Saturday, 14th December 2024

Indukumar_Ettinahole: ಎತ್ತಿನಹೊಳೆ ಯೋಜನೆಯ ಕಾಮಗಾರಿಗಳ ಯಶಸ್ಸಿನ ರೂವಾರಿ ಇಂದುಕುಮಾರ್‌

ಸಿದ್ದೇಶ್ ಹಾರನಹಳ್ಳಿ

ಪಶ್ಚಿಮ ಘಟ್ಟದಲ್ಲಿ ಹರಿಯುವ ಸಣ್ಣ ಸಣ್ಣ ತೊರೆಗಳನ್ನು ಒಗ್ಗೂಡಿಸಿ, ಶೇಖರಣೆಯಾದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ರೂಪುಗೊಂಡ ಯೋಜನೆ ಎತ್ತಿನಹೊಳೆ. ಇತ್ತೀಚೆಗೆ ಇದರ ಕಾಮಗಾರಿಯೂ ಭಾಗಶಃ ಪೂರ್ಣಗೊಂಡು ಪ್ರಾಯೋಗಿ ಕವಾಗಿ ನೀರು ಹರಿಸಲಾಗಿದ್ದು, ಈ ಯೋಜನೆ ಸಂರ್ಪೂಣವಾಗಿ ಸಫಲಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದರ ಮುಖ್ಯ ರೂವಾರಿಗಳಲ್ಲಿ ಒಬ್ಬರು ಇಂದುಕುಮಾರ ಪಾಟೀಲ್.

ಕಾಲುವೆಯ ಕಾಮಗಾರಿಗಳಲ್ಲಿ ಎತ್ತಿದ ಕೈ

ಇಂದು ಕುಮಾರ್ ಪಾಟೀಲರು ವಿನ್ಯಾಸ ಮತ್ತು ನಿರ್ಮಾಣ ಮಾಡಿದ ಕಾಲುವೆಯ ಕಾಮಗಾರಿಗಳನ್ನು ನೀವೊಮ್ಮೆ ಸುತ್ತಾಡಿ ನೋಡುವುದಾದೆ, ಬಹಳ ಸಮಯ ಬೇಕಾದೀತು. ಯಾಕೆಂದರೆ ಅವು ನೂರಾರು ಕಿಲೋ ಮೀಟರುಗಳಷ್ಟು ದೂರ ಹರಡಿವೆ. ಕೃಷ್ಣಾ ಮೇಲ್ದಂಡೆ ಯೋಜನೆ, ವಿಜಯಪುರದ ಚಿಮ್ಮಲಗಿ ಪಶ್ಚಿಮ ಕಾಲುವೆ ಯೋಜನೆ, ಶಿರಶ್ಯಾಡ ಮಸಳಿ ಕಾಲುವೆ ಯೋಜನೆ, ಈಗ ಇವರು ಸೇವೆ ಸಲ್ಲಿಸುತ್ತಿರುವ ಎತ್ತಿನ ಹೊಳೆ – ಈ ಎಲ್ಲ ಕಾಲುವೆಗಳು ಇಂದುಕುಮಾರ್ ಪಾಟೀಲರ ಹೆಸರನ್ನೇ ಮಾರ್ದನಿಸುತ್ತವೆ, ಅವರ ದಕ್ಷತೆಯನ್ನು ತೋರುತ್ತಿವೆ.

