Wednesday, 11th December 2024

ಅದು ಮೊದಲ ಎಚ್ಚರಿಕೆ, ಕಣಿವೆ ಬಿಟ್ಟುಬಿಡಿ…

ಸಂತೋಷಕುಮಾರ ಮೆಹೆಂದಳೆ

ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ

ಹಿಂದುಗಳ ಮೇಲೆ ನೇರ ದಾಳಿ ಮಾಡುವ ಮೊದಲು ಮಾನಸಿಕವಾಗಿ ಕುಗ್ಗಿಸುವ ಉದ್ದೇಶದಿಂದ ಹಿಂದೂ ದೇವಾಲಯವನ್ನು ನೇರ ಉರುಳಿಸದಿದ್ದರೂ, ತೀರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಪ್ರಚೋದಿಸಿ ಅಭದ್ರತೆಯನ್ನೂ ಮೂಡಿಸುವ ನಿಟ್ಟಿನಲ್ಲಿ 1986ರಲ್ಲಿ ಅತ್ಯಂತ ಪುರಾತನ ಹಿಂದು ಮಂದಿರದ ಆವರಣದಲ್ಲೆ ಮಸೀದಿಯನ್ನು ನಿರ್ಮಿಸಿ ಅದರ ಪ್ರಾಂಗಣದಲ್ಲೆ ನಮಾಜ್ ಮಾಡಿ ಎಂದು ಅವಕಾಶ ಒದಗಿಸಿ ಕೊಟ್ಟುಬಿಟ್ಟ.

ಯಾವ ಲೆಕ್ಕದಲ್ಲೂ ಒಪ್ಪಲಾಗದ ಧಾರ್ಮಿಕ ದಾಳಿ ಇದಾಗಿತ್ತು. ಅದೊಂದು ಬೇಡದ ಕಾರಣಕ್ಕೆ ಕಣಿವೆ ಖದರ್ರೇ ಬದಲಾಗಿತ್ತು. ಆದರೆ ಯಾರೆಲ್ಲ ಎಲ್ಲಿ ಪ್ರಬಲರಾಗಿದ್ದರೋ ಅಲ್ಲಲ್ಲೇ ತೀವ್ರ ವಿರೋಧ ಮತ್ತು ಪ್ರಚೋದನೆಯನ್ನು ಈ ಧಾರ್ಮಿಕ ದಾದಾಗಿರಿ ಯನ್ನು ಖಂಡಿಸಿದರು. ದೊಡ್ಡ ಹೊಡೆದಾಟಗಳೇ ಜರುಗಿ ಸಾಲು ಸಾಲಾಗಿ ಹೆಣಗಳು ಬಿದ್ದವು.

ಎಲ್ಲೆಲ್ಲೂ ಕಂಡವರನ್ನೆಲ್ಲ ಬಡಿ, ಕೊಲ್ಲು ಎಂದು ತಿರುಗುವಾಗ ದೊಡ್ಡ ಮಟ್ಟದಲ್ಲಿ ಜಮೆಯಾದ ಹಿಂದುಗಳು ಜಮ್ಮುವಿನಲ್ಲಿ ದೇವಸ್ಥಾನದ ವಿಷಯವಾಗಿ ಮೆರವಣಿಗೆ ಹೊರಡಿಸಿದರು. ಆದರೆ ಆ ಬಲ ಶ್ರೀನಗರದಲ್ಲಿ ಇರಲಿಲ್ಲ. ಕಂಡು ಕೇಳರಿಯದ ಮೆರವಣಿಗೆಯಿಂದ ಒಳಗೊಳಗೆ ಉಗ್ರರಿಗೆ ಈ ಒಗ್ಗಟ್ಟು ನುಂಗಲಾರದ ತುತ್ತಾಗಿಬಿಟ್ಟಿತು. ಕಾಶ್ಮೀರ ಹಿಮದಲ್ಲಿ ಮಂಜು, ನಂಜು ಮತ್ತು ಸೇಡು ಎರಡೂ ಹರಿಯತೊಡಗಿತ್ತು. ಹಲವು ರೀತಿಯಲ್ಲಿ ಹಿಂಸೆ ಹಬ್ಬಿತ್ತು. ಆಯಾ ಬಾಹುಳ್ಯ ಇರುವ ಪ್ರದೇಶಗಳು ಪ್ರಕ್ಷುಬ್ಧವಾಗಿದ್ದವು. ಎರಡೂ ಕಡೆಯಲ್ಲೂ ಹೊಡೆದಾಟಗಳಾಗಿದ್ದವಲ್ಲ.

