Friday, 20th September 2024

ಭಾರತೀಯ ಕೃತಿಗಳ ಪ್ರದರ್ಶನಕ್ಕೆ ಸರಕಾರ ಕೈ ಜೋಡಿಸಲಿ

ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ವಿಶ್ವವಾಣಿ – ವಿಶ್ವೇಶ್ವರ ಭಟ್

ವಿಶ್ವದ ಅತಿ ಬೃಹತ್ ಪುಸ್ತಕೋದ್ಯಮದ ಸಂಗಮ ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಹಿಂದಿ ಹೊರತುಪಡಿಸಿ ಭಾರತದ ಭಾಷೆಗಳ ಯಾವ ಪ್ರಕಾಶಕರೂ ಭಾಗವಹಿಸಿಲ್ಲ ಇಡೀ ಮಳಿಗೆ ಆವರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರಗಳನ್ನೊಳಗೊಂಡ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಕೃತಿ

ಫ್ರಾಂಕ್ ಫರ್ಟ್ (ಜರ್ಮನಿ): ವಿಶ್ವದ ಅತಿ ಬೃಹತ್ ಪುಸ್ತಕೋದ್ಯಮದ ಸಂಗಮ ಎಂದು ಕರೆಯಿಸಿಕೊಂಡಿರುವ ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಭಾರತದ ಪ್ರಮುಖ ನಲವತ್ತು ಪ್ರಕಾಶನ ಸಂಸ್ಥೆಗಳು ಪಾಲ್ಗೊಂಡಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಬ್ಲಿಕೇಷನ್ ಡಿವಿಷನ್‌ನ ಪುಸ್ತಕದ ಮಳಿಗೆಗಳು ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿವೆ. ಭಾರತ ಸರಕಾರದ ಅಂಗಸಂಸ್ಥೆಯಾಗಿರುವ ಪಬ್ಲಿಕೇಷನ್ ಡಿವಿಷನ್ ತನ್ನ ಇನ್ನೂರಕ್ಕೂ ಹೆಚ್ಚು
ಪ್ರಕಟಣೆಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರಗಳನ್ನೊಳಗೊಂಡ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ
ವಿಶ್ವಾಸ್’ ಕೃತಿ ಇಡೀ ಮಳಿಗೆಯನ್ನು ಆವರಿಸಿದೆ.

‘ಪುಸ್ತಕ ಓದುದಕ್ಕಿಂತ ಮಿಗಿಲಾದ ಸಂತೋಷವಿಲ್ಲ, ಜ್ಞಾನ ಸಂಪಾದಿಸು ವುದಕ್ಕಿಂತ ಮಿಗಿಲಾದ ಶಕ್ತಿ ಇಲ್ಲ’ ಎಂಬ ಮೋದಿಯವರ ಹೇಳಿಕೆ ಭಾರತದ ಮಳಿಗೆಯಿರುವ ಜಾಗ ದಲ್ಲಿ ಪ್ರಧಾನವಾಗಿ ಗೋಚರಿಸುತ್ತಿದೆ. ಭಾರತದ ಈ ಮಳಿಗೆಗಳು ಆರಂಭವಾಗುವ ಪ್ರದೇಶದಲ್ಲಿ ಫಲಕವನ್ನು ದೊಡ್ಡದಾಗಿ ‘ಭಾರತ-ಇಂಡಿಯಾ’ ಎಂದು ಬರೆಯಲಾಗಿದೆ. ರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಭವನದ ಕುರಿತು ಹೊರತಂದಿರುವ ಕಾಫಿ ಟೇಬಲ್ ಪುಸ್ತಕ ಪ್ರದರ್ಶನ ಪುಸ್ತಕ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