ಈ ಎಲ್ಲಾ ಯೋಜನೆಗಳ ಯಶಸ್ಸಿಗೆ ಶ್ರೀಯುತರು ಕಾರಣೀಭೂತರು. ಈ ಯೋಜನೆಗಳ ಸಮೀಕ್ಷೆಗೆಂದು ಹಲವಾರು ತಿಂಗಳು ಗಳು ಮನೆಗೇ ಹೋಗದೆ ಕಾಡು- ಮೇಡು, ಬೆಟ್ಟ-ಗುಡ್ಡಗಳನ್ನು ಸುತ್ತಾಡಿ, ವಿಸ್ತೃತ ಯೋಜನೆ ಯನ್ನು ತಯಾರಿಸಿ ಸರಕಾರದ ಮುಂದೆ ಮಂಡಿಸಿ, ಈಗ ಅದರ ಕಾರ್ಯರೂಪಕ್ಕೆ ಶ್ರಮವಹಿಸುತ್ತಿರುವುದು, ಶ್ರೀ ಇಂದುಕುಮಾರ ಪಾಟೀಲರ ಶ್ರದ್ಧೆ, ಸೇವಾ ಮನೋ ಭಾವ ಮತ್ತು ಸರಕಾರಿ ಯೋಜನೆಗಳ ಬಗ್ಗೆ ಅವರಿ ಗಿರುವ ಕಾಳಜಿ ಯನ್ನು ಎತ್ತಿ ತೋರಿಸುತ್ತದೆ. ‘ಎತ್ತಿನಹೊಳೆ’ ಯೋಜನೆಯ ಅರಸೀಕೆರೆ ಭಾಗದ ಯಶಸ್ಸಿನ ಬಹುತೇಕ ಪಾಲು ಇಂದುಕುಮಾರ ಪಾಟೀಲರಿಗೆ ಸಲ್ಲುತ್ತದೆ. ಇವರ ಅಪಾರ ಪರಿಶ್ರಮವನ್ನು ಗುರುತಿಸಿ ವಿಶ್ವೇಶ್ವರಯ್ಯ ಜಲ ನಿಗಮವು, ಇವರನ್ನು ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಗೆ ಪದೋನ್ನತಿ ನೀಡಿ ಇವರ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ.

ಕಲಿಕೆಯಲ್ಲಿ ಮುಂದು
ಸದ್ಯ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿರುವ ಇವರು ಜನಿಸಿದ್ದು ದಾವಣಗೆರೆ ಜಿಲ್ಲೆಯ ಅತ್ತಿಗೆರೆ ಎಂಬ ಗ್ರಾಮದಲ್ಲಿ. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವನ್ನು ಇದೇ ಗ್ರಾಮದಲ್ಲಿ ಪೂರೈಸಿದ ಇವರು ಬಾಲ್ಯದಿಂದಲೂ ಅತಿ ಉತ್ಸಾಹಿ. ರೈತಾಪಿ ಕೃಷಿ ಕುಟುಂಬದಲ್ಲಿ ಜನಿಸಿದ್ದರೂ ಓದಿನಲ್ಲಿ ಅತೀವ ಆಸಕ್ತಿ ಹೊಂದಿದ್ದ ಇಂದುಕುಮಾರರು ಬೆಂಗಳೂರು ಎಂ.ಇ.ಐ. ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಡಿಪ್ಲೋಮವನ್ನು ಮುಗಿಸಿದ್ದರು. ಇಷ್ಟಾದರೂ ಇನ್ನೂ ಕಲಿಯಬೇಕೆಂಬ ಅತೀವ ಹಂಬಲದಿಂದ ಕುಟುಂಬದಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ ಅದನ್ನೆಲ್ಲ ಮೆಟ್ಟಿ ನಿಂತು ರಾಜ್ಯದ ಪ್ರತಿಷ್ಠಿತ ಎಂ. ಎಸ್ ರಾಮಯ್ಯ ಎಂಜನಿಯರಿಂಗ್ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡರು.

