Friday, 13th December 2024

ಕೊನೆಗೂ ಶಸ್ತ್ರತ್ಯಾಗದಿಂದ ಹೊರಬಂದ ಬಿಜೆಪಿ

ಪಠ್ಯ ವಿವಾದ: ವಿಧಾನಸೌಧದಲ್ಲಿ ನಾಲ್ವರು ಸಚಿವರ ಜಂಟಿ ಪತ್ರಿಕಾಗೋಷ್ಠಿ

ಬೆಂಗಳೂರು: ಶೈಕ್ಷಣಿಕ ವಲಯದಲ್ಲಿಯೇ ಭಾರಿ ಗೊಂದಲ ಸೃಷ್ಟಿಸಿರುವ ಪಠ್ಯ ಪರಿಷ್ಕರಣಾ ವಿವಾದದಲ್ಲಿ ಕೊನೆಗೂ ರಾಜ್ಯ ಸರಕಾರ ಅಧಿಕೃತವಾಗಿ ತನ್ನ ನಡೆಯನ್ನು ‘ಸಮರ್ಥಿಸಿಕೊಂಡಿದೆ’.

ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ನಾಲ್ವರು ಸಚಿವರು ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ಆರೋಪಗಳಿಗೆ ಗುರುವಾರ ಪ್ರತ್ಯುತ್ತರ ನೀಡುವ ಮೂಲಕ ತಾವಿನ್ನೂ ‘ಶಸ್ತ್ರತ್ಯಾಗ’ ಮಾಡಿಲ್ಲ ಎಂಬ ಸಂದೇಶವನ್ನು ತಡವಾಗಿಯಾದರೂ ನೀಡಿದ್ದಾರೆ.

ಚಕ್ರತೀರ್ಥ ಸಮಿತಿ ಮತ್ತು ರಾಜ್ಯಸರಕಾರದ ಮೇಲೆ ಕಾಂಗ್ರೆಸ್ ನಾಯಕರು, ಎಡಪಂಥೀ ಯ ಬುದ್ಧಿಜೀವಿಗಳು ನಡೆಸಿದ್ದ ಸಮರವನ್ನು ಇಲ್ಲಿವರೆಗೆ ‘ಒಂದು ಸರಕಾರವಾಗಿ’ ನಿಭಾ ಯಿಸಿರಲಿಲ್ಲ. ವಾಕ್‌ಸಮರದ ಕಣದಲ್ಲಿ ಶಿಕ್ಷಣ ಸಚಿವ ನಾಗೇಶ್ ಹಾಗೂ ಚಕ್ರತೀರ್ಥ ಅವರಷ್ಟೇ ಎದುರಾಳಿಗಳ ವಿರುದ್ಧ ಏಕಾಂಗಿ ಹೋರಾಡಿದ್ದರು. ಅದಾದ ಬಳಿಕ ಸಿಎಂ ಬೊಮ್ಮಾಯಿ ತುಸುಮಟ್ಟಿಗೆ ಸಮರ್ಥಿಸಿಕೊಂಡರಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ.

ಸರಕಾರದ ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಮಾತ್ರವಲ್ಲದೇ, ಬಿಜೆಪಿ, ಆರೆಸ್ಸೆಸ್ ಪರ ಮಾತನಾಡುವವರಲ್ಲಿಯೂ ಅಳಕು ಶುರುವಾಗಿತ್ತು. ಇದರಿಂದ ಮುಂದಿನ ದಿನದಲ್ಲಿ ಪಕ್ಷಕ್ಕೆ ಹೊಡೆತ ಬೀಳಲಿದೆ ಎನ್ನುವುದು ಖಚಿತವಾಗುತ್ತಿದ್ದಂತೆ, ಅಶೋಕ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ, ‘ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಎಲ್ಲವೂ ಸರಿಯಾಗಿದೆ. ಆದರೆ ದೇಶ, ಹಿಂದುತ್ವವನ್ನು ಒಪ್ಪದ ಕಾಂಗ್ರೆಸ್ ಬೇಕೆಂದೇ ಪರಿಷ್ಕೃತ ಪಠ್ಯದ ಬಗ್ಗೆ ಗುಲ್ಲುಎಬ್ಬಿಸುತ್ತಿದ್ದಾರೆ’ ಎಂದು ಸಮರ್ಥಿಸಿ ಕೊಂಡರು.

