Wednesday, 11th December 2024

ಕನ್ನಡ ಸಾಹಿತ್ಯದ ದೀಪ ಹಚ್ಚಿದ ಕವಿ ಡಿ.ಎಸ್.ಕರ್ಕಿ

ಭಾರತಿ ಎಂ. ಕೊಪ್ಪ

ಗಡಿನಾಡಿನಲ್ಲಿ ಹುಟ್ಟಿ ಇಡೀ ರಾಜ್ಯಕ್ಕೆ ಪಸರಿಸಿದ ಸಾಹಿತ್ಯ

ಇಂದು ಕರ್ಕಿ ಅವರ ಜನ್ಮದಿನ

ಹಚ್ಚೇವು ಕನ್ನಡದ ದೀಪ ಕೇಳದವರುಂಟೇ

ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು |

ಎಂಬ ಹಾಡನ್ನು ಕೇಳದ ಕನ್ನಡಿಗರಿಲ್ಲ, ಹಾಡದ ಕನ್ನಡದ ಮನಸುಗಳಿಲ್ಲ. ಅಷ್ಟೊಂದು ಕರಣಕಿಂಪು, ಮನಕೆ ತಂಪು ತುಂಬಿ ಕನ್ನಡಿಗರ ಮನೆ ಮನ ಬೆಳಗಿದ ಹಾಡಿದು. ಕನ್ನಡ ನಾಡು ನುಡಿಯ ಚಿಂತನೆ, ಭಾಷಾಭಿಮಾನದ ಅಭಿವ್ಯಕ್ತಿಯ ಅನೇಕ ಹಾಡು ಗಳ ಸಾಲಿನಲ್ಲಿ ಮುಕುಟ ಗರಿಯಂತೆ ಶೋಭಿಸುವ ಹಾಡು ಹಚ್ಚೇವು ಕನ್ನಡದ ದೀಪ. ಈ ಅರ್ಥಪೂರ್ಣ ಹಾಡನ್ನು ತಾಯಿ ಭುವನೇಶ್ವರಿಯ ಪದತಲಕೆ ಒಪ್ಪಿಸಿದ ಕವಿ ಡಿ.ಎಸ್.ಕರ್ಕಿಯವರು.

ಸಾರ್ವಕಾಲಿಕವಾಗಿ ಕನ್ನಡದ ಕಂಪು ಬೀರುವ ಇಂತಹ ಉತೃಷ್ಟ ಕವಿತೆಯನ್ನು ತಮ್ಮ ನಕ್ಷತ್ರ ಗಾನ’ ಕವನ ಸಂಕಲನದಲ್ಲಿ ಬರೆದ ಕವಿ ಡಿ.ಎಸ್. ಕರ್ಕಿಯವರ ಜನ್ಮದಿನ ನವೆಂಬರ್ 15, 1907 ರ ನವೆಂಬರ್ 15ರಂದು ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ ದುಂಡವ್ವ ಮತ್ತು ಸಿದ್ಧಪ್ಪ ದಂಪತಿಗಳ ಮಗನಾಗಿ ಜನಿಸಿದ ಕರ್ಕಿಯವರ ಪೂರ್ಣ ಹೆಸರು ದುಂಡಪ್ಪ ಸಿದ್ಧಪ್ಪ ಕರ್ಕಿ.

ಬಾಲ್ಯದ ತಾಯಿಯನ್ನು ಕಳೆದುಕೊಂಡ ಇವರು, ಪ್ರಾಥಮಿಕ ಶಿಕ್ಷಣವನ್ನು ತಾಯಿಯ ಊರಾದ ಬೆಲ್ಲದ ಬಾಗೇವಾಡಿಯಲ್ಲಿ ಪಡೆದರು.ಶಿಕ್ಷಣವನ್ನು ಮುಂದುವರಿಸುತ್ತಾ ವಿವಿಧೆಡೆ ಶಾಲಾ ಕಾಲೇಜು ಶಿಕ್ಷಣ ಪಡೆದು ಕನ್ನಡ ಸ್ನಾತಕೋತ್ತರ ಪದವಿ ಪಡೆದರು. ಗಿಲಗಂಜಿ ಅರಟಾಳ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಪಿ.ಎಚ್.ಡಿ ಪದವಿಯನ್ನೂ ಪಡೆದರು. ತದನಂತರ ವಿವಿಧೆಡೆ ಪ್ರಾಧ್ಯಾಪಕರಾಗಿ, ಉಪಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಓರ್ವ
ಉತ್ತಮ ಪ್ರಾಧ್ಯಾಪಕ ಮಾತ್ರ ಆಗಿರದೆ, ವಿದ್ಯಾರ್ಥಿಗಳ ಪಾಲಿನ ಸ್ನೇಹಿತರಾಗಿ, ದಕ್ಷ ಆಡಳಿತಗಾರರಾಗಿ ಶಿಕ್ಷಣ ರಂಗದಲ್ಲಿ ಗುರುತಿಸಿಕೊಂಡಿದ್ದರು.

