Friday, 13th December 2024

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಗೆ ಹೈಕಮಾಂಡ್ ಸೇಫ್ ಗೇಮ್ ಅಡ್ಡಿ

ರಾಜ್ಯ ನಾಯಕರೇ ಒಂಟಿ ಹೆಸರು ನೀಡಬೇಕೆಂಬ ಖರ್ಗೆ ನಿಲುವು

ಸೋನಿಯಾ ರೀತಿ ಸ್ವಂತ ತೀರ್ಮಾನಕ್ಕೆ ಬಾರದ ಹಾಲಿ ಅಧ್ಯಕ್ಷರು

೫೮ ಅಭ್ಯರ್ಥಿ ಪಟ್ಟಿಯನ್ನು ರಾಜ್ಯ ನಾಯಕರಿಗೇ ಬಿಟ್ಟ ಹೈಕಮಾಂಡ್

ತೀವ್ರ ಸ್ಪರ್ಧೆಯ ಕ್ಷೇತ್ರಗಳ ಅಂತಿಮಗೊಳಿಸದ ನಾಯಕರು

ಬೆಂಗಳೂರು: ಕಾಂಗ್ರೆಸ್‌ಗೆ ಕೊನೆಯ ಆಶಾ ಕಿರಣವಾಗಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಗಳ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ‘ಸೇಫ್ ಗೇಮ್’ ತಂತ್ರಕ್ಕೆ ಮೊರೆ ಹೋಗಿರುವುದೇ ರಾಜ್ಯ ನಾಯಕರಿಗೆ ತಲೆಬಿಸಿ ಯಾಗಿದೆ ಎನ್ನಲಾಗುತ್ತಿದೆ.

ಈ ಬಾರಿ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರಿರುವುದರಿಂದ, ಟಿಕೆಟ್ ಹಂಚಿಕೆಯಲ್ಲಿ ಬಹುದೊಡ್ಡ ತಲೆ ನೋವಾಗುವುದಿಲ್ಲ. ಸ್ವತಃ ಖರ್ಗೆ ಅವರಿಗೆ ಕರ್ನಾಟಕದ ಸ್ಪಷ್ಟ ಚಿತ್ರಣವಿರುವುದರಿಂದ, ಕಗ್ಗಂಟಿರುವ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನುವ ಅಭಿಪ್ರಾಯವಿತ್ತು. ಆದರೆ, ಎರಡನೇ ಪಟ್ಟಿಗೆ ಸಂಬಂಧಿಸಿದಂತೆ ನಡೆದ ಸಭೆಯ ಬಳಿಕ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಬ್ಬರೂ ‘ಸ್ಪಷ್ಟ’ ತೀರ್ಮಾನ ಕೈಗೊಳ್ಳದೇ ‘ಕಾದು ನೋಡೋಣ’ ಎನ್ನುವ ಮನೋಭಾವದಲ್ಲಿರುವುದು ಪಕ್ಷಕ್ಕೆ ದುಬಾರಿ ಯಾಗಿದೆ.

ಸಾಮಾನ್ಯವಾಗಿ ಟಿಕೆಟ್ ಹಂಚಿಕೆ ವಿಷಯದಲ್ಲಿ, ಕೆಲ ಕ್ಷೇತ್ರಗಳಲ್ಲಿ ಎರಡಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುತ್ತಾರೆ. ಆದರೆ ತೀವ್ರ ಪೈಪೋಟಿಯಿ ರುವ, ಪ್ರಮುಖ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯನ್ನು ರಾಜ್ಯ ನಾಯಕರು ಮಾಡುವು ದಕ್ಕಿಂತ ಹೆಚ್ಚು, ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುವುದು ಸೂಕ್ತ. ಆದರೆ ಕಾಂಗ್ರೆಸ್‌ನಲ್ಲಿ ಬಾಕಿಯಿರುವ ೫೮ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸದೇ ರಾಜ್ಯ ನಾಯಕರಿಗೆ ಬಿಟ್ಟಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ಸಭೆಯಲ್ಲಿದ್ದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ರಾಜ್ಯದ ಮೇಲೆ ಒತ್ತಡ: ೨೨೪ ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯನ್ನು ಯಾವುದೇ ಗೊಂದಲವಿಲ್ಲದೇ ಬಿಡುಗಡೆ ಮಾಡಲಾಗಿದೆ. ಆ ವೇಳೆ ಸ್ಕ್ರೀನಿಂಗ್ ಕಮಿಟಿಯಿಂದಲೇ ‘ಸಿಂಗಲ್’ ನೇಮ್ ಕಳಿಸಿದ್ದರಿಂದ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಎರಡನೇ ಪಟ್ಟಿಯ ವೇಳೆ ಒಂದು ಕ್ಷೇತ್ರಕ್ಕೆ ಎರಡರಿಂದ ಮೂರು ಹೆಸರುಗಳಿದ್ದವು. ಈ ವೇಳೆ ಡಿ. ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಿಂದ ತಂತಮ್ಮ ಆಪ್ತರಿಗೆ ಟಿಕೆಟ್ ಕೊಡಬೇಕೆಂಬ ಒತ್ತಡ ಹೆಚ್ಚುತ್ತಿದ್ದಂತೆ, ಪೆಂಡಿಂಗ್ ಇಟ್ಟು ಮುಂದಕ್ಕೆ ಹೋಗುವ ಪ್ರಯತ್ನವನ್ನು ಖರ್ಗೆ ಮಾಡಿದ್ದಾರೆ.

