Friday, 13th December 2024

ಮೂರ್ಛೆರೋಗ (ಎಪಿಲೆಪ್ಸಿ)

ಡಾ. ಉಮಾಶಂಕರ್ ಆರ್.
ನರರೋಗ ತಜ್ಞರು, ಬೆಂಗಳೂರು ನ್ಯೂರೋ ಸೆಂಟರ್.
ಮೊ: ೯೮೮೦೧೫೮೭೫೮

ಮೆದುಳು ದೇಹವನ್ನು ಸಂಪೂರ್ಣ ನಿಯಂತ್ರಿಸುವ ಒಂದು ಮುಖ್ಯವಾದ ಅಂಗ. ಮೆದುಳು ವಿದ್ಯುತ್ ಕಾಂತೀಯ ಚಟುವುಟಿಕೆಯಿಂದಲೇ ತನ್ನೆ ಕೆಲಸಗಳನ್ನು ನಿರ್ವಹಿಸುತ್ತದೆ. ಹಲವು ಬಾರಿ ಮೆದುಳಿ ನಲ್ಲಿ ಅನಿಯಮಿತ ವಿದ್ಯುತ್ ಕಾಂತೀಯ ಚಟುವಟಿಕೆಯಿಂದ ತೊಂದರೆಗಳು ಉಂಟಾಗ ಬಹುದು. ಇದು ಬಾಹ್ಯವಾಗಿ ಕಾಣಿಸಿಕೊಂಡಾಗ ಇದನ್ನು ಮೂರ್ಛೆ(ಪಿಟ್ಸ್) ಅಥವಾ ಅಪಸ್ಮಾರ ಎಂದು ಕರೆಯುತ್ತೇವೆ.

ಪ್ರತಿ ವರ್ಷ ೨೬ ನೇ ಮಾರ್ಚ್ ಅನ್ನು ಪರ್ಪಲ್ ಡೇ ಆಗಿ ಆಚರಿಸುತ್ತೇವೆ. ಇಂದು ಅಪಸ್ಮಾರದ ಬಗ್ಗೆ ತಿಳುವಳಿಕೆ ಮತ್ತು ಸಂಶೋಧನೆಗಾಗಿ ನಿಧಿ ಸಂಗ್ರಹ ಕಾರ್ಯಗಳು ವಿಶ್ವದಾದ್ಯಂತ ನಡೆಯು ತ್ತದೆ. ಮೂರ್ಛೆ ಒಂದಕ್ಕಿಂತ ಹೆಚ್ಚು ಬಾರಿ ಬಂದಲ್ಲಿ ಮಾತ್ರ ಅದನ್ನು ಮೂರ್ಛೆ ರೋಗ ಎಂದು ಪರಿಗಣಿಸುತ್ತೇವೆ. ಪ್ರಪಂಚದಾದ್ಯಂತ ಶೇ.೧ ರಿಂದ ೨ ರಷ್ಟು ಜನ ಮೂರ್ಛೆರೋಗದಿಂದ ಬಳಲುತ್ತಿದ್ದಾರೆ. ಮೂರ್ಛೇರೋಗ ಯಾರಲ್ಲಿ ಬೇಕಾದರೂ, ಯಾವ ವಯಸ್ಸಿನಲ್ಲಿ ಬೇಕಾದರೂ ಗಂಡು ಹೆಣ್ಣು ಎನ್ನುವ ಬೇದವಿಲ್ಲದೆ ಕಾಣಿಸಿಕೊಳ್ಳುತ್ತದೆ.

ಮೂರ್ಛೆ ರೋಗದ ಲಕ್ಷಣಗಳೇನು?
ಇದಕ್ಕೆ ಹಲವಾರು ಲಕ್ಷಣಗಳಿವೆ. ನೇರ ದೃಷ್ಟಿ ನಿಟ್ಟಿಸುವುದು, ಬೆಚ್ಚು ಬೀಳುವುದರಿಂದ ಹಿಡಿದು ಮೈ ಕೈ ಅಲುಗಾಡಿಸುವುದು ಬಾಯಲ್ಲಿ ಜೊಲ್ಲು
ಕಾಣಿಸಿಕೊಳ್ಳುವುದು, ನಾಲಗೆ ಕಚ್ಚಿಕೊಳ್ಳುವುದು, ನಿಯಂತ್ರಣವಿಲ್ಲದ ಮಲಮೂತ್ರಗಳ ವಿಸರ್ಜನೆ ಇತ್ಯಾದಿ ಪ್ರಮುಖ ಲಕ್ಷಣಗಳಾಗಿವೆ. ವಿದ್ಯುತ್ ಕಾಂತೀಯ ಚಟುವಟಿಕೆಗಳು ಮೆದುಳಿನ ಒಂದು ಭಾಗಕ್ಕೆ ಸೀಮಿತವಾದ, ಆ ಭಾಗದ ಕಾರ್ಯಚಟುವಟಿಕೆಯ ಮೇಲೆ ತೊಂದರೆ ಉಂಟಾಗಿ ಅದರಿಂದ ಮೂರ್ಛೆ ಒಂದೇ ಭಾಗಕ್ಕೆ ಸೀಮಿತವಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದನ್ನು ಫೋಕಲ್ ಎಪಿಲೆಪ್ಸಿ ಎಂದು ಕರೆಯುತ್ತೇವೆ.