ಅದನ್ನೇ ಮತಾಂಧರು ‘ಇಸ್ಲಾಂ ಅಪಾಯದಲ್ಲಿದೆ’ ಘೋಷಣೆಯ ಮೂಲಕ ತಮಗೆ ಅನುಕೂಲಕರವಾಗಿ ತಿರುಗಿಸಿಕೊಂಡು ಬಿಟ್ಟರು. ಅಮೇಧ್ಯ ತಿಂದ ಮಾಧ್ಯಮಗಳು ಇದನ್ನು ಹೌದು ಹೌದೆನ್ನುತ್ತಾ ಅವರ ಪರವಾಗಿ ಜಾಗತಿಕವಾಗಿ ಪ್ರಚುರಪಡಿಸಿದವು. ಇದು ಮತ್ತೊಂದು ಸುತ್ತಿನ ತ್ವೇಷಕ್ಕೆ ಕಾರಣವಾಯಿತು. ಎಲ್ಲೆಲ್ಲಿ ಕಶ್ಮೀರಿ ಹಿಂದುಗಳು ಕಾಣಿಸುತ್ತಾರೋ ಕೊಂದು ಬಿಡಿ ಎಂದು ಕಶ್ಮೀರಿ ಮೂಲಭೂತವಾದಿಗಳನ್ನು ಅಂತಿಮ ನಿರ್ಧಾರಕ್ಕೆ ಒಯ್ದು ನಿಲ್ಲಿಸಿದ ಟರ್ನಿಂಗ್ ಪಾಯಿಂಟ್ ಇದು.

ತೀರ ದಕ್ಷಿಣ ಕಾಶ್ಮೀರದ ಸ-ರಾ, ಅನಂತನಾಗ್ ಜಿಲ್ಲೆಯ ಸಲಾರ್, ಫತೇಪುರ್, ಲುಖ್ಭಾವನ್, ವಾನೋರಾಗಳಲ್ಲಿ ದೇವಸ್ಥಾನಗಳು ಪುಡಿಗೈಯ್ಯಲ್ಪಟವು. ಫೆಬ್ರುವರಿ 1986ರಲ್ಲಿ ಅನಂತನಾಗ್ ಜಿಲ್ಲೆಯಲ್ಲಿ ನಡೆದ ದಳ್ಳುರಿಯಲ್ಲಿ ಹಿಂದುಗಳ ಮೇಲೆ ನೇರ ದಾಳಿ ಆಗದಿದ್ದರೂ ಲೆಕ್ಕ ತಪ್ಪುವಷ್ಟು ದೇವಸ್ಥಾನಗಳು ಆಸ್ತಿ, ಪಾಸ್ತಿಗಳನ್ನು ಲೂಟಿ ಮಾಡಲಾಯಿತು. ಕಾರಣ ಇಂಥಾ ಮೂಲ ಆಧಾರ ಗಳನ್ನು ನಾಶ ಮಾಡದೆ ಇವರನ್ನು ನಿಯಂತ್ರಿಸುವುದು ಸಾಧ್ಯ ಇಲ್ಲ ಎನ್ನುವುದು ಮುಸ್ಲಿಂ ಮೂಲಭೂತವಾದಿಗಳ
ನಿಲುವಾ ಗಿತ್ತು.

ಇವೆಲ್ಲವನ್ನು ನಿರ್ವಹಿಸಿದ್ದು ಸಣ್ಣಪುಟ್ಟ ಪಾತಕ ಗುಂಪುಗಳ ನೆರವಿನೊಂದಿಗೆ. ಆದರೆ ಮುಖ್ಯವಾಗಿ ಕಣಿವೆ ಪೂರ್ತಿ ಹಿಡಿತಕ್ಕೆ ದಕ್ಕುವ ಸಂಪೂರ್ಣ ಯೋಜನೆ ಕಾರ್ಯಗತವಾಗದ ಬಗ್ಗೆ ಮತ್ತು ಹಿಡಿತಕ್ಕೆ ದಕ್ಕದ ಬಗ್ಗೆ ಸರಹದ್ದಿನಲ್ಲಿ ನಿಂತು ನಿರ್ದೇಶಿಸುತ್ತಿದ್ದ ಪಾಕಿಸ್ತಾನ ಒಳಗೊಳಗೆ ಅಸಹನೆಯಿಂದ ಕದಲತೊಡಗಿತ್ತು. ಜೊತೆಗೆ ಹೀಗೆ ಮಾಡುವುದರ ಮೂಲಕ ರಾಜಕೀಯವಾಗಿ ಹಿಡಿತ ಸಾಽಸಬೇಕೆನ್ನುವ ಗುಂಪುಗಳಿಗೆ ಬೇಕಾಗುವ ಜಾಗತಿಕ ಮೈಲೇಜು ಸಿಗುತ್ತದೆನ್ನುವ ಲೆಕ್ಕಾಚಾರ.

