Friday, 13th December 2024

ಬೆಂಗಳೂರು ಟರ್ಫ್‌ ಕ್ಲಬ್‌ ಸ್ಥಿತಿ ಶೋಚನೀಯ

ಶರಣ್ ಕುಮಾರ್

ಮೈಸೂರು ಮಹಾರಾಜರು ಕುದುರೆ ರೇಸ್ ಅನ್ನು ಕ್ರೀಡೆ ಎಂದು ಪರಿಗಣಿಸಿ ಅದರ ಉತ್ತೇಜನಕ್ಕೆಂದು ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ೧೯೨೦ರ ದಶಕದಲ್ಲಿ ನೀಡಿದ ೬೫ ಎಕರೆ ಪ್ರದೇಶದಲ್ಲಿ ತಲೆ ಎತ್ತಿ ನಿಂತ ಪ್ರತಿಷ್ಠಿತ ಬೆಂಗಳೂರು ಟರ್ಫ್‌ ಕ್ಲಬ್ ಈಗ ಸ್ವಾರ್ಥ ಸಾಧಕರ ಮತ್ತು ಬೆನ್ನೆಲುಬೇ ಇಲ್ಲದ ಸರಕಾರಿ ಅಽಕಾರಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿದೆ.

ಕ್ರೀಡಾಸಕ್ತರ ಮತ್ತು ಸರಕಾರದ ಹಿತಾಸಕ್ತಿ ಪೊರೆಯಲೆಂದು ನಿಯುಕ್ತರಾದ ಈ ಸರಕಾರಿ ಅಧಿಕಾರಿಗಳು ತಮ್ಮ ನಿಯುಕ್ತಿ ಉದ್ದೇಶವನ್ನೇ ಮರೆತಿದ್ದಾರೆ.
ಕಳೆದ ಮೂರು ದಶಕಗಳಿಂದ ಬೆಂಗಳೂರು ಮತ್ತಿತರ ಕಡೆಗಳಲ್ಲಿ ಕುದುರೆ ರೇಸ್ ಕ್ರೀಡಾ ವ್ಯವಸ್ಥೆಯ ಭಾಗ ಮತ್ತು ಪತ್ರಕರ್ತ ಓಂಬುಡ್ಸ್ ಮನ್ ಆಗಿ ಸೇವೆ ಸಲ್ಲಿಸಿರುವ ನನಗಂತೂ ಇದು ತುಂಬಾ ಖೇದ ತರುವ ವಿಚಾರ. ಆದರೂ ಇದನ್ನು ದಾಖಲಿಸಲೆ ಬೇಕಿರುವುದು ನನ್ನ ಜವಾಬ್ದಾರಿ ಕೂಡ. ಹೀಗಾಗಿ ಅತೀವ ನೋವಿನಿಂದ ಅಭಿಪ್ರಾಯ ದಾಖಲಿಸುತ್ತಿರುವೆ.

ಮೈಸೂರು ಮಹಾ ರಾಜರು ಕುದುರೆ ರೇಸ್ ಅನ್ನು ಕ್ರೀಡೆಯಾಗಿ ಉತ್ತೇಜಿಸಲೆಂದು ಬೆಂಗಳೂರಿನ ಪ್ರಮುಖ ಭಾಗದಲ್ಲಿ ದೀರ್ಘ ಕಾಲದ ಗುತ್ತಿಗೆ ಆಧಾರದಲ್ಲಿ ೬೫ ಎಕರೆ ಪ್ರದೇಶವನ್ನು ಆಗ ಪ್ರತಿಷ್ಠಿತ ಮತ್ತು ಮುಂಚೂಣಿ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರು ಟರ್ಫ್ ಕ್ಲಬ್ ಗೆ ನೀಡಿದರು. ಕ್ರೀಡಾಸಕ್ತರಿಗೆ ನ್ಯಾಯಯುತ ರೇಸ್ ಸಂಘ ಟಿಸುವುದು ಮತ್ತು ಬೆಳೆಯುತ್ತಿರುವ ಬೆಂಗಳೂರಿಗೆ ಸ್ವಚ್ಛ ಗಾಳಿ ಒದಗಿಸುವ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸುವ ಹೊಣೆಗಾರಿಕೆ ನಿರ್ವಹಿಸುವ ಗುರುತರ ಜವಾಬ್ದಾರಿ ಬೆಂಗಳೂರು ಟರ್ಫ್ ಕ್ಲಬ್‌ನ ದಾಗಿತ್ತು. ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲ ಚುನಾಯಿತ ಸರಕಾರಗಳು ಬೆಂಗಳೂರು ಟರ್ಫ್ ಕ್ಲಬ್ ನ ಆಡಳಿತ ಮಂಡಳಿಗಳಿಗೆ ಕಾಲದಿಂದ ಕಾಲಕ್ಕೆ ತನ್ನ ಪ್ರತಿನಿಧಿ ಗಳನ್ನು ನೇಮಿಸುತ್ತ ಕ್ಲಬ್ ನ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟು ಸರ್ಕಾರದ ಹಿತ ಕಾಯ್ದುಕೊಳ್ಳುವ ಕೆಲಸವನ್ನು ಮಾಡುತ್ತಲೇ ಬಂದಿದ್ದವು.