ಹಿಂದಿಯನ್ನು ಹೊರತುಪಡಿಸಿ ಭಾರತದ ಭಾಷೆಗಳ ಯಾವ ಪ್ರಕಾಶಕರೂ ಈ ಪುಸ್ತಕದ ಮೇಳದಲ್ಲಿ ಭಾಗವಹಿಸಿಲ್ಲ. ಹಿಂದಿಯ ಮೂರು ಪ್ರಕಾಶಕರನ್ನು
ಬಿಟ್ಟರೆ, ದಕ್ಷಿಣ ಭಾರತದಿಂದ ಚೆನ್ನೈ ಪಬ್ಲಿಶಿಂಗ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಮಾತ್ರ ಪಾಲ್ಗೊಂಡಿದೆ. ಕಳೆದ ಬಾರಿ ಮಕ್ಕಳ ಪುಸ್ತಕಗಳನ್ನು
ಪ್ರಕಾಶಿಸುವ ಹತ್ತಕ್ಕೂ ಹೆಚ್ಚು ಭಾರತದ ಪ್ರಕಾಶಕರು ಇದರಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಅವರಾರೂ ಪಾಲ್ಗೊಂಡಿಲ್ಲ.

ಭಾರತ ಸರಕಾರದ ಪ್ರಕಟಣೆಗಳು ವಸ್ತು-ವಿಷಯಗಳ ದೃಷ್ಟಿಯಿಂದ ಮೌಲಿಕವಾದರೂ, ಪ್ರಚಾರ ಮತ್ತು ಮಾರಾಟದಲ್ಲಿ ಸೋತಿರುವುದು ಎದ್ದು
ಕಾಣುತ್ತಿದೆ. ನ್ಯಾಷನಲ್ ಬುಕ್ ಟ್ರಸ್ಟಿನ ಮಳಿಗೆ ‘ಬಿಕೋ’ ಎನ್ನುವಷ್ಟು ಬಡವಾಗಿರುವುದು ಕಂಡು ಬಂದಿತು. ಕೃತಿ ಸ್ವಾಮ್ಯ ಮಾರಾಟ, ವಿದೇಶಿ ಮಾರಾಟ ಒಪ್ಪಂದ, ಅನುವಾದ ಒಡಂಬಡಿಕೆಯಂಥ ಯಾವ ಚಟುವಟಿಕೆಗಳೂ ಭಾರತದ ಮಳಿಗೆಗಳತ್ತ ಹೆಚ್ಚಾಗಿ ಕಂಡು ಬರಲಿಲ್ಲ.

ದೇಶದ ಪ್ರಮುಖ ಮತ್ತು ಪ್ರತಿಷ್ಠಿತ ೨೫ ಪ್ರಕಾಶಕರು ಅಥವಾ ಎಲ್ಲ ಭಾರತೀಯ ಭಾಷೆಗಳ ಪ್ರಮುಖ ಎರಡು ಪ್ರಕಾಶನ ಸಂಸ್ಥೆಗಳನ್ನು ಆಯ್ಕೆ ಮಾಡಿ, ಈ ಪುಸ್ತಕ ಮೇಳಕ್ಕೆ ಭಾರತ ಸರಕಾರ ಕಳುಹಿಸಿಕೊಡಬೇಕು. ಇಲ್ಲವೇ ಆಯಾ ರಾಜ್ಯ ಸರಕಾರಗಳು ತಮ್ಮ ಭಾಷೆಯ ಐದು ಪ್ರಕಾಶಕರ ಪ್ರಕಟಣೆಗಳನ್ನು ಕಳುಹಿಸಬೇಕು.

ಕೇವಲ ಮೂರೂವರೆ ಲಕ್ಷ ಜನಸಂಖ್ಯೆಯಿರುವ ಐಸ್ಲ್ಯಾಂಡಿನಂಥ ದೇಶ ಈ ಪುಸ್ತಕ ಮೇಳದಲ್ಲಿ ಭಾಗವಹಿಸಿದೆ. ಹೀಗಿರುವಾಗ ಒಂದೊಂದು ರಾಜ್ಯ ಸರಕಾರವೂ ಈ ಮೇಳಕ್ಕೆ ತಮ್ಮ ಭಾಷೆಯ ಆಯ್ದ ಪ್ರಕಾಶನ ಸಂಸ್ಥೆಯ ಮಳಿಗೆಗಳನ್ನು ಸ್ಥಾಪಿಸಲು ನೆರವಾಗಬೇಕು. ಪೋರ್ಚುಗಲ, ಸ್ಪೇನ್, ಫಿನ್‌ಲ್ಯಾಂಡ್, ಎಸ್ತೋನಿಯ ಮುಂತಾದ ದೇಶಗಳು ಖಾಸಗಿ ಪ್ರಕಾಶಕರನ್ನು ಕಳುಹಿಸಿಕೊಟ್ಟಿವೆ ಎಂಬ ಅಭಿಪ್ರಾಯ ಭಾರತೀಯ ಪ್ರಕಾಶಕರಿಂದ
ವ್ಯಕ್ತವಾಯಿತು.