ಯಾವ ನಿಯಂತ್ರಣಕ್ಕೂ ದಕ್ಕದ ಕಾರಣ ಅನಿವಾರ್ಯವಾಗಿ ಭಾರತೀಯ ಮಿಲಿಟರಿ ರಂಗಕ್ಕಿಳಿಯಿತು. ನಾಲ್ಕೇ ತಾಸಿನಲ್ಲಿ
ಅನಂತನಾಗ್ ಜಿಲ್ಲೆ ಹಿಡಿತಕ್ಕೆ ಬಂದಿತ್ತು. ಕೇಂದ್ರ ಮಹಮ್ಮದ್ ಶಾ ಅಧಿಕಾರವನ್ನು ಕಿತ್ತುಕೊಂಡು ಮಾ.12,1986 ಗವರ್ನರ್ ಆಡಳಿತಕ್ಕೆ ಸೂಚಿಸಲಾಯಿತು. ರಾಜ್ಯ ಸರಕಾರವನ್ನು ವಜಾಗೊಳಿಸಿ ಕೇಂದ್ರಾಡಳಿತ ಜಾರಿಗೆ ಶಿಫಾರಸು ಮಾಡಿದ್ದೂ ಆಗಿನ
ಗವರ್ನರ್ ರಾಜ್ಯಪಾಲ ಜಗಮೋಹನ್.

ಆ ಹೊತ್ತಿಗಾಗಲೇ ಇಂದಿರೆ ದಿಲ್ಲಿಯಲ್ಲಿ (31. ಅಕ್ಟೊಬರ್ 1984) ಖಲಿಸ್ತಾನಿಗಳ ಗುಂಡಿಗೆ ಬಲಿಯಾಗಿ, ರಾಜೀವ ಕುರ್ಚಿಯಲ್ಲಿ ಕೂತಿದ್ದ. ಅಪರ ಗುಲಾಮಿ ಮನಸ್ಥಿತಿಯ ಪಕ್ಷ ಅವನ ಪಾದಕ್ಕೆರಗಿಬಿಟ್ಟಿತ್ತು. ಆಗಿನ್ನು ವಿಮಾನ ಪೈಲಟ್ ಸೀಟಿನಿಂದಿಳಿದು
ಬಂದ -ಶ್ -ಸಿನ ನಿಗಿನಿಗಿ ರಾಜೀವಗಾಂಧಿ ತಡ ಮಾಡದೆ ಜಗಮೋಹನ್‌ರ ಶಿಫಾರಸ್ಸನ್ನು ಜಾರಿಗೆ ತಂದಿದ್ದ. ಕಾರಣ ರಾಜಕಾರಣ ಕ್ಕಿಂತ ಅಭಿವೃದ್ಧಿ ಮತ್ತು ಹೊಸ ದೃಷ್ಟಿಕೋನದ ರಾಜೀವ್‌ಗೆ, ಮೊದಲು ನಿಯಂತ್ರಣ ಮತ್ತು ಶಿಸ್ತು ಬೇಕೆನ್ನುವುದು
ಸಹಜವಾಗಿತ್ತೇನೋ.