ಬೆಂಗಳೂರು ಟರ್ಫ್ ಕ್ಲಬ್‌ನ ಆಡಳಿತ ಮಂಡಳಿಗೆ ಸರಕಾರದ ಪ್ರತಿನಿಽಗಳನ್ನು ನೇಮಿಸುವ ಉದ್ದೇಶವೇ ರೇಸ್ ಆಸಕ್ತರ ಹಿತರಕ್ಷಣೆ ಮತ್ತು ಸರಕಾರಕ್ಕೆ ಬರುವ ಆದಾಯ ಸರಿಯಾಗಿ ಬರುವಂತೆ ನೋಡಿಕೊಳ್ಳುವುದು. ಹೀಗಾಗಿ ಉನ್ನತ ಮಟ್ಟದ ಐಎಎಸ್ ಅಧಿಕಾರಿಗಳು ಈ ಮಂಡಳಿಗೆ ನೇಮಕವಾಗುವುದು ಸಂಪ್ರದಾಯವೇ ಆಗಿತ್ತು. ಹೀಗೆ ನೇಮಕವಾದ ಅಧಿಕಾರಿಗಳು ತಮ್ಮ ಕರ್ತವ್ಯ ಅವಧಿಯಲ್ಲಿ ಅತ್ಯಂತ ಕ್ಷಮತೆಯಿಂದ ಕಾರ್ಯನಿರ್ವಹಿಸಿ ಒಂದು ಒಳ್ಳೆಯ ಪರಂಪರೆಯನ್ನೇ ಹುಟ್ಟು ಹಾಕಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಎಚ್ಚರ-ಕ್ಷಮತೆಗಳು ಮಾಯವಾಗಿರುವುದು ತುಂಬಾ ವಿಷಾದನೀಯ.

ಪ್ರಸ್ತುತ ಸರಕಾರದಿಂದ ಈಗ ಇಬ್ಬರು ಸ್ಟೀವಡ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಬೆಂಗಳೂರು ನಗರದ ಪೊಲೀಸ್ ಆಯುಕ್ತರು. ಅದರಲ್ಲಿ ಪ್ರಧಾನ ಕಾರ್ಯದರ್ಶಿಗಳು ಕ್ಲಬ್‌ಗೆ ಲೈಸೆನ್ಸ್ ನೀಡುವ ಅಧಿಕಾರ ಉಳ್ಳವರು. ಅವರಲ್ಲದೆ ಇನ್ನೂ ಇಬ್ಬರು ನಾಮ ನಿರ್ದೇಶಿತ ರಿರುತ್ತಾರೆ. ಸಾಮಾನ್ಯವಾಗಿ ಈ ಇಬ್ಬರೂ ಬೆಂಗಳೂರು ಟರ್ಫ್ ಕ್ಲಬ್‌ನ ಸದಸ್ಯರಾಗಿರುತ್ತಾರೆ. ಪದನಿಮಿತ್ತ ಸರಕಾರಿ ಸದಸ್ಯರು ಕ್ಲಬ್‌ನ ಆಗುಹೋಗುಗಳ ಕುರಿತು ಕಟ್ಟೆಚ್ಚರ ವಹಿಸಿದಾಗ ಮತ್ತು ನೊಂದವರ ಕೂಗಿಗೆ ದನಿಯಾದಾಗ ಅವರ ಪ್ರಭಾವ ಅಪರಿಮಿತ ವಾಗಿರುತ್ತದೆ. ಅದು ನಿರ್ಣಾಯಕವೂ ಆಗಿರುತ್ತದೆ. ೮೦ರ ದಶಕದಲ್ಲಿ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಗಳಾಗಿದ್ದು, ನಂತರ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ಎಂ.ಶಂಕರನಾರಾಯಣ ಅವರು ಬೆಂಗಳೂರು ಟರ್ಫ್ ಕ್ಲಬ್ ನ ಕೊಳೆ ತೊಳೆಯಲು ಅವಿರತವಾಗಿ ಶ್ರಮಿಸಿದರು. ರೇಸ್ ಕುದುರೆಗಳ ಮಾಲಿಕರು ತಮ್ಮ ಇತರ ಪ್ರಭಾವ ಬಳಸಿ, ಮಂಡಳಿಯ ಸದಸ್ಯರಾಗಿ ಆಯ್ಕೆಗೊಂಡು ತಮಗೆ ಅನುಕೂಲವಾದ ಡುಬಾಕು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಗಮನಕ್ಕೆ ಬಂದಾಗ, ಇದನ್ನು ನಿಲ್ಲಿಸುವ ಕ್ರಮ ತೆಗೆದುಕೊಂಡಿದ್ದವರು ಅವರು.