ಸ್ಲೊವೇನಿಯಾದ ಜನಸಂಖ್ಯೆ ಕೇವಲ ಇಪ್ಪತ್ತು ಲಕ್ಷ. ಆದರೆ ಈ ವರ್ಷ ಅದು ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ‘ಗೌರವ ಅತಿಥಿ’ ಸ್ಥಾನಕ್ಕೆ ಪಾತ್ರ ವಾಗಿದೆ. ಸ್ಲೊವೇನಿಯಾದಲ್ಲಿ ವರ್ಷಕ್ಕೆ ಬರೀ ಎರಡು ಸಾವಿರ ಪುಸ್ತಕಗಳು ಪ್ರಕಟಣೆ ಕಾಣುತ್ತವೆ. ಆದರೆ, ಉದಾಹರಣೆಗೆ, ಕರ್ನಾಟಕದಂಥ ರಾಜ್ಯದಲ್ಲಿ ಐದು ಸಾವಿರಕ್ಕೂ ಅಧಿಕ ಪುಸ್ತಕ ವರ್ಷಕ್ಕೆ ಪ್ರಕಟವಾಗುತ್ತವೆ. ಹೀಗಿರುವಾಗ ಭಾರತೀಯ ಭಾಷೆಗಳ ಪ್ರಕಾಶನ ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ವೇದಿಕೆಗಳಲ್ಲಿ ಭಾಗವಹಿಸುವಂತಾಗಬೇಕು. ಇಂಥ ಮೇಳಗಳಲ್ಲಿ ಭಾರತದ ಭಾಷಾ ಪುಸ್ತಕಗಳ ಅನುವಾದ ಹಕ್ಕು ಮಾರಾಟಗಳನ್ನೂ ಮಾರಾಟ ಮಾಡಲು ಅವಕಾಶ ಸಿಗುತ್ತದೆ ಎಂಬ ಅಭಿಪ್ರಾಯವೂ ಭಾರತದ ಪ್ರಕಾಶಕರಿಂದ ಮೂಡಿ ಬಂದಿತು.

ಸಣ್ಣ ಸಣ್ಣ ದೇಶಗಳು ಇಂದು ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಸಕ್ರಿಯ ಪಾತ್ರವಹಿಸುತ್ತಾ ಅಂತಾರಾಷ್ಟ್ರೀಯ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿವೆ. ಇದರಿಂದ ಇಡೀ ಪ್ರಪಂಚ, ಆ ದೇಶ ಮತ್ತು ಭಾಷೆಗಳ ಕೃತಿಗಳತ್ತ ನೋಡುವಂತಾಗಿದೆ. ಅರಬ್ ದೇಶಗಳು, ಆಫ್ರಿಕಾ ಮತ್ತು ಮೆಕ್ಸಿಕೋದ ಅನೇಕ ದೇಶಗಳು ಇಂದು ಅಂತಾರಾಷ್ಟ್ರೀಯ ಸಾಹಿತ್ಯ ವೇದಿಕೆಯ ಮುಂಚೂಣಿಗೆ ಬರಲು ಈ ವೇದಿಕೆ ಸಹಾಯಕವಾಗಿದೆ. ಭಾರತದ ಭಾಷಾ ಪ್ರಕಾಶನಗಳು ಈ ಅವಕಾಶ ವನ್ನು ತಪ್ಪಿಸಿಕೊಳ್ಳಬಾರದು. ಇದಕ್ಕೆ  ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಜೋಡಿಸಬೇಕು ಎಂದು ಭಾರತೀಯ ಪ್ರಕಾಶಕರು ಒತ್ತಾಯಿಸಿದರು.