ಕಾರಣ ಅವನ ವೃತ್ತಿಪರ ಹಿನ್ನೆಲೆಯೂ ಇದ್ದಿರಬಹುದು. ಇದರಿಂದಾಗಿ ಆದ ಫಾಯಿದೆ ಏನೆಂದರೆ ದಿಲ್ಲಿಯಲ್ಲಿರುವ ಹಿಂದೂ ಸರಕಾರ ವರ್ಸಸ್ ಕಾಶ್ಮೀರ ಸರಕಾರ ಎಂಬ ಹೊಸ ವ್ಯಾಖ್ಯಾನ ಉತ್ಪನ್ನವಾಯಿತೆ ಹೊರತು ಬೇರೇನಲ್ಲ. ದಿಲ್ಲಿ ಸರಕಾರ ಕಶ್ಮೀರಿ ಗಳ ಹಿತಾಸಕ್ತಿಗೆ ಕೆಲಸ ಮಾಡುವುದಿಲ್ಲ. ಏನಿದ್ದರೂ ಅದು ಬಹುಸಂಖ್ಯಾತರೊಂದಿಗೆ ಇದೆ ಎನ್ನುವ ನಿಲುವನ್ನು ಬಿತ್ತುವುದರಲ್ಲಿ ಜಮಾತ್ ಯಶಸ್ವಿಯಾಯಿತು. ಅದರ ಜತೆಗೆ ಕಾಶ್ಮೀರ ಕಣಿವೆಯಲ್ಲಿ ‘ಮುಸ್ಲಿಂ ಯುನೈಟೇಡ್ ಫ್ರಂಟ್’ ಎಂಬ ಎಲ್ಲ ಮೂಲಭೂತ ವಾದಿಗಳ ಪಕ್ಷವೊಂದು ಅಧಿಕಾರಕ್ಕೆ ಬರುವುದರೊಂದಿಗೆ ಪ್ರಣಾಳಿಕೆಯಾಗಿ ಬರಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿ ಕೇಂದ್ರ ಸರಕಾರದ ಎಲ್ಲ ಹಿಡಿತದಿಂದ ಕಾಶ್ಮೀರ ವ್ಯವಸ್ಥೆಯನ್ನು ಸ್ವಂತತ್ರಗೊಳಿಸುವುದು ಅದರ ಮೊದಲ ಅಜೆಂಡಾ ಆಗಿ ರೂಪ ಗೊಂಡಿತು.

ಕಣಿವೆಯಲ್ಲಿ ಲೆಕ್ಕ ತಪ್ಪಿ ಚುನಾವಣಾ ತಯಾರಿ ನಡೆಯುತ್ತಿದ್ದರೆ, ಇತ್ತ ಭಯೋತ್ಪಾದಕರು ಭಾರತದ ಪರವಾಗಿ ಮಾತಾಡಿದವ ರನ್ನು ಹುಡುಕಿ ಹುಡುಕಿ ಕೊಲ್ಲತೊಡಗಿದವು. ಜಗಮೋಹನ್ ನಡೆಯುತ್ತಿದ್ದ ಕಾಲ ಮುಗಿದು 1987 ರ ಚುನಾವಣೆ ಇನ್ನೇನು ಕಣಿವೆಗೆ ಕಾಲಿಡಲಿತ್ತು. ಕಣಿವೆಗೆ ರಾಜ್ಯಪಾಲರ ಆಡಳಿತ ಎನ್ನುವುದೇ ಅತಿ ದೊಡ್ಡ ಅಪರಾಧ ಎಂಬಂತೆ ನೋಡಲಾಗುತ್ತಿತ್ತು. ಬರಲಿರುವ ಚುನಾವಣೆಯಲ್ಲಿ ಗೆದ್ದು “ನಿಜಾಂ ಈ ಮುಸ್ತಾ-” ಷರಿಯಾ ಕಾನೂನು ತರುವುದು ಮತ್ತು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಪಾಕಿಸ್ತಾನದ ಜತೆಗೆ ವಿಲೀನಗೊಳಿಸುವ ವಿಪರೀತತೆಗೆ ಇದು ಬುನಾದಿಯಾಗಲಿತ್ತು.

