Saturday, 7th September 2024

ಸಂಸ್ಕೃತ ವಿವಿಗೆ ಬಿಡುಗಡೆಯೇ ಆಗಿಲ್ಲ ಅನುದಾನ !

ಸಂದರ್ಶನ: ರಂಜಿತ್ ಎಚ್. ಅಶ್ವತ್ಥ್ ಬೆಂಗಳೂರು

ಮುಕ್ತ ವಿವಿಯ ಸಹಾಯದಲ್ಲಿ ಕಟ್ಟಡ ನಿರ್ಮಾಣ: ಸಂದರ್ಶನದಲ್ಲಿ ಮಾಹಿತಿ ನೀಡಿದ ಕುಲಪತಿ

ಅನ್ನದ ಭಾಷೆಯಾಗಿಯೂ ಪೊರೆಯಬಲ್ಲ ಸಂಸ್ಕೃತ | ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು

ಕಳೆದ ಕೆಲದಿನಗಳಿಂದ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಭಾಷೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಇ. ದೇವನಾಥನ್ ವಿಶ್ವವಾಣಿಯೊಂದಿಗೆ ಮಾತನಾಡಿದ್ದು, ಸಂಸ್ಕೃತ ಭಾಷೆಯ ಅಗತ್ಯ, ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ಸಂಸ್ಕೃತ ಮಾತೃಭಾಷೆ, ಅನ್ನದ ಭಾಷೆಯಾಗುವುದಿಲ್ಲ ಎನ್ನುವ ತರ್ಕವೇ ಸರಿಯಲ್ಲ. ಕರ್ನಾಟಕದಲ್ಲಿಯೇ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಸಂಸ್ಕೃತ ಅಧ್ಯಯನ ಮಾಡುತ್ತಿದ್ದಾರೆ. 700ಕ್ಕೂ ಹೆಚ್ಚು ಅನುದಾನಿತ ಉಪನ್ಯಾಸಕರು ಕರ್ನಾಟಕದಲ್ಲಿದ್ದಾರೆ. ಸಂಸ್ಕೃತ ಕೇವಲ ಮೇಲ್ಜಾತಿಗೆ ಸೀಮಿತವಾಗಿರುವ ಭಾಷೆ ಅಲ್ಲವೇ ಅಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು.

?ನೂರು ಕೋಟಿ ನೀಡಿರುವುದಕ್ಕೆ ಆಕ್ಷೇಪಗಳಿವೆಯಲ್ಲ?
ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರಕಾರ ಮೊದಲಿನಿಂದಲೂ ಸಹಾಯ ಮಾಡುತ್ತಿರುವುದು ನಿಜ. ಆದರೆ ರಾಜ್ಯ ಸರಕಾರದಿಂದ ಯಾವುದೇ ಅನುದಾನ ಸಿಕ್ಕಿಲ್ಲ. ವಿವಿ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆಯನ್ನು ಎರಡು ವರ್ಷದ ಹಿಂದೆ ನೀಡಲಾಗಿತ್ತು. ಆದರೆ ಹಲವು ಆರ್ಥಿಕ ಸಮಸ್ಯೆಯಿಂದ ಅನುದಾನ ಹಂಚಿಕೆಯಾಗಿಲ್ಲ. ರಾಜ್ಯ ಸರಕಾರ ಹಾಗೂ ಕೆಲ ಸಚಿವರು 100 ಕೋಟಿ ರು. ಅನುದಾನ ಘೋಷಣೆ ಮಾಡಿರಬಹುದು. ಆದರೆ ಇಲ್ಲಿಯವರಗೆ
ಸ್ಯಾಂಕ್ಷನ್ ಆರ್ಡರ್ ನಮಗೆ ಸಿಕ್ಕಿಲ್ಲ. ಆದರೆ, ಸಚಿವ ಅಶ್ವತ್ಥ ನಾರಾಯಣ್ ಅವರು ಸಂಸ್ಕೃತ ವಿವಿಯ ಪರ ವಾಗಿದ್ದು, ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.