ಈ ವಿದ್ಯುತ್ ತರಂಗಗಳು ಮೆದುಳಿನ ಎಲ್ಲಾ ಭಾಗಗಳಿಗೆ ಹರಡಿದಾಗ ಅದನ್ನ ಜನರಲೈಸ್ಡ್ ಎಪಿಲೆಪ್ಸಿ ಎಂದು ಕರೆಯುತ್ತೇವೆ. ಕೆಲವು ಬಾರಿ ಬೆಚ್ಚಿ ಬೀಳುವ ಲಕ್ಷಣಗಳಿದ್ದಾಗ ಅದನ್ನ ಜೆಎಂಇ(ಜ್ಯುವಿನೈಲ್ ಮಯೋಕ್ಲೋನಿಕ್ ಎಪಿಲೆಪ್ಸಿ) ಎಂದು ಕರೆಯುತ್ತೇವೆ.

ರೋಗ ಪತ್ತೆ ಹೆಚ್ಚುವ ವಿಧಾನ ಹೇಗೆ?
ಮೂರ್ಛೆರೋಗದಲ್ಲಿ ರೋಗಿಯ ಅಥವಾ ಪ್ರತ್ಯಕ್ಷ ಸಾಕ್ಷಿಗಳಿಂದ ಪಡೆಯುವ ವಿವರಗಳು ಅತ್ಯಂತ ಮುಖ್ಯವಾಗಿದೆ. ಮೂರ್ಛೆಯ ವಿವರಗಳನ್ನ ಇವರಿಂದ ಪಡೆಯುವುದು ತುಂಬಾ ಮುಖ್ಯವಾಗಿದ್ದು ಇದರ ಆಧಾರದ ಮೇಲೆ ಯಾವ ರೀತಿಯ ಮೂರ್ಛೆರೋಗ ಮತ್ತೆ ಮುಂದಿನ ಪರೀಕ್ಷೆಗಳು, ಚಿಕಿತ್ಸೆ ನಿರ್ಧಾರವಾಗುತ್ತದೆ. ಇಇಜಿ (ಎಲೆಕ್ಟ್ರೋ ಎನ್ಕೆ-ಲೋ ಗ್ರಾಮ) ಪರೀಕ್ಷೆ ಮಾಡಲಾಗುತ್ತದೆ. ಇದರಲ್ಲಿ ಮೆದುಳಿನ ತರಂಗಗಳನ್ನು ದಾಖಲು ಮಾಡಿ ಪರಿಶೀಲಿಸಿ, ಯಾವ ರೀತಿಯ ಮೂರ್ಛೆ ರೋಗ ಎಂಬುದನ್ನು ಪತ್ತೆ ಹಚ್ಚಬಹುದು.

ಎಂಆರ್‌ಐ ಸ್ಕ್ಯಾನ್, ಎಂಇಜಿ ಮತ್ತು ಪೆಟ್ ಸ್ಕ್ಯಾನ್‌ಗಳ ಅವಶ್ಯಕತೆ ಕೂಡ ಮೂರ್ಛೆ ರೋಗ ವಿಧಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡುವುದರಲ್ಲಿ
ನಿರ್ಣಾಯಕ ಪಾತ್ರ ವಹಿಸುತ್ತವೆ.

ಮೂರ್ಛೆ ರೋಗದ ಮುಖ್ಯವಿಧಗಳು
೧. ಫೊಕಲ್ ಮೂರ್ಛೆರೋಗ ೨. ಜನರಲೈಸ್ಡ್ ಮೂರ್ಛೆರೋಗ
ಇವು ಮುಖ್ಯ ಮೂರ್ಛೆರೋಗದ ವಿಧಗಳಾಗಿದ್ದು ಈ ವಿಧಗಳ ಮೇಲೆ ನೀಡಲಾಗುವ ಔಷಧಿ ಹಾಗೂ ಚಿಕಿತ್ಸೆ ಬೇರೆ ಬೇರೆ ರೀತಿಯಲ್ಲಿರುತ್ತದೆ.
ಸಾಮಾನ್ಯವಾಗಿ ಜನರನ್ನು ಕಾಡುವುದು ಮೂರ್ಛೆರೋಗಕ್ಕೆ ಎಷ್ಟು ದಿನ, ಎಷ್ಟು ವರ್ಷ ಔಷಧಿ ತೆಗೆದುಕೊಳ್ಳಬೇಕು ಎನ್ನುವುದು. ಬಹುಸಂಖ್ಯೆಯಲ್ಲಿ ಎರಡರಿಂದ ಮೂರು ವರ್ಷಗಳ ಕಾಲ ಔಷಧಿ ತೆಗೆದುಕೊಂಡು ನಂತರ ನಿಲ್ಲಿಸಬಹುದು. ಆದರೆ ಹಲವು ರೀತಿಯ ಮೂರ್ಛೆ ರೋಗಗಳಲ್ಲಿ ಜೀವನ ವಿಡೀ ಔಷಧಿಯ ಅವಶ್ಯಕತೆ ಇರುತ್ತದೆ.

ಮೂರ್ಛೆ ಬಂದಾಗ ಏನು ಮಾಡಬೇಕು?
ಮೂರ್ಛೆ ತಪ್ಪಿದವರನ್ನು ಸುರಕ್ಷಿತವಾದ ಜಾಗದಲ್ಲಿ ಮಲಗಿಸಿ ಒಂದು ಬದಿಗೆ ಒರೆಗಿಸಿ, ನಾಲಿಗೆ ಕಚ್ಚದ ರೀತಿಯಲ್ಲಿ ಮೃದುವಾದ ಬಟ್ಟ ಇಡಬೇಕು. ಅವರ ಕೈಗೆ ಕಬ್ಬಿಣ ಕೊಡುವುದು, ಈರುಳ್ಳಿ ಮೂಸಿಸುವುದು ಮತ್ತು ಚಪ್ಪಲಿ ಕೊಡುವುದು ಮೂಡನಂಬಿಕೆಗಳು.

ಬಹುಪಾಲು ಮೂರ್ಛೆರೋಗ ಒಂದು ನಿಮಿಷದವರೆಗೇ ಇರುತ್ತದೆ ನಂತರ, ಹಲವು ನಿಮಿಷಗಳ ಗೊಂದಲಮಯ ಮನಸ್ಥಿತಿಯಲ್ಲಿ ಇರಬಹುದು. ಯಾವುದೇ ಔಷಧ ಕೊಡದಿದ್ದರೂ ಕೂಡ ಬಹುಸಂಖ್ಯಾತರಲ್ಲಿ ಹತ್ತು ನಿಮಿಷದ ಒಳಗಾಗಿ ಸಾಮಾನ್ಯ ಸ್ಥಿತಿಗೆ ತಲುಪುತ್ತಾರೆ. ಮೂರ್ಛೆ ರೋಗ ಒಂದು ಸಾಮಾಜಿಕ ಪಿಡುಗು, ಇದರ ಸೂಕ್ತ ರೋಗ ನಿರ್ಧಾರ ಮಾಡಿ ಚಿಕಿತ್ಸೆ ನೀಡುವುದರಿಂದ ಬಹುಪಾಲು ಜನಗಳಲ್ಲಿ ಈ ರೋಗವನ್ನು ಹತೋಟಿ ಯಲ್ಲಿಡ ಬಹುದು ಮತ್ತು ಗುಣಮುಖರನ್ನಾಗಿಸಬಹುದು. ಇದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ನಮ್ಮಲ್ಲರ ಕರ್ತವ್ಯ.

ಮಕ್ಕಳಲ್ಲಿ ಮೂರ್ಛೆರೋಗ
ಆರು ತಿಂಗಳಿಂದ ಆರು ವರ್ಷದ ವರೆಗಿನ ಶೇ.೫ ರಷ್ಟು ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು ಮೂರ್ಛೆ ತಪ್ಪಿದರೆ ಆತಂಕ ಪಡುವ ಅವಶ್ಯಕತೆ ಇಲ್ಲ. ಇದನ್ನು ಫೆಬ್ರೈಲ್ ಸೀಝರ್ ಎಂದು ಕರೆಯುತ್ತೇವೆ. ಜ್ವರ ನಿಯಂತ್ರಣ ಮಾಡಿ ಮತ್ತು ಜ್ವರದ ನಿಯಂತ್ರಣವಾಗುವರೆಗೂ ಮೂರ್ಛೆರೋಗದ ಔಷಧಿ ಕೊಟ್ಟರೆ ಸಾಕಾಗುತ್ತದೆ.

ಮಹಿಳೆಯರಲ್ಲಿ ಮೂರ್ಛೆರೋಗ
ಮಹಿಳೆಯರಲ್ಲಿ ಮೂರ್ಛೆರೋಗ ಬಂದಾಗ ಸಮಾಜ ನೋಡುವ ರೀತಿ ವಿಭಿನ್ನವಾಗಿರುತ್ತದೆ. ಮೂರ್ಛೆರೋಗ ಕೆಲವು ಬಾರಿ ಋತುಸ್ರಾ ಮತ್ತೆ
ಗರ್ಭಾವಸ್ಥೆಯ ಮೇಲೆ ಪರಿಣಾಮ ಬೀರಬಹುದಾದರೂ ಬಹುಪಾಲು ಮಹಿಳೆಯರು ತಮ್ಮ ಸಾಮಾನ್ಯ ಜೀವನ ನಡೆಸಲು ಮತ್ತು ಮಗುವನ್ನು ಪಡೆಯಲು ಯಾವುದೇ ರೀತಿಯ ತೊಂದರೆ ಇರುವುದಿಲ್ಲ.