ಬರೋಬ್ಬರಿ ಒಂದುವರೆ ತಾಸು ನಡೆದ ಸುದ್ದಿಗೋಷ್ಠಿಯಲ್ಲಿ, ಅಶೋಕ್, ಸುಮಾರು ೨೫೦ರಿಂದ ೩೦೦ ಪುಟಗಳ ದಾಖಲೆ ಸಮೇತ ಪರಿಷ್ಕೃತ ಪಠ್ಯವನ್ನು ಸಮರ್ಥಿಸಿಕೊಂಡರು. ಈ ವೇಳೆ ಬರಗೂರು ಸಮಿತಿ ವಿರುದ್ಧವೂ ವಾಗ್ದಾಳಿ ನಡೆಸಿದರು.

***

ಒಕ್ಕಲಿಗ, ಲಿಂಗಾಯತ ಟ್ರಂಪ್ ಕಾರ್ಡ್ ಪ್ರಯೋಗ
ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂದು ಒಕ್ಕಲಿಗ ಸಮುದಾಯದ ಮಠಾಧೀಶರು ಮುನಿಸಿಕೊಂಡಿದ್ದರು. ಇದೇ ರೀತಿ ಬಸವಣ್ಣನವರನ್ನು ಅವಮಾನಿಸಲಾಗಿದೆ ಎಂದು ಲಿಂಗಾಯತ ಸಮುದಾಯದವರು ಸರಕಾರದ ವಿರುದ್ಧ ಮುಗಿಬಿದಿದ್ದರು. ಆದ್ದರಿಂದ ಸುದ್ದಿಗೋಷ್ಠಿಯನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಂದಾಯ ಸಚಿವ ಆರ್. ಅಶೋಕ್ ಅವರಿಂದಲೇ ಮಾಡಿಸಿ, ಅವರೊಂದಿಗೆ ಲಿಂಗಾಯತ ಸಮುದಾಯಕ್ಕೆ ಸೇರಿರುವ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಇದ್ದರು. ಈ
ಮೂಲಕ ಒಕ್ಕಲಿಗ ಹಾಗೂ ಲಿಂಗಾಯತ ಟ್ರಂಪ್ ಕಾರ್ಡ್ ಅನ್ನು ಬಿಜೆಪಿ ಬಳಸಿದೆ ಎನ್ನುವ ಮಾತುಗಳು ಕೇಳಿಬಂದಿದೆ.

***

ಸುದ್ದಿಗೋಷ್ಠಿಯ ಸಾರಾಂಶ
? ಕಾಂಗ್ರೆಸ್‌ಗೆ ಹಿಂದುತ್ವ, ದೇಶಭಕ್ತಿಯ ವಿಷಯಗಳು ಪಠ್ಯದಲ್ಲಿರುವುದು ಬೇಕಿಲ್ಲ.
? ಅಲ್ಪಸಂಖ್ಯಾತರ ಒಲೈಕೆಗಾಗಿ, ಕಾಂಗ್ರೆಸ್ ಟಿಪ್ಪು, ಮೊಘಲರನನ್ನು ವೈಭವೀಕರಿಸಿದ್ದಾರೆ.
? ಟಿಪ್ಪು ಬಗ್ಗೆ ಇರುವಾಗ, ಪೋರ್ಚಗೀಸರಿಂದ ರಾಜ್ಯರಕ್ಷಿಸಿದ ಚನ್ನಭೈರದೇವಿ ಏಕಿರಬಾರದು?
? ಬರಗೂರು ಸಮಿತಿಯಿಂದಲೇ ಕುವೆಂಪು, ಕೆಂಪೇಗೌಡರಿಗೆ ಅಪಮಾನ.