ರೇಸಿಂಗ್ ಕಮಿಷನ್ ಒಂದನ್ನು ಸ್ಥಾಪಿಸಬೇಕು ಎಂದೂ ಅವರು ಸರಕಾರಕ್ಕೆ ಶಿಫಾರಸು ಮಾಡಿದ್ದರು. ಈ ಶಿಫಾರಸಿನ ಆಧಾರದಲ್ಲಿ ಕುದುರೆ ರೇಸ್ ಅನ್ನು
ನಡೆಸಲೆಂದು ರೇಸಿಂಗ್ ಬೋರ್ಡ್ ಅನ್ನೂ ಸ್ಥಾಪಿಸಲಾಯಿತು. ಅಂತೆಯೇ ರೇಸ್ ಕೋರ್ಸ್ ಅನ್ನು ತನ್ನ ವಶಕ್ಕೆ ಪಡೆಯಲು ಸರಕಾರವು ೧೯೮೮ರಲ್ಲಿ ಆದೇಶ ವನ್ನೂ ಹೊರಡಿಸಿತು. ಈ ಪ್ರಸ್ತಾವನೆ ಬಿದ್ದು ಹೋಯಿತು. ಅದು ಬೇರೆ ವಿಷಯ. ಆದರೆ ಶಂಕರ ನಾರಾಯಣ ಅವರು ಸರಕಾರಕ್ಕೆ ಬರಬೇಕಾದ ಶುಲ್ಕಗಳೆಲ್ಲವೂ ಸರಿಯಾಗಿ ಸಂದಾಯವಾಗುವಂತೆ ಕಟ್ಟೆಚ್ಚರ ವಹಿಸಿದ್ದರು.

ಆದರೆ ಪ್ರಸ್ತುತ ಈ ಸ್ಥಾನದಲ್ಲಿರುವ, ಸರಕಾರದಲ್ಲಿ ಅತಿ ದೀರ್ಘ ಅವಧಿಗೆ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಗಳಾಗಿರುವ ಐಎಸ್‌ಎನ್ ಪ್ರಸಾದ್ ಅವರದು ಇದಕ್ಕೆ ತದ್ವಿರುದ್ಧ ನಡೆ. ಅವರದು ಬೆಂಗಳೂರು ಟರ್ಫ್ ಕ್ಲಬ್‌ನ ಎಲ್ಲ ಚಟುವಟಕೆಗಳಿಗೆ ಬೆಂಬಲ ನೀಡುವ ಮನಸು. ಅದರ ಅಧಿಕಾರಿಗಳು ಏನೇ ತಪ್ಪು ಮಾಡಿದರೂ ಅವರ ಕಣ್ಣಿಗೆ ಕಾಣುವುದೇ ಇಲ್ಲ. ಅವರ ರೆಪ್ಪೆಗಳಡಿಯಲ್ಲಿಯೇ ಬೆಂಗಳೂರು ಟರ್ಫ್ ಕ್ಲಬ್ ಅವನತಿಯೆಡೆಗೆ ಜಾರುತ್ತಿದ್ದರೂ ಅದನ್ನು ಕಾಣದ ದೃತರಾಷ್ಟ್ರ ಗುರುಡು ಅವರದು.