ಸಾಹಿತ್ಯ ಲೋಕದಲ್ಲಿ ದೀಪದಂತಿದ್ದ ಡಿ.ಎಸ್.ಕರ್ಕಿ ಯವರ ಕಾವ್ಯಗಳಲ್ಲಿ ಆಧ್ಯಾತ್ಮಿಕತೆ, ಪ್ರಕೃತಿ ಪ್ರೀತಿ, ಸೌಂದರ್ಯದ ಒಲವು ಎದ್ದು ಕಾಣುತ್ತದೆ. ನವೋದಯ ಕಾಲಘಟ್ಟದ ಉದಾತ್ತ ಆದರ್ಶಗಳ ಹೃದ್ಯ ಭಾವಗೀತೆಗಳನ್ನು ರಚಿಸಿ, ಜನಮನದಲ್ಲಿ ಕಾವ್ಯದ
ಕಂಪು ಹರಡಿದರು. ಗದ್ಯ ಪದ್ಯಗಳೆರಲ್ಲೂ ತಮ್ಮ ಛಾಪನ್ನು ಮೂಡಿಸಿದ ಇವರು ಸಾಹಿತ್ಯ ಲೋಕದ ಅನರ್ಘ್ಯ ರತ್ನ ಎಂದರೆ ತಪ್ಪಾಗಲಾರದು.
ತೂಗು ಬಾ ತೊಟ್ಟಿಲನು ತಾಯೇ
ಮತ್ತೊಮ್ಮೆ ತೂಗು ತೊಟ್ಟಿಲನು ನೀನೇ || ಪ ||
ಎಂದು ತೊಟ್ಟಿಲ ಕಂದ ಮತ್ತು ತಾಯಿಯ ಜೋಗುಳ
ಹಾಡುತ್ತಾ ಕೊನೆಯಲ್ಲಿ
ಬಿಗಿದ ಬಂಧವ ಬಿಡಿಸಿ ತೂಗು ಬಾ ತೊಟ್ಟಿಲನು
ತಾಯೇ

ಅನುಭವದ ಸುಳಿಗಾಳಿ ತೀಡುವೊಲು ತಾನೇತಾನೇ ||

ಎಂದು ಹೇಳುವ ಕವಿ ಹೃದಯದಲ್ಲಿ ತಾಯಿಯ ಪ್ರೀತಿಯ ಅಮೃತಧಾರೆ, ಮಗುವಿನ ಭಾವಬಂಧ ಜೀವರಸದೊಂದಿಗೆ ಚಿತ್ರಿತವಾಗಿದೆ. ಈ ಕವಿತೆಯಲ್ಲಿ ಬರುವ ಜೀವಸ್ಪರ್ಶವ ಸಲಿಸಿ ಜಗದೊಡಲ ಝುಮ್ಮೆನಿಸಿ’ಎಂಬ ಸಾಲು ಮಾತೆಯ ಮಮತೆಯ
ಸ್ಪರ್ಶದ ರೋಮಾಂಚನ ನೀಡುವುದರೊಂದಿಗೆ, ನಮ್ಮ ಮನೋಭೂಮಿಕೆಗೆ ದೈವಾನುಭುವದ ಸ್ಪರ್ಶವನ್ನೂ ನೀಡುತ್ತದೆ. ತಾಯಿಯ ಪ್ರೇಮಬಂಧದಲ್ಲಿರುವ ಮಗು, ತಾಯಿ ತೊಟ್ಟಿಲನ್ನು ತೂಗುವಾಗ ಅಲ್ಲಿ ತೀಡುವ ಸುಳಿಗಾಳಿಯಿಂದ ಒಂದು ರೀತಿಯ
ಅವರ್ಣನೀಯ ಜೀವನಾನುಭವವನ್ನು ಪಡೆಯುತ್ತದೆಂಬ ಕವಿಯ ಇಂಗಿತ ತಾಯಿ-ಮಗುವಿನ ಬಾಂಧವ್ಯಕ್ಕೆ ಹಿಡಿದ ಕನ್ನಡಿ ಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕರ್ಕಿಯವರು ಕನ್ನಡದ ದೀಪ ಹಚ್ಚುವುದರ ಜೊತೆಗೆ ಇಂತಹ ಹೃದಯಸ್ಪರ್ಶಿ
ಜೀವನಾನುಭವದ ಹಾಡಿನ ಮೂಲಕ ಮನವನ್ನು ತಟ್ಟಿದ ಜೀವಂತಿಕೆಯ ಕವಿ ಎಂದರೆ ತಪ್ಪಾಗಲಾರದು.