? ಅನುದಾನಕ್ಕೆ ವಿರೋಧ ಅಗತ್ಯವೇ?
ಸಂಸ್ಕೃತ ವಿಶ್ವವಿದ್ಯಾಲಯ ಆರಂಭವಾಗಿರುವುದು 2010ರಲ್ಲಿ. ಆಗ ಚಾಮರಾಜಪೇಟೆಯಲ್ಲಿ ಸದ್ಯವಿರುವ ಸ್ಥಳದಲ್ಲೇ ವಿವಿಗೆ ಜಾಗ ನೀಡಲಾಗಿತ್ತು. ಆದರೆ 2013ರಲ್ಲಿ ಸಂಸ್ಕೃತ ವಿವಿಗೆ 100 ಎಕರೆಯನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನೀಡಲಾಯಿತು. ಕಟ್ಟಡ ಕಾಮಗಾರಿಗೆ
ಅನುದಾನವನ್ನು ನೀಡಿಲ್ಲ. ಕೆಲ ತಿಂಗಳ ಹಿಂದೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ರಾಮನಗರದಲ್ಲಿ ಪ್ರಾದೇಶಿಕ ಕೇಂದ್ರ ಆರಂಭಿಸಲು ಯೋಚಿಸಿದರು. ಆದ್ದರಿಂದ ಸಂಸ್ಕೃತ ವಿವಿಯ ಜಾಗದಲ್ಲಿ ಅವರಿಗೆ ಪ್ರಾದೇಶಿಕ ಕೇಂದ್ರ ಆರಂಭಿಸಲು ಅವಕಾಶ ಮಾಡಿಕೊಡಲು ಎರಡೂ ವಿವಿ ನಡುವೆ ಒಪ್ಪಂದ ಮಾಡಿಕೊಂಡು, ಬಳಿಕ ಸರಕಾರದಿಂದ ಒಪ್ಪಿಗೆ ಪಡೆಯಲಾಯಿತು.

ಇದಾದ ಬಳಿಕ ಮುಕ್ತ ವಿವಿಯ 25 ಕೋಟಿ ರು. ಅನುದಾನದಲ್ಲಿ ಕಟ್ಟಡ ನಿರ್ಮಾಣ ಆರಂಭವಾಗಿದೆ. ಒಪ್ಪಂದದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಕ್ತ
ವಿವಿ ಅನುದಾನ ನೀಡಲಾಗುವುದು. ಆದರೆ ಸಂಸ್ಕೃತ ವಿವಿಯ ಕಚೇರಿ ಅಲ್ಲಿ ನಡೆಸಲು ಸಹಾಯವಾಗಲಿದೆ. ಈ ಒಪ್ಪಂದದ ಅನ್ವಯ ಶಂಕುಸ್ಥಾಪನೆ ಪೂರ್ಣಗೊಂಡಿದೆ.

? ಸಂಸ್ಕೃತ ಅಧ್ಯಯನದಿಂದ ಕನ್ನಡಕ್ಕೆ ಆಗುವ ಲಾಭವೇನು?
ಹಳೆಗನ್ನಡವನ್ನು ನೋಡಿದರೆ ಅದರಲ್ಲಿ ಸಂಸ್ಕೃತದ ಸೊಗಡೇ ಹೆಚ್ಚಿದೆ. ಇನ್ನು ಹೊಸ ಕನ್ನಡದಲ್ಲಿಯೇ ಹೇಳುವುದಾದರೆ, ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ‘ಜಯ ಭಾರತ ಜನನಿಯ ತನುಜಾತೆ’ಯ ಮೊದಲ ಸಾಲಿನಲ್ಲಿಯೇ ಸಂಸ್ಕೃತ ಪದಗಳ ಸೊಗಡಿದೆ. ಕನ್ನಡದೊಂದಿಗೆ ಸಂಸ್ಕೃತ ಮಿಶ್ರಣ ವಾದಾಗ ಭಾಷೆ ಇನ್ನಷ್ಟು ಬೆಳೆಯಲಿದೆ. ಇನ್ನು ಕನ್ನಡ ಭಾಷೆಯನ್ನು ಇನ್ನಷ್ಟು ಸಂಪತ್ತು ಭರಿತವಾಗಿ ಮಾಡುವ ನಿಟ್ಟಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಹಲವು ಕಾರ್ಯವನ್ನು ಮಾಡಿದೆ. ಕನ್ನಡ ವಿಶ್ವವಿದ್ಯಾಲಯ ದೊಂದಿಗೆ ಕೆಲ ದಿನಗಳ ಹಿಂದೆ ಸೆಮಿನಾರ್ ಅನ್ನು ಆಯೋಜಿಸಲಾಗಿತ್ತು. ಇದರೊಂದಿಗೆ ಸಂಸ್ಕೃತದ ಹಲವು ಪ್ರಾಚೀನ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ, ಅದನ್ನು ಕನ್ನಡಿಗರಿಗೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಸಂಸ್ಕೃತ ವಿಶ್ವವಿದ್ಯಾಲಯದ ಈ ಕಾರ್ಯಗಳು ಕನ್ನಡಕ್ಕೆ ಲಾಭವಲ್ಲವೇ?

ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿಯೇ ಸಂಸ್ಕೃತಕ್ಕೆ ಹೆಚ್ಚಿನ ಒಲವು ಇದೆ. ಹೀಗಾಗಿ ಇಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ
ಹೆಚ್ಚಿನ ಆದ್ಯತೆ ನೀಡುವುದು ಎಲ್ಲ ರೀತಿಯಿಂದಲೂ ಔಚಿತ್ಯಪೂರ್ಣ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಇ. ದೇವನಾಥನ್ ಅವರ ಸ್ಪಷ್ಟ ಅಭಿಪ್ರಾಯವಿದು. ಕಳೆದ ಕೆಲದಿನಗಳಿಂದ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಭಾಷೆಗೆ ಸಂಬಂಧಿಸಿದಂತೆ ನಡೆಯು ತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಅವರು ‘ವಿಶ್ವವಾಣಿ’ದೊಂದಿಗೆ ಮಾತನಾಡಿದ್ದು, ಅದರ ಪೂರ್ಣ ಪಾಠ ಹೀಗಿದೆ.

ಅಂಕಿ-ಅಂಶಗಳೊಂದಿಗೆ ಮಾತನಾಡುವುದಾದರೆ, ಕರ್ನಾಟಕದಲ್ಲಿ 231 ಅನುದಾನಿತ ಸಂಸ್ಕೃತ ಪಾಠಶಾಲೆಗಳಿದ್ದು, 279 ಅನುದಾನ ರಹಿತ ಸಂಸ್ಕೃತ ಪಾಠಶಾಲೆಗಳಿವೆ. ಇದರಲ್ಲಿ ಸರಿಸುಮಾರು 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಕೃತವನ್ನು ಅಭ್ಯಾಸ ಮಾಡು ತ್ತಿದ್ದಾರೆ. ಪ್ರಸಕ್ತ ವರ್ಷ ಬಿ.ಎ. ದಲ್ಲಿ ಸಂಸ್ಕೃತವನ್ನು ಓದುವುದಕ್ಕೆ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಹೀಗಿರುವಾಗ, ಸಂಸ್ಕೃತ ಓದುವವರ ಬಗ್ಗೆ ಆಸಕ್ತಿಯಿಲ್ಲ ಎಂದು ಹೇಳುವುದು ಸರಿಯೇ? ಎಂದವರು ಪ್ರಶ್ನಿಸುತ್ತಾರೆ.