ಸಂಪೂರ್ಣ ಕಾಶ್ಮೀರ ಸ್ವಾಯತ್ತತೆ ಎನ್ನುವುದು ಆಳುವ ಅಬ್ದುಲ್ ಪಕ್ಷದ ಹಂಬಲವಾಗಿದ್ದರೆ, ಪಾಕ್‌ನಲ್ಲಿ ಸಂಪೂರ್ಣ ವಿಲೀನ ಎನ್ನುವುದು ಉಗ್ರರ ಗುರಿಯಾಗಿತ್ತು. ಅದಕ್ಕಾಗಿ ಅದು ನೇರವಾಗಿ ಅಖಾಡಕ್ಕೆ ಇಳಿಯದಿದ್ದರೂ ಕೇಂದ್ರದ ವಿರುದ್ಧ ತಿರುಗಿ ಬಿದ್ದಿದ್ದ ಫಾರೂಕ್ ಅಬ್ದುಲ್ಲಗೆ ಬೆಂಬಲಿಸಿದವು. ಇದರಿಂದ ಸಂಪೂರ್ಣ ಕಣಿವೆಯ ಹಿಡಿತ ಏರುಪೇರಾಗಿತ್ತು. ಅದರ ಪರಿಣಾಮ ಮತ್ತು ಒತ್ತಾಸೆಗೆ ಅನುಗುಣವಾಗಿ ಮಾ. ೧೯೮೮ರಲ್ಲಿ ಮೊದಲ ದಂಗೆಯನ್ನು ಸೃಷ್ಟಿಸಲಾಯಿತು.

ಅದಕ್ಕೂ ಮೊದಲೇ ಕಾಶ್ಮೀರ ಜೈಲಿಗೆ ತಳ್ಳಲಾಗಿದ್ದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಜನ ಉಗ್ರಗಾಮಿಗಳನ್ನು ಸ್ಥಳೀಯ ಬೆಂಬಲ ಕ್ಕಾಗಿ ಮತ್ತು ಸಾಮರಸ್ಯ ಕಾಯ್ದುಕೊಳ್ಳುವ ನೆಪದಲ್ಲಿ ಅಧಿಕಾರಕ್ಕಾಗಿ ಬಿಡಿಸಿಬಿಟ್ಟರು ಎನ್ನುತ್ತದೆ ವರದಿಯೊಂದು.  ದಕ್ಕೆ ಅತಿ ದೊಡ್ಡ ಬೆಲೆ ತೆರಬೇಕಾಗಿ ಬಂತು. ಆ ಹೊತ್ತಿಗಾಗಲೇ ಭಾರತೀಯ ಜನತಾ ಪಾರ್ಟಿ ಮತ್ತು ಆರೆಸ್ಸ್ ಮೂಲದ ತೀರ ಕಟ್ಟರ್ ಹಿಂದು ಗಳು ಕಾಶ್ಮೀರ ಕಣಿವೆಗೆ ಕಾಲಿಟ್ಟು ಜಾಗೃತಿ ಮೂಡಿಸುತ್ತಾ ಕಣಿವೆಯಲ್ಲಿ ಹಿಂದುಗಳನ್ನು ಒಗ್ಗೂಡಿಸಿ ಪಕ್ಷಕ್ಕೆ ಬಲ ತುಂಬ ತೊಡಗಿದ್ದರು.

ವಿಪರೀತ ತ್ವೇಷಮಯ ಪರಿಸ್ಥಿತಿ ಉಂಟು ಮಾಡಲು ಸಾಮೂಹಿಕವಾಗಿ ದಂಗೆ ಮತ್ತು ಹತ್ಯಾಕಾಂಡದಂತಹ ಕ್ರಮ ಕೈಗೆತ್ತಿ ಕೊಳ್ಳಲು ಪ್ರತ್ಯೇಕತಾವಾದಿಗಳು ನಿರ್ಧರಿಸಿದ್ದೇ ಆ ಹೊತ್ತಿಗೆ. ಯಾವಾಗ ಇದಾವುದಕ್ಕೂ ಜಗ್ಗದೆ ಅದೇ ನಂಬಿಕೆ ಮತ್ತು ಭರವಸೆ ಎನ್ನುವ ಪದಕ್ಕೆ ಜೋತು ಬಿದ್ದು, ಇಂವ ನಮ್ಮವ ನಾವೆಲ್ಲ ಇಲ್ಲೆ ಇದ್ದವರು ಎಂದು ಕಾಶ್ಮೀರಿ ಪಂಡಿತರು ತಮ್ಮ ಪಾಡಿಗೆ ಅಕ್ಟೊಬರ್, ನವಂಬರ್ ಚಳಿಗಾಲದಲ್ಲಿ 1988-89 ರವರೆಗೂ ಚಟ್ಟಾಯಿ ಹಾಸಿಕೊಂಡು ಕೂತೇ ಇದ್ದರು ನೋಡಿ. ಒಂದಿನ ತೀರ ಮುಂಜಾನೆ ಮೈಕಿನಲ್ಲಿ ಎಚ್ಚರಿಕೆಯ ಕೂಗು ಹೊರಡತೊಡಗಿತ್ತು.