ಕಳೆದೊಂದು ದಶಕದಲ್ಲಿ ಹರಿಮೋಹನ ನಾಯ್ಡು ಎಂಬ ವಿಫಲ ವಣಿಕನ, ಆದರೆ ಮಹಾ ಕೂಟಗಾರನ ಮುಂದಾಳತ್ವದಲ್ಲಿ ಭ್ರಷ್ಟ ಅಧಿಕಾರಿಗಳು ಕ್ಲಬ್‌ನ
ಘನತೆಯನ್ನು ಮುಕ್ಕಾಗಿಸುತ್ತ ಬಂದಿದ್ದಾರೆ. ಬೆಂಗಳೂರು ಟರ್ಫ್ ಕ್ಲಬ್ ಅನ್ನು ತನ್ನ ಬಿಗಿ ಮುಷ್ಠಿಯಲ್ಲಿಟ್ಟುಕೊಂಡಿರುವ ಅವರಿಗೆ ಪ್ರಸಾದ್ ಅವರ ಕೃಪಾಶೀರ್ವಾದ ಇದ್ದೇ ಇದೆ. ನಾಯ್ಡು ಅವರ ವಿವಾದಾತ್ಮಕ ನಿರ್ಧಾರಗಳ ಕುರಿತು ಯಾರಾದರೂ ಪ್ರಸಾದ್ ಅವರ ಗಮನ ಸೆಳೆದಾಗಲೆಲ್ಲ ಅವರು ಕ್ಲಬ್‌ನ ಆಂತರಿಕ ದೈನಂದಿನ
ವ್ಯವಹಾರಗಳಲ್ಲಿ ನಾನು ಮಧ್ಯ ಪ್ರವೇಶಿಸಲಾರೆ ಅಥವಾ ನಾನು ನಿಸ್ಸಹಾಯಕ ಎನ್ನುವ ಸಿದ್ಧ ಉತ್ತರಗಳೊಂದಿಗೆ ಸಜ್ಜಾಗಿರುತ್ತಾರೆ.

ಆದರೆ ಖಂಡಿತವಾಗಿಯೂ ಹೀಗೆ ಹೇಳಿಕೊಳ್ಳುವಷ್ಟು ಅಸಹಾಯಕರಂತೂ ಅವರೇನಲ್ಲ. ಕೆಲ ವರ್ಷಗಳ ಹಿಂದೆ ಆಡಳಿತ ಮಂಡಳಿ ಅವರು ಆಗ ಅಧಿಕಾರಸ್ಥರ ಬೆಂಬಲ ಹೊಂದಿದ್ದ ಛೇರ್‌ಮನ್ ಅವರೊಬ್ಬರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದಾಗ ಮುಂದಿನ ಪರಿಣಾಮಗಳ ಕುರಿತು ಎಚ್ಚರ ವಿರಲಿ ಎಂದು ಅವರು ಮಂಡಳಿ ಹೆದರಿಸಿದ್ದರು. ಆದರೂ ಮುಂದುವರಿದ ಆಡಳಿತ ಮಂಡಳಿ ಮುಖ್ಯಸ್ಥರನ್ನು ಕಿತ್ತೊಗೆದಾಗ ಸರಕಾರದಿಂದ ಅದು ಪ್ರತಿರೋಧ ಎದುರಿಸಬೇಕಾಯಿತು. ಕ್ಲಬ್ ಸಿಒಡಿ ತನಿಖೆ ಎದುರಿಸಬೇಕಾಯಿತು. ಅದರ ಪರವಾನಗಿ ಯನ್ನು ಅನ್ನು ಅಮಾನತು ಗೊಳಿಸಲಾಯಿತು.