ಇದಾದ ಬಳಿಕ ರಾಹುಲ್ ಗಾಂಧಿ, ಒಂದು ಕ್ಷೇತ್ರಕ್ಕೆ ಒಂದೇ ಹೆಸರನ್ನು ಅಂತಿಮಗೊಳಿಸುವಂತೆ ಡಿಕೆ ಹಾಗೂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿ ದರು. ಈ ವೇಳೆ ಇಬ್ಬರೂ ತಮಗೆ ಬೇಕಾದವರ ಹೆಸರಿಗೆ ಅಂಟಿಕೊಂಡಿದ್ದರಿಂದ, ಸಮಸ್ಯೆ ಜಠಿಲವಾಗಿದೆ. ಈ ಹಂತದಲ್ಲಿ ಹೈಕಮಾಂಡ್ ತಮ್ಮ ವಿವೇಚನೆ ಯಡಿ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದರೆ, ‘ಹೈಕಮಾಂಡ್ ತೀರ್ಮಾನ’ವೆಂದು ಅಸಮಾಧಾನಿತ ಆಕಾಂಕ್ಷಿಗಳ ಮನವೊಲಿಸಬಹುದಾಗಿತ್ತು ಎನ್ನು ವುದು ರಾಜ್ಯ ಕಾಂಗ್ರೆಸ್‌ನ ಹಿರಿಯರ ಮಾತಾಗಿದೆ.

ಗಟ್ಟಿ ನಿರ್ಧಾರದಲ್ಲಿ ಹಿಂದೆ
ಸಮಸ್ಯೆಗೆ ಪ್ರಮುಖ ಕಾರಣ ಪಕ್ಷದ ಹೈಕಮಾಂಡ್ ಹುದ್ದೆಯಲ್ಲಿರುವವರು ‘ಖಡಕ್’ ತೀರ್ಮಾನ ಕೈಗೊಳ್ಳದಿರುವುದು. ಈ ಹಿಂದೆ ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದ ಸಮಯದಲ್ಲಿ, ರಾಜ್ಯ ನಾಯಕರು ಏನೇ ವಿಚಾರ ಮಂಡಿಸಿ, ವಿವಾದ ಸೃಷ್ಟಿಸಿದರೂ ಅಂತಿಮವಾಗಿ ‘ಸ್ಪಷ್ಟ’ ತೀರ್ಮಾವವನ್ನು ಆ ಕ್ಷಣವೇ ತೆಗೆದುಕೊಳ್ಳುತ್ತಿದ್ದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಗೊಂದಲವಿರುವ ಕ್ಷೇತ್ರಗಳ ವಿಷಯದಲ್ಲಿ ತಾವು ತೀರ್ಮಾನ ಕೈಗೊಳ್ಳುವ ಬದಲು, ರಾಜ್ಯ ನಾಯಕರಿಗೆ ಅಂತಿಮ ಹೆಸರು ಸೂಚಿಸುವಂತೆ ಹೇಳುತ್ತಿದ್ದಾರೆ. ಇದರಿಂದ, ಹೆಚ್ಚು ಪೈಪೋಟಿಯಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ
ಅಂತಿಮವಾಗಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

೫ನೇ ಪಟ್ಟಿಯೂ ಸಾಧ್ಯತೆ!
ಮೂಲಗಳ ಪ್ರಕಾರ ೩ನೇ ಪಟ್ಟಿಯಲ್ಲಿ ಸುಮಾರು ೨೦ರಿಂದ ೨೫ ಅಭ್ಯರ್ಥಿಯನ್ನು ಮಾತ್ರ ಅಂತಿಮ ಗೊಳಿಸಲಾಗಿದೆ. ಬಾಕಿಯಿರುವ ಕ್ಷೇತ್ರಗಳಲ್ಲಿ ಭಾರಿ
ಪೈಪೋಟಿಯಿದೆ. ರಾಜ್ಯ ನಾಯಕರು ಪಟ್ಟಿಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರಿಗೆ ನೀಡಿ, ಅವರೇ ಅಂತಿಮ ಗೊಳಿಸು ವಂತೆ ಮನವಿ ಮಾಡಿ ವಾಪಸಾಗಿದ್ದಾರೆನ್ನಲಾಗಿದೆ. ಹೀಗಾಗಿ ೪ನೇ ಪಟ್ಟಿ ದಾಟಿ ೫ನೇ ಪಟ್ಟಿಗೆ ಮುಂದುವರಿದರೂ ಅಚ್ಚರಿ ಇಲ್ಲ.