ಸಂಸ್ಕೃತ ಮೇಲ್ಜಾತಿಗೆ ಸೀಮಿತ ಭಾಷೆ ಎಂಬ ಮಾತಿದೆಯಲ್ಲ?
ಇದು ಸಂಪೂರ್ಣ ಸುಳ್ಳು ಹಾಗೂ ಸತ್ಯಕ್ಕೆ ದೂರವಾದ ಮಾತು. ಸಂಸ್ಕೃತ ಯಾವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರುವ ಭಾಷೆಯಲ್ಲ.
ಕರ್ನಾಟಕ ವಿಶ್ವವಿದ್ಯಾಲಯದ ಉದಾಹರಣೆಯನ್ನೇ ತಗೆದುಕೊಂಡರೆ, ಸರಕಾರದ ಮೀಸಲಾತಿಯ ಅನ್ವಯವೇ ನಡೆಯಲಿದೆ. ಆದ್ದರಿಂದ ಕೇವಲ ಒಂದು ಜಾತಿಯವರಿಗೆ ನೀಡಲು ಸಾಧ್ಯವೇ ಇಲ್ಲ. ‘ಸಂಸ್ಕೃತಂ ಸರ್ವೇಶಃ’ ಎನ್ನುವ ಪರಿಕಲ್ಪನೆಯಲ್ಲಿ ವಿವಿಯನ್ನು ನಡೆಸಲಾಗುತ್ತಿದೆ. ರಾಜ್ಯದ ಹಲವು ಮಠಗಳು ಸಂಸ್ಕೃತ ಪಾಠಶಾಲೆಯನ್ನು ನಡೆಸುತ್ತಿವೆ. ಅಲ್ಲಿ ಓದುತ್ತಿರುವವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರುವವರೇ? ಯಾರೋ ಒಬ್ಬರಿಗೆ ಸಂಸ್ಕೃತ ಅಭ್ಯಾಸ ಮಾಡಲು ಆಗುತ್ತಿಲ್ಲ ಎಂದರೆ ಅದು ಯಾರ ತಪ್ಪು? ಕಲಿಯಲೇ ಬೇಕು ಎಂದು ಅನಿಸಿದರೆ ಆ ವ್ಯಕ್ತಿ ಕಲಿಯು ವುದು ಸತ್ಯ.

ಎಲ್ಲ ವರ್ಗದವರೂ ಕಲಿಯುತ್ತಿದ್ದಾರೆ ಎನ್ನುವಿರಾ?
ಹೌದು. ಸಂಸ್ಕೃತವನ್ನು ಎಲ್ಲ ವರ್ಗದವರೂ ಕಲಿಯುತ್ತಿದ್ದಾರೆ. ಕೇರಳದ ಕಾಲಡಿಯಲ್ಲಿರುವ ಸಂಸ್ಕೃತ ವಿಶ್ವವಿದ್ಯಾಲಯದ ಡೀನ್ ಆಗಿ ಕ್ರಿಶ್ಚಿಯನ್ ಸಮುದಾಯದವರಿದ್ದಾರೆ. ಅದಿಷ್ಟೇ ಅಲ್ಲ, ಈಗಲೂ ಮುಸ್ಲಿಂ, ಕ್ರಿಶ್ಚಿಯನ್, ದಲಿತ, ಹಿಂದುಳಿದ ವರ್ಗದವರು ಸಂಸ್ಕೃತದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಉದಾಹರಣೆಗಳಿವೆ. ಅದೆಲ್ಲ ಏಕೆ, ಸಂಸ್ಕೃತ ಕೇವಲ ಮೇಲ್ಜಾತಿಯವರಿಗೆ ಸೀಮಿತ ಎನ್ನುವುದಾದರೆ, ಭಾರತದ ಮಹಾಕಾವ್ಯಗಳಾಗಿ ರುವ ಮಹಾಭಾರತ, ರಾಮಾಯಣವನ್ನು ರಚಿಸಿರುವ ವ್ಯಾಸ ಹಾಗೂ ವಾಲ್ಮೀಕಿಯವರು ಯಾವ ಜಾತಿಗೆ ಸೇರಿದವರು? ಇದನ್ನು ನೋಡಿದಾಗ, ಪ್ರಾಚೀನ ಕಾಲದಿಂದಲೂ ಸಂಸ್ಕೃತವನ್ನು ಪ್ರತಿಯೊಬ್ಬರು ಅಭ್ಯಾಸ ಮಾಡುತ್ತಿದ್ದರು ಎನ್ನುವುದು ಸ್ಪಷ್ಟ. ಆದರೆ ಬ್ರಿಟಿಷರು ಬಂದ ಬಳಿಕ ಬದಲಾಗಿದೆ.