ಲೈಸೆನ್ಸ್ ಅನ್ನು ಪುನಃ ಪಡೆಯಲು ಕ್ಲಬ್ ನ ಅಧಿಕಾರಿಗಳು ದಮ್ಮಯ್ಯ ಗುಡ್ಡೆ ಹಾಕಬೇಕಾಯಿತು. ಬೆಂಗಳೂರು ಟರ್ಫ್ ಕ್ಲಬ್ ಪ್ರಸಾದ್ ಅವರ ಕೃಪಾಕಟಾಕ್ಷ ದಿಂದಲೇ ನಡೆಯುತ್ತಿದೆ ಎನ್ನುವುದು ರಾಜ ರಹಸ್ಯವೇನೂ ಅಲ್ಲ. ಕ್ಲಬ್ ಈಗ ಸರಕಾರಕ್ಕೆ ಪ್ರತಿದಿನ ನೀಡುವ ೬೦,೦೦೦ ರು.ಗಳ ಲೈಸೆನ್ಸ್ ಶುಲ್ಕ ನಿಗದಿ ಯಾಗಿರುವುದು ೧೯೮೭ರಲ್ಲಿ. ಮೂರು ದಶಕಗಳ ನಂತರವೂ ಈ ಶುಲ್ಕ ಏರಿಕೆಯಾಗಿಲ್ಲ. ಕಾಲಕಾಲಕ್ಕೆ ಅಧಿಕಾರದಲ್ಲಿರುವ ಹಣಕಾಸು ಸಚಿವರು ಲೈಸೆನ್ಸ್ ಶುಲ್ಕ ಹೆಚ್ಚುವರಿಗಾಗಿ ಪ್ರಸ್ತಾಪ ಸಲ್ಲಿಸಿದ ಪ್ರತಿ ಬಾರಿಯೂ ಪ್ರಸಾದರ ಪ್ರಭಾವದಿಂದಾಗಿ ಹೇಗೋ ಪ್ರಸ್ತಾವನೆ ಬಿದ್ದುಹೋಗುತ್ತದೆ.

ಆದರೆ ಇನ್ನೊಂದೆಡೆ ೫೦ ರು.ಗಳಷ್ಟಿದ್ದ ಪ್ರವೇಶ ಧನವನ್ನು ಈಗಿರುವಂತೆ ೫೦೦ಕ್ಕೆ (ಶೇ.೫೦೦ರಷ್ಟು ಹೆಚ್ಚಳ) ಕ್ಲಬ್ ಹೆಚ್ಚಿಸಿ ಸಾರ್ವಜನಿಕರನ್ನು ಸುಲಿಯುವಾಗ ಪ್ರಧಾನ ಕಾರ್ಯದರ್ಶಿಗಳು ಮುಗುಮ್ಮಾಗಿದ್ದು ಬಿಡುತ್ತಾರೆ. ಸುಲಿಗೆಗೆ ಸುಗಮ ದಾರಿ ತೋರುತ್ತಾರೆ. ಕೋರ್ಟ್‌ನ ನಿರ್ದೇಶನದಂತೆ ಮೇಲ್ವಿಚಾರಣೆ ಸಮಿತಿ ವರದಿ ಬಂದ ಮೇಲೂ ಅದು ಧೂಳು ತಿನ್ನುತ್ತಾ ಮರೆಯಾಗಿ ಹೋಗಿಬಿಡುವಂತೆ ಜಾದೂ ಮಾಡಿ ಬಿಡುತ್ತಾರೆ.

ಚೇರ್ಮನ್‌ರ ಆಯ್ಕೆಯದು ಇನ್ನೊಂದು ಪ್ರಹಸನ. ಸಾಮಾನ್ಯವಾಗಿ ಮುಖ್ಯಮಂತ್ರಿಗಳು ತಮ್ಮ ಆಯ್ಕೆಯನ್ನು ಹಣಕಾಸು ಇಲಾಖೆಯ ಕಾರ್ಯದರ್ಶಿಗಳಿಗೆ ತಿಳಿಸುವುದು ಮತ್ತು ಅದನ್ನು ಕಾರ್ಯದರ್ಶಿಗಳು ಬೆಂಗಳೂರು ಟರ್ಫ್ ಕ್ಲಬ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಘೋಷಣೆ ಮಾಡುವುದು, ಮತ್ತದನ್ನು ಆಡಳಿತ ಮಂಡಳಿ ಚಪ್ಪಾಳೆ ತಟ್ಟಿ ಸ್ವಾಗತಿಸುವುದು ಇದುವರೆಗೆ ಪಾಲಿಸಿಕೊಂಡು ಬಂದ ಸಂಪ್ರದಾಯ.

