ಶೃಂಗೇರಿ, ಹೊರನಾಡು, ಕೊಪ್ಪ ಭಾಗದಲ್ಲಿ ಹೈಅಲರ್ಟ್
ಪ್ರಮುಖ ಸ್ಥಳಗಳಿಗೆ ನಕ್ಸಲ್ ನಿಗ್ರಹದಳದ ಅಧಿಕಾರಿಗಳ ಭೇಟಿ
ಬೆಂಗಳೂರು: ದಶಕಗಳ ಹಿಂದೆಯೇ ಕರ್ನಾಟಕದಲ್ಲಿ ನಶಿಸಿ ಹೋಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಮೊಳಕೆ ಹೊಡೆಯುತ್ತಿದೆಯೇ ಎನ್ನುವ ಅನುಮಾನ ಇದೀಗ ಮಲೆನಾಡಿನ ಜನರನ್ನು ಆತಂಕಕ್ಕೆ ದೂಡಿದೆ.
ಹೌದು, ದಶಕದ ಹಿಂದೆಯೇ ರಾಜ್ಯದಲ್ಲಿ ನಕ್ಸಲರ ದುಷ್ಕೃತ್ಯ ಬಹುತೇಕ ಸ್ಥಗಿತಗೊಂಡಿತ್ತು. ಶೃಂಗೇರಿ, ಕೊಪ್ಪ ಭಾಗದಲ್ಲಿಯೂ ಕೆಲ ವರ್ಷಗಳಿಂದ ಜನರು ನಿರ್ಭೀತಿಯಿಂದ ಒಡಾಡಿಕೊಂಡಿದ್ದರು. ಆದರೀಗ ಪುನಃ ನಕ್ಸಲ್ ಚಳವಳಿಯ ಆರಂಭದ ಮನ್ಸೂಚನೆ ಸಿಕ್ಕಿರುವುದು ಭಾರಿ ಆತಂಕ ಸೃಷ್ಟಿಸಿದೆ.
ಈ ಹಿಂದೆ ಶೃಂಗೇರಿ, ಹೊರನಾಡು, ಕೊಪ್ಪ, ಆಗುಂಬೆ ಭಾಗ ಸೇರಿದಂತೆ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ನಕ್ಸಲ್ ಉಗ್ರವಾದ ತೀವ್ರವಾಗಿತ್ತು. ಆದರೆ ಹಂತ-ಹಂತವಾಗಿ ನಕ್ಸಲ್‌ರನ್ನು ಕರ್ನಾಟಕದಿಂದ ನಿರ್ಮೂಲನೆ ಮಾಡುವಲ್ಲಿ ರಾಜ್ಯ ಪೊಲೀಸರು ಯಶಸ್ವಿಯಾಗಿದ್ದರು. ಆದರೀಗ ಮಲೆನಾಡು ಭಾಗದಲ್ಲಿ ಮತ್ತೆ ಚಳವಳಿಗೆ ಚಾಲನೆ ನೀಡಲು ನಕ್ಸಲ್ ತಂಡಗಳು ಸಿದ್ಧತೆ ಆರಂಭಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಬಡವರ ವಿರುದ್ಧದ ಶೋಷಣೆಯನ್ನೇ ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ನಕ್ಸಲ್‌ವಾದಿಗಳು ಶೃಂಗೇರಿ, ಕೊಪ್ಪ ಭಾಗ ದಲ್ಲಿ ಸಂಚಾರ ಆರಂಭಿಸಿದ್ದಾರೆ. ಬಡಕಟ್ಟು ಜನ ಹಾಗೂ ರೈತರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಲಭಿಸಿದೆ. ಈ ಚಟುವಟಿಕೆ ತೀವ್ರವಾಗಿದೆಯೋ ಅಥವಾ ಆರಂಭಿಕ ಹಂತದಲ್ಲಿದೆಯೋ ಎನ್ನುವ ಸ್ಪಷ್ಟನೆ ಇಲ್ಲದಿದ್ದರೂ, ಈ ಸುದ್ದಿ ಯಂತೂ ಮಲೆನಾಡ ಭಾಗದ ಜನರನ್ನು ಆತಂಕಕ್ಕೆ ದೂಡಿದೆ.