ಮಹಾತ್ಮಾ ಗಾಂಧಿಯವರು ಮರಣ ಹೊಂದಿದಾಗ ಕರ್ಕಿಯವರು ಬರೆದ ಭಾವಪೂರ್ಣ ಕವನ ಅವರ ಹೃದ್ಯ ಭಾವಗೀತೆಯ ಉತ್ತಮ ನಿದರ್ಶನಗಳಲ್ಲಿ ಒಂದು. ದಿವ್ಯ ಜ್ಯೋತಿ ಎಂದು ಶೀರ್ಷಿಕೆಯನಿತ್ತು ಗಾಂಧೀಜಿಗೆ ಭಾವನಾತ್ಮಕ ನಮನ ಸಲ್ಲಿಸಿದ ಅವರು
ಗಾಂಧೀಜಿಯವರ ನೆನಪನ್ನು ಪದಪುಂಜಗಳಲ್ಲೂ ಚಿರಸ್ಥಾಯಿಯಾಗಿಸಿದ್ದಾರೆ.

ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ
ದೂರ
ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು: ಇನ್ನೊಮ್ಮೆ ಏಕೆ
ಬಾರ?

ಎಂದು ಗಾಂಧೀಜಿಗೆ ನಮನ ಸಲ್ಲಿಸುವ ಗೀತೆ ಸದಾ ಗಾಂಧೀಜಿಯವರು ನಮ್ಮೊಂದಿಗೆ ಇರುವಂತೆ ಭಾಸವಾಗಿಸುತ್ತದೆ. ಕನ್ನಡ ನಾಡು-ನುಡಿ ಎಲ್ಲವೂ ಕವಿ ಕರ್ಕಿಯವರಿಗೆ ಕಾವ್ಯದ ವಸ್ತುಗಳಾಗಿವೆ. ಗೋಲ ಗುಮ್ಮಟವನ್ನು ಅವರು ತಮ್ಮ ಕವನದ ಸಾಲುಗಳಲ್ಲಿ ಹಿಡಿದಿಟ್ಟ ಪರಿ ಬಹಳ ಸೊಗಸಾಗಿದೆ.

ಶಬ್ದ ಮಾಯೆಯಲಿ ಸಪ್ತಛಾಯೆಗಳ-
ನಿಟ್ಟು ಆಡಿಸಿದೆ ಗುಮ್ಮಟ
ಸುಳಿದ ಶಬ್ದ ನಿಶ್ಯಬ್ದಗೊಳಿಸುವುದು
ಗೂಢದೊಡಲಿನಲಿ ಗುಮ್ಮಟ.
ಎಂದು ಗೋಲ ಗುಮ್ಮಟದ ಶಬ್ದ-ನಿಶ್ಯಬ್ದವನ್ನು ತಮ್ಮ
ಶಬ್ದ ಲಯದಲ್ಲಿ ಪಡಿಮೂಡಿಸಿದ್ದಾರೆ.

ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿದ ಸಾಹಿತಿಗಳು ಬೆರಳೆಣಿಕೆಯಷ್ಟು ಮಾತ್ರವೇ ಕನ್ನಡದಲ್ಲಿ ಸಿಗುತ್ತಾರೆ. ಕರ್ಕಿಯವರು ಮಕ್ಕಳ ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದರು. ಬಣ್ಣದ ಚೆಂಡನ್ನು ಮಕ್ಕಳಿಗೆ ಮುದ ನೀಡುವಂತೆ ಬಣ್ಣಿಸಿ,ಬದುಕಿನ ಸಾರವನ್ನು
ಅದರೊಳಗೆ ಹುದುಗಿಸಿದ್ದಾರೆ.