ವಿವಿಯಿಂದ ನಡೆಯುತ್ತಿರುವ ಸಂಶೋಧನೆಗಳೇನು?
2010ರಲ್ಲಿ ವಿಶ್ವವಿದ್ಯಾಲಯ ಆರಂಭವಾದರೂ ಕಳೆದ ಐದು ವರ್ಷಗಳಿಂದ ಸಂಸ್ಕೃತ ವಿವಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 40ಕ್ಕೂ ಹೆಚ್ಚು ಮಂದಿ ಡಾಕ್ಟರೇಟ್ ಹಾಗೂ ಅನೇಕರು ಡಿ.ಲಿಟ್ ಗೌರವವನ್ನು ಪಡೆದಿದ್ದಾರೆ. ಇದಿಷ್ಟೇ ಅಲ್ಲದೇ, ವಿಶ್ವವಿದ್ಯಾಲಯದಲ್ಲಿರುವ ಹಲವು
ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಂಸ್ಕೃತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು ನಡೆಸುವ ಸಂಶೋಧನೆಗಳಲ್ಲಿ, ಕೇವಲ
ಸಂಸ್ಕೃತದ ಸಂಶೋಧನೆ ಯಾಗದೇ ಭಾರತದ ಪರಂಪರೆಯ ಸಂಶೋಧನೆಗೆ ಸಹಾಯವಾಗುತ್ತದೆ.

ಪರಕೀಯ ಆಂಗ್ಲ ಭಾಷೆಯ ಮೂಲಕ ಭಾಷೆಯನ್ನು ಹಾಳು ಮಾಡುವ ಬದಲು, ನಮ್ಮದೇಯಾಗಿರುವ ಸಂಸ್ಕೃತ ಭಾಷೆಯ ಮೂಲಕ ಭಾಷೆಯ ಸಂಪತ್ತನ್ನು ಹೆಚ್ಚಿಸಬೇಕು. ಈ ವಿಷಯದಲ್ಲಿ ಅನಗತ್ಯ ವಿವಾದ ಮಾಡುವುದು ಸರಿಯಲ್ಲ.

ಸಂಸ್ಕೃತ ಜನನಿಯ ರೀತಿ. ಭಾರತದ ಭಾಷೆಗಳಿಗೆ ಸಂಸ್ಕೃತ ಮಾತೃಸ್ಥಾನದಲ್ಲಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಸಂಸ್ಕೃತ ಪ್ರಭಾವ ಹೆಚ್ಚಾಗಿಯೇ ಇದೆ. ಆದ್ದರಿಂದ ಸಂಸ್ಕೃತದ ಸಂಶೋಧನೆಯ ಮೂಲಕ, ಇತರ ಭಾಷೆ ಗಳನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಸಂಸ್ಕೃತವಿಲ್ಲದೇ, ಹಳೆಗನ್ನಡ, ಹಳೆ ತೆಲುಗು, ತಮಿಳು ಭಾಷೆ ಅಧ್ಯಯನ ಸಾಧ್ಯವಿಲ್ಲ ಎಂದರೆ ತಪ್ಪಿಲ್ಲ.

***

ಸಂಸ್ಕೃತ ಕೆಲವೇ ಕೆಲವು ಜನ ಮಾತೃಭಾಷೆ ಎನ್ನುವ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ಆದರೆ ಸಂಸ್ಕೃತ ಓದು, ಅಭ್ಯಾಸ ಮಾಡುತ್ತಿರುವ
ಅನೇಕರು ಕನ್ನಡ ಅಥವಾ ಅವರ ರಾಜ್ಯ ಭಾಷೆಯನ್ನು ಮಾತೃಭಾಷೆಯನ್ನಾಗಿ ನಮೂದಿಸುತ್ತಾರೆ. ಸಂಖ್ಯೆ ಕಡಿತವಾಗಲು ಇದು ಕಾರಣ.

– ಪ್ರೊ. ಕೆ.ಇ. ದೇವನಾಥನ್ ಕುಲಪತಿ ಕರ್ನಾಟಕ
ಸಂಸ್ಕೃತ ವಿಶ್ವವಿದ್ಯಾಲಯ

error: Content is protected !!