ಸ್ಥಳೀಯರಿಗೆ ಎಚ್ಚರಿಕೆ: ಮಲೆನಾಡು ಭಾಗದಲ್ಲಿ ಅನೇಕರ ಜಮೀನ್ದಾರರ ಮನೆಗಳು ಒಂಟಿ ಮನೆಗಳಾಗಿವೆ. ಆದ್ದರಿಂದ ಪೊಲೀಸರು ಈಗಾಗಲೇ ಈ ರೀತಿಯ ಒಂಟಿ ಮನೆಗಳನ್ನು ಗುರುತಿಸಿ, ಆ ಮನೆಯ ಮಾಲೀಕರಿಗೆ ಎಚ್ಚರಿಕೆಯಿಂದ ಇರುವಂತೆ ಹಾಗೂ ರಾತ್ರಿ ವೇಳೆ ಒಂಟಿಯಾಗಿ ಓಡಾಡದಂತೆ ಸೂಚನೆ ನೀಡುತ್ತಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿರುವ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ಶೃಂಗೇರಿ, ಕೊಪ್ಪ, ಹೊರನಾಡು ಭಾಗದಲ್ಲಿ ಬೀಡು ಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಮುಖವಾಗಿ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾ ಚರಣೆಯಲ್ಲಿ ಭೂಮಿ ಕಳೆದುಕೊಂಡಿರುವ ಸಣ್ಣ-ಸಣ್ಣ ಹಿಡುವಳಿದಾರರನ್ನು ಸಂಪರ್ಕಿಸುವ ಸಾಧ್ಯತೆಯಿರುವುದರಿಂದ ಈ ರೈತರ ಮೇಲೆ ನಿಗಾ ವಹಿಸಲು ಹಾಗೂ ರಕ್ಷಣೆ ನೀಡಲು ಸಿದ್ಧತೆ ನಡೆಸಲಾಗಿದೆ.
ಊರಿಗೆ ಬಂದು ಹೋಗುತ್ತಿರುವ ಅಪರಿಚಿತರ ಬಗ್ಗೆ ಎಚ್ಚರ ವಹಿಸುವಂತೆ ಸ್ಥಳೀಯ ಪೊಲೀಸರಿಗೆ ನಕ್ಸಲ್ ನಿಗ್ರಹ ದಳ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕೇರಳದಿಂದ ಒಂದು ತಂಡ ರಾಜ್ಯಕ್ಕೆ
ಖಚಿತ ಮೂಲಗಳ ಪ್ರಕಾರ, ಶೃಂಗೇರಿ, ಕೊಪ್ಪ, ಹೊರನಾಡು, ಆಗುಂಬೆ ಸೇರಿದಂತೆ ಹಲವು ಭಾಗದಲ್ಲಿ ನಕ್ಸಲ್ ಚಟುವಟಿಕೆಗೆ ದೊಡ್ಡ ಮಟ್ಟದಲ್ಲಿಯೇ ಚಾಲನೆ ನೀಡಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಕೇರಳದಿಂದ ಒಂದು ನಕ್ಸಲ್ ತಂಡ ರಾಜ್ಯಕ್ಕೆ ಆಗಮಿಸಿದೆ ಎನ್ನಲಾಗಿದೆ. ಈಗಾಗಲೇ ಸ್ಥಳೀಯ ರೈತರ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಈ ತಂಡ ಮಾಡುತ್ತಿದೆ ಎನ್ನಲಾಗಿದೆ.
ಸೋಮಣ್ಣ ಬಂದಾಗ ಭಾರಿ ಭದ್ರತೆ
ಗುರುವಾರ ಶೃಂಗೇರಿ, ಹೊರನಾಡಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿದಾಗ ಭಾರಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಸಾಮಾನ್ಯವಾಗಿ ಕೇಂದ್ರ ಸಚಿವರು ಬಂದಾಗ ನೀಡುವ ಭದ್ರತೆಗಿಂತ ಎರಡು ಪಟ್ಟು ಭದ್ರತೆ ನೀಡಿದ್ದು ಸ್ಥಳೀಯರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ನಕ್ಸಲ್ ತಂಡದ ಅಧಿಕಾರಿ ಗಳು ಬೀಡುಬಿಟ್ಟಿದ್ದು ನಕ್ಸಲ್‌ರ ಕುರಿತು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
*
? ರಾಜ್ಯದಲ್ಲಿ ನಶಿಸಿದ್ದ ನಕ್ಸಲ್ ಚಟುವಟಿಕೆ ಪುನರಾರಂಭದ ಭೀತಿ
? ಒಂಟಿಯಾಗಿ ಓಡಾಡದಂತೆ ಸ್ಥಳೀಯರಿಗೆ ಪೊಲೀಸರ ಎಚ್ಚರಿಕೆ
? ಪ್ರಮುಖ ದೇವಾಲಯ, ಮನೆಗಳಿಗೆ ನಕ್ಸಲ್ ಪಡೆ ಭೇಟಿ
? ಆಯಕಟ್ಟಿನ ಜಾಗದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ
? ರೈತರನ್ನು ಬಂಡಾಯವೆಬ್ಬಿಸಲು ರಾಜ್ಯಕ್ಕೆ ಆಗಮಿಸಿರುವ ಸಾಧ್ಯತೆ
? ಭೂಮಿ ಕಳೆದುಕೊಂಡಿರುವ ಸಣ್ಣ ಹಿಡುವಳಿದಾರರ ಸಂಪರ್ಕ