ಗುಣಮಟ್ಟವೇ ಇವರ ಭರವಸೆ
ಇಲ್ಲೇ ಬೆಂಗಳೂರಿನಲ್ಲಿ ವೃತ್ತಿ ಆರಂಭಿಸಿದ ಇಂದುಕುಮಾರ್ ಪಾಟೀಲ್, ಈ ಮುಂಚೆ ತಮ್ಮದೇ ಕಂಪನಿಯನ್ನು ತೆರೆದು ಗುಣಮಟ್ಟದ ಕಾಮಗಾರಿಗೆ ಹೆಸರುವಾಸಿ ಯಾಗಿದ್ದರು. ಬೆಂಗಳೂರಿನಲ್ಲಿ ಹಲವು ಮನೆ-ನಿರ್ಮಾಣ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿರುವ ಇವರು ಅತೀ ಚಿಕ್ಕ ವಯಸ್ಸಿನಲ್ಲೇ ಅತೀ ಬೇಡಿಕೆಯ ವ್ಯಕ್ತಿಯಾಗಿದ್ದರು. ಇವರು ಕಟ್ಟಿದ ಮನೆಗಳಲ್ಲಿ ವಿನ್ಯಾಸ ಮತ್ತು ವಾಸ್ತುಶಿಲ್ಪದಲ್ಲಿ ಅಗ್ರಶ್ರೇಣಿ, ಆದ್ದರಿಂದ ಶ್ರೀ ಇಂದುಕುಮಾರರಿಗೆ ಬೆಂಗಳೂರಿನಲ್ಲಿ ಕೈತುಂಬಾ ಕೆಲಸ. ತಾವು ಸಾಕಷ್ಟು ಶ್ರಮವಹಿಸಿ ಮತ್ತು ತಮ್ಮ ಕುಟುಂಬದವರಿಗೂ ನೆರವಾದ ಇಂದುಕುಮಾರರು ತಮ್ಮ ಅಣ್ಣನ ಜೊತೆಗೂಡಿ ಸಾಕಷ್ಟು ಜನರಿಗೆ ಉದ್ಯೋಗದಾತರೂ ಆಗಿದ್ದರು.

ಜಲಸಂಪನ್ಮೂಲವೇ ಇವರ ಶಕ್ತಿ
೨೦೦೯ನೇ ಇಸವಿಯಿಂದ ಜಲಸಂಪನ್ಮೂಲ ಇಲಾಖೆಯಲ್ಲೇ ತಮ್ಮ ಅವಿರತ ಸೇವೆ ಸಲ್ಲಿಸುತ್ತಿರುವ ಇಂದುಕುಮಾರ್ ಪಾಟೀಲರು ‘ಜಲ’ವನ್ನೇ ಜೀವನವನ್ನಗಿಸಿಕೊಂಡಿದ್ದಾರೆ. ಬೇರೆ ಯಾವುದೇ ಯಾವುದೇ ಇಲಾಖೆಗೂ ಹೋಗದೇ ಇಲಾಖೆಯಲ್ಲಿ ಸಿಕ್ಕಿದ ಎಲ್ಲಾ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಛಾಪನ್ನು ಮೂಡಿಸಿದ್ದಾರೆ. ತಮಗೆ ಎದುರಾದ ಎಲ್ಲಾ ‘ಬೆಟ್ಟಗುಟ್ಟಗಳೆಂಬ’ ಅಡತಡೆಗಳನ್ನು ಕೊರೆದು ಅವಕಾಶಗಳೆಂಬ ‘ನಾಲೆಗಳನ್ನು’ ನಿರ್ಮಿಸಿದ್ದಾರೆ. ವಿಜಯಪುರದ ಸಿಂಧಗಿಯಾಯಿಂದ ಹಿಡಿದು, ಹಾಸನದ ಅರಸೀಕೆರೆಯವರೆಗೂ ಇವರ ಸೇವೆ ‘ಮಾತೃ’ ಇಲಾಖೆಯಾದ ಜಲಸಂಪನ್ಮೂಲ ಇಲಾಖೆಗಷ್ಟೇ ಮೀಸಲು.