ನಿದ್ದೆಗಣ್ಣಲ್ಲಿ ಎದ್ದು ಏನಿದು ಎಂದುಕೊಳ್ಳುವಷ್ಟರಲ್ಲಿ ಶ್ರೀನಗರದ ಗಲ್ಲಿಗಲ್ಲಿಯಲ್ಲಿ ಬೆಳಗಿನ ಬಿಸಿ ಏರುವ ಮೊದಲೇ ಗುಂಡುಗಳು ಹಾರಾಟ ನಡೆಸಿ ದಂಡುಗಳು ನಡೆದುಹೋಗಿದ್ದವು. ಎಲ್ಲಿ ಕೇಳಿದರೂ ಒಂದೇ ಸಾಲು, ‘ಕಾಶ್ಮೀರ ಖಾಲಿ ಮಾಡಿ. ಇಲ್ಲದಿದ್ದರೆ ಹೆಂಡತಿಯರನ್ನೂ ಬಿಟ್ಟು ಹೊರಡಿ. ಬಹುಶ: ಆಗಲಾದರೂ ಎಚ್ಚೆತ್ತಿದ್ದರೆ ಪಂಡಿತರಲ್ಲಿ ಒಂದಷ್ಟು ಜನರಾದರೂ ಗಂಟು ಗದಡಿ ಎತ್ತಿಕೊಂಡು ಹೊರಡಬಹುದಿತ್ತೇನೋ. ಆದರೆ ಆಗಲೂ ಈ ಉಗ್ರ ಮೂಲಭೂತವಾದಿಗಳು ಯಾವ ಕಾರಣಕ್ಕೂ ನಂಬಿಕೆಗೆ ಅರ್ಹರೇ ಅಲ್ಲ ಎಂಬುವುದು ಹಿಂದೂಗಳ ಅರಿವಿಗೆ ಬರಲೇ ಇಲ್ಲ.

ಅದಾಗಿ ಎರಡುಮೂರು ದಿನದಲ್ಲೇ ಕರೆಂಟು ತೆಗೆಯಲಾಯಿತು. ನೀರಿನ ಸೇವೆ ನಿಂತು ಹೋಯಿತು. ನಗರದತ್ತ ಹೋಗಲೇ ಆಗದಂತೆ ರಸ್ತೆಗಳನ್ನು ಅಗೆದು ಹಾಕಲಾಗಿತ್ತು. ಟೆಲಿಫೋನ್‌ಗಳ ವೈರು ಕತ್ತರಿಸಿ ಚೆಲ್ಲಿ ಅದ್ಯಾವ ಕಾಲವಾಗಿತ್ತೋ. ಏನೆಂದರೆ
ಏನೂ ಹೊರಜಗತ್ತಿಗೆ ಲಭ್ಯವಾಗದಂತೆ ಸುತ್ತುವರೆದು ದ್ವೀಪವಾಗಿಸಿದರೂ ಅದ್ಯಾಕೋ ಕಾಶ್ಮೀರಿ ಪಂಡಿತರು ಕದಲಲೇ ಇಲ್ಲ. ಆವತ್ತು ರಾತ್ರಿ ಮೊದಲ ಬಾರಿಗೆ ಮನೆಗಳೆಲ್ಲ ಹಸಿರು ಬಣ್ಣಕ್ಕೆ ಬದಲಾಗಿದ್ದವು. ಆಗ ಬಂತು ನೋಡಿ ಮೊದಲನೇ ಘೋಷ..‘..
ಹಾತ್ ಮೇ ಕಲಾಶ್ನಿಕೋವ್.. ನಿಜಾಂ ಈ ಮುಸ್ತಾಪಾ.. ಎಂಬಲ್ಲಿಗೆ ಕಣಿವೆಯ ಕೊನೆಯ ದುರದೃಷ್ಟದ ಮೊಳೆ ಹೊಡೆದಾಗಿತ್ತು. ಪಂಡಿತರು ಪಿಗ್ಗಿ ಬಿದ್ದಿದ್ದರು. ಅದಕ್ಕೂ ಮೊದಲೇ ಕಣಿವೆಯ ಹಿಂದೂ ಹೆಂಗಸರು.

(ಮುಂದುವರೆಯುವುದು)