ಕಳೆದ ತಿಂಗಳು ಸ್ಟೀವರ್ಡುಗಳ ಚುನಾವಣೆ ನಂತರ ಕೆಲ ಜನರು ಸರಕಾರದ ಮಟ್ಟದಲ್ಲಿ ಚೇರ್ಮನ್‌ರ ಖುರ್ಚಿಗಾಗಿ ವಶೀಲಿ ನಡೆಸಿದ್ದರು. ಅದರಲ್ಲಿ ಒಂದಿಬ್ಬರು ಸ್ಟೀವರ್ಡುಗಳು ತಮಗೆ ಮುಖ್ಯಮಂತ್ರಿ ಶ್ರೀ ಬೊಮ್ಮಾಯಿ ಅವರ ಒಪ್ಪಿಗೆ ದೊರೆತೇ ಬಿಟ್ಟಿದೆ ಎಂದೂ ನಂಬಿಕೊಂಡಿದ್ದರು. ಆದರೆ ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಯಾರೂ ನಿರೀಕ್ಷಿಸದ ಉದಯ್ ಈಶ್ವರನ್ ಅವರ ಹೆಸರನ್ನು ಐಎಸ್‌ಎನ್ ಪ್ರಸಾದ್ ಅವರು ಸೂಚಿಸಿದರು ಮತ್ತು ಪೊಲೀಸ್ ಕಮಿಷನರ್ ಅವರು
ಬೆಂಬಲಿಸಿದರು. ಆಡಳಿತ ಮಂಡಳಿ ಸದಸ್ಯರಿಗೆಲ್ಲ ದಿಗ್ಭ್ರಮೆ. ಆದರೆ ಅವರಿಗೆ ಈ ಆಯ್ಕೆಯನ್ನು ಒಮ್ಮತದಿಂದ ಒಪ್ಪದೇ ಗತ್ಯಂತರವಿಲ್ಲ. ಒಪ್ಪಿದರು.

ಪ್ರಸಾದ್ ಅವರು ಮುಖ್ಯಸ್ಥರ ಪದವಿಗೆ ನೇಮಕದ ಸಲುವಾಗಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದರೊ ಅಥವಾ ತಮ್ಮ ಜೀವದ ಗೆಳೆಯ ಹರಿಮೋಹನ ನಾಯ್ಡು ಅವರೊಂದಿಗೆ ಚರ್ಚಿಸಿ ತಾವೇ ಸ್ವಂತ ನಿರ್ಧಾರ ತೆಗೆದುಕೊಂಡರೋ ಎನ್ನುವುದು ಖಂಡಿತವಾಗಿಯೂ ತನಿಖೆಯಾಗಬೇಕಾದ ವಿಚಾರ. ಈಶ್ವರನ್ ಅವರು ಹರಿಮೋಹನ ನಾಯ್ಡು ಅವರ ನೀಲಿಗಣ್ಣಿನ ಹುಡುಗ, ಇತ್ತೀಚೆಗೆ ಸ್ಟೀವರ್ಡ್ ಹುದ್ದೆಯಿಂದ ನಿರ್ಗಮಿಸಿದ ನಾಯ್ಡು, ಈಶ್ವರನ್ ಮೂಲಕ ಕ್ಲಬ್‌ನ
ದೇಖರೇಖಿಯನ್ನು ಹಿಂದಿನ ಸೀಟಿನಿಂದ ನಡೆಸುವರು ಮತ್ತೆ ಪ್ರಸಾದ್ ಅವರು ಕಂಡೂ ಕಾಣದಂತೆ ಈ ಕೆಲಸಕ್ಕೆ ಕುಮ್ಮಕ್ಕು ನೀಡುವರು ಎನ್ನುವುದು ಈಗ ಕ್ಲಬ್‌ನ ವಲಯದಲ್ಲಿನ ಊಹಾ ಪೋಹಗಳು ಹಬ್ಬಿವೆ.