ಭಾರತ ಮೂಲದ ಆಯುರ್ವೇದ, ಯೋಗ, ವೇದ, ಪುರಾಣ, ಭಗವದ್ಗೀತೆಗೆ ಸಂಬಂಧಿಸಿದ ಪುಸ್ತಕಗಳು ಇಂದು ನಲವತ್ತಕ್ಕೂ ಹೆಚ್ಚು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿವೆ. ಆ ಕೃತಿಗಳು ಮೇಳದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ. ಭಗವದ್ಗೀತೆಯ ಆಶಯಗಳನ್ನು ಬೇರೆ ಬೇರೆ ರೂಪದಲ್ಲಿ ವ್ಯಾಖ್ಯಾನಿ ಸುವ ಕೃತಿಗಳೂ ಹೊರ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಭಾಷೆಗಳ ಕೃತಿಗಳು ಇಂಥ ಬೃಹತ್ ವೇದಿಕೆಗಳಲ್ಲಿ ಪ್ರದರ್ಶನ ಕಂಡು ಅವಕಾಶಗಿಟ್ಟಿಸಿ ಕೊಳ್ಳಬೇಕಾದ ಅಗತ್ಯವಿದೆ ಎಂಬ ಬಲವಾದ ಅಭಿಪ್ರಾಯ ವ್ಯಕ್ತವಾಯಿತು.

ಮಳಿಗೆ ವಿನ್ಯಾಸಕ್ಕೂ ಬಹುಮಾನ

ಈ ಸಲದ ಪುಸ್ತಕ ಮೇಳದಲ್ಲಿ ಮಳಿಗೆಗಳ ವಿನ್ಯಾಸಕ್ಕೂ ಪ್ರಶಸ್ತಿಗಳನ್ನು ನೀಡುತ್ತಿರುವುದು ವಿಶೇಷ. ಒಂದು ಪುಸ್ತಕ ಮಳಿಗೆ ಇದ್ದಂತೆ ಮತ್ತೊಂದಿಲ್ಲ. ಪ್ರತಿ
ಮಳಿಗೆಯೂ ವಿಭಿನ್ನ. ಕೆಲವೊಂದು ಮಳಿಗೆಯ ವಿನ್ಯಾಸ ಅತ್ಯಂತ ಆಕರ್ಷಕ. ಹಾಗೆಯೇ ಪುಸ್ತಕಗಳನ್ನುಜೋಡಿಸಿಡುವ ಕ್ರಮವೂ ಅಷ್ಟೇ ಮುಖ್ಯ. ಪುಸ್ತಕ ಮಾರಾಟಕ್ಕೆ ಮಳಿಗೆಯ ವಿನ್ಯಾಸ ಮತ್ತು ಕೃತಿ ಜೋಡಣಾ ಕ್ರಮ ಪ್ರಭಾವ ಬೀರುತ್ತದೆ. ಪುಸ್ತಕವನ್ನು ಬೇಕಾಬಿಟ್ಟಿ ಜೋಡಿಸಿದರೆ ಅದು ಪುಸ್ತಕ ಪ್ರಿಯರ ಗಮನ ಸೆಳೆಯದೇ ಹೋಗಬಹುದು.

