Saturday, 14th December 2024

ಜೈಲಿನ ಪಟ್ಟಭದ್ರರ ನಿಗ್ರಹಕ್ಕೆ ಗೃಹ ಸಚಿವರ ನಿರ್ಧಾರ

ವಿಶ್ವವಾಣಿ ವರದಿ ಪರಿಣಾಮ

ವಿಶೇಷ ಅಧಿಕಾರಿ ವಿರುದ್ಧ ಶೀಘ್ರವೇ ತನಿಖೆ, ಜಾಂಡಾ ಹೂಡಿದ ಜೈಲು ಅಧಿಕಾರಿಗಳ ಎತ್ತಂಗಡಿ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಅನೇಕ ವರ್ಷಗಳಿಂದ ಜಾಂಡಾ ಹೂಡಿರುವ ಹಿರಿಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದು. ಬೆಂಗಳೂರು ಕೇಂದ್ರ ಕಾರಾಗೃಹ ಡಿಐಜಿ ಶೇಷ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು
ಬಂದೀಖಾನೆ ಸಚಿವರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ‘ವಿಶ್ವವಾಣಿ’ ಪತ್ರಿಕೆ ಸರಣಿ ವಿಶೇಷ ವರದಿಗಳನ್ನು ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅನೇಕ ವರ್ಷಗಳಿಂದ ಜಾಂಡಾ ಹೂಡಿರುವ ಅಧಿಕಾರಿಗಳನ್ನು ಮೊದಲು ಎತ್ತಂಗಡಿ ಮಾಡಲಾಗುತ್ತದೆ. ಈ ಬಗ್ಗೆ ಸದ್ಯದ ಅಧಿಕಾರಿಗಳ ಪಟ್ಟಿ ತರಿಸಿಕೊಂಡು ಕಠಿಣ ಕ್ರಮಕ್ಕೆ ನಿರ್ಧಾರ ಮಾಡಲಾಗಿದೆ. ಹಾಗೆಯೇ ಬಂದಿಖಾನೆ ಇಲಾಖೆಯಲ್ಲಿ ಡಿಐಜಿ ಶೇಷ ಅವರ ಅಕ್ರಮಗಳ ಬಗ್ಗೆ ಕೇಳಿ ಬೇಸರವಾಗಿದೆ. ಅವರು ಸಚಿವರೊಬ್ಬರ ಬಳಿ ಆಪ್ತ ಕಾರ್ಯದರ್ಶಿಯಾಗಿರುವುದು ನನಗೆ ತಿಳಿದಿಲ್ಲ. ಅವರನ್ನು ಕರೆಸಿ ಮಾತನಾಡ ಲಾಗುವುದು. ಅಕ್ರಮಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಣೆ ನೀಡಿದರು.

ಜೈಲು ಅಕ್ರಮಗಳನ್ನು ಒಪ್ಪುತ್ತೇನೆ: ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳು ನಡೆದಿ ರುವುದು ನಿಜ. ‘ವಿಶ್ವವಾಣಿ’ ಪತ್ರಿಕೆ ಬರೆದಿರುವುದನ್ನು ನಾನು ಒಪ್ಪುತ್ತೇನೆ. ಆದರೆ ರಾಜ್ಯ ದಲ್ಲಿ ಕೇವಲ 50 ಜೈಲುಗಳು ಮಾತ್ರ ಇರುವುದರಿಂದ ಹೆಚ್ಚಾಗಿರುವ ಕೈದಿಗಳನ್ನು ಅವು ಗಳ ಹಾಕಬೇಕು. ಹಾಗೆಯೇ ಅಕ್ರಮ ಆರೋಪ ಹೊತ್ತ ಅಧಿಕಾರಿಗಳನ್ನು ಸೀಮಿತ ಸಂಖ್ಯೆಯ ಜೈಲುಗಳಿಗೇ ವರ್ಗಾವಣೆ ಮಾಡುವ ಅನಿವಾರ್ಯವಿದೆ. ಹೀಗಾಗಿ ಜೈಲು ಅಕ್ರಮಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯಲಾಗುವುದು ಎಂದು ಹೇಳಿದರು.

ಬೆಂಗಳೂರು ಕೇಂದ್ರ ಕಾರಾಗೃಹ ಸೇರಿದಂತೆ ಎಲ್ಲ ಜೈಲುಗಳಲ್ಲೂ ಅತ್ಯಂತ ಕಠಿಣ ತಪಾಸಣಾ ವ್ಯವಸ್ಥೆ ಮಾಡಲಾಗಿದೆ. ತಪಾಸಣೆ ಯನ್ನು ಜೈಲು ಅಧಿಕಾರಿಗಳಿಗೆ ಬಿಡದೆ ಬೇರೆ ಸಂಸ್ಥೆಗಳಿಂದ ಮಾಡಿಸಲಾಗುತ್ತಿದೆ. ಅದರಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಲ್ಲಿ ತಪಾಸಣೆ ಮಾಡಿ ಅಕ್ರಮ ತಡೆಯಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿದರು.

ಕೇಂದ್ರ ಕಾರಾಗೃಹದಲ್ಲಿ ಸದ್ಯ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದನ್ನು ವಿರೋಧಿಸಿ ಅನೇಕ ಕೈದಿಗಳು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಏಕೆಂದರೆ, ಜೈಲಿನಲ್ಲಿ ಅನೇಕ ಪಟ್ಟಭದ್ರ ಹಿತಾಸಕ್ತಿಗಳು ಸಕ್ರಿಯ ವಾಗಿವೆ. ಅವುಗಳನ್ನು ನಿಗ್ರಹಿಸಲು ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ ಎಂದು ಆರಗ ಜ್ಞಾನೇಂದ್ರ ವಿವರಿಸಿ ದರು.

ಜೈಲಿನಲ್ಲಿ ನಡೆದಿರುವ ಅಕ್ರಮಗಳು ನನಗೆ ಈಗಲೂ ಭಯ ಹುಟ್ಟಿಸುವಂತಿವೆ. ಈ ಎಲ್ಲ ಅಕ್ರಮಗಳನ್ನು ತಡೆಯಲು ಕೆಲವು ಪ್ರಾಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಅವರ ಮೂಲಕ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೈಲು ಅಕ್ರಮ ಗಳ ಬಗ್ಗೆ ಈ ಹಿಂದೆ ಸೇವೆ ಸಲ್ಲಿಸಿದ ಅಧಿಕಾರಿಗಳು ನೀಡಿರುವ ವರದಿಗಳು ಎಸಿಬಿಯಲ್ಲಿರುವ ಬಗ್ಗೆ ಮಾಹಿತಿ ಇದೆ. ಅದರ ಬಗ್ಗೆ ಇನ್ನಷ್ಟು ಮಾಹಿತಿ ಪಡೆದು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.