ಬೆಂಗಳೂರು ಟರ್ಫ್ ಕ್ಲಬ್ ನ ಚೇರ್ಮನ್ ಆಯ್ಕೆಯ ಸಂದರ್ಭಕ್ಕೆ ಸಾಕ್ಷಿಯಾದ ಹಲವರು ಆಯ್ಕೆ ಪ್ರಕ್ರಿಯೆಯ ಸಿಂಧುತ್ವವನ್ನೇ ಪ್ರಶ್ನಿಸುತ್ತಿದ್ದಾರೆ. ಚೇರ್ಮನ್‌ರ ಆಯ್ಕೆಯ ಸಲುವಾಗಿ ರಚಿಸಲಾಗಿದ್ದ ಅಡ್‌ಹಾಕ್ ಸಮಿತಿ ಸಭೆ ಅಧ್ಯಕ್ಷತೆ ಯನ್ನು ಈಶ್ವರನ್ ಅವರು ವಹಿಸಿದ್ದಿರಬಹುದು. ತಮ್ಮನ್ನು ತಾವೇ ಸ್ವತಃ ಅಧ್ಯಕ್ಷರಾಗಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಇದು ನಿಚ್ಚಳವಾಗಿ ನಿಯಮಗಳ ಉಲ್ಲಂಘನೆ. ತಮಿಳುನಾಡಿನ ಉಚ್ಛ ನ್ಯಾಯಾಲಯ ಮದ್ರಾಸ್ ರೇಸ್‌ಕ್ಲಬ್‌ನ ಅಧ್ಯಕ್ಷರನ್ನು ಚುನಾಯಿಸುವ ಸಂದರ್ಭದಲ್ಲಿ ೧೯೪೯ ರಲ್ಲಿಯೇ ಯಾರೂ ತಮ್ಮ ಸ್ವಂತ ಆಯ್ಕೆ ಸಭೆ ಅಧ್ಯಕ್ಷತೆ ವಹಿಸಿ, ತಮ್ಮನ್ನೇ ಆಯ್ಕೆ ಮಾಡಿಕೊಳ್ಳಬಾರದು ಎಂದು ಆದೇಶ ನೀಡಿದೆ.

ಕಠಿಣ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬೊಮ್ಮಾಯಿ ಅವರ ಹೆಗಲ ಮೇಲೆ ಈಗಾಗಲೇ ಬಹು ಗುರುತರ ಹೊಣಗಾರಿಕೆಗಳಿವೆ. ಆದರೂ ಅವರು ಪ್ರತಿಷ್ಠಿತ ಇತಿಹಾಸವುಳ್ಳ ಬೆಂಗಳೂರು ಟರ್ಫ್ ಕ್ಲಬ್‌ನ ಅವಿವೇಕಗಳ ಕಡೆಗೊಮ್ಮೆ ದೃಷ್ಟಿ ಹಾಯಿಸಬೇಕಿದೆ. ಅಲ್ಲಿನ ಹುಳುಕುಕೊಳಕುಗಳನ್ನು ಸರಿಪಡಿಸಬೇಕಿದೆ. ಚೆನ್ನೈ ಮತ್ತು ಹೈದರಾಬಾದ್‌ಗಳಂತಹ ನಗರಗಳಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿರುವ ಕ್ಲಬ್‌ಗಳ ಮುಂದೆ ತನ್ನದೇ ಇತಿಹಾಸ ಹೊಂದಿರುವ ಬೆಂಗಳೂರು ಟರ್ಫ್ ಕ್ಲಬ್ ಮಂಕು ಹಿಡಿದು ಹೋಗದಂತೆ ಕ್ರಮ ಕೈಗೊಳ್ಳಬೇಕಿದೆ.

ಈ ಕ್ರಮದ ಮೊದಲ ಹೆಜ್ಜೆಯಾಗಿ ಮುಖ್ಯಮಂತ್ರಿಗಳು ಐಎಸ್‌ಎನ್ ಪ್ರಸಾದ್ ಅವರನ್ನು ಬೆಂಗಳೂರು ಟರ್ಫ್ ಕ್ಲಬ್‌ನ ಜವಾಬ್ದಾರಿಯಿಂದ ಮುಕ್ತಗೊಳಿಸಿ ಕ್ಲಬ್ ಅನ್ನು ಪ್ರಾಮಾಣಿಕ ಹಾಗೂ ಜನಪರ ಕಾಳಜಿಯಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಅಧೀನಕ್ಕೆ ನೀಡ ಬೇಕು ಮತ್ತು ಕತ್ತಲು ತುಂಬಿದ ಸುರಂಗದ ತುದಿಗಿರುವ ಬೆಳಕು ನಮಗೂ ಕಾಣುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.