭಾನುವಾರ ಬಿಡುಗಡೆಯಾದ ಸಾವಣ್ಣ ಪ್ರಕಾಶನ ಹೊರ ತಂದಿರುವ ಜೋಗಿ ಅವರ ಸಾವು- ಆರ್ಟ್ ಆಫ್ ಡೈಯಿಂಗ್ ಕೃತಿ ಯನ್ನು ಒಂದೂ ಕಾಲು ದಿನದಲ್ಲಿ ಓದಿ ಮುಗಿಸಿದೆ. ಅದು ಒಂದು ಅಪರೂಪದ ಕೃತಿ. ಓದಿಸಿಕೊಂಡು ಹೋಗುತ್ತದೆ. ಬದುಕಿನ
ಬಗ್ಗೆ ಸಾಕಷ್ಟು ಪುಸ್ತಕ ಬಂದಿದೆ. ಆದರೆ, ಸಾವಿನ ಕುರಿತು ಪುಸ್ತಕ ಬಹಳ ಕಡಿಮೆ. ಸಾವಿನ ಬಗ್ಗೆ ತೀವ್ರ ಕುತೂಹಲ ಮೂಡುವುದು ಬದುಕಿನ ಬಗ್ಗೆ ಉತ್ಕಟ ಬಯಕೆ ಬಂದಾಗ ಎಂಬ ಮಾತಿದೆ.

ಹೀಗಾಗಿ ಸಾವಿನ ಬಗ್ಗೆ ಚರ್ಚೆ ಮಾಡುವುದು ಎಂದರೆ ಬದುಕಿನ ಬಗ್ಗೆ ಮಾತನಾಡಿದಂತೆ. ಎಲ್ಲವೂ ಸಾವಿನಲ್ಲಿ ಅಂತ್ಯವಾಗಬೇಕು. ಅದನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನ ಇನ್ನಷ್ಟು ಚೆಂದ ಎಂಬುದು ಈ ಕೃತಿಯ ಒಟ್ಟಾರೆ ಅರ್ಥ ಮತ್ತು ತಿರುಳು. ಈ ಕೃತಿಯನ್ನು ಓದಿದರೆ ನಿಜಕ್ಕೂ ಬದುಕು ಇನ್ನಷ್ಟು ಸ್ವಚ್ಛಂದವಾಗಿ ಕಾಣುತ್ತದೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು,
ವಿಶ್ವವಾಣಿ

error: Content is protected !!