ಬಣ್ಣದ ಚೆಂಡು,
ಆಹಹಾ ರಬ್ಬರ ಚೆಂಡು!
ಗಾಳಿಯನುಂಡು
ಪುಟಿಯುವ ಚೆಂಡು
ಕಾಣಿಸುವುದು ಬಲು ದುಂಡು
ಆಹಹಾ ರಬ್ಬರ ಚೆಂಡು
ಎಂದು ಮಕ್ಕಳಿಗೆ ಬಣ್ಣದ

ಚೆಂಡಿನ ಮೂಲಕ ಅನುಭವಾತ್ಮಕ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ. ಹಾಡಿನ ಕೊನೆಯಲ್ಲಿ, ಕೊನೆಯಲಿ ಒಂದು ದಿನ ಪುಸ್ಸೆಂದು ಆಟ ಮುಗಿಸುವ ಚೆಂಡು ಆಹಹಾ ರಬ್ಬರ ಚೆಂಡು ಎಂದು ಪದಗಾರುಡಿಗನಂತೆ,ಮನುಷ್ಯನ ಜೀವನವೂ ಕೂಡ ರರ್ಬ್ಬ ಚೆಂಡಿನಂತೆ ಒಂದು ದಿನ ಆಟ
ಮುಗಿಸುತ್ತದೆ ಎಂಬ ಜೀವನ ಸತ್ಯವನ್ನು ಹಾಡಿನ
ಹುದುಗಿಸಿದ್ದಾರೆ.

ವರಕವಿ ಬೇಂದ್ರೆ ಮತ್ತು ಮೇರು ಕವಿ ವಿ.ಕೃ.ಗೋಕಾಕರ ಒಡನಾಡಿಗಳಾಗಿದ್ದ ಕರ್ಕಿಯವರು ಭಾವಲೋಕದ ಭಾವಯಾನವನ್ನು ಕನ್ನಡಿಗರಿಗೆ ಉಣಬಡಿಸಿzರೆ. ಇವರ ಮಹಾ ಪ್ರಬಂಧ ‘ಕನ್ನಡ ಛಂದೋವಿಕಾಸ’(1956)ವು ಕನ್ನಡ ಛಂದಸ್ಸಿನ ಚರಿತ್ರೆ ಮತ್ತು
ಸ್ವರೂಪವನ್ನು ಪ್ರಾಚೀನ ಮತ್ತು ಆಧುನಿಕ ಕಾವ್ಯ ಭಾಗಗಳ ಮೂಲಕ ವಿಶ್ಲೇಷಿಸುತ್ತದೆ.ಈ ಕೃತಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಇಂದಿಗೂ ಒಂದು ಪ್ರಮುಖ ಆಕರ ಗ್ರಂಥವಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಕರ್ಕಿಯವರು ’ಹಚ್ಚೇವು ಕನ್ನಡದ ದೀಪ’ ಎನ್ನುತ್ತಾ ಕನ್ನಡ ಭಾಷೆಯ ಹಣತೆ ಯನ್ನು ಬೆಳಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.ಕನ್ನಡದ ದೀಪ ಹಚ್ಚಿದ ಕರ್ಕಿ ಎಂಬ ಸಾಹಿತ್ಯ ಲೋಕದ ದೀಪ 1984 ರ ಜನವರಿ 16 ರಂದು ನಮ್ಮಿಂದ ಮರೆಯಾದರು.

ಕವಿ ಹಚ್ಚಿದ ಕನ್ನಡದ ಹಣತೆಯನ್ನು ನಾವಿಂದು ಕೇವಲ ವೇದಿಕೆಗಳಲ್ಲಿ ಗಾಯನಕ್ಕೆ ಮಾತ್ರ ಸೀಮಿತವಾಗಿಡದೆ,ದೈನಂದಿನ ಜೀವನದಲ್ಲಿ ಕನ್ನಡವನ್ನು ಬಳಸಿ,ಉಳಿಸುವುದರ ಮೂಲಕ ಕನ್ನಡದ ದೀಪ ಸದಾ ಪ್ರಕಾಶಮಾನವಾಗಿರುವಂತೆ ಬೆಳಗಬೇಕಿದೆ.