ಓದುಗರ ಗಮನ ಸುಲಭವಾಗಿ ಪುಸ್ತಕದೆಡೆ ಹೋಗುವಂತೆ ಮಾಡುವುದು ಕೂಡ ಮಾರಾಟ ತಂತ್ರ. ಎಷ್ಟೋ ಪುಸ್ತಕಗಳು ಓದುಗರ ಗಮನ ಸೆಳೆಯಲು ಸೋಲಲು ಅವುಗಳನ್ನು ಪ್ರದರ್ಶನ ಮಾಡಿದ ರೀತಿಯೂ ಕಾರಣವಾಗಿರಬಹುದು. ಈ ಕಾರಣದಿಂದ ಮಳಿಗೆಯ ರಚನೆ ಮತ್ತು ಕೃತಿ ಜೋಡಣಾ ವಿಧಾನ ಪ್ರಧಾನ ಪಾತ್ರ ವಹಿಸುತ್ತವೆ. ಕೆಲವು ಮಳಿಗೆಗಳು ಅವುಗಳ ರಚನೆಯಿಂದಾಗಿಯೇ ಪುಸ್ತಕಪ್ರಿಯರಿಂದ ತುಂಬಿರುತ್ತವೆ. ಪುಸ್ತಕ ಮಾರಾಟಗಾರರು ಪುಸ್ತಕ ಗಳ ಪ್ರದರ್ಶನ (Display) ಕ್ಕೆ ಹೆಚ್ಚು ಗಮನ ನೀಡಬೇಕು, ಓದುಗರು ಪುಸ್ತಕಗಳನ್ನು ಜೋಡಿಸಿಟ್ಟ ಕ್ರಮವನ್ನು ನೋಡಿಯೇ ಪುಸ್ತಕವನ್ನು ಕೈಗೆತ್ತಿಕೊಳ್ಳ ಬೇಕು ಎಂಬ ಕಾರಣದಿಂದ ಈ ಪ್ರವರ್ಗದಲ್ಲಿ ಬಹುಮಾನವನ್ನು ನೀಡಲು ಆರಂಭಿಸಿದ್ದೇವೆ ಎಂದು ಮೇಳದ ಸಂಘಟಕರ ಅಂಬೋಣ.

ಪುಸ್ತಕ ಮೇಳದಲ್ಲಿ ಡಾ.ಭೈರಪ್ಪ ಕೃತಿ

ಈ ಸಲದ ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಕರ್ನಾಟಕದ ಯಾವ ಪ್ರಕಾಶಕರೂ ಭಾಗವಹಿಸದೇ ಇರಬಹುದು, ಆದರೆ ಕನ್ನಡದ ಅಗ್ರಗಣ್ಯ ಕಾದಂಬರಿ ಕಾರ, ಚಿಂತಕ ಡಾ.ಎಸ್.ಎಲ. ಭೈರಪ್ಪ ಅವರ ಕೃತಿಗಳು ಪ್ರದರ್ಶನ ಕಂಡಿದ್ದು ವಿಶೇಷ. ಡಾ.ಭೈರಪ್ಪನವರ ‘ದಾಟು’ ಮತ್ತು ‘ಪರ್ವ’ ಕೃತಿಗಳ ಇಂಗ್ಲಿಷ್ ಅನುವಾದದ ಕೃತಿಗಳು ಅಂತಾರಾಷ್ಟ್ರೀಯ ಸಾಹಿತ್ಯಾ ಸಕ್ತರ ಗಮನ ಸೆಳೆಯುತ್ತಿವೆ.

ಇಂಗ್ಲಿಷ್ ಜತೆಗೆ, ಅನ್ಯ ವಿದೇಶಿ ಭಾಷೆಗಳಿಗೆ ಅನುವಾದವಾದ ಕನ್ನಡದ ಲೇಖಕರ ಪೈಕಿ ಡಾ.ಭೈರಪ್ಪನವರೇ ಅಗ್ರಗಣ್ಯರು. ಫ್ರೆಂಚ್, ರಷ್ಯನ್, ಅರಬ್ ಭಾಷೆಗಳಿಗೂ ಅವರ ಕೃತಿಗಳು ಅನುವಾದವಾಗಿವೆ. ಹೀಗಾಗಿ ಭಾರತದ ಲೇಖಕರಲ್ಲಿ ಡಾ.ಭೈರಪ್ಪನವರಿಗೆ ವಿಶೇಷ ಸ್ಥಾನಮಾನ. ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲೂ ವಿದೇಶಿ ಅಕ್ಷರಪ್ರೇಮಿಗಳು ಅವರ ಕೃತಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಡಾ. ಭೈರಪ್ಪನವರ ಓದುಗ ವಲಯ ಎಂಥದ್ದು ಎಂಬುದನ್ನು ತೋರಿಸುತ್ತದೆ.