ಜಲ ನಿರ್ವಹಣೆಯ ಜತೆಗೆ ಜನ ನಿರ್ವಹಣೆ
ಒಂದು ಕಾಮಗಾರಿಯ ಯಶಸ್ಸಿನ ಹಿಂದೆ ಹಲವಾರು ರೈತ ಬಂಧುಗಳ ತ್ಯಾಗವಿರುತ್ತದೆ. ಕಾಮಗಾರಿಯ ಕಾಲುವೆಗೆ ಭೂಮಿಯನ್ನು ಬಿಟ್ಟುಕೊಟ್ಟ ರೈತರಿಗೆ ಸಕಾಲದಲ್ಲಿ ಪರಿಹಾರ ದೊರಕದಿದ್ದರೆ ಅನುಷ್ಠಾನದ ಹೊಣೆ ಹೊತ್ತಿ ರುವ ಇಂಜಿನಿಯರು ಗಳು ಅವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಆದರೆ, ಶ್ರೀ ಇಂದು ಕುಮಾರ್ ಪಾಟೀಲರು ತಮ್ಮ ಕಾರ್ಯವ್ಯಾಪ್ತಿಯ ಭಾಗದ ಎಲ್ಲಾ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮೆಯೂ
ರೈತರ ಪ್ರತಿಭಟನೆ ಅಥವಾ ದೂರುಗಳು ಉದ್ಭವವಾಗದಂತೆ ಮುತುವರ್ಜಿ ವಹಿಸಿರುತ್ತಾರೆ.

ರೈತರ ಜಮೀನಿನಲ್ಲಿ ಯಾವುದೇ ಬೆಳೆ ಇದ್ದರೂ, ಇವರೇ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ಒದಗಿಸಿದ್ದಾರೆ, ರೈತರಿಗೆ ಪರಿಹಾರ ಸಿಗುವವರೆಗೂ ಕಾಲಿಗೆ ಚಕ್ರಕಟ್ಟಿಕೊಂಡು ಕಚೇರಿಯಿಂದ ಕಚೇರಿಗೆ ತಿರುಗಾಡುವ ಇಂದು ಕುಮಾರ ಪಾಟೀಲರು, ರೈತರಿಂದ ಬಯಸುವುದು ಅವರ ಮುಖದಲ್ಲಿ ಮೂಡುವ ಸಂತೃಪ್ತಿಯ ಭಾವವನ್ನಷ್ಟೇ. ಆದ್ದರಿಂದಲೇ ಇವರು ಅರಸಿಕೆರೆ ಜನಮಾನಸದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದು, ಅತೀ ವಿಶ್ವಾಸದ ಬಳಗವನ್ನೇ ಹೊಂದಿದ್ದಾರೆ.

ಅರಸೀಕೆರೆಯಲ್ಲೊಂದು ಸೊಂಪಾದ ಕೈತೋಟ
ಸದಾ ಪ್ರಕೃತಿಯ ಮಡಿಲಲ್ಲೇ ಇರುವ ಇಂದುಕುಮಾರ ಪಾಟೀಲರಿಗೆ ಹಸಿರೆಂದರೆ ವಿಶೇಷ ಪ್ರೀತಿ. ಆ ಕಾರಣಕ್ಕೆ ತಮ್ಮ ಕಚೇರಿಯ ಆವರಣದಲ್ಲಿರುವ ಬಯಲು ಭೂಮಿಯನ್ನು ಕಣ್ಮನ ಸೆಳೆಯುವ ಕೈದೋಟವನ್ನಾಗಿ ಪರಿವರ್ತಿಸಿದ್ದಾರೆ. ಅವರು ಸುಂದರವಾಗಿ ರೂಪಿಸಿರುವ ಈ ಕೈತೋಟವನ್ನು ವೀಕ್ಷಿಸಿದರೆ ಇಂದುಕುಮಾರ್ ಪಾಟೀಲರಿಗೆ ಕೃಷಿ, ವನ, ಪುಷ್ಪ ಮತ್ತು ಸಸ್ಯಗಳ ಬಗ್ಗೆ ಇರುವ ವಿಶೇಷ ಪ್ರೀತಿಯ ಅರಿವಾಗುತ್ತದೆ. ಇದರ ನಿರ್ವಹಣೆಗೆಂದು ಸರಕಾರದ ಕಾಸಿಗೆ ಕಾಯದೇ, ತಮ್ಮ ಖರ್ಚು ವೆಚ್ಚಗಳನ್ನು ತುಸು ಇಳಿಸಿ ಅದರ ಸಹಾಯದಿಂದ ವಿಶೇಷವಾದ ವನವನ್ನು ಬೆಳೆಸುತ್ತಿದ